ನೇಪಥ್ಯಕ್ಕೆ ಸರಿದ ಹಾಪ್‌ಮನ್ ಕಪ್
ಸಿಡ್ನಿ, ಮಾ.28: ಪರ್ತ್‌ನಲ್ಲಿ ನಡೆಯುತ್ತಿದ್ದ ಮಿಶ್ರ ತಂಡಗಳ ಅನನ್ಯ ಟೆನಿಸ್ ಕ್ರೀಡಾಕೂಟ ಹಾಪ್‌ಮನ್ ಕಪ್ ಸುಮಾರು 31 ವರ್ಷಗಳ ಬಳಿಕ ನೇಪಥ್ಯಕ್ಕೆ ಸರಿದಿದೆ. ಅದಕ್ಕೆ ಪರ್ಯಾಯವಾಗಿ ‘ಎಟಿಪಿ ವಿಶ್ವ ಟೀಮ್ ಕಪ್’ನ್ನು ಪರಿಚಯಿಸಲಾಗುತ್ತದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಪುರುಷರಿಗಾಗಿ ಮಾತ್ರ ಇರುವ ನೂತನ ಟೂರ್ನಿಯನ್ನು ಆಯೋಜಿಸುವುದಾಗಿ ಸಿಡ್ನಿ ಹಾಗೂ ಬ್ರಿಸ್ಬೇನ್ ಪ್ರಕಟಿಸಿದ್ದವು. ಸದ್ಯ ಪರ್ತ್ ಕೂಡ ಆತಿಥೇಯ ನಗರದ ಪಟ್ಟಿಗೆ ಸೇರಿಕೊಂಡಿದೆ. ಇದರೊಂದಿಗೆ ಜನಪ್ರಿಯ ಹಾಪ್‌ಮನ್ ಕಪ್ ಅಂತ್ಯ ಕಾಣಲಿದೆ. ಈ ವರ್ಷ ಈ ಪ್ರಶಸ್ತಿಯನ್ನು ಸ್ವಿಸ್ ಜೋಡಿಯಾದ ಫೆಡರರ್ ಹಾಗೂ ಬೆಲಿಂಡಾ ಬೆನ್ಸಿಕ್ ಗೆದ್ದುಕೊಂಡಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಟೆನಿಸ್ ಆಸ್ಟ್ರೇಲಿಯ ಮುಖ್ಯಸ್ಥ ಕ್ರೆಗ್ ಟಿಲಿ ‘‘ ಈ ಬದಲಾವಣೆಯನ್ನು ಗಮನಿಸುತ್ತಿರುವ ಹಲವರು ‘ನಾವು ಏನೋ ಕಳೆದುಕೊಂಡೆವು ಹಾಗೂ ನಾವು ವಾಸ್ತವವಾಗಿ ಒಂದಷ್ಟು ಪಡೆದುಕೊಂಡೆವು’ ಎಂದು ಹೇಳುತ್ತಿದ್ದಾರೆ’’ ಎಂದು ನುಡಿದಿದ್ದಾರೆ.
ಹಾಪ್‌ಮನ್ ಕಪ್ ಟೂರ್ನಿಯ ಸ್ಥಾಪಕ ಹಾಗೂ ಮಾಜಿ ಟೆನಿಸ್ ದಂತಕತೆ ಪಾಲ್ ಮೆಕ್‌ನಾಮಿ ‘‘ಇದೊಂದು ದುಃಖದ ದಿನ ’’ ಎಂದು ಪ್ರತಿಕ್ರಿಯಿಸಿದ್ದಾರೆ.