ಪ್ರತೀ ವರ್ಷ ಯೋಧರ ದೈಹಿಕ ಸಾಮರ್ಥ್ಯದ ಮೌಲ್ಯಮಾಪನಕ್ಕೆ ಒತ್ತಾಯ

Update: 2019-03-24 18:16 GMT

ಹೊಸದಿಲ್ಲಿ, ಮಾ.24: ಯೋಧರ ದೈಹಿಕ ಸಾಮರ್ಥ್ಯವನ್ನು ನಿರ್ಧರಿಸುವ ನಿಟ್ಟಿನಲ್ಲಿ ಪ್ರತೀ ವರ್ಷ ದೈಹಿಕ ಸಾಮರ್ಥ್ಯದ ಮೌಲ್ಯಮಾಪನದ ವ್ಯವಸ್ಥೆ ಜಾರಿಗೊಳಿಸುವಂತೆ ಕೇಂದ್ರ ಅರೆಸೇನಾ ಪಡೆಗಳು ಸರಕಾರವನ್ನು ಒತ್ತಾಯಿಸಿವೆ. ಅರೆಸೇನಾ ಪಡೆಯ ಯೋಧರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವಂತೆ ದಿಲ್ಲಿ ಹೈಕೋರ್ಟ್ ನೀಡಿದ ಸೂಚನೆಯ ಹಿನ್ನೆಲೆಯಲ್ಲಿ ಈ ಸಲಹೆ ನೀಡಲಾಗಿದೆ.

ಕೇಂದ್ರ ಗೃಹ ಇಲಾಖೆ ಇತ್ತೀಚೆಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಈ ಶಿಫಾರಸು ಮಾಡಲಾಗಿದೆ.

ಸಿಆರ್‌ಪಿಎಫ್(ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್), ಬಿಎಸ್‌ಎಫ್(ಬೋರ್ಡರ್ ಸೆಕ್ಯುರಿಟಿ ಫೋರ್ಸ್), ಎಸ್‌ಎಸ್‌ಬಿ(ಸಶಸ್ತ್ರ ಸೀಮಾ ಬಲ), ಸಿಐಎಸ್‌ಎಫ್(ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್), ಐಟಿಬಿಪಿ(ಇಂಡೊ ಟಿಬೆಟನ್ ಬೋರ್ಡರ್ ಪೊಲೀಸ್) ಮತ್ತು ಅಸ್ಸಾಂ ರೈಫಲ್ಸ್- ಇವು ದೇಶದಲ್ಲಿರುವ ಆರು ಅರೆಸೇನಾ ಪಡೆಗಳಾಗಿವೆ.

ಯೋಧರು ಮತ್ತು ಸೇನಾಧಿಕಾರಿಗಳ (ಕಮಾಂಡೆಂಟ್ ಹುದ್ದೆಯವರೆಗಿನ) ನಿವೃತ್ತಿ ವಯಸ್ಸನ್ನು ಹೆಚ್ಚಿಸುವಂತೆ ಇತ್ತೀಚೆಗೆ ದಿಲ್ಲಿ ಹೈಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ನಿವೃತ್ತಿ ವಯಸ್ಸನ್ನು 57ರಿಂದ 60ಕ್ಕೆ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ.

ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಪಿ ಮತ್ತು ಎಸ್‌ಎಸ್‌ಬಿಯಲ್ಲಿ ಈಗಿರುವ ಪ್ರತ್ಯೇಕ ನಿವೃತ್ತಿ ನೀತಿಯ ಬದಲು ಏಕರೂಪದ ನಿವೃತ್ತಿ ಜಾರಿಗೊಳಿಸುವಂತೆ ಹೈಕೋರ್ಟ್ ತಿಳಿಸಿದೆ. ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ತಮ್ಮ ವಿರೋಧವಿಲ್ಲ. ಆದರೆ ದೇಶದ ಗಡಿಭಾಗದಲ್ಲಿ ಕಾರ್ಯನಿರ್ವಹಿಸುವ , ನಕ್ಸಲ್ ವಿರೋಧಿ ಪಡೆಯವರು, ಭಯೋತ್ಪಾದಕ ನಿಗ್ರಹ ಪಡೆಯ ಯೋಧರು ಯುವಕರಾಗಿರಬೇಕು ಮತ್ತು ಚುರುಕಾದ ಕಾರ್ಯಪಡೆ ಅಗತ್ಯ ಎಂದು ಸಿಆರ್‌ಪಿಎಫ್ ಹೊರತುಪಡಿಸಿ ಉಳಿದ ಎಲ್ಲಾ ಅರೆಸೇನಾ ಪಡೆಗಳು ಅಭಿಪ್ರಾಯ ವ್ಯಕ್ತಪಡಿಸಿದವು.

ಇತ್ತೀಚೆಗೆ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿದ ಸಿಆರ್‌ಪಿಎಫ್ , ತನ್ನ ಯೋಧರಿಗೆ ಕರ್ತವ್ಯದ ಸಂದರ್ಭ ವಿಶ್ರಾಂತಿ ಪಡೆಯಲು ಸಮಯವೇ ಸಿಗದ ಕಾರಣ ಹಿರಿಯ ವ್ಯಕ್ತಿಗಳಿಗೆ ಕಾರ್ಯ ನಿರ್ವಹಿಸಲು ಕಷ್ಟವಾಗಬಹುದು ಎಂದು ತಿಳಿಸಿತು.

ಈಗ ಎಲ್ಲಾ ಅರೆಸೇನಾ ಪಡೆಗಳಲ್ಲಿ ಒಟ್ಟು 55,330 ಯೋಧರು ‘ಎಲ್‌ಎಂಸಿ(ಲೋ ಮೆಡಿಕಲ್ ಕ್ಯಾಟಗರಿ) ವಿಭಾಗದಲ್ಲಿದ್ದಾರೆ. ಇವರಲ್ಲಿ 22,120 ಯೋಧರು ಸಿಆರ್‌ಪಿಎಫ್‌ಗೆ ಸೇರಿದವರು. ಕಾರ್ಯಾಚರಣೆಯ ಸಂದರ್ಭ ಗಾಯಗೊಂಡವರು, ಅಥವಾ ಕಾರ್ಯನಿರ್ವಹಣೆಯ ಸಂದರ್ಭ (ಗುಡ್ಡದಿಂದ ಬಿದ್ದು, ಮರದಿಂದ ಬಿದ್ದು ಇತ್ಯಾದಿ) ಗಾಯಗೊಂಡವರು ಎಲ್‌ಎಂಸಿ ವಿಭಾಗದಲ್ಲಿರುತ್ತಾರೆ. ಬಿಎಸ್‌ಎಫ್‌ನಲ್ಲಿ 14,155 ಸಿಬ್ಬಂದಿಗಳು, ಅಸ್ಸಾಂ ರೈಫಲ್ಸ್‌ನ 10,202, ಐಟಿಬಿಪಿಯ 5,619, ಸಿಐಎಸ್‌ಎಫ್‌ನ 2,180, ಎಸ್‌ಎಸ್‌ಬಿಯ 1,094 ಸಿಬ್ಬಂದಿಗಳು ಎಲ್‌ಎಂಸಿ ವಿಭಾಗದಲ್ಲಿದ್ದಾರೆ.

ಈ ಹಿನ್ನೆಲೆಯಲ್ಲಿ, ಒಂದು ವೇಳೆ ನಿವೃತ್ತಿ ವಯಸ್ಸನ್ನು ಹೆಚ್ಚಿಸಿದರೂ, ಯೋಧರ ದೈಹಿಕ ಸಾಮರ್ಥ್ಯವನ್ನು ಪ್ರತೀ ವರ್ಷ ವೌಲ್ಯಮಾಪನ ನಡೆಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಎಲ್ಲಾ ಅರೆಸೇನಾ ಪಡೆಗಳ ಅಧಿಕಾರಿಗಳು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News