×
Ad

ಅಧಿಕಾರಕ್ಕೆ ಬಂದರೆ ಕನಿಷ್ಟ ಆದಾಯ ಖಾತರಿ ಯೋಜನೆ ಜಾರಿ: ರಾಹುಲ್

Update: 2019-03-24 23:55 IST

 ಕೋಲ್ಕತಾ, ಮಾ.24: ಪಶ್ಚಿಮ ಬಂಗಾಳದಲ್ಲಿ ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಭರವಸೆಯ ಮಹಾಪೂರವನ್ನೇ ಹರಿಸಿ ಅಧಿಕಾರಕ್ಕೆ ಬಂದಿರುವ ಮಮತಾ ಬ್ಯಾನರ್ಜಿ ಸರಕಾರವೂ ಈ ನಿಟ್ಟಿನಲ್ಲಿ ಗಮನ ಹರಿಸಿಲ್ಲ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕನಿಷ್ಟ ಆದಾಯ ಖಾತರಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

  ಪಶ್ಚಿಮ ಬಂಗಾಳದ ಉತ್ತರ ಮಾಲ್ಡಾ ಕ್ಷೇತ್ರದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೇ ಸಂದರ್ಭ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೇಲಿನ ಟೀಕಾ ಪ್ರಹಾರ ಮುಂದುವರಿಸಿದ ರಾಹುಲ್, ಕೇವಲ ಶ್ರೀಮಂತ ವ್ಯಕ್ತಿಗಳ ಮನೆಯ ಹೊರಗಷ್ಟೇ ‘ಚೌಕಿದಾರ’ ಇರುತ್ತಾನೆ. ಆದರೆ ರೈತರು, ಜನಸಾಮಾನ್ಯರ ಮನೆಯ ಎದುರು ಚೌಕಿದಾರ ಇರುವುದಿಲ್ಲ. ಇದೇ ರೀತಿ ತನ್ನನ್ನು ಚೌಕಿದಾರ (ಕಾವಲುಗಾರ) ಎಂದು ಕರೆಸಿಕೊಳ್ಳುವ ಮೋದಿ ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯರಂತಹ ಭ್ರಷ್ಟರ ಚೌಕಿದಾರನಾಗಿದ್ದಾರೆ ಎಂದು ಟೀಕಿಸಿದರು.

  ದೇಶದ ಏಕತೆ ಉಳಿಸಲು ಕಾಂಗ್ರೆಸ್ ಹೋರಾಡುತ್ತಿದೆ. ಇನ್ನೊಂದೆಡೆ ಬಿಜೆಪಿ-ಆರೆಸ್ಸೆಸ್- ನರೇಂದ್ರ ಮೋದಿ ದೇಶವನ್ನು ಧರ್ಮ, ಭಾಷೆ ಹಾಗೂ ಜಾತಿಯ ಆಧಾರದಲ್ಲಿ ವಿಭಜಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಮುಂಬರುವ ಚುನಾವಣೆ ಕಾಂಗ್ರೆಸ್‌ನ ಸಿದ್ಧಾಂತ ಹಾಗೂ ಬಿಜೆಪಿ-ಆರೆಸ್ಸೆಸ್ ಸಿದ್ಧಾಂತದ ನಡುವಿನ ಹೋರಾಟವಾಗಲಿದೆ ಎಂದು ರಾಹುಲ್ ಹೇಳಿದರು.

 ಕೇಂದ್ರದಲ್ಲಿ ನಾವು ಸರಕಾರ ರಚಿಸಿದೊಡನೆ ಸರಕಾರಿ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಕನಿಷ್ಟ ಆದಾಯ ಯೋಜನೆಯನ್ನು ಜಾರಿಗೊಳಿಸಲಾಗುವುದು. ನರೇಂದ್ರ ಮೋದಿಯ ಗಬ್ಬರ್ ಸಿಂಗ್ ಟ್ಯಾಕ್ಸ್ ಅನ್ನು ಜಿಎಸ್‌ಟಿಯನ್ನಾಗಿ ಪರಿವರ್ತಿಸಲಾಗುವುದು ಎಂದು ರಾಹುಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News