ಭಾರತ- ಪಾಕ್ ಮಧ್ಯೆ ಇನ್ನೂ ಯುದ್ಧಾತಂಕ ಇದೆ: ಇಮ್ರಾನ್ ಖಾನ್

Update: 2019-03-27 03:34 GMT

ಇಸ್ಲಾಮಾಬಾದ್, ಮಾ. 27: ಭಾರತೀಯ ವಾಯುಪಡೆ ಬಾಲಾಕೋಟ್‌ನಲ್ಲಿ ಜೈಶ್ ಇ ಮೊಹ್ಮದ್ ಸಂಘಟನೆಯ ಶಿಬಿರಗಳ ಮೇಲೆ ವಾಯುದಾಳಿ ನಡೆಸಿದ ಬಳಿಕ ಪಾಕಿಸ್ತಾನದಲ್ಲಿ ಪರಿಸ್ಥಿತಿ ತಿಳಿಯಾದಂತೆ ಕಂಡುಬಂದಿದ್ದರೂ, ಎರಡು ನೆರೆಯ ದೇಶಗಳ ನಡುವೆ ಹೊಸದಾಗಿ ಮತ್ತೆ ಸೇನಾ ಸಂಘರ್ಷ ನಡೆಯುವ ಸಾಧ್ಯತೆ ಇದೆ ಎಂಬ ಭೀತಿಯನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವ್ಯಕ್ತಪಡಿಸಿದ್ದಾರೆ.

ಎರಡು ಅಣ್ವಸ್ತ್ರ ಶಕ್ತ ನೆರೆರಾಷ್ಟ್ರಗಳ ನಡುವೆ ಕಳೆದ ತಿಂಗಳು ಉದ್ಭವಿಸಿದ್ದ ಸಂಘರ್ಷ ಸ್ಥಿತಿಯ ಬಳಿಕ ಭಾರತ ಇನ್ನೂ ಯುದ್ಧೋನ್ಮಾದವನ್ನು ಹೊಂದಿದೆ. ಚುನಾವಣೆಗೆ ಮುನ್ನ ಮತ್ತೆ ಏನಾದರೂ ಸಂಭವಿಸಬಹುದು ಎಂಬ ಸಂದೇಹ ನನಗೆ ಇನ್ನೂ ಇದೆ ಎಂದು ಪಾಕಿಸ್ತಾನ ಪ್ರಧಾನಿ ಫೈನಾನ್ಶಿಯಲ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಲೋಕಸಭಾ ಚುನಾವಣೆ ಆರಂಭಕ್ಕೆ ಮುನ್ನ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ದುಸ್ಸಾಹಸಕ್ಕೆ ಕೈಹಾಕಬಹುದು ಎಂದು ಇಮ್ರಾನ್ ಭವಿಷ್ಯ ನುಡಿದಿದ್ದಾರೆ.

ಭಾರತದಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರನ್ನು ಹತ್ಯೆ ಮಾಡಿದ ಜೈಶ್ ಸಂಘಟನೆ ಜತೆ ಪಾಕಿಸ್ತಾನಕ್ಕೆ ಯಾವುದೇ ಸಂಪರ್ಕ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಆತ್ಮಹತ್ಯಾ ಬಾಂಬ್ ದಾಳಿಗೆ ಪ್ರತಿಯಾಗಿ ಕ್ಷಿಪಣಿ ದಾಳಿ ನಡೆಸುವ ಮೂಲಕ ಮೋದಿ ದುರಾಕ್ರಮಣ ಮಾಡಿದ್ದಾರೆ ಎಂದು ಇಮ್ರಾನ್ ಅಭಿಪ್ರಾಯ ಹೊಂದಿದ್ದಾಗಿ ಫೈನಾನ್ಶಿಯಲ್ ಟೈಮ್ಸ್ ಹೇಳಿದೆ.

"ಪುಲ್ವಾಮ ದಾಳಿ ನಡೆದಾಗ, ಆ ಪರಿಸ್ಥಿತಿಯನ್ನು ಯುದ್ಧೋನ್ಮಾದಕ್ಕೆ ಮೋದಿ ಸರ್ಕಾರ ಬಳಸಿಕೊಂಡಿತು ಎನ್ನುವುದು ನನ್ನ ಭಾವನೆ. ಇದೆಲ್ಲವೂ ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಎನ್ನುವುದನ್ನು ಭಾರತೀಯರು ಅರ್ಥ ಮಾಡಿಕೊಳ್ಳಬೇಕು. ಉಪಖಂಡದ ವಾಸ್ತವ ಸಮಸ್ಯೆಗೂ ಇದಕ್ಕೂ ಸಂಬಂಧವಿಲ್ಲ" ಎಂದು ಖಾನ್ ಹೇಳಿದ್ದಾರೆ.

ಪುಲ್ವಾಮ ದಾಳಿಗೆ ಮೋದಿಯವರ ಮುಸ್ಲಿಂ ವಿರೋಧಿ ಸರ್ಕಾರ ಹಾಗೂ ಕಾಶ್ಮೀರದ ಬಗೆಗಿನ ನೀತಿಗಳು ಕಾರಣ ಎಂದು ಅವರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News