ಮದ್ಯ ಕಳ್ಳಸಾಗಾಟ: ರೈಲುಗಳಲ್ಲಿ ಚೈನ್ ಎಳೆಯುವ ವ್ಯವಸ್ಥೆ ತೆಗೆದುಹಾಕಲು ಚಿಂತನೆ

Update: 2019-03-23 17:12 GMT

ಹೊಸದಿಲ್ಲಿ,ಮಾ.23: ಮುಂಬರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ಮದ್ಯ ಕಳ್ಳಸಾಗಾಟವನ್ನು ತಡೆಯಲು ಬಿಹಾರದ ಕೆಲವೊಂದು ಪ್ರದೇಶಗಳಿಗೆ ತೆರಳುವ ರೈಲುಗಳಲ್ಲಿ ತುರ್ತು ಚೈನ್ ಎಳೆಯುವ ವ್ಯವಸ್ಥೆಯನ್ನು ತೆಗೆದುಹಾಕಲು ಭಾರತೀಯ ರೈಲ್ವೇ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೈನ್ ಎಳೆಯುವ ವ್ಯವಸ್ಥೆಯಿಂದ ತುರ್ತು ಪರಿಸ್ಥಿತಿಯಲ್ಲಿ ರೈಲನ್ನು ನಿಲ್ಲಿಸಬಹುದಾಗಿದೆ. ಆದರೆ ಕೆಲವೊಂದು ಬಾರಿ ಈ ವ್ಯವಸ್ಥೆಯನ್ನು ಅಕ್ರಮ ಚಟುವಟಿಕೆಗಳಿಗೂ ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2016ರಿಂದ ಮದ್ಯಮುಕ್ತ ರಾಜ್ಯವಾಗಿರುವ ಬಿಹಾರದಲ್ಲಿ 40ಲೋಕಸಭಾ ಸ್ಥಾನಗಳಿದ್ದು ಎಪ್ರಿಲ್ 11ರಿಂದ ಮೊದಲ್ಗೊಂಡು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಯ ದಿನ ಮತ್ತು ಅದಕ್ಕಿಂತ ಎರಡು ದಿನಗಳ ಮೊದಲು ಮದ್ಯ ಮಾರಾಟ ನಿಷೇಧಿಸಲಾಗಿದೆ. ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಉಲ್ಲಂಘಿಸಿದರೆ ಐದು ವರ್ಷಗಳವರೆಗೂ ಶಿಕ್ಷೆಯಾಗುವ ಸಾಧ್ಯತೆಯಿದೆ.

ಬಿಹಾರದಲ್ಲಿ ಕಳ್ಳಸಾಗಾಟಗಾರರು ರೈಲುಗಳಲ್ಲಿ ಚೈನ್‌ಗಳನ್ನು ಎಳೆದು ತಮಗೆ ಬೇಕಾದ ಕಡೆ ಮದ್ಯಗಳನ್ನು ಇಳಿಸುತ್ತಾರೆ ಎಂದು ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಪ್ರಧಾನ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ. ರೈಲುಗಳಲ್ಲಿ ಚೈನ್ ವ್ಯವಸ್ಥೆಯನ್ನು ತೆಗೆದು ಹಾಕಲಾಗುವುದು. ಅದರ ಬದಲಿಗೆ ಆರ್‌ಪಿಎಫ್ ಸಿಬ್ಬಂದಿ ರೈಲಿನಲ್ಲಿ ಉಪಸ್ಥಿತರಿರುವರು ತುರ್ತು ಅಗತ್ಯವಿದ್ದರೆ ಪ್ರಯಾಣಿಕರು ಈ ಸಿಬ್ಬಂದಿಗೆ ತಿಳಿಸಬಹುದಾಗಿದೆ. ಅವರೇ ರೈಲು ನಿಲ್ಲಿಸಲು ವ್ಯವಸ್ಥೆ ಮಾಡುತ್ತಾರೆ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ.

ಕಳೆದ ವಾರ ಚೈನ್ ಎಳೆಯುವ ಮೂಲಕ ರೈಲು ನಿಲ್ಲಿಸಿ ಮದ್ಯ ಅಕ್ರಮ ಸಾಗಾಟ ಮಾಡಿದ 31 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಬಹಳಷ್ಟು ಪ್ರಕರಣಗಳು ಮಹಾರಾಷ್ಟ್ರದ ನಾಗ್ಪುರ ಮತ್ತು ಬಿಹಾರದ ಛಾಪ್ರಾ ಮತ್ತು ಪಾಟ್ನಾದಿಂದ ವರದಿಯಾಗಿವೆ ಎಂದು ಆರ್‌ಪಿಎಫ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News