ಸಿರಿಯ: ಐಸಿಸ್‌ನ ಕಟ್ಟಕಡೆಯ ಭದ್ರಕೋಟೆ ಪತನ

Update: 2019-03-24 17:42 GMT

ಬಾಘೌಝ್,ಮಾ.23: ಅಂತರ್ಯುದ್ಧ ಪೀಡಿತ ಸಿರಿಯದಲ್ಲಿನ, ಐಸಿಸ್ ಭಯೋತ್ಪಾದಕ ಸಂಘಟನೆಯ ಕಟ್ಟಕಡೆಯ ಭದ್ರಕೋಟೆ ಶನಿವಾರ ಪತನಗೊಂಡಿದೆ. ಬೌಘೌಝ್ ಪ್ರಾಂತದಲ್ಲಿರುವ ಐಸಿಸ್‌ನ ಕಟ್ಟಕಡೆಯ ನೆಲೆಯನ್ನು ಅಮೆರಿಕ ಬೆಂಬಲಿತ ಸಿರಿಯನ್ ಪ್ರಜಾತಾಂತ್ರಿಕ ಪಡೆ ( ಎಸ್‌ಡಿಎಫ್)ಗಳು ಪರಾಭವಗೊಳಿಸಿವೆ. ಇದರೊಂದಿಗೆ ಇರಾಕ್ ಹಾಗೂ ಸಿರಿಯದುದ್ದಕ್ಕೂ ವ್ಯಾಪಿಸಿದ್ದ ಐಸಿಸ್‌ನ ಸ್ವಯಂಘೋಷಿಷಿತ ‘ಖಲಿಫೇಟ್’ ಸಾಮ್ರಾಜ್ಯ ಪತನಗೊಂಡಿದೆ ಎಂದು ಎಸ್‌ಡಿಎಫ್‌ನ ಮಾಧ್ಯಮ ಕಾರ್ಯಾಲಯದ ವರಿಷ್ಠ ಮುಸ್ತಫಾ ಬಾಲಿ, ಟ್ವೀಟ್ ಮಾಡಿದ್ದಾರೆ.

‘‘ಬಾಘೌಝ್ ವಿಮೋಚನೆಗೊಂಡಿದೆ. ದಾಯೇಶ್(ಐಸಿಸ್) ವಿರುದ್ಧ ಸೇನಾ ವಿಜಯವನ್ನು ಸಾಧಿಸಲಾಗಿದೆ’’ ಎಂದವರು ಟ್ವೀಟ್‌ನಲ್ಲಿ ಬರೆದಿದ್ದಾರೆ.

ಐಸಿಸ್ ಸಂಪೂರ್ಣ ನಿರ್ಮೂಲನೆಯಾಗುವವರೆಗೂ, ಅದರ ಪಳೆಯುಳಿಕೆಗಳನ್ನು ಅಟ್ಟಾಡಿಸಿಕೊಂಡು ಹೋಗಲಿದ್ದೇವೆ ಹಾಗೂ ನಮ್ಮ ಯುದ್ಧವನ್ನು ಮುಂದುವರಿಸುವ ಶಪಥ ಮಾಡುತ್ತೇವೆ’’ ಎಂದು ಅವರು ಹೇಳಿದ್ದಾರೆ.

ಬೌಘಾಝ್ ಪತನದೊಂದಿಗೆ ಐದು ವರ್ಷಗಳಿಂದ ಸಿರಿಯ ಹಾಗೂ ಇರಾಕ್‌ನ ಹಲವಾರು ಪ್ರಾಂತಗಳಲ್ಲಿನ ಐಸಿಸ್ ಪ್ರಾಬಲ್ಯ ಕೊನೆಗೊಂಡಿದೆಯಾದರೂ, ಅದು ಇನ್ನೂ ಬೆದರಿಕೆಯಾಗಿಯೇ ಉಳಿದಿದೆಯೆಂದು ಸೇನಾ ತಜ್ಞರು ವಿಶ್ಲೇಷಿಸಿದ್ದಾರೆ.

ಐಸಿಸ್‌ನ ಕೆಲವು ಉಗ್ರರು ಇನ್ನೂ ಸಿರಿಯದ ದುರ್ಗಮ ಮರಳುಗಾಡು ಪ್ರದೇಶದಲ್ಲಿ ಹಾಗೂ ಇರಾಕಿನ ಕೆಲವು ನಗರಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ಹಠಾತ್ತನೆ ಶೂಟೌಟ್ ಹಾಗೂ ಭಯೋತ್ಪಾದಕ ದಾಳಿಗಳನ್ನು ಅವರು ನಡೆಸುವ ಸಾಧ್ಯತೆಯಿದೆ ಮತ್ತು ಅವಕಾಶ ದೊರೆತಲ್ಲಿ ಮತ್ತೆ ತಲೆಯೆತ್ತುವ ಸಾಧ್ಯತೆಗಳಿವೆಯೆಂದು ಸೇನಾ ತಜ್ಞರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News