ಉದ್ಯಮಿ ಯೂಸುಫ್ ಅಲಿ ಕೈಚಳಕ: ಪಂಚತಾರಾ ಹೋಟೆಲ್ ಆದ ಲಂಡನ್ ನ ಸ್ಕಾಟ್ಲೆಂಡ್ ಯಾರ್ಡ್

Update: 2019-03-27 14:38 GMT

ಹೊಸದಿಲ್ಲಿ, ಮಾ. 27: ಲಂಡನ್‌ನಲ್ಲಿ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆಯ ಕೇಂದ್ರ ಕಚೇರಿಯಾಗಿದ್ದ ಗ್ರೇಟ್ ಸ್ಕಾಟ್ಲೆಂಡ್ ಯಾರ್ಡ್ ಖರೀದಿಸಿದ ಕೇರಳ ಮೂಲದ ಅನಿವಾಸಿ ಉದ್ಯಮಿ ಯೂಸುಫ್ ಅಲಿ ಅದನ್ನು ಇದೀಗ ಐಷಾರಾಮಿ ಪಂಚತಾರಾ ಹೋಟೆಲ್ ಆಗಿ ಪರಿವರ್ತಿಸಿದ್ದಾರೆ.

1000 ಕೋಟಿ ರೂ.ಗೆ ಈ ಆಸ್ತಿ ಖರೀದಿಸಿದ್ದ ಅಲಿ ಮೂರು ವರ್ಷಗಳಲ್ಲಿ 685 ಕೋಟಿ ರೂಪಾಯಿ ವೆಚ್ಚದಲ್ಲಿ ಅದನ್ನು ನವೀಕರಿಸಿದ್ದಾರೆ.

ಅಬುಧಾಬಿಯ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ಸಂಸ್ಥೆಯಾದ ಲುಲು ಸಮೂಹದ ಅಧ್ಯಕ್ಷರಾಗಿರುವ ಅವರು, 2015ರಲ್ಲಿ 110 ದಶಲಕ್ಷ ಪೌಂಡ್ (1000 ಕೋಟಿ) ಮೊತ್ತಕ್ಕೆ ಈ ಆಸ್ತಿ ಖರೀದಿಸಿದ್ದರು. ಇದೀಗ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಈ ವರ್ಷದ ಉತ್ತರಾರ್ಧದಲ್ಲಿ ಅದನ್ನು ಉದ್ಘಾಟಿಸಲು ಸಿದ್ಧತೆ ನಡೆದಿದೆ. ಈ ಹೋಟೆಲನ್ನು ಹ್ಯಾತ್ ಸಮೂಹ ನಿರ್ವಹಿಸಲಿದೆ.

ಈ ಪ್ರತಿಷ್ಠಿತ ಆಸ್ತಿ ಬಗ್ಗೆ ಕೇಳಿದ ಪ್ರಶ್ನೆಗೆ, "ಇದು ನಮ್ಮ ಪ್ರತಿಷ್ಠಿತ ಯೋಜನೆ. ಇದು ಕೇವಲ ಇಂಗ್ಲೆಂಡಿನಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಚಿರಪರಿಚಿತ ಆಸ್ತಿ. ನವೀಕರಣದ ವೇಳೆ ಇದರ ಮೂಲ ಕಟ್ಟಡವನ್ನು ಸ್ವಲ್ಪವೂ ರೂಪಾಂತರಿಸಿಲ್ಲ. ನಮ್ಮ ಪ್ರತಿಯೊಬ್ಬ ಅತಿಥಿಗಳಿಗೂ ಇದು ಸ್ಮರಣೀಯ ಅನುಭವ ನೀಡಬೇಕು ಎಂಬುದು ನಮ್ಮ ಬಯಕೆ" ಎಂದು ಹೇಳಿದರು.

ಬ್ರಿಟನ್ ಇತಿಹಾಸದಲ್ಲಿ ಗ್ರೇಟ್ ಸ್ಕಾಟ್ಲೆಂಡ್ ಯಾರ್ಡ್‌ಗೆ ವಿಶೇಷ ಮಹತ್ವವಿದೆ. ಅಂದಿನ ಪ್ರಧಾನಿ ಸರ್ ರಾಬರ್ಟ್ ಪೀರ್ ಅವರು 1829ರಲ್ಲಿ ಇದನ್ನು ಮೆಟ್ರೋಪೊಲೀಸ್ ಕೇಂದ್ರ ಕಚೇರಿಗೆ ಆಯ್ಕೆ ಮಾಡಿದ್ದರು. ಇದೀಗ ನವೀಕರಣದ ಬಳಿಕವೂ ಮೂಲ ಕಟ್ಟಡದ ಸ್ವರೂಪವನ್ನು ಯಥಾವತ್ತಾಗಿ ಸಂರಕ್ಷಿಸಲಾಗಿದೆ. ಹೋಟೆಲ್‌ನಲ್ಲಿ 153 ಕೊಠಡಿಗಳಿದ್ದು, ಒಂದು ರಾತ್ರಿಯ ವಾಸ್ತವ್ಯಕ್ಕೆ 10 ಸಾವಿರ ಯೂರೊ (ಸುಮಾರು 8 ಲಕ್ಷ ರೂಪಾಯಿ) ದರ ನಿಗದಿಪಡಿಸಲಾಗಿದೆ. ಇಲ್ಲಿ ತಂಗುವ ಅತಿಥಿಗಳು ತಮ್ಮ ಕೊಠಡಿಯಿಂದಲೇ ಲಂಡನ್‌ನ ವಿಶಿಷ್ಟ ಸ್ಥಳಗಳಾದ ನೆಲ್ಸನ್ಸ್ ಕಾಲಂ, ವೆಸ್ಟ್‌ ಮಿನಿಸ್ಟರ್ ಅಬ್ಬೆ ಮತ್ತು ಬರ್ಮಿಂಗ್‌ಹ್ಯಾಮ್ ಪ್ಯಾಲೇಸ್‌ನ ವಿಹಂಗಮ ನೋಟವನ್ನು ಸವಿಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News