ನಕ್ಸಲೀಯರಿಂದ ಬಿಜೆಪಿ ನಾಯಕನ ಮನೆ ಸ್ಫೋಟ

Update: 2019-03-28 17:26 GMT

ಗಯಾ, ಮಾ. 28: ಬಿಜೆಪಿ ನಾಯಕ ಹಾಗೂ ಮಾಜಿ ಎಂಎಲ್‌ಸಿ ಅನುಜ್ ಕುಮಾರ್ ಸಿಂಗ್ ಅವರ ಗಯಾ ಜಿಲ್ಲೆಯ ಮನೆಯನ್ನು ನಕ್ಸಲೀಯರು ಬುಧವಾರ ಡೈನಮೈಟ್ ಬಳಸಿ ಸ್ಫೋಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಗಯಾ ಜಿಲ್ಲಾ ಕೇಂದ್ರ ಕಚೇರಿಯಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ದುಮರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬೋಧಿಬಿಘಾ ಗ್ರಾಮದಲ್ಲಿ ದಾಳಿ ನಡೆಸಿದ ಸಂದರ್ಭ ನಕ್ಸಲೀಯರು ಸಿಂಗ್ ಅವರ ಮಾವ ಹಾಗೂ ಅವರ ಕುಟುಂಬದ ಸದಸ್ಯರಿಗೆ ಥಳಿಸಿದ್ದಾರೆ. ರಾಜ್ಯದ ಮಗಧ ವಿಭಾಗದಲ್ಲಿ ಮುಂದಿನ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ವಿಫಲವಾದಲ್ಲಿ ಘೋರ ಪರಿಣಾಮ ಎದುರಿಸಬೇಕಾದೀತು ಎಂದು ನಕ್ಸಲೀಯರು ಎಚ್ಚರಿಸಿದ್ದಾರೆ.

 ನಕ್ಸಲೀಯರು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ಆಗ್ರಹಿಸಿ ಕರ ಪತ್ರಗಳನ್ನು ಎಸೆದಿದ್ದಾರೆ. ಅಲ್ಲದೆ, ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಗ್ರಾಮದ ಯುವಕರಿಗೆ ಕೂಡ ಬೆದರಿಕೆ ಒಡ್ಡಿರುವ ನಕ್ಸಲೀಯರು ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರದಿಂದ ದೂರವಿರುವಂತೆ ಎಚ್ಚರಿಸಿದ್ದಾರೆ.

‘‘ಸುಮಾರು 20-30ರಷ್ಟಿದ್ದ ಶಸಸ್ತ್ರ ಸಿಪಿಐ ನಕ್ಸಲೀಯರು ಬಿಜೆಪಿ ನಾಯಕನ ಮನೆಯನ್ನು ಸ್ಫೋಟಿಸಿದರು. ಈ ಸಂದರ್ಭ ಯೊರೊಬ್ಬರೂ ಮನೆಯ ಒಳಗೆ ಇರಲಿಲ್ಲ. ಇದರಿಂದ ಯಾರಿಗೂ ಗಾಯಗಳಾಗಿಲ್ಲ’’ ಎಂದು ಗಯಾದ ಹಿರಿಯ ಪೊಲೀಸ್ ಅಧೀಕ್ಷಕ ರಾಜೀವ್ ಮಿಶ್ರಾ ಹೇಳಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ ಹಾಗೂ ತನಿಖೆ ಆರಂಭಿಸಿದ್ದಾರೆ. ಸ್ಥಳೀಯ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮಿಶ್ರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News