ಶಾಸನಬದ್ಧ ಕನಿಷ್ಟ ಮಾಸಿಕ ವೇತನ 18 ಸಾವಿರ ರೂ.: ಸಿಪಿಎಂ ಪ್ರಣಾಳಿಕೆ ಹೀಗಿದೆ…

Update: 2019-03-28 18:08 GMT

ಹೊಸದಿಲ್ಲಿ, ಮಾ.28: ನಾಗರಿಕರ ಡಿಜಿಟಲ್ ಹಕ್ಕುಗಳ ರಕ್ಷಣೆ(ಕಂಪ್ಯೂಟರ್‌ಗೆ ಸರಕಾರದ ಕನ್ನಕ್ಕೆ ತಡೆ), ಶಾಸನಬದ್ಧ ಕನಿಷ್ಟ ಮಾಸಿಕ ವೇತನ 18 ಸಾವಿರ ರೂ, ಟೆಲಿಕಾಂ ಮತ್ತು ಇಂಟರ್‌ನೆಟ್ ಸೇವೆಯಲ್ಲಿ ಏಕಸ್ವಾಮ್ಯವನ್ನು ನಿಗ್ರಹಿಸುವುದೂ ಸೇರಿದಂತೆ ಹಲವು ಭರವಸೆಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಸಿಪಿಎಂ ಬಿಡುಗಡೆಗೊಳಿಸಿದೆ.

ಎಡಪಕ್ಷವೊಂದು ತನ್ನ ಪ್ರಣಾಳಿಕೆಯಲ್ಲಿ ನಾಗರಿಕರ ಡಿಜಿಟಲ್ ಹಕ್ಕುಗಳ ಬಗ್ಗೆ ಉಲ್ಲೇಖಿಸಿರುವುದು ಇದೇ ಮೊದಲ ಸಂದರ್ಭವಾಗಿದೆ. ಡಿಜಿಟಲ್ ಮೂಲಸೌಕರ್ಯವನ್ನು ಸಾರ್ವಜನಿಕ ಮೂಲಸೌಕರ್ಯ ಎಂದು ಪರಿಗಣಿಸಲಾಗುತ್ತದೆ ಮತ್ತು ಸರಕಾರಿ ಏಜೆನ್ಸಿಗಳಿಂದ ಸಾಮೂಹಿಕ ಕಣ್ಗಾವಲು ವ್ಯವಸ್ಥೆಯನ್ನು ಐಟಿ ಕಾಯ್ದೆಯ 69ನೇ ವಿಧಿಯಡಿ ತಡೆಯಲಾಗುವುದು ಎಂದು ಪ್ರಣಾಳಿಕೆ ತಿಳಿಸಿದೆ. ವಾಣಿಜ್ಯ ಬಳಕೆಗಾಗಿ ಗ್ರಾಹಕರ ಖಾಸಗಿ ಮಾಹಿತಿಗಳನ್ನು ದುರ್ಬಳಕೆ ಮಾಡುವುದನ್ನು ತಡೆಯಲು ಖಾಸಗಿ ಮಾಹಿತಿ ಕಾನೂನನ್ನು ಜಾರಿಗೊಳಿಸಲಾಗುವುದು ಎಂದು ಪ್ರಣಾಳಿಕೆ ಬಿಡುಗಡೆಗೊಳಿಸಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದರು.

ಪಾಲಿಟ್‌ಬ್ಯೂರೊ ಸದಸ್ಯರಾದ ಬೃಂದಾ ಕಾರಟ್, ಪ್ರಕಾಶ್ ಕಾರಟ್ ಹಾಗೂ ನೀಲೋತ್ಪಲ ಬಸು ಈ ಸಂದರ್ಭ ಉಪಸ್ಥಿತರಿದ್ದರು. ಬಿಜೆಪಿಯನ್ನು ಸೋಲಿಸುವುದು ಮತ್ತು ಸಂಸತ್ತಿನಲ್ಲಿ ಸಿಪಿಎಂ ಮತ್ತು ಎಡಪಕ್ಷಗಳ ಬಲವನ್ನು ವೃದ್ಧಿಸುವುದು ಹಾಗೂ ಪರ್ಯಾಯ ಜಾತ್ಯಾತೀತ ಸರಕಾರವನ್ನು ಸ್ಥಾಪಿಸುವುದು ನಮ್ಮ ಪ್ರಧಾನ ಗುರಿಯಾಗಿದೆ ಎಂದು ಯೆಚೂರಿ ತಿಳಿಸಿದರು.

ಪ್ರತೀ ಕುಟುಂಬಕ್ಕೆ ತಿಂಗಳಿಗೆ 35 ಕಿ.ಗ್ರಾಂ.ನಷ್ಟು ಆಹಾರ ಪದಾರ್ಥವನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪೂರೈಸುವುದು, ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ, ಹಳೆಯ ತೆರಿಗೆ ವ್ಯವಸ್ಥೆ ಮರುಸ್ಥಾಪನೆ, ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ, ವೃದ್ಧರಿಗೆ ಮಾಸಿಕ 6 ಸಾವಿರ ರೂ. ಪಿಂಚಣಿ ಯೋಜನೆಯನ್ನು ಪ್ರಣಾಳಿಕೆ ಹೊಂದಿದೆ.

ಚುನಾವಣಾ ವ್ಯವಸ್ಥೆಯನ್ನು ಪರಿಷ್ಕರಿಸುವ ಅಗತ್ಯವಿದೆ. ಕೇವಲ ಶೇ.31 ಪ್ರಮಾಣದ ಮತಗಳನ್ನು ಪಡೆದಿರುವ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಈ ವ್ಯವಸ್ಥೆಯ ಬದಲು ಪಡೆದ ಮತಗಳ ಪ್ರಮಾಣಾನುಗುಣದ ಪ್ರಾತಿನಿಧ್ಯ ವ್ಯವಸ್ಥೆ ಜಾರಿಯಾಗಬೇಕು ಎಂದು ಹೇಳಿದರು. ಇಲೆಕ್ಟೋರಲ್ ಬಾಂಡ್‌ಗಳನ್ನು ರದ್ದುಗೊಳಿಸಲಾಗುವುದು, ತೃತೀಯ ಲಿಂಗಿಗಳ ಹಕ್ಕನ್ನು ರಕ್ಷಿಸಲು ‘ತೃತೀಯ ಲಿಂಗಿಗಳ ಹಕ್ಕು ಕಾಯ್ದೆ ಮಸೂದೆ 2014ನ್ನು ಜಾರಿಗೊಳಿಸಲಾಗುವುದು ಎಂದು ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News