ಇಮಾಮ್ ಚೌಕ ವಿವಾದದ ನೆಪ: 20 ಮಂದಿಯ ಗುಂಪಿನಿಂದ ವ್ಯಕ್ತಿಯ ಹತ್ಯೆ

Update: 2019-03-24 05:19 GMT

ಸೋನ್‌ಭದ್ರಾ (ಉತ್ತರ ಪ್ರದೇಶ), ಮಾ.24: ಇಡೀ ರಾಷ್ಟ್ರ ಹೋಳಿ ಹಬ್ಬದ ಅಂಗವಾಗಿ ಕಾಮದಹನದಲ್ಲಿ ತೊಡಗಿದ್ದರೆ, ದುಷ್ಟಶಕ್ತಿಗಳು ತಮ್ಮ ಬೆನ್ನ ಹಿಂದೆಯೇ ಇವೆ ಎಂಬ ಕಲ್ಪನೆ ಕುಮ್ರನ್ ಬೇಗಂ (48) ಎಂಬ ಮಹಿಳೆಯ ಕನಸಿನಲ್ಲೂ ಬರಲಿಲ್ಲ. ಅಲ್ಲಿನ ಇಮಾಮ್‌ಚೌಕ್ ಬಳಿ ಗುಂಪು ಸೇರುತ್ತಿದ್ದುದನ್ನು ಕಂಡ ಮಹಿಳೆ ಅದೇನೆಂದು ನೋಡಿಕೊಂಡು ಬರುವಂತೆ ಪತಿ ಮುಹಮ್ಮದ್ ಅನ್ವರ್ ಅವರನ್ನು ಕಳುಹಿಸಿದರು. ಮಾರ್ಚ್ 20ರ ಆ ಕರಾಳ ರಾತ್ರಿ ಅನ್ವರ್ (50) ಮೇಲೆ ದಾಳಿ ಮಾಡಿದ 20 ಮಂದಿಯ ಗುಂಪು ಅವರನ್ನು ಹತ್ಯೆ ಮಾಡಿತು!

ಈ ಘಟನೆ ನಡೆದದ್ದು ಉತ್ತರ ಪ್ರದೇಶದ ಸೋನ್‌ಭದ್ರಾ ಜಿಲ್ಲೆಯ ಪರ್ಸೋಯಿ ಎಂಬ ಗ್ರಾಮದಲ್ಲಿ.

"ಆ ರಾತ್ರಿ ಊಟದ ಬಳಿಕ ತಂದೆ ವಾಯು ವಿಹಾರಕ್ಕೆ ತೆರಳಿದ್ದಾಗ 20 ಮಂದಿ ಇಮಾಮ್ ಚೌಕ್ ಬಳಿ ಗುಂಪು ಸೇರಿದ್ದನ್ನು ನೋಡಿದರು. ಅದು ಕಾಮದಹನ ಮಾಡುವ ಗುಂಪೇ ಎಂದು ನೋಡಿಕೊಂಡು ಬರುವಂತೆ ಅಮ್ಮ ಹೇಳಿದರು. ತಂದೆ ಅಲ್ಲಿಗೆ ಹೋದ ತಕ್ಷಣ ಆ ಗುಂಪು ಹರಿತವಾದ ಆಯುಧದಿಂದ ಅವರಿಗೆ ಹಿಂದಿನಿಂದ ದಾಳಿ ಮಾಡಿತು. ಗ್ರಾಮದ ಯಾರೂ ನಮ್ಮ ನೆರವಿಗೆ ಬರಲಿಲ್ಲ; ನಾವು ಅಸಹಾಯಕರಾದೆವು. ಪೊಲೀಸರಿಗೆ ಕರೆ ಮಾಡಿ, ಅವರು ಬಂದ ಬಳಿಕ ಆಸ್ಪತ್ರೆಗೆ ತಂದೆಯನ್ನು ಕರೆದೊಯ್ದೆವು. ಆದರೆ ಯಾವ ಪ್ರಯೋಜನವೂ ಆಗಲಿಲ್ಲ" ಎಂದು 25 ವರ್ಷದ ಹುಸೈನ್ ಅನ್ವರ್ ಶೇಖ್ ಘಟನೆಯ ವಿವರ ನೀಡಿದರು.

ಮುಸ್ಲಿಮರು ಅಕ್ರಮವಾಗಿ ನಿರ್ಮಿಸಿದ್ದರು ಎನ್ನಲಾದ ಇಮಾಮ್ ಚೌಕ್ ಕೆಡವುವುದನ್ನು ಆಕ್ಷೇಪಿಸಿದ್ದಕ್ಕಾಗಿ ಮುಹಮ್ಮದ್ ಅನ್ವರ್‌ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮುಸ್ಲಿಮರು  ತಝಿಯಾವನ್ನು ಈ ಚೌಕದಲ್ಲಿ ಇರಿಸಿದ್ದರು. ಅನ್ವರ್ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಕೃಷಿಕರಾಗಿದ್ದ ಅವರಿಗೆ ಪತ್ನಿ, ಏಳು ಮಂದಿ ಗಂಡುಮಕ್ಕಳು ಹಾಗೂ ಪುತ್ರಿ ಇದ್ದಾರೆ. ಎಲ್ಲ ಮಕ್ಕಳೂ ತಮ್ಮದೇ ಪ್ರತ್ಯೇಕ ವ್ಯವಹಾರ ನಡೆಸುತ್ತಿದ್ದರು.

ಇಮಮ್‌ ಚೌಕದ ನಿರ್ಮಾಣವನ್ನು ಕೆಲ ಸಂಘ ಪರಿವಾರ ವಿರೋಧಿಸಿತ್ತು. ಇದರಿಂದಾಗಿ ಆರು ತಿಂಗಳಲ್ಲಿ ಮೂರು ಬಾರಿ ಈ ಸಂಬಂಧ ಘರ್ಷಣೆ ನಡೆದಿತ್ತು. ಅದರೆ ಎರಡೂ ಗುಂಪುಗಳ ನಡುವೆ ಮಾತುಕತೆ ನಡೆಸಿ ವಿವಾದ ಬಗೆಹರಿಸಲಾಗಿತ್ತು ಎಂದು ಎಸ್ಪಿ ಸಲ್ಮಾನ್‌ತಾಜ್ ಜಾಫರ್‌ತಾಜ್ ಪಟೇಲ್ ಹೇಳಿದ್ದಾರೆ. ಇದು ಹತ್ಯೆ ಪ್ರಕರಣವೇ ಹೊರತು ಗುಂಪಿನಿಂದಾದ ಹತ್ಯೆ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News