ಸಮಂಜಸ ಸಮಯದಲ್ಲಿ ತಮಿಳುನಾಡಿನಲ್ಲಿ ಉಪ ಚುನಾವಣೆ: ಸುಪ್ರೀಂಗೆ ತಿಳಿಸಿದ ಚುನಾವಣಾ ಆಯೋಗ

Update: 2019-03-28 17:29 GMT

ಹೊಸದಿಲ್ಲಿ, ಮಾ. 28: ತಮಿಳುನಾಡಿನ ಖಾಲಿ ಇರುವ ತಿರುಪರನ್‌ಕುಂಡ್ರಂ, ಒಟ್ಟಪಿಡಾರಂ ಹಾಗೂ ಅರವಕುರಿಚಿ ವಿಧಾನ ಸಭೆ ಸ್ಥಾನಕ್ಕೆ ಸಮಂಜಸ ಸಮಯದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ವಿಧಾನ ಸಭೆಯ ಮೂರು ಖಾಲಿ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಡಿಎಂಕೆ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹಾಗೂ ಎಸ್.ಎ. ನಝೀರ್ ಅವರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿತು. ಈ ಸಂದರ್ಭ ಚುನಾವಣಾ ಆಯೋಗದ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾದ ವಕೀಲರು ಈ ವಿಚಾರವನ್ನು ನ್ಯಾಯಪೀಠಕ್ಕೆ ತಿಳಿಸಿದರು. ಚುನಾವಣಾ ಆಯೋಗದ ವಕೀಲರ ಪ್ರತಿಪಾದನೆ ಪರಿಗಣಿಸಿದ ನ್ಯಾಯಪೀಠ ಮನವಿಯ ವಿಲೇವಾರಿ ಮಾಡಿತು ಹಾಗೂ ಚುನಾವಣೆ ಸಮಯವನ್ನು ನ್ಯಾಯಾಲಯ ನಿಗದಿಪಡಿಸಲು ಸಾಧ್ಯವಿಲ್ಲ. ಅದನ್ನು ಚುನಾವಣಾ ಆಯೋಗ ನಿರ್ಧರಿಸಬೇಕು ಎಂದು ಹೇಳಿತು. ತಮಿಳುನಾಡಿನಲ್ಲಿ 21 ವಿಧಾನ ಸಭಾ ಸ್ಥಾನಗಳು ಖಾಲಿ ಬಿದ್ದಿವೆ. ಆದರೆ, ಚುನಾವಣಾ ಆಯೋಗ 18 ಸ್ಥಾನಗಳ ಉಪ ಚುನಾವಣೆಗೆ ಮಾತ್ರ ಅಧಿಸೂಚನೆ ಹೊರಡಿಸಿದೆ ಎಂದು ಡಿಎಂಕೆ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರು ಈ ಹಿಂದೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News