ನೀವೇ ಯಾಕೆ ವಿವಿ ಪ್ಯಾಟ್‌ಗಳ ಸಂಖ್ಯೆ ಹೆಚ್ಚಿಸಿಲ್ಲ: ಚು.ಆಯೋಗಕ್ಕೆ ಸುಪ್ರೀಂ ಪ್ರಶ್ನೆ
ಹೊಸದಿಲ್ಲಿ, ಮಾ. 25: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿವಿ ಪ್ಯಾಟ್‌ನ ಹೆಚ್ಚು ಸ್ಲಿಪ್‌ಗಳನ್ನು ಲೆಕ್ಕ ಹಾಕಿ ಎಂದು ಸುಪ್ರೀಂ ಕೋರ್ಟ್ ಸೋಮವಾರ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಇವಿಎಂನೊಂದಿಗೆ ಹೋಲಿಕೆ ಮಾಡಲು ಸ್ಲಿಪ್‌ಗಳ ಸಂಖ್ಯೆಯನ್ನು ಅಥವಾ ವಿವಿ ಪ್ಯಾಟ್‌ಗಳ ಸಂಖ್ಯೆಯನ್ನು ನೀವಾಗಿಯೇ ಹೆಚ್ಚಿಸಿಲ್ಲ ಯಾಕೆ ಎಂದು ಚುನಾವಣಾ ಆಯೋಗವನ್ನು ಪ್ರಶ್ನಿಸಿರುವ ನ್ಯಾಯಾಲಯ, ಈ ವಿಷಯದಲ್ಲಿ ಎದುರಿಸುತ್ತಿರುವ ಅಡ್ಡಿ ಆತಂಕಗಳ ಬಗ್ಗೆ ಮುಂದಿನ ಮೂರು ದಿನಗಳಲ್ಲಿ ವಿವರಣೆ ನೀಡಬೇಕು ಎಂದು ಸೂಚಿಸಿದೆ.
‘‘ವಿವಿ ಪ್ಯಾಟ್‌ಗಳ ಹೆಚ್ಚು ಸ್ಲಿಪ್‌ಗಳನ್ನು ಲೆಕ್ಕ ಹಾಕಲು ನಾವು ಬಯಸುತ್ತೇವೆ. ಪ್ರಸ್ತುತ ನೀವು ಒಂದು ಮತಗಟ್ಟೆಯಿಂದ ಒಂದು ವಿವಿ ಪ್ಯಾಟ್‌ನ ಸ್ಲಿಪ್‌ಗಳನ್ನು ಮಾತ್ರ ಲೆಕ್ಕ ಹಾಕುತ್ತೀರಿ. ನೀವಾಗಿಯೇ ಈ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಿಲ್ಲವೇ?’’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಪ್ರಶ್ನಿಸಿದರು.
ಪ್ರತಿ ಮತಗಟ್ಟೆಯಲ್ಲಿ ಒಂದು ವಿವಿ ಪ್ಯಾಟ್‌ನ ಸ್ಲಿಪ್‌ಗಳನ್ನು ಲೆಕ್ಕ ಹಾಕುವ ಬಗ್ಗೆ ವಿವರಣೆ ನೀಡಿದ ಚುನಾವಣಾ ಆಯೋಗ, ‘‘ನಮ್ಮ ವ್ಯವಸ್ಥೆ ಸುಸೂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬ ನಂಬಿಕೆ ನಮಗಿದೆ. ಆದರೂ ನಾವು ಸುಧಾರಿಸಲು ಪ್ರಯತ್ನಿಸುತ್ತೇವೆ’’ ಎಂದಿದೆ. ನ್ಯಾಯಾಂಗ ಸೇರಿದಂತೆ ಯಾವುದೇ ಸಂಸ್ಥೆಗಳಿಗೆ ಸಲಹೆ ನೀಡುವುದೇ ಕೆಲಸವಾಗಬಾರದು ಎಂದು ಮುಖ್ಯ ನ್ಯಾಯಮೂರ್ತಿ ಗೊಗೊಯಿ ಹೇಳಿದರು.
‘‘ನಿಮಗೆ ಭರವಸೆ ಇದ್ದರೆ, ನೀವಾಗಿಯೇ ಯಾಕೆ ವಿವಿ ಪ್ಯಾಟ್‌ನ ಸಂಖ್ಯೆ ಹೆಚ್ಚಿಸಿಲ್ಲ ? ವಿವಿ ಪ್ಯಾಟ್‌ನ ಸಂಖ್ಯೆ ಹೆಚ್ಚಿಸಲು ಸುಪ್ರೀಂ ಕೋರ್ಟ್‌ನ ಆದೇಶ ಬೇಕಾಯಿತು...ವಿವಿ ಪ್ಯಾಟ್ ಅಸ್ತಿತ್ವಕ್ಕೆ ತರಲು ನ್ಯಾಯಾಲಯ ಯಾವ ರೀತಿಯಲ್ಲಿ ವಿರೋಧ ಎದುರಿಸಿತು ಎಂಬುದು ನಿಮಗೆ ಗೊತ್ತಿದೆ’’ ಎಂದು ಅವರು ಹೇಳಿದರು. ಈ ಪ್ರಕರಣದ ವಿಚಾರಣೆಯನ್ನು ಎಪ್ರಿಲ್ 1ರಂದು ನಡೆಸಲಾಗುವುದು ಎಂದು ನ್ಯಾಯಮೂರ್ತಿ ರಂಜನ್ ಗೊಗೊಯಿ ತಿಳಿಸಿದರು.