ರಾಜಕೀಯ ಜಾಹೀರಾತುಗಳಿಗೆ 2.5 ಕೋಟಿ ರೂ. ವೆಚ್ಚ: ಬಿಜೆಪಿ ಪರ ಪೇಜ್ ಗಳದ್ದೇ ಸಿಂಹಪಾಲು!

Update: 2019-03-24 09:40 GMT

 ‘ರಾಜಕೀಯ ಮತ್ತು ರಾಷ್ಟ್ರೀಯ ಮಹತ್ವದ ವಿಷಯಗಳ ಬಗ್ಗೆ ಫೇಸ್‍ ಬುಕ್ ಅಥವಾ ಇನ್‍ ಸ್ಟಾಗ್ರಾಂನಲ್ಲಿ ಜಾಹೀರಾತುಗಳು ಹರಿದಾಡುತ್ತಿದ್ದು, ಮಾರ್ಚ್ 2ರಿಂದ 16ರವರೆಗೆ ಎರಡು ವಾರದಲ್ಲಿ 2.5 ಕೋಟಿ ರೂಪಾಯಿ ಮೊತ್ತದ ಜಾಹೀರಾತುಗಳು ಪ್ರಸಾರವಾಗಿದೆ’ ಎನ್ನುವ ಅಂಶ altnews.in ನಡೆಸಿದ ಫೇಸ್‍ ಬುಕ್ ಜಾಹೀರಾತು ಲೈಬ್ರೆರಿ ದತ್ತಾಂಶಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಈ ವೆಚ್ಚದ ಪೈಕಿ 20 ಫೇಸ್‍ ಬುಕ್ ಪೇಜ್‍ ಗಳು 1.9 ಕೋಟಿ ರೂ. ಮೊತ್ತದ ಜಾಹೀರಾತು ನೀಡಿವೆ. ಬಿಜೆಪಿ ಪರ ಫೇಸ್‍ ಬುಕ್  ಪೇಜ್ ಗಳು ಮಾಡಿದ ವೆಚ್ಚ 1.5 ಕೋಟಿ ರೂ. ಹೀಗೆ ಬಿಜೆಪಿ ಸಾಮಾಜಿಕ ಜಾಲತಾಣದ ಜಾಹೀರಾತಿನಲ್ಲೂ ಇತರ ಪಕ್ಷಗಳಿಗಿಂತ ಭಾರೀ ಮುನ್ನಡೆ ಸಾಧಿಸಿದೆ.

15.2 ಲಕ್ಷ ರೂಪಾಯಿಯನ್ನು ಫೇಸ್‍ ಬುಕ್ ಜಾಹೀರಾತಿಗಾಗಿ ವೆಚ್ಚ ಮಾಡಿದ ಬಿಜೆಡಿ ಪರ ಪೇಜ್ ಗಳು 2ನೇ ಸ್ಥಾನದಲ್ಲಿವೆ. ವೈಎಸ್‍ಆರ್ ಕಾಂಗ್ರೆಸ್ ಪರವಾಗಿರುವ ಫೇಸ್‍ ಬುಕ್ ಪೇಜ್ ಗಳು 12.7 ಲಕ್ಷ ರೂ., ಕರ್ನಾಟಕ ಸರ್ಕಾರ 5 ಲಕ್ಷ ರೂ. ಮತ್ತು ಕಾಂಗ್ರೆಸ್ ಪರ ಪುಟಗಳು 1.68 ಲಕ್ಷ ರೂಪಾಯಿ ವೆಚ್ಚ ಮಾಡಿವೆ.

ಅತ್ಯಧಿಕ ವೆಚ್ಚ ಮಾಡಿರುವ ಫೇಸ್‍ ಬುಕ್ ಪೇಜ್ ಎಂದರೆ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಮೀಸಲಾದ ‘ಭಾರತ್ ಕೆ ಮನ್ ಕಿ ಭಾತ್’. ಇದು 87.3 ಲಕ್ಷ ರೂಪಾಯಿಗಳನ್ನು ಜಾಹೀರಾತಿಗೆ ವೆಚ್ಚ ಮಾಡಿದೆ. ಎರಡನೇ ಸ್ಥಾನದಲ್ಲಿ ಕೂಡಾ ಬಿಜೆಪಿ ಪರವಾದ ‘ನೇಷನ್ ವಿತ್ ನಮೋ’ ಪೇಜ್ ಇದೆ. ಇದು 43 ಲಕ್ಷ ರೂಪಾಯಿ ವೆಚ್ಚ ಮಾಡಿದೆ. ಮಾರ್ಚ್ 2ರಿಂದ 16ರವರೆಗೆ 15.2 ಲಕ್ಷ ರೂಪಾಯಿ ವೆಚ್ಚ ಮಾಡಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ 3ನೇ ಸ್ಥಾನದಲ್ಲಿದ್ದಾರೆ. 13 ಲಕ್ಷ ರೂಪಾಯಿ ವೆಚ್ಚದಲ್ಲಿ ವೈಎಸ್‍ಆರ್ ಕಾಂಗ್ರೆಸ್ ಪರ ಜಾಹೀರಾತು ನೀಡಿದ ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ ಮೂರನೇ ಸ್ಥಾನದಲ್ಲಿದೆ. ಹಿಂದಿನ ಎರಡು ವಾರಗಳಲ್ಲಿ ಈ ಪೇಜ್ 53,992 ರೂಪಾಯಿ ವೆಚ್ಚ ಮಾಡಿತ್ತು. ಐ-ಪಿಎಸಿ ಎನ್ನುವುದು ರಾಜಕೀಯ ಪ್ರಚಾರ ಗುಂಪಾಗಿದ್ದು, ಪಕ್ಷದ ಚುನಾವಣಾ ಪ್ರಚಾರದ ಕಾರ್ಯತಂತ್ರಗಳನ್ನು ಒದಗಿಸುತ್ತದೆ. MyGov India ಎಂಬ ಕೇಂದ್ರ ಸರ್ಕಾರದ ಅಧಿಕೃತ ಪುಟ 8.3 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡುವ ಮೂಲಕ ಐದನೇ ಸ್ಥಾನದಲ್ಲಿದೆ.

'ಮೈ ಫಸ್ಟ್ ವೋಟ್ ಫಾರ್ ಮೋದಿ'

ಅತಿಹೆಚ್ಚು ಜಾಹೀರಾತು ನೀಡಿದ ಅಗ್ರ 20 ಪುಟಗಳ ಪೈಕಿ ಆರನೇ ಸ್ಥಾನದಲ್ಲಿರುವ ‘ಮೈ ಫಸ್ಟ್ ವೋಟ್ ಫಾರ್ ಮೋದಿ’ ಎಂಬ ಪೇಜ್ ಮಾರ್ಚ್ 2ರವರೆಗೆ ಕೇವಲ 11 ಸಾವಿರ ರೂಪಾಯಿ ವೆಚ್ಚ ಮಾಡಿತ್ತು. ಆದರೆ ಕಳೆದ ಎರಡು ವಾರಗಳಲ್ಲಿ 76 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿದೆ.

'ಮೈ ಫಸ್ಟ್ ವೋಟ್ ಫಾರ್ ಮೋದಿ' ಎನ್ನುವ ಫೇಸ್‍ ಬುಕ್ ಪೇಜ್ ಇತ್ತೀಚೆಗೆ ಸಿದ್ಧವಾಗಿದೆ. ಈ ವರ್ಷದ ಜನವರಿಯಲ್ಲಿ ಇದು ಆರಂಭವಾಗಿದ್ದು, 45 ಸಾವಿರ ಫಾಲೋವರ್ ಗಳನ್ನು ಹೊಂದಿದೆ. ಇಷ್ಟಾಗಿಯೂ ಬಿಜೆಪಿಯ ಅಧಿಕೃತ ಪೇಜ್‍ ಗಿಂತ ಅಧಿಕ ಹಣವನ್ನು ಇದು ರಾಜಕೀಯ ಜಾಹೀರಾತುಗಳಿಗೆ ವೆಚ್ಚ ಮಾಡಿದೆ.

ಬಿಜೆಪಿ ಕೇಂದ್ರ ಕಚೇರಿಗೆ ನೋಂದಾಯಿತ?

"ಮೈ ಫಸ್ಟ್ ವೋಟ್ ಫಾರ್ ಮೋದಿ" ಫೇಸ್‍ ಬುಕ್ ಪೇಜ್ ನ ಆ್ಯಡ್ ಲೈಬ್ರೆರಿ ಮಾಹಿತಿಯನ್ನು altnews.in ನೋಡಿದಾಗ, ಹೊಸದಿಲ್ಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯ ವಿಳಾಸ ಕಂಡುಬಂದಿದೆ. 6-ಎ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮಾರ್ಗ್, ಐಟಿಒ ಹತ್ತಿರ, ಮಿಂಟೊ ಬ್ರಿಡ್ಜ್ ಕಾಲೋನಿ, ಬಾರಖಂಬ, ಹೊಸದಿಲ್ಲಿ-110002 ವಿಳಾಸವನ್ನು ಪುಟದ disclaimer information ವಿಭಾಗದಲ್ಲಿ ನೀಡಲಾಗಿದೆ.

ಈ ಪುಟದ ಮಾಹಿತಿ ನೋಡಿದಾಗ ಕಂಡುಬಂದ ಇನ್ನೊಂದು ಆಯಾಮವೆಂದರೆ, ಪೇಜ್‍ಗೆ ಸಂಬಂಧಿಸಿದ ವೆಬ್‍ಸೈಟ್: https://nationwithnamo.com/MyFirstVoteForModi

"ನೇಷನ್ ವಿದ್ ನಮೋ"

‘ನೇಷನ್ ವಿದ್ ನಮೋ’ ಕೂಡಾ ಬಿಜೆಪಿ ಪರ ಫೇಸ್‍ ಬುಕ್ ಪೇಜ್ ಆಗಿದ್ದು, ಬಿಜೆಪಿಯ ಅಧಿಕೃತ ಫೇಸ್‍ ಬುಕ್ ಪೇಜ್‍ ಗಿಂತಲೂ ಅಧಿಕ ಮೊತ್ತವನ್ನು ರಾಜಕೀಯ ಜಾಹೀರಾತುಗಳಿಗೆ ವೆಚ್ಚ ಮಾಡಿದೆ. 43 ಲಕ್ಷ ರೂ. ವೆಚ್ಚ ಮಾಡಿರುವ ಈ ಪೇಜ್, ‘ಭಾರತ್ ಕೆ ಮನ್ ಕಿ ಬಾತ್’ ಬಳಿಕ ಎರಡನೇ ಸ್ಥಾನದಲ್ಲಿದೆ. ಕುತೂಹಲದ ವಿಚಾರವೆಂದರೆ ‘ನೇಷನ್ ವಿದ್ ನಮೋ’ ಕೂಡಾ ಬಿಜೆಪಿ ಕೇಂದ್ರ ಕಚೇರಿಯ ವಿಳಾಸ ನೀಡಿದೆ.

ಈ ಹಿಂದೆ ‘ನೇಷನ್ ವಿದ್ ನಮೋ’ ಪೇಜ್, 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ತಂದಿರುವ ಧನಾತ್ಮಕ ಬದಲಾವಣೆಗಳನ್ನು ಬಿಂಬಿಸುವ ಬಗೆಗಿನ ಸುಳ್ಳು ಮಾಹಿತಿಗಳನ್ನು ಹರಡುತ್ತಿರುವುದನ್ನು altnews.in ಪತ್ತೆ ಮಾಡಿತ್ತು. ಕಳೆದ ವರ್ಷ ಈ ಪೇಜ್ ಉದ್ಯೋಗದ ಅರ್ಜಿಗಳನ್ನೂ ಆಹ್ವಾನಿಸಿತ್ತು. ಪ್ರಧಾನಿ ಮೋದಿಯವರ ಪ್ರಚಾರ ನಿರ್ವಹಿಸಲು ಐಐಟಿ ಮತ್ತು ಐಐಎಂ ಪದವೀಧರರಿಂದ ಅರ್ಜಿ ಆಹ್ವಾನಿಸಿತ್ತು.

ಫೇಸ್‍ ಬುಕ್ ನ ಆ್ಯಡ್ ಲೈಬ್ರೆರಿ ಅಗತ್ಯ ಪಾರದರ್ಶಕ ಮಾಹಿತಿ ನೀಡುತ್ತದೆಯೇ?

ಫೇಸ್‍ ಬುಕ್ ನ ನೀತಿಯಂತೆ ಫೇಸ್‍ ಬುಕ್ ಪುಟಗಳು ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ಪ್ರಾಯೋಜಿತ ಜಾಹೀರಾತುಗಳನ್ನು ನೀಡುವುದಾದಲ್ಲಿ ಅದರ ವಿವರಗಳನ್ನು ಬಹಿರಂಗಪಡಿಸಬೇಕು. ಇಷ್ಟಾಗಿಯೂ ಈ ವರದಿಯಲ್ಲಿ ಚರ್ಚಿಸಲಾದ ಎರಡು ಪುಟಗಳು ವೆಬ್ ಸೈಟ್ ಹೆಸರುಗಳನ್ನು ಹಕ್ಕು ನಿರಾಕರಣೆ ಮಾಹಿತಿಯಾಗಿ ನೀಡಿವೆ. ಈ ವೆಬ್ ಸೈಟ್ ಗಳು ವೈಯಕ್ತಿಕವಲ್ಲ ಮತ್ತು ಇದರ ಹಿಂದಿನ ವ್ಯಕ್ತಿಗಳನ್ನು ಸಾಮಾಜಿಕ ಜಾಲತಾಣದ ಬಳಕೆದಾರರಿಗೆ ಗುರುತಿಸುವುದು ಅಸಾಧ್ಯ.

ಅಂದರೆ, ಹಕ್ಕುನಿರಾಕರಣೆ ಮಾಹಿತಿಯು, ಆನ್‍ಲೈನ್ ಮೂಲಕ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಸಲುವಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಗಳ ಹೆಸರನ್ನು ಬಹಿರಂಗಪಡಿಸುತ್ತಿಲ್ಲ.

ಈ ಪುಟಗಳಲ್ಲಿ ನೀಡಿರುವ ಸಂಪರ್ಕ ಮಾಹಿತಿಯನ್ನೂ ಬಳಕೆದಾರರು ನಂಬುವಂತಿಲ್ಲ. ಮೈ ಫಸ್ಟ್ ವೋಟ್ ಫಾರ್ ಮೋದಿ  ಹಾಗೂ ನೇಷನ್ ವಿದ್ ನಮೋ ನೀಡಿರುವ ದೂರವಾಣಿ ಸಂಖ್ಯೆಗಳು ಕ್ರಮವಾಗಿ 6372802105 ಮತ್ತು 6372802059. ಕೊನೆಯ ಮೂರು ಅಂಕಿಗಳ ಹೊರತಾಗಿ ಈ ಅಂಕಿಗಳು ತಾಳೆಯಾಗುತ್ತವೆ. ಟ್ರೂ ಕಾಲರ್ ‍ನಲ್ಲಿ ಇದನ್ನು ಪರಿಶೀಲಿಸಿದಾಗ, ಇದರ ಮಾಹಿತಿ ಲಭ್ಯವಾಗುವುದಿಲ್ಲ. ಈ ಎರಡೂ ಸಂಖ್ಯೆಗಳಿಗೆ ಕರೆ ಮಾಡಿದಾಗಲೂ ಸ್ವಿಚ್ಡ್ ಆಫ್ ಎಂಬ ಮಾಹಿತಿ ಬರುತ್ತದೆ.

ನಮಗೆ ಸಿಗುವ ಏಕೈಕ ಸುಳಿವು ಎಂದರೆ, ಪೇಜ್‍ ನಲ್ಲಿ ನೀಡಿದ ವಿಳಾಸ. ಅದು ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯದ್ದು. ಇದು ಎರಡು ಪ್ರಮುಖ ಪ್ರಶ್ನೆಗಳಿಗೆ ಕಾರಣವಾಗುತ್ತದೆ. ಒಂದು ಬಿಜೆಪಿ ತನ್ನ ಪಕ್ಷದ ಪರವಾಗಿ ಜಾಹೀರಾತುಗಳನ್ನು ನೀಡಲು ಈ ಪೇಜ್‍ ಗಳಿಗೆ ಪ್ರಾಯೋಜಕತ್ವ ನೀಡುತ್ತದೆಯೇ?, ಹಾಗೂ ಇನ್ನೊಂದು, ಬಿಜೆಪಿ ಇದಕ್ಕೆ ಹೊಣೆಗಾರನಾದರೆ ಈ ಹೂಡಿಕೆಯ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುತ್ತದೆಯೇ?.

Writer - ಪೂಜಾ ಚೌಧುರಿ, altnews.in

contributor

Editor - ಪೂಜಾ ಚೌಧುರಿ, altnews.in

contributor

Similar News