ಲೋಕಪಾಲ: ಎಂಟು ಸದಸ್ಯರ ಪ್ರಮಾಣವಚನ

Update: 2019-03-27 15:39 GMT

ಹೊಸದಿಲ್ಲಿ, ಮಾ.27: ದೇಶದ ಪ್ರಪ್ರಥಮ ಲೋಕಪಾಲರಾಗಿ ನೇಮಕಗೊಂಡಿರುವ ನ್ಯಾ.ಪಿನಾಕಿ ಚಂದ್ರ ಘೋಷ್ ಅವರು ಭ್ರಷ್ಟಾಚಾರ ವಿರೋಧಿ ಪ್ರಾಧಿಕಾರವಾಗಿರುವ ಲೋಕಪಾಲ್‌ನ ಎಂಟು ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.

ವಿವಿಧ ಹೈಕೋರ್ಟ್‌ಗಳ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ- ದಿಲೀಪ್ ಬಿ ಭೋಸಲೆ, ಪ್ರದೀಪ್ ಕುಮಾರ್ ಮೊಹಾಂತಿ, ಅಭಿಲಾಶ ಕುಮಾರಿ ಮತ್ತು ಅಜಯ್ ಕುಮಾರ್ ತ್ರಿಪಾಠಿ ಲೋಕಪಾಲ ಪ್ರಾಧಿಕಾರದ ನ್ಯಾಯಾಂಗ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದ ಮಾಜಿ ಪ್ರಥಮ ಮಹಿಳಾ ಮುಖ್ಯಸ್ಥೆ ಅರ್ಚನಾ ರಾಮಸುಂದರಂ, ಮಹಾರಾಷ್ಟ್ರದ ಮಾಜಿ ಮುಖ್ಯ ಕಾರ್ಯದರ್ಶಿ ದಿನೇಶ್ ಕುಮಾರ್ ಜೈನ್, ಮಾಜಿ ಐಆರ್‌ಎಸ್ ಅಧಿಕಾರಿ ಮಹೇಂದರ್ ಸಿಂಗ್, ಗುಜರಾತ್ ಪದವೃಂದದ ಮಾಜಿ ಐಎಎಸ್ ಅಧಿಕಾರಿ ಇಂದ್ರಜೀತ್ ಪ್ರಸಾದ್ ಗೌತಮ್ ನ್ಯಾಯಾಂಗೇತರ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಲೋಕಪಾಲದ ಅಧ್ಯಕ್ಷರು ಹಾಗೂ ಎಂಟು ಸದಸ್ಯರು ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಲೋಕಪಾಲ್ ಕಾರ್ಯನಿರ್ವಹಣೆ ಆರಂಭವಾದಂತಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್, ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಹಾಗೂ ಛತ್ತೀಸ್‌ಗಢ ಸರಕಾರದ ಹಿರಿಯ ಸಚಿವ ಟಿಎಸ್ ಸಿಂಗ್‌ದೇವ್, ಗುಪ್ತಚರ ಇಲಾಖೆಯ ಮುಖ್ಯಸ್ಥ ರಾಜೀವ್ ಜೈನ್, ಕೇಂದ್ರ ಜಾಗೃತ ಆಯುಕ್ತ ಕೆವಿ ಚೌಧರಿ, ಕೇಂದ್ರ ಆಡಳಿತ ನ್ಯಾಯಮಂಡಳಿಯ ಅಧ್ಯಕ್ಷ ನ್ಯಾ. ಎಲ್ ನರಸಿಂಹ ರೆಡ್ಡಿ ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಲೋಕಪಾಲರು ಹಾಗೂ ಸದಸ್ಯರ ಕಾರ್ಯಾವಧಿ 5 ವರ್ಷ ಅಥವಾ ಸದಸ್ಯರಿಗೆ 70 ವರ್ಷವಾಗುವವರೆಗೆ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News