ನನಗೆ ಕಾಂಗ್ರೆಸ್ ಕಾರ್ಯಕರ್ತರ ಬೆಂಬಲವಿದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

Update: 2019-03-28 11:02 GMT

ನಾಗ್ಪುರ್, ಮಾ.28:  ತನಗೆ ಬೆಂಬಲ ವ್ಯಕ್ತಪಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಕರೆಗಳು ಬರುತ್ತಿವೆ ಎಂದು ಕೇಂದ್ರ ಸಚಿವ ಹಾಗೂ ನಾಗ್ಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿತಿನ್ ಗಡ್ಕರಿ ಹೇಳಿದ್ದಾರೆ.

ತಮ್ಮ ಪ್ರಚಾರಾಭಿಯಾನವನ್ನು ಬುಧವಾರ ಆರಂಭಿಸಿ ಮಾತನಾಡಿದ ಗಡ್ಕರಿ, ತಮಗೆ ವಿಪಕ್ಷ ಕಾಂಗ್ರೆಸ್ ಸಹಿತ ಬಿಜೆಪಿಯೇತರ ಪಕ್ಷಗಳಿಂದ ಶುಭಕಾಮನೆಗಳು ಬರುತ್ತಿವೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. “ನಾನು ಜಾತಿ, ಧರ್ಮ, ಭಾಷೆ ಮತ್ತು ಪಕ್ಷಗಳ ಎಲ್ಲೆಯನ್ನು ಮೀರಿ ಎಲ್ಲರಿಗಾಗಿ ಶ್ರಮಿಸಿದ್ದೇನೆ. ದೊಡ್ಡ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ನನಗೆ ಕರೆ ಮಾಡಿ  ಚಿಂತೆ ಮಾಡದಂತೆ ಹೇಳುತ್ತಾರೆ. ನಾವು ದೈಹಿಕವಾಗಿ ಅಲ್ಲಿದ್ದರೂ (ಕಾಂಗ್ರೆಸ್), ನಮ್ಮ ಹೃದಯಗಳು ನಿಮ್ಮ (ಗಡ್ಕರಿ) ಜತೆಗಿವೆ ಎಂದು ಅವರು ಹೇಳುತ್ತಿದ್ದಾರೆ. ನನಗೆ ಎಲ್ಲರ ಬೆಂಬಲವಿದೆ'' ಎಂದು ಸಚಿವರು ಹೇಳಿಕೊಂಡರು.

ಜನರ ಬಳಿ ಆತ್ಮವಿಶ್ವಾಸದಿಂದ ಹೋಗಿ ಆದರೆ ವಿನಯಶೀಲರಾಗಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ ಗಡ್ಕರಿ, ಆತ್ಮವಿಶ್ವಾಸ ಹಾಗೂ ಅಹಂಕಾರದ ನಡುವಿನ ವ್ಯತ್ಯಾಸವನ್ನು ಅರಿಯಬೇಕೆಂದರು. “ಒಬ್ಬರಿಗೆ ಆತ್ಮವಿಶ್ವಾಸವಿರಬೇಕೇ ಹೊರತು, ಅಹಂಕಾರವಲ್ಲ. ವಿನಯದಿಂದ ಸಾರ್ವಜನಿಕರ ಬಳಿ ಹೋಗಿ ಪಕ್ಷದ ಕೆಲಸಗಳನ್ನು ವಿವರಿಸಿ'' ಎಂದು ಸಲಹೆ ನೀಡಿದರು.

“ನಾನು ಯಾವುದೇ ವಿಪಕ್ಷ ಅಭ್ಯರ್ಥಿಯ ಹೆಸರೆತ್ತದೇ ಇರಲು ಹಾಗೂ ಯಾವುದೇ ಪಕ್ಷವನ್ನು ಟೀಕಿಸದೇ ಇರಲು ನಿರ್ಧರಿಸಿದ್ದೇನೆ. ನನ್ನ ಕೆಲಸದ ಆಧಾರದಲ್ಲಿ ಜನರಿಂದ ಮತಗಳನ್ನು ಯಾಚಿಸುತ್ತೇನೆ'' ಎಂದ ಗಡ್ಕರಿ ಕಳೆದ ಬಾರಿಗಿಂತಲೂ ಅತ್ಯಧಿಕ ಮತಗಳ ಅಂತರದಿಂದ ಜಯ ಗಳಿಸುವ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News