ಬಾಹ್ಯಾಕಾಶದಲ್ಲಿ ಭಾರತ ಸೂಪರ್ ಪವರ್ : ಪ್ರಧಾನಿ ಮೋದಿ

Update: 2019-03-27 17:55 GMT

ಹೊಸದಿಲ್ಲಿ,ಮಾ.27: ಬುಧವಾರದಂದು ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿದ್ದು ದೇಶೀಯ ನಿರ್ಮಿತ ಕ್ಷಿಪಣಿಯಿಂದ ಭೂಮಿಯ ಕೆಳ ಕಕ್ಷೆಯಲ್ಲಿ ಸುತ್ತುವ ಸಜೀವ ಉಪಗ್ರಹವನ್ನು ಹೊಡೆದುರುಳಿಸುವ ಮೂಲಕ ಇಂಥ ಸಾಧನೆ ಮಾಡಿದ ಅಮೆರಿಕ, ರಶ್ಯಾ ಮತ್ತು ಚೀನಾದ ನಂತರ ಸ್ಥಾನದಲ್ಲಿ ಬಂದು ನಿಂತಿದೆ ಎಂದು ಪ್ರಧಾನಿ ಮೋದಿ ರಾಷ್ಟ್ರವನ್ನು ಕುರಿತು ದೂರದರ್ಶನದಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬುಧವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ,ಕೆಲವೇ ಗಂಟೆಗೂ ಹಿಂದೆ ಡಿಆರ್‌ಡಿಒದ ನಮ್ಮ ವಿಜ್ಞಾನಿಗಳು ಭೂಮಿಗಿಂತ 300ಕಿ.ಮೀ ದೂರದಲ್ಲಿ ಬಾಹ್ಯಾಕಾಶದಲ್ಲಿ ಸಜೀವ ಉಪಗ್ರಹವೊಂದನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಿಶನ್ ಶಕ್ತಿ ಯೋಜನೆಯಡಿ ಕೇವಲ ಮೂರು ನಿಮಿಷಗಳಲ್ಲಿ ಸಾಧನೆ ಮಾಡಲಾಗಿದೆ ಎಂದು ಹತ್ತು ನಿಮಿಷಗಳ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಬುಧವಾರ ಬೆಳಿಗ್ಗೆ 11.16ರ ಸುಮಾರಿಗೆ ಒಡಿಶಾದ ಬಾಲಸೋರ್‌ನಲ್ಲಿ ಈ ಉಪಗ್ರಹ ನಿಗ್ರಹ ಕ್ಷಿಪಣಿಯನ್ನು ಉಡಾಯಿಸಿದೆ. ಸದ್ಯ ಹೊಡೆದುರುಳಿಸಲ್ಪಟ್ಟ ಉಪಗ್ರಹ ಒಂದು ಅತಿಸಣ್ಣ ಉಪಗ್ರಹವಾಗಿದ್ದು ಈ ವರ್ಷ ಜನವರಿ 24ರಂದು ಇಸ್ರೊ ಬಾಹ್ಯಾಕಾಶಕ್ಕೆ ಉಡಾಯಿಸಿತ್ತು ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನೂತನ ಸ್ವದೇಶಿ ಕ್ಷಿಪಣಿ ಶತ್ರು ರಾಷ್ಟ್ರಗಳ ಉಪಗ್ರಹಗಳ ಮೇಲೆ ದಾಳಿ ನಡೆಸುವ, ಅವುಗಳನ್ನು ಅಂಧರನ್ನಾಗಿಸುವ ಮತ್ತು ಭೂಮಿಗೆ ಸಂಕೇತ ಕಳುಹಿಸದಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಕ್ಷಿಪಣಿ ಉಡಾವಣೆ ಬಗ್ಗೆ ಪ್ರಧಾನಿ ಮಾಧ್ಯಮ ಹೇಳಿಕೆ ನೀಡಿದ ನಂತರ ಈ ಕುರಿತು ಜಗತ್ತಿಗೆ ಭಾರತದ ನಿಲುವನ್ನು ಸ್ಪಷ್ಟಪಡಿಸಿದ ವಿದೇಶಾಂಗ ಸಚಿವಾಲಯ, ಭಾರತ ತನ್ನ ಬಾಹ್ಯಾಕಾಶ ಸಂಪತ್ತಿಗೆ ಬೆದರಿಕೆ ಒಡ್ಡುವ ದೀರ್ಘವ್ಯಾಪ್ತಿಯ ಕ್ಷಿಪಣಿಗಳನ್ನು ತಡೆಯುವ ಹೊಣೆಯನ್ನು ಹೊಂದಿರುವ ಕಾರಣದಿಂದ ಶಕ್ತಿ ಯೋಜನೆಯನ್ನು ಕೈಗೊಂಡಿದೆಯೇ ಹೊರತು ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯಲ್ಲಿ ತೊಡಗುವ ಯಾವುದೇ ಹಂಬಲವಿಲ್ಲ ಎಂದು ಸ್ಪಷ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News