ಮಿಯಾಮಿ ಓಪನ್: ಫೆಡರರ್ ಹಾಲೆಪ್ ಸೆಮಿ ಫೈನಲ್‌ಗೆ
ಮಿಯಾಮಿ, ಮಾ.28: ರಶ್ಯದ ಡ್ಯಾನಿಲ್ ಮೆಡ್ವೆಡೆವ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ ಸ್ವಿಸ್ ಸೂಪರ್‌ಸ್ಟಾರ್ ರೋಜರ್ ಫೆಡರರ್ ಡಬ್ಲುಟಿಎ ಮಿಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.
ಇಲ್ಲಿ ಬುಧವಾರ ಕೇವಲ 61 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫೆಡರರ್ ರಶ್ಯದ ಮಡ್ವೆಡೆವ್‌ರನ್ನು 6-4, 6-2 ಸೆಟ್‌ಗಳಿಂದ ಸೋಲಿಸಿದರು. ನಾಲ್ಕನೇ ಮಿಯಾಮಿ ಓಪನ್ ಪ್ರಶಸ್ತಿ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
20 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಫೆಡರರ್ ಅಂತಿಮ ನಾಲ್ಕರ ಘಟ್ಟದಲ್ಲಿ ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್ಸನ್ ಸವಾಲನ್ನ್ನು ಎದುರಿಸಲಿದ್ದಾರೆ.
ಅತ್ಯುತ್ತಮ ಫಾರ್ಮ್‌ನಲ್ಲಿದ್ದ 23ರ ಹರೆಯದ ಮೆಡ್ವೆಡೆವ್ ಕಳೆದ ತಿಂಗಳು ಸೊಫಿಯಾದಲ್ಲಿ ನಾಲ್ಕನೇ ಎಟಿಪಿ ಪ್ರಶಸ್ತಿ ಜಯಿಸಿದ್ದರು. ಮೊದಲ ಬಾರಿ ಮಾಸ್ಟರ್ಸ್ 1000 ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು.
ಸೆಂಟರ್ ಕೋರ್ಟ್‌ನಲ್ಲಿ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ ಉತ್ತಮ ಪ್ರದರ್ಶನ ನೀಡಿದ ಸ್ವಿಸ್ ದಂತಕತೆ ಫೆಡರರ್ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ವೃತ್ತಿಜೀವನದ 101ನೇ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದಾರೆ.
►ಹಾಲೆಪ್ ಸೆಮಿ ಫೈನಲ್‌ಗೆ
ಇದೇ ವೇಳೆ ಮಹಿಳೆಯರ ಸಿಂಗಲ್ಸ್ ನಲ್ಲಿ ರೊಮಾನಿಯದ ಸಿಮೊನಾ ಹಾಲೆಪ್ ಚೀನಾದ ವಾಂಗ್ ಖ್ವಿಯಾಂಗ್‌ರನ್ನು 6-4, 7-5 ಸೆಟ್‌ಗಳಿಂದ ಸೋಲಿಸಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟರು. ಮಾತ್ರವಲ್ಲ ವಿಶ್ವದ ನಂ.1 ಆಟಗಾರ್ತಿಯಾಗುವತ್ತ ಹೆಜ್ಜೆ ಇಟ್ಟಿದ್ದಾರೆ.
ಹಾಲೆಪ್ ಶನಿವಾರ ನಡೆಯಲಿರುವ ಫೈನಲ್ ಪಂದ್ಯಕ್ಕೆ ತೇರ್ಗಡೆಯಾದರೆ, ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ನವೊಮಿ ಒಸಾಕಾರನ್ನು ಹಿಂದಕ್ಕೆ ತಳ್ಳಿ ಅಗ್ರ ಸ್ಥಾನಕ್ಕೇರಲಿದ್ದಾರೆ.
ಎರಡನೇ ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡ ಹಾಲೆಪ್ ಮೊದಲ ಬಾರಿ ಮಿಯಾಮಿ ಓಪನ್‌ನಲ್ಲಿ ಫೈನಲ್‌ಗೆ ತಲುಪಬೇಕಾದರೆ ಮುಂದಿನ ಸುತ್ತಿನಲ್ಲಿ ಝೆಕ್‌ನ ವಿಶ್ವದ ನಂ.5ನೇ ಆಟಗಾರ್ತಿ ಕರೊಲಿನಾ ಪ್ಲಿಸ್ಕೋವಾ ಅಥವಾ ಮರ್ಕೆಟಾ ವಂಡ್ರೌಸೋವಾರನ್ನು ಸೋಲಿಸಬೇಕಾಗಿದೆ.