ಮೊಝಾಂಬಿಕ್: ಭಾರತೀಯ ನೌಕಾಪಡೆಯಿಂದ 192 ಮಂದಿಯ ರಕ್ಷಣೆ

Update: 2019-03-24 17:34 GMT

ಮಾಪುಟೊ,ಮಾ.24: ಭೀಕರ ಚಂಡಮಾರುತದ ಆರ್ಭಟಕ್ಕೆ ತತ್ತರಿಸಿರುವ ಆಫ್ರಿಕದ ರಾಷ್ಟ್ರವಾದ ಮೊಝಾಂಬಿಕ್‌ನಲ್ಲಿ ಪರಿಹಾರ ಕಾರ್ಯಾಚರಣೆಗಾಗಿ ತೆರಳಿರುವ ಭಾರತದ ನೌಕಾಪಡೆಯು 192ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದೆ ಹಾಗೂ ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಿ 1381 ಮಂದಿಗೆ ಔಷಧಿ, ಚಿಕಿತ್ಸೆಗಳನ್ನು ಒದಗಿಸಿದೆ.

ಮಾರ್ಚ್ 15ರಂದು ಪೂರ್ವ ಹಾಗೂ ದಕ್ಷಿಣ ಆಫ್ರಿಕದ ಕರಾವಳಿಗೆ ಅಪ್ಪಳಿಸಿದ ‘ಇಡಾಯ್’ ಚಂಡಮಾರುತವು ಮೊಝಾಂಬಿಕ್, ಝಿಂಬಾಬ್ವೆ ಹಾಗೂ ಮಾಲಾವಿಗಳಲ್ಲಿ ವ್ಯಾಪಕ ನಾಶನಷ್ಟವುಂಟು ಮಾಡಿದ್ದು, ಈವರೆಗೆ 700ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿದೆ.

ಚಂಡಮಾರುತದಿಂದ ಜರ್ಝರಿತಗೊಂಡಿರುವ ಮೊಝಾಂಬಿಕ್‌ನ ಮನವಿಯ ಮೇರೆಗೆ ಭಾರತವು ತಕ್ಷಣವೇ ನೌಕಾಪಡೆಯ ಮೂರು ಹಡಗುಗಳನ್ನು ಆ ದೇಶದ ಬಂದರು ನಗರವಾದ ಬೈರಾಗೆ ಕಳುಹಿಸಿದೆಯೆಂದು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.

ಕಳೆದ ಕೆಲವು ದಿನಗಳಿಂದ ಭಾರತೀಯ ನೌಕಾಪಡೆಯ ಹಡಗುಗಳಾದ ಐಎನ್‌ಎಸ್ ಸುಜಾತ, ಐಸಿಜಿಎಸ್ ಸಾರಥಿ ಹಾಗೂ ಐಎನ್‌ಎಸ್ ಶಾರ್ದೂಲ್, ಸ್ಥಳೀಯ ಆಡಳಿತಗಳು ಹಾಗೂ ಮೊಝಾಂಬಿಕ್‌ನಲ್ಲಿರುವ ಭಾರತೀಯ ಹೈಕಮಿಶನ್‌ನ ಸಮನ್ವಯದೊಂದಿಗೆ, ಮೊಝಾಂಬಿಕ್‌ನ ಚಂಡಮಾರುತಪೀಡಿತ ಪ್ರದೇಶಗಳಲ್ಲಿ ರಕ್ಷಣೆ ಹಾಗೂ ಮಾನವೀಯ ನೆರವಿನ ಕಾರ್ಯಾಚರಣೆಗಳನ್ನು ನಡೆಸುತ್ತಿದೆಯೆಂದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮೊಝಾಂಬಿಕ್‌ನ ವಿಕೋಪ ನಿರ್ವಹಣಾ ಅಧಿಕಾರಿಗಳಿಗೆ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ಹಾಗೂ ಸಂತ್ರಸ್ತರಿಗೆ ಆಹಾರ ಹಾಗೂ ನೀರಿನ ಪ್ಯಾಕೆಟ್‌ಗಳನ್ನು ವಿತರಿಸಲು ಭಾರತೀಯ ನೌಕಾಪಡೆಯ ಚೇತಕ್ ಹೆಲಿಕಾಪ್ಟರ್‌ನ್ನು ಬಳಸಲಾಗಿದೆ.

ಪರಿಹಾರ ಕಾರ್ಯಾಚರಣೆಗಳಿಗೆ ಪೂರಕವಾಗಿ, ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತೀಯ ನೌಕಾಪಡೆಯ ಇನ್ನೊಂದು ಹಡಗು ಐಎನ್‌ಎಸ್ ಮಾಗರ್‌ನ್ನು ಮೊಝಾಂಬಿಕ್‌ಗೆ ಕಳುಹಿಸಲಾಗಿದೆಯೆಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News