ಸಿಬಿಎಸ್‌ಸಿ ಪಠ್ಯಕ್ರಮ: ಕೃತಕ ಬುದ್ಧಿಮತ್ತೆ, ಯೋಗ ಸೇರ್ಪಡೆ
ಹೊಸದಿಲ್ಲಿ,ಮಾ.24: ಮುಂದಿನ ಶೈಕ್ಷಣಿಕ ವರ್ಷದಿಂದ ಸಿಬಿಎಸ್‌ಸಿ ಶಾಲಾ ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ (ಎಐ), ಆರಂಭಿಕ ಬಾಲ್ಯ ಶಿಕ್ಷಣ ಮತ್ತು ಯೋಗವನ್ನು ಹೊಸ ವಿಷಯಗಳನ್ನಾಗಿ ಸೇರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಸಿಬಿಎಸ್‌ಸಿ ಮಂಡಳಿಯ ಸಭೆಯಲ್ಲಿ ಈ ಮೂರು ವಿಷಯಗಳನ್ನು ಪರಿಚಯಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2019-20ರಿಂದ ಒಂಬತ್ತನೇ ತರಗತಿಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಆಯ್ಕೆಯ ಆರನೇ ವಿಷಯವಾಗಿ ಪರಿಚಯಿಸಲಾಗುವುದು. ಬೋಧನೆ ಕಲಿಕೆಯಲ್ಲಿ ಬಹುಶಿಸ್ತು ದೃಷ್ಟಿಕೋನವನ್ನು ಹೆಚ್ಚಿಸಲು ಮತ್ತು ಹೊಸ ತಲೆಮಾರನ್ನು ಪ್ರಚೋದಿಸಲು 8ನೇ ತರಗತಿಯಿಂದಲೇ ಶಾಲೆಗಳು ಎಐಯ 12 ಗಂಟೆಗಳ ಸ್ಪೂರ್ತಿದಾಯಕ ತರಗತಿಗಳನ್ನು ಆರಂಭಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರೌಢ ಶಿಕ್ಷಣ ಮಟ್ಟದಲ್ಲಿ ಯೋಗ ಮತ್ತು ಆರಂಭಿಕ ಬಾಲ್ಯ ಶಿಕ್ಷಣವನ್ನು ಪರಿಚಯಿಸಲು ಮಂಡಳಿ ನಿರ್ಧರಿಸಿದೆ. ಯೋಗ ವೃತ್ತಿಪರರು ಮತ್ತು ಆರಂಭಿಕ ಬಾಲ್ಯ ಶಿಕ್ಷಕರ ಅಗತ್ಯವಿದೆ ಎಂದು ಶಾಲೆಗಳಿಂದ ಬಂದ ಮನವಿಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.