ಬಿಜೆಪಿಯೊಳಗೆ ಮುಗಿದ ಅಡ್ವಾಣಿ ಯುಗ

Update: 2019-03-26 04:19 GMT

‘ಅಧಿಕಾರವೆನ್ನುವುದು ಉಪ್ಪಿನಂತೆ, ತಿಂದಷ್ಟೂ ದಾಹ ಹೆಚ್ಚು’ ಇದು ಹಿರಿಯ ಚಿಂತಕರೊಬ್ಬರು ಆಡಿದ ಮಾತು. ರಾಜಕೀಯದಲ್ಲಿ ಇದು ಅಕ್ಷರಶಃ ಸತ್ಯವೂ ಕೂಡ. ಜಾರ್ಜ್‌ಫೆರ್ನಾಂಡಿಸ್, ಅಟಲ್‌ಬಿಹಾರಿ ವಾಜಪೇಯಿಯಂತಹ ಹಿರಿಯ ನಾಯಕರನ್ನೂ ಈ ದಾಹ ಬೆಂಬಿಡದೇ ಕಾಡಿದೆ. ಮೋದಿ ಬಿಜೆಪಿಯ ಮುನ್ನೆಲೆಗೆ ಬರುವ ಹೊತ್ತಿನಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ‘‘ಪ್ರಧಾನಿ ಅಭ್ಯರ್ಥಿ ಸ್ಥಾನದಲ್ಲಿ ತಾನೂ ಇದ್ದೇನೆ’’ ಎಂಬ ಹೇಳಿಕೆ ನೀಡಿ ಬಿಜೆಪಿಗೆ ಮುಜುಗರ ಉಂಟು ಮಾಡಿದ್ದರು. ಹೀಗೆ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಅವರು ಆಸ್ಪತ್ರೆ ಸೇರಿ ಕೋಮಾಕ್ಕೆ ಜಾರಿದ್ದರು. ರಾಜಕೀಯ ಬದುಕಿನ ಮುಸ್ಸಂಜೆಯ ಹೊತ್ತಿನಲ್ಲಿ, ಟಿಕೆಟ್ ಸಿಗದೆ ಜಾರ್ಜ್ ಫೆರ್ನಾಂಡಿಸ್ ಬಂಡಾಯವಾಗಿ ಸ್ಪರ್ಧಿಸಿ ಮುಜುಗರ ಅನುಭವಿಸಿದ್ದರು. ಅದಾಗಲೇ ಮರೆವಿನ ಕಾಯಿಲೆ ಅವರನ್ನು ಕಾಡುತ್ತಿತ್ತು. ಆದರೂ ಅಧಿಕಾರವನ್ನು ಮರೆಯುವುದು ಅವರಿಗೆ ಸಾಧ್ಯವಾಗಲಿಲ್ಲ. ಇದೀಗ ಅವರ ಸಾಲಿನಲ್ಲಿ ಬಿಜೆಪಿಯ ಹಿರಿಯ ನಾಯಕ ಅಡ್ವಾಣಿಯವರು ನಿಂತಿದ್ದಾರೆ. 75 ವರ್ಷ ದಾಟಿದ ಹಿರಿಯ ನಾಯಕರನ್ನು ರಾಜಕೀಯದಿಂದ ದೂರವಿಡಲು ಮೋದಿ ನೇತೃತ್ವದ ಬಳಗ ಪ್ರಯತ್ನಿಸುತ್ತಿದೆ. ಅವರ ಉದ್ದೇಶ ಸ್ಪಷ್ಟ. ಈ ಹಿರಿಯ ನಾಯಕರೆಲ್ಲ ಮೋದಿ ಬಳಗದ ಮೇಲೆ ಒಳಗೊಳಗೆ ಅಸಮಾಧಾನವನ್ನು ಇಟ್ಟುಕೊಂಡವರು.

ರಾಜಕೀಯದಿಂದ ಅವರನ್ನು ದೂರವಿಡಲು ಮೋದಿ ತಂಡಕ್ಕೆ ವಯಸ್ಸು ಒಂದು ನೆಪವಾಗಿದೆ. ಅಡ್ವಾಣಿಯವರಿಗೆ 90 ದಾಟಿದೆ. ಸದ್ಯಕ್ಕೆ ರಾಜಕೀಯವಾಗಿ ಅವರು ತಮ್ಮೆಲ್ಲ ವರ್ಚಸ್ಸನ್ನು ಕಳೆದುಕೊಂಡು ಬಿಜೆಪಿಯಲ್ಲಿ ಮೂಲೆಗುಂಪಾಗಿದ್ದಾರೆ. ಮೋದಿ ಬಳಗದಿಂದ ಸಾರ್ವಜನಿಕವಾಗಿ ಪದೇ ಪದೇ ಅವಮಾನಿತರಾಗುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಅಡ್ವಾಣಿಯವರು ಸ್ವಯಂ ನಿವೃತ್ತಿಯನ್ನು ಘೋಷಿಸಿದ್ದರೆ ಒಂದಿಷ್ಟಾದರೂ ಅವರ ಘನತೆ ಉಳಿಯುತ್ತಿತ್ತೇನೋ. ಸದ್ಯದ ಸಂದರ್ಭದಲ್ಲಿ ಅಡ್ವಾಣಿಯವರಿಗೆ ಚುನಾವಣೆಯನ್ನು ಎದುರಿಸುವ ಅಥವಾ ಸಕ್ರಿಯವಾಗಿ ಕ್ಷೇತ್ರದಲ್ಲಿ ಓಡಾಡುವ, ಸಾರ್ವಜನಿಕವಾಗಿ ಮಾತನಾಡುವ ಯಾವ ಶಕ್ತಿಯೂ ಇಲ್ಲ. ಅಡ್ವಾಣಿಯವರಿಗೆ ಟಿಕೆಟ್ ನಿರಾಕರಿಸಿರುವ ಮೋದಿ ತಂಡದ ನಿರ್ಧಾರ ಸರಿಯಾಗಿಯೇ ಇದೆ. ಆದರೆ ಆ ನಿರಾಕರಣೆಯ ಸಂದರ್ಭದಲ್ಲಿ ಅವರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳಲಾಗಿದೆ ಎನ್ನುವುದು ಮಾತ್ರ ಖಂಡನೀಯ ಭಾರತದಲ್ಲಿ ಮೊದಲ ಬಾರಿಬಿಜೆಪಿ ಅಧಿಕಾರ ಹಿಡಿಯಲು ಮುಖ್ಯ ಕಾರಣರು ಎಲ್.ಕೆ. ಅಡ್ವಾಣಿ.

ಅದಕ್ಕಾಗಿ ಅವರು ಆರಿಸಿಕೊಂಡ ಮಾರ್ಗ ಸರಿಯೋ, ತಪ್ಪೋ ಎನ್ನುವುದು ಆನಂತರದ ಮಾತು. ಇಂದು ನರೇಂದ್ರ ಮೋದಿ ಈ ಮಟ್ಟಕ್ಕೆ ಬೆಳೆದು ನಿಂತಿರುವುದರ ಹಿಂದೆಯೂ ಅಡ್ವಾಣಿಯ ಪಾತ್ರವಿದೆ. ಅಡ್ವಾಣಿಯ ರಥಯಾತ್ರೆಯ ಸಂದರ್ಭದಲ್ಲಿ ಮೋದಿ ಕಾಲಾಳುವಾಗಿ ಸಹಕರಿಸಿದ್ದರು. ಹಾಗೆಯೇ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ರಾಜೀನಾಮೆ ನೀಡಬೇಕಾದ ಸನ್ನಿವೇಶ ನಿರ್ಮಾಣವಾದಾಗ, ಅಟಲ್ ಬಿಹಾರಿ ವಾಜಪೇಯಿ ಮನವೊಲಿಸಿ ಅದನ್ನು ತಡೆದದ್ದು ಎಲ್. ಕೆ. ಅಡ್ವಾಣಿಯವರೇ ಆಗಿದ್ದಾರೆ. ಬಿಜೆಪಿ ಎಲ್ಲ ರಾಜಕೀಯ ಪಕ್ಷಗಳಿಗೆ ಅಸ್ಪಶ್ಯವಾಗಿದ್ದಾಗ, ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿಯವರ ಮುತ್ಸದ್ದಿತನದ ಫಲವಾಗಿ ಎನ್‌ಡಿಎ ರಚನೆಯಾಯಿತು. ಇಂದು ಬಿಜೆಪಿಯ ಜೊತೆಗೆ ಕೈ ಜೋಡಿಸಿದವರೆಲ್ಲರೂ ಅಡ್ವಾಣಿ ಮತ್ತು ಅಟಲ್ ಅವರ ಮುತ್ಸದ್ದಿ ರಾಜಕಾರಣಕ್ಕೆ ತಲೆ ಬಾಗಿ ಬಂದವರು. ಎಲ್ಲವೂ ಸರಿಯಾಗಿದ್ದಿದ್ದರೆ ಎಲ್. ಕೆ. ಅಡ್ವಾಣಿಯವರು ಈ ದೇಶದ ಪ್ರಧಾನಿಯಾಗಬೇಕಾಗಿತ್ತು. ಪ್ರಧಾನಿಯಾಗಬೇಕು ಎನ್ನುವ ದೊಡ್ಡ ಹಂಬಲವೂ ಅವರಿಗಿತ್ತು.

ಅಟಲ್‌ ಬಿಹಾರಿ ವಾಜಪೇಯಿ ವ್ಯಕ್ತಿತ್ವ ಅದಕ್ಕೆ ಅಡ್ಡಿಯಾಯಿತು. ಅಟಲ್ ಮರೆಗೆ ಸರಿದು ಇನ್ನೇನು ಬಿಜೆಪಿಯ ಚುಕ್ಕಾಣಿ ಅಡ್ವಾಣಿ ಕೈಗೆತ್ತಿಕೊಳ್ಳಬೇಕು ಎನ್ನುವಷ್ಟರಲ್ಲಿ ಧೂಮಕೇತುವಿನಂತೆ ಪ್ರತ್ಯಕ್ಷರಾದವರು ಮೋದಿ ಮತ್ತು ಅಮಿತ್ ಶಾ. ಕಾರ್ಪೊರೇಟ್ ಶಕ್ತಿ ಮತ್ತು ಕೋಮುಹಿಂಸೆಯೆರಡನ್ನು ರಾಜಕೀಯವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದ ಇವರನ್ನು ತಡೆಯುವ ಶಕ್ತಿಯೇ ಬಿಜೆಪಿಯೊಳಗೆ ಇಲ್ಲ ಎನ್ನುವಂತಾಯಿತು. ಪ್ರಧಾನಿ ಹುದ್ದೆ ಕೈ ತಪ್ಪಿದ ಹಿನ್ನೆಲೆಯಲ್ಲಿ, ರಾಷ್ಟ್ರಪತಿ ಸ್ಥಾನವನ್ನಾದರೂ ಅಡ್ವಾಣಿಯವರಿಗೆ ನೀಡಿ ಅವರನ್ನು ಗೌರವದಿಂದ ಕಳುಹಿಸಿಕೊಡುವುದು ಬಿಜೆಪಿಯ ಹೊಸತಲೆಮಾರಿನ ನಾಯಕರ ಹೊಣೆಗಾರಿಕೆಯಾಗಿತ್ತು. ಆದರೆ ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಮತ್ತೆ ಜೀವಂತಗೊಳಿಸಿ, ಅಡ್ವಾಣಿಯವರು ಆ ಸ್ಥಾನವನ್ನು ಏರದಂತೆ ನೋಡಿಕೊಳ್ಳಲಾಯಿತು. ಸಾರ್ವಜನಿಕವಾಗಿ ನರೇಂದ್ರ ಮೋದಿಯವರು ಪದೇ ಪದೇ ಅವರನ್ನು ಅವಮಾನಿಸ ತೊಡಗಿದರು. ಅವರ ಇರವನ್ನೇ ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು. ಅಲ್ಲಿಗೆ ಅಡ್ವಾಣಿ ರಾಜಕೀಯವಾಗಿ ಎಂದೋ ಮುಗಿದು ಹೋಗಿದ್ದರು.

ಇಷ್ಟೆಲ್ಲ ಅನುಭವಿಸಿದ ಬಳಿಕ ಅಡ್ವಾಣಿಯವರು ಸ್ವಯಂಪ್ರೇರಿತವಾಗಿ ‘ನಾನಿನ್ನು ಸ್ಪರ್ಧಿಸುವುದಿಲ್ಲ’ ಎನ್ನುವುದನ್ನು ಘೋಷಿಸಿ ತನ್ನ ಘನತೆಯನ್ನು ಕಾಪಾಡಿಕೊಳ್ಳಬೇಕಾಗಿತ್ತು. ಆದರೆ ಅವಮಾನವನ್ನು ಅಡ್ವಾಣಿ ಮತ್ತೆ ಆಹ್ವಾನಿಸಿಕೊಂಡರು. ಅವರೊಂದಿಗೆ ಯಾವ ಚರ್ಚೆಯನ್ನೂ ನಡೆಸದೆ ಟಿಕೆಟ್ ನಿರಾಕರಿಸಲಾಯಿತು. ಇಷ್ಟೇ ಅಲ್ಲ, ಅಡ್ವಾಣಿ ಈವರೆಗೆ ಗೆಲ್ಲುತ್ತಾ ಬಂದಿರುವುದೇ ಅಮಿತ್ ಶಾ ಬಲದಿಂದ ಎಂಬ ಹೇಳಿಕೆ ಬಿಜೆಪಿಯೊಳಗಿಂದ ಹೊರಬಿತ್ತು. ಇದು ಅವರ ವ್ಯಕ್ತಿತ್ವಕ್ಕೆ ಬಿಜೆಪಿ ಮಾಡಿದ ಅತಿ ದೊಡ್ಡ ಹಾನಿ. ಅಟಲ್ ಅವರ ಮೃದು ಹಿಂದುತ್ವಕ್ಕೆ ಬದಲಾಗಿ ಅಡ್ವಾಣಿ ಕಟ್ಟರ್ ಹಿಂದುತ್ವದ ಮಾರ್ಗವನ್ನು ಅನುಸರಿಸಿದರು. ಆದರೆ ಆಳದಲ್ಲಿ ಅಡ್ವಾಣಿ ಅಪಾರ ರಾಜಕೀಯ ಅನುಭವವನ್ನು ಹೊಂದಿದವರು. ದೇಶದ ಇತಿಹಾಸ ಮತ್ತು ವರ್ತಮಾನದ ಕುರಿತಂತೆ ಮುತ್ಸದ್ದಿತನದಿಂದ ಮಾತನಾಡುವ ಶಕ್ತಿಯನ್ನು ಹೊಂದಿದವರು.

1973ರ ತುರ್ತುಪರಿಸ್ಥಿತಿಯನ್ನು ಪಕ್ಷಕ್ಕೆ ಪೂರಕವಾಗಿ ಬಳಸಿಕೊಳ್ಳುವಲ್ಲಿ ಅಡ್ವಾಣಿಯ ಪಾತ್ರವೂ ದೊಡ್ಡದಿತ್ತು. ಅಡ್ವಾಣಿಯ ರಾಜಕೀಯ ಬದುಕಿನ ಮುಂದೆ ಮೋದಿ ಮತ್ತು ಅಮಿತ್ ಶಾ ಯಾವ ರೀತಿಯಲ್ಲೂ ನಿಲ್ಲುವುದಕ್ಕೆ ಅರ್ಹರಲ್ಲ. ರಾಜಕೀಯವಾಗಿ ತೀರಾ ಅಪ್ರಬುದ್ಧರೂ, ಅನಕ್ಷರಸ್ಥರೂ ಆಗಿರುವ, ಅಂಬಾನಿಯ ಹಣ ಮತ್ತು ಗುಜರಾತ್ ಹತ್ಯಾಕಾಂಡದ ಹೆಣದ ಬಲದಿಂದ ರೂಪುಗೊಂಡಿರುವ ಅಮಿತ್ ಶಾ ಮತ್ತು ಮೋದಿಯಂತಹ ನಾಯಕರಿಂದ ಅಡ್ವಾಣಿ ಇಂತಹ ಅವಮಾನ ಅನುಭವಿಸಲೇಬೇಕಾಗಿತ್ತು. ತಾನೇ ಬಿತ್ತಿದ ವಿಷದ ಗಿಡದಿಂದ ಅಡ್ವಾಣಿ ಫಲವನ್ನು ಕೊಯ್ದುಕೊಂಡಿದ್ದಾರೆ. ಕಾಲ ಎಷ್ಟು ಕ್ರೂರ ಎನ್ನುವುದಕ್ಕೆ ಅಡ್ವಾಣಿಯ ರಾಜಕೀಯ ದುರಂತ ಅತ್ಯುತ್ತಮ ಉದಾಹರಣೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News