ವಿಶ್ವಕಪ್ ಆಡುವ ರಿಚರ್ಡ್‌ಸನ್ ಕನಸಿಗೆ ಬಲ
ಸಿಡ್ನಿ, ಮಾ.28: ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಭುಜನೋವಿಗೆ ಒಳಗಾಗಿದ್ದ ಆಸ್ಟ್ರೇಲಿಯದ ಯುವ ಬೌಲರ್ ಜೆ.ರಿಚರ್ಡ್‌ಸನ್ ಅವರನ್ನು ಸ್ಕಾನಿಂಗ್‌ಗೆ ಒಳಪಡಿಸಿದ್ದು ಯಾವುದೇ ಮೂಳೆಯಲ್ಲಿ ಹಾನಿ ಅಥವಾ ಮುರಿತ ಕಂಡುಬಂದಿಲ್ಲ. ಇದರಿಂದ ಅವರಿಗೆ ವಿಶ್ವಕಪ್ ಟಿಕೆಟ್ ತಪ್ಪಬಹುದೆಂಬ ಆತಂಕ ಕೊನೆಗೊಂಡಿದೆ.
ರವಿವಾರ ಪಾಕ್ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ತಮ್ಮ ಓವರ್ ಕೋಟಾದಲ್ಲಿ 5 ಓವರ್ ಮಾತ್ರ ಮುಗಿಸಿದ್ದ 22 ವರ್ಷದ ರಿಚರ್ಡ್‌ಸನ್ ಬೌಂಡರಿಯೊಂದನ್ನು ತಡೆಯುವ ಯತ್ನದಲ್ಲಿ ಭುಜದ ಗಾಯಕ್ಕೆ ಒಳಗಾಗಿ ಪಂದ್ಯದಿಂದ ಹೊರನಡೆದಿದ್ದರು.
ವಿಶ್ವಕಪ್‌ಗೆ ಆಸ್ಟ್ರೇಲಿಯ ತಂಡದ ಸದಸ್ಯ ಎಂದು ಪರಿಗಣಿಸಲಾಗುವ ರಿಚರ್ಡ್‌ಸನ್ ಗಾಯಗೊಂಡ ಬಳಿಕ ಪಂದ್ಯದಲ್ಲಿ ಸಂಪೂರ್ಣ ವಿರಾಮ ಪಡೆದರು. ನಂತರ ಭುಜದ ಸ್ಕಾನ್‌ಗಾಗಿ ಅವರನ್ನು ಮನೆಗೆ ಕಳುಹಿಸಲಾಯಿತು.
‘‘ರಿಚರ್ಡ್‌ಸನ್ ಅವರಿಗೆ ಸಣ್ಣ ಅಂಗಾಂಶಕ್ಕೆ ಸ್ವಲ್ಪ ಹಾನಿಯಾಗಿದ್ದು ಸ್ಕಾನಿಂಗ್‌ನಲ್ಲಿ ಕಂಡುಬಂದಿದೆ. ಅದೃಷ್ಟವಶಾತ್ ಅವರು ಮೂಳೆ ಹಾನಿ ಅಥವಾ ಮುರಿತದಿಂದ ಪಾರಾಗಿದ್ದಾರೆ’’ ಎಂದು ಆಸ್ಟ್ರೇಲಿಯ ಪುರುಷರ ಕ್ರಿಕೆಟ್ ತಂಡದ ವೈದ್ಯ ರಿಚರ್ಡ್ ಸಾ ಹೇಳಿದ್ದಾರೆ.