ಮಗುವಿಗೆ ಜನ್ಮ ನೀಡಿದ 26 ದಿನಗಳ ಬಳಿಕ ಅವಳಿ ಹೆತ್ತ ಮಹಿಳೆ !

Update: 2019-03-27 18:22 GMT

ಡಾಕಾ, ಮಾ. 27: ಬಾಂಗ್ಲಾದೇಶದ ತಾಯಿಯೋರ್ವಳು ಒಂದು ಶಿಶುವಿಗೆ ಜನ್ಮ ನೀಡಿದ 26 ದಿನಗಳ ಬಳಿಕ ಅವಳಿ ಶಿಶುಗಳಿಗೆ ಜನ್ಮ ನೀಡಿ ವೈದ್ಯರಲ್ಲಿ ಅಚ್ಚರಿ ಮೂಡಿಸಿದ್ದಾರೆ.

20ರ ಹರೆಯದ ಆರಿಫಾ ಸುಲ್ತಾನಾ ಕಳೆದ ತಿಂಗಳು ಸಹಜ ಹೆರಿಗೆಯ ಮೂಲಕ ಗಂಡು ಶಿಶುವಿಗೆ ಜನ್ಮ ನೀಡಿದ್ದರು. ಅನಂತರ ಎರಡನೇ ಬಾರಿ ಅವಳಿ ಶಿಶುವಿಗೆ ಜನ್ಮ ನೀಡಿದರು. ಮೊದಲ ಶಿಶು ಜನಿಸಿದ 26 ದಿನಗಳ ಬಳಿಕ ಅವರಿಗೆ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡಿತು. ಅವರು ಕೂಡಲೇ ನಮ್ಮಲ್ಲಿಗೆ ಬಂದರು ಎಂದು ಸ್ತ್ರಿರೋಗತಜ್ಞೆ ಶೈಲಾ ಪೊದ್ದಾರ್ ತಿಳಿಸಿದ್ದಾರೆ.

ಕೂಡಲೇ ಅವರಿಗೆ ಸಿಸೆರಿಯನ್ ನಡೆಸಿ ಅವಳಿ ಮಕ್ಕಳ ಹೆರಿಗೆ ಮಾಡಿಸಲಾಯಿತು. ಇದರೊಂದಿಗೆ ಸುಲ್ತಾನಾ ಮೂರು ಶಿಶುಗಳಿಗೆ ಜನ್ಮ ನೀಡಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ. ನೈಋತ್ಯ ಬಾಂಗ್ಲಾದೇಶದ ಜೆಸ್ಸೋರೆ ಜಿಲ್ಲೆಯ ಈ ಮಹಿಳೆ ಆರೋಗ್ಯವಂತ ಮೂರು ಶಿಶುಗಳೊಂದಿಗೆ ಮಂಗಳವಾರ ಮನೆಗೆ ತೆರಳಿದ್ದಾರೆ. ಅವರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇಲ್ಲ ಎಂದು ಪೊದ್ದಾರ್ ತಿಳಿಸಿದ್ದಾರೆ. ‘‘ನನ್ನ 30 ವರ್ಷಗಳ ವೈದ್ಯಕೀಯ ಅನುಭವದಲ್ಲಿ ಇಂತಹ ಪ್ರಕರಣವನ್ನು ನೋಡಿಲ್ಲ.’’ ಎಂದು ಜೆಸ್ಸೋರೆಯ ಸರಕಾರಿ ಮುಖ್ಯ ವೈದ್ಯ ದಿಲೀಪ್ ರಾಯ್ ಹೇಳಿದ್ದಾರೆ. ಆದರೆ ಈ ಬೆಳವಣಿಗೆಯನ್ನು ಪತ್ತೆ ಹಚ್ಚದಿರುವ ಖುಲ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ಕ್ರಮವನ್ನು ರಾಯ್ ಪ್ರಶ್ನಿಸಿದ್ದಾರೆ. ಬಡ ಕುಟುಂಬದ ಬಂದಿರುವ ಸುಲ್ತಾನಾ, ಮೂವರು ಮಕ್ಕಳು ಜನಿಸಿದ ಕಾರಣಕ್ಕೆ ನಾನು ಸಂತೋಷಗೊಂಡಿರುವೆ. ಆದರೆ, ಮೂವರು ಮಕ್ಕಳನ್ನು ಹೇಗೆ ಬೆಳೆಸುವುದು ಎಂಬ ಬಗ್ಗೆ ಕಳವಳ ಇದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News