×
Ad

ಪಂತ್, ಬಜರಂಗ್, ರಾಣಿ, ಭಾಕರ್‌ಗೆ ಡಿಎಸ್‌ಜೆಎ ಪ್ರಶಸ್ತಿ

Update: 2019-03-28 23:41 IST

ಹೊಸದಿಲ್ಲಿ, ಮಾ.28:ಭಾರತೀಯ ಕ್ರೀಡಾ ತಾರೆಯರಾದ ರಿಷಭ್ ಪಂತ್, ಬಜರಂಗ್ ಪೂನಿಯಾ, ರಾಣಿ ರಾಂಪಾಲ್ ಹಾಗೂ ಮನು ಭಾಕರ್‌ಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ನರೇಂದ್ರ ಬಾತ್ರಾ ಗುರುವಾರ ದಿಲ್ಲಿ ಕ್ರೀಡಾ ಪತ್ರಕರ್ತರ ಸಂಸ್ಥೆ ಕೊಡಮಾಡಿದ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.

‘‘ಕಿರಿಯ ಕ್ರಿಕೆಟಿಗರಿಗೆ ಮಾಧ್ಯಮಗಳು ಪೋಷಕ ಪಾತ್ರವನ್ನು ನಿಭಾಯಿಸಿವೆ. ನನಗೆ ಬೆಂಬಲ ನೀಡಿದ ದಿಲ್ಲಿ ಕ್ರೀಡಾ ಪತ್ರಕರ್ತರನ್ನು ಯಾವುದೇ ಕಾರಣಕ್ಕೂ ಮರೆಯಲಾರೆ’’ಎಂದು ಪಂತ್ ಹೇಳಿದ್ದಾರೆ.

ರಿಷಭ್ ಪಂತ್‌ರ ಬಾಲ್ಯದ ಕೋಚ್ ತಾರಕ್ ಸಿನ್ಹಾಗೆ ಶ್ರೇಷ್ಠ ಕೋಚ್ ಪ್ರಶಸ್ತಿ ಲಭಿಸಿದೆ. ‘‘ಡಿಎಸ್‌ಜೆಎ ಪ್ರಶಸ್ತಿಯು 2020ರ ಟೋಕಿಯೊ ಒಲಿಂಪಿಕ್ ಗೇಮ್ಸ್‌ನಲ್ಲಿ ಕಠಿಣ ಪರಿಶ್ರಮಪಡಲು ಉತ್ತೇಜನ ನೀಡಿದೆ. ಕ್ರೀಡಾ ಪತ್ರಕರ್ತರು ನೀಡಿರುವ ಈ ಪ್ರಶಸ್ತಿ ತುಂಬಾ ಸ್ಫೂರ್ತಿದಾಯಕವಾಗಿದೆ’’ಎಂದು ಏಶ್ಯನ್ ಗೇಮ್ಸ್ ಚಾಂಪಿಯನ್ ಕುಸ್ತಿಪಟು ಬಜರಂಗ್ ಪೂನಿಯಾ ಪ್ರತಿಕ್ರಿಯಿಸಿದರು.

ಹಾಕಿ ಸ್ಟಾರ್ ರಾಣಿ ರಾಂಪಾಲ್ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರದಿಂದ ಅನುಮತಿ ಪಡೆದುಕೊಂಡು ಬಂದು ಪ್ರಶಸ್ತಿ ಸ್ವೀಕರಿಸಿದರು. ಶೂಟರ್ ಮನು ಭಾಕರ್ ಚೈನೀಸ್ ತೈಪೆಯಲ್ಲಿ ಏಶ್ಯನ್ ಏರ್ ಗನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿರುವ ಕಾರಣ ಅವರ ತಂದೆ ಪ್ರಶಸ್ತಿ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಐಒಸಿ ಸದಸ್ಯ ರಾಜಾ ರಣಧೀರ್ ಸಿಂಗ್, ಹಾಕಿ ಒಲಿಂಪಿಯನ್‌ಗಳಾದ ಹರ್ಬಿಂದರ್ ಸಿಂಗ್ ಹಾಗೂ ಜಾಫರ್ ಇಕ್ಬಾಲ್, ಟ್ರಾಪ್ ಶೂಟರ್ ಮೊರಾದ್ ಅಲಿ ಖಾನ್ ಉಪಸ್ಥಿತರಿದ್ದು, ವಿಜೇತರಿಗೆ ಪ್ರಶಸ್ತಿ ಪ್ರದಾನಿಸಿದರು.

►ಪ್ರಶಸ್ತಿ ವಿಜೇತರುಗಳು

-ಶ್ರೇಷ್ಠ ಪುರುಷ ಕ್ರೀಡಾಪಟು: ಬಜರಂಗ್ ಪೂನಿಯಾ(ಕುಸ್ತಿ) ಹಾಗೂ ರಿಷಭ್ ಪಂತ್(ಕ್ರಿಕೆಟ್)

-ಶ್ರೇಷ್ಠ ಮಹಿಳಾ ಕ್ರೀಡಾಪಟು: ರಾಣಿ ರಾಂಪಾಲ್(ಹಾಕಿ) ಹಾಗೂ ಮನು ಭಾಕರ್(ಶೂಟಿಂಗ್)

-ಜೀವಮಾನ ಸಾಧನೆ: ಕರ್ಣಂ ಮಲ್ಲೇಶ್ವರಿ(ವೇಟ್‌ಲಿಫ್ಟಿಂಗ್) ಹಾಗೂ ರಾಜ್ ಸಿಂಗ್(ಕುಸ್ತಿ)

-ಬೆಸ್ಟ್ ಕೋಚ್: ಜಸ್ಪಾಲ್ ರಾಣಾ(ಶೂಟಿಂಗ್) ಹಾಗೂ ತಾರಕ್ ಸಿನ್ಹಾ(ಕ್ರಿಕೆಟ್)

-ವಿಶೇಷ ಪ್ರಶಸ್ತಿಗಳು: ಅಭಿಷೇಕ್ ವರ್ಮಾ(ಆರ್ಚರಿ), ದಿವಿಜ್ ಶರಣ್(ಟೆನಿಸ್), ದೀಕ್ಷಾ ದಾಗರ್(ಗಾಲ್ಫ್), ಗೌರವ್ ಗಿಲ್(ಮೋಟಾರ್ ಸ್ಪೋರ್ಟ್ಸ್), ಮೀನಾಕ್ಷಿ ಪಹುಜಾ(ಚಾನಲ್ ಸ್ವಿಮ್ಮಿಂಗ್) ಹಾಗೂ ಡಾ. ಸೀಮಾ ಯಾದವ್(ಅಮೆಚೂರ್ ಮ್ಯಾರಥಾನ್ ರನ್ನಿಂಗ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News