ಪ್ರಧಾನಿ ಮೋದಿ, ಜೇಟ್ಲಿಗೆ ಅರ್ಥಶಾಸ್ತ್ರ ತಿಳಿದಿಲ್ಲ: ಸುಬ್ರಮಣಿಯನ್ ಸ್ವಾಮಿ

Update: 2019-03-23 15:42 GMT

ಕೋಲ್ಕತಾ, ಮಾ.23: ಪ್ರಧಾನಿ ನರೇಂದ್ರ ಮೋದಿ ಅಥವಾ ವಿತ್ತ ಸಚಿವ ಅರುಣ್ ಜೇಟ್ಲಿಗೆ ಅರ್ಥಶಾಸ್ತ್ರದ ಬಗ್ಗೆ ತಿಳಿದಿಲ್ಲ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಭಾರತವು ವಿಶ್ವದ ಐದನೇ ಬೃಹತ್ ಅರ್ಥವ್ಯವಸ್ಥೆ ಹೊಂದಿರುವ ರಾಷ್ಟ್ರ ಎಂದು ಪ್ರಧಾನಿ ಹಾಗೂ ವಿತ್ತಸಚಿವರು ಹೇಳುತ್ತಿದ್ದಾರೆ. ಆದರೆ ವೈಜ್ಞಾನಿಕವಾಗಿ ಮಾನ್ಯತೆ ಪಡೆದ ಜಿಡಿಪಿ ಲೆಕ್ಕಾಚಾರದಂತೆ ಅಮೆರಿಕ ಮತ್ತು ಚೀನಾದ ಬಳಿಕದ ಸ್ಥಾನದಲ್ಲಿ ಭಾರತವಿದೆ. ಭಾರತದ ಅರ್ಥವ್ಯವಸ್ಥೆ ವಿಶ್ವದ ಮೂರನೇ ಬೃಹತ್ ಅರ್ಥವ್ಯವಸ್ಥೆಯಾಗಿದೆ ಎಂದು ಸ್ವಾಮಿ ಹೇಳುವ ಮೂಲಕ, ಪರೋಕ್ಷವಾಗಿ ಸರಕಾರವನ್ನು ಶ್ಲಾಘಿಸಿದರು.

ಖರೀದಿ ಸಾಮರ್ಥ್ಯ ಸಮಾನತೆಯ ಆಧಾರದಲ್ಲಿ ಅರ್ಥವ್ಯವಸ್ಥೆಯ ಲೆಕ್ಕಾಚಾರ ಹಾಕುವುದು ಸರಿಯಾದ ಕ್ರಮವಾಗಿದ್ದು ಈ ಹಿನ್ನೆಲೆಯ ಲೆಕ್ಕಾಚಾರದಲ್ಲಿ ಭಾರತವು ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಸ್ವಾಮಿ ಪ್ರತಿಪಾದಿಸಿದರು. ಸ್ವಾಮಿ ಹಾರ್ವರ್ಡ್ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದು, ಅದೇ ವಿವಿಯಲ್ಲಿ ಅರ್ಥಶಾಸ್ತ್ರವನ್ನು ಬೋಧಿಸುತ್ತಿದ್ದಾರೆ.

‘ಎಂಗೇಜಿಂಗ್ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ’ ಎಂಬ ವಿಷಯದಲ್ಲಿ ನಡೆದ ವಿಚಾರ ಸಂಕಿರಣವನ್ನುದ್ದೇಶಿಸಿ ಮಾತನಾಡಿದ ಸ್ವಾಮಿ, ವಸಾಹತುಶಾಹಿ ಶಕ್ತಿಗಳ ಆಕ್ರಮಣಕ್ಕೂ ಮೊದಲು ಭಾರತ ಮತ್ತು ಚೀನಾಗಳು ವಿಶ್ವದ ಅತ್ಯಂತ ಸಮೃದ್ಧ ದೇಶಗಳಾಗಿದ್ದವು. ಉಭಯ ದೇಶಗಳ ಮಧ್ಯೆ ಸುದೀರ್ಘಾವಧಿಯ ಸ್ನೇಹ ಸಂಬಂಧವಿತ್ತು. ಈ ಪುರಾತನ ಮತ್ತು ಐತಿಹಾಸಿಕ ಸಂಬಂಧವನ್ನು ಮತ್ತೆ ಸ್ಥಾಪಿಸಬೇಕಾಗಿದೆ. ಆದರೆ ಚೀನಾದ ಬಗ್ಗೆ ನೆಹರೂ ತೋರಿದಂತಹ ಧೋರಣೆಯನ್ನು ನಾವು ತೋರಬಾರದು ಎಂದು ಹೇಳಿದರು.

ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ದೊರೆತ ಖಾಯಂ ಸದಸ್ಯತ್ವವನ್ನು ನೆಹರೂ ಚೀನಾಕ್ಕೆ ಉಡುಗೊರೆ ನೀಡಿದ್ದರು ಎಂದು ಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News