ಮಸೀದಿ ಹತ್ಯಾಕಾಂಡ ಸಂತ್ರಸ್ತರಿಗೆ ಮಿಡಿದ ನ್ಯೂಝಿಲ್ಯಾಂಡ್: ಶ್ರದ್ದಾಂಜಲಿ ಸಭೆಯಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಭಾಗಿ

Update: 2019-03-24 17:40 GMT

ಕ್ರೈಸ್ಟ್‌ಚರ್ಚ್, ಮಾ.24: ನ್ಯೂಝಿಲ್ಯಾಂಡ್‌ನ ಎರಡು ಮಸೀದಿಗಳಲ್ಲಿ ಮಾರ್ಚ್ 15ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 50 ಮಂದಿಯ ಸ್ಮರಣಾರ್ಥವಾಗಿ ರವಿವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಧರ್ಮ,ಜನಾಂಗ ಭೇದವಿಲ್ಲದೆ ಸಾವಿರಾರು ಮಂದಿ ಪಾಲ್ಗೊಂಡರು.

ಹ್ಯಾಗ್ಲೆ ಪಾರ್ಕ್‌ನಲ್ಲಿ ರವಿವಾರ ಸಂಜೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರೆಂದು ವರದಿಗಳು ತಿಳಿಸಿವೆ.

ಭಯೋತ್ಪಾದಕ ದಾಳಿಗೆ ಸಾಕ್ಷಿಯಾದ ಅಲ್‌ನೂರ್ ಮಸೀದಿಯಲ್ಲಿ ಶೂಟೌಟ್‌ನಲ್ಲಿ ಕಾಲು ಹಾಗೂ ಪಿತ್ತಜನಕಾಂಗಕ್ಕೆ ಗುಂಡು ತಗಲಿ ಗಾಯಗೊಂಡಿದ್ದ 21 ವರ್ಷದ ಯುವಕ ಮುಸ್ತಫಾ ಬೊಝ್ಟಾಸ್ ಕೂಡಾ, ಗಾಲಿ ಕುರ್ಚಿಯಲ್ಲಿ ಕುಳಿತುಕೊಂಡೇ ಶ್ರದ್ಧಾಂಜಲಿ ಸಭೆಯನ್ನು ವೀಕ್ಷಿಸಿದರು. ‘‘ಇಡೀ ಸಮಾಜವೇ ಒಗ್ಗೂಡಿ, ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಇಂದು ಸಾರಿರುವುದನ್ನು ಕಂಡಾಗ ಸುಂದರವಾದ ಅನುಭವಾಗಿದೆ’’ ಎಂದು, ಮುಸ್ತಫಾ ಅವರು ಪತ್ರಕರ್ತರಿಗೆ ತಿಳಿಸಿದರು.

ಭಯೋತ್ಪಾದಕ ದಾಳಿ ಘಟನೆಯ ಹಿನ್ನೆಲೆಯಲ್ಲಿ ರದ್ದುಗೊಂಡ ಕೆನಡದ ಗಾಯಕ ಬ್ರಿಯಾನ್ ಆ್ಯಡಮ್ಸ್‌ರ ಸಂಗೀತಗೋಷ್ಠಿಗಾಗಿ ಹ್ಯಾಗ್ಲೆ ಪಾರ್ಕ್‌ನಲ್ಲಿ ರಚಿಸಲಾಗಿದ್ದ ವೇದಿಕೆಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮಾರ್ಚ್ 15ರಂದು ಕ್ರೈಸ್ಟ್‌ಚರ್ಚ್‌ನ ಅಲ್‌ನೂರ್ ಮಸೀದಿ ಹಾಗೂ ಲಿನ್‌ವುಡ್ ಪ್ರದೇಶದ ಮಸೀದಿಯಲ್ಲಿ ನಡೆದ ಬಿಳಿಯ ಜನಾಂಗೀಯ ಉಗ್ರ ಬ್ರೆಂಟನ್ ಟ್ಯಾರಾಂಟ್ ಎಂಬಾತ ನಡೆಸಿದ ಗುಂಡಿನಲ್ಲಿ ಐವತ್ತು ಮಂದಿ ಮೃತಪಟ್ಟು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News