ದೇಶದ ಗಡಿ ರಕ್ಷಿಸಲು ಮೋದಿಯಿಂದ ಮಾತ್ರ ಸಾಧ್ಯ: ಅಮಿತ್ ಶಾ

Update: 2019-03-28 18:16 GMT

ದಿಸ್ಪುರ್, ಮಾ. 28: ದೇಶದ ಗಡಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ರಕ್ಷಿಸಲು ಸಾಧ್ಯ. ಕಾಂಗ್ರೆಸ್ ಪಕ್ಷ ಹಾಗೂ ಅದರ ವರಿಷ್ಠ ರಾಹುಲ್ ಗಾಂಧಿ ಅವರಿಂದ ಸಾಧ್ಯವಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗುರುವಾರ ಹೇಳಿದ್ದಾರೆ.

 ಪಾಕಿಸ್ತಾನದ ಬಾಲಕೋಟ್‌ನಲ್ಲಿ ನಡೆಸಲಾದ ವಾಯು ದಾಳಿಯಲ್ಲಿ ಉಂಟಾದ ಹಾನಿಯ ಬಗ್ಗೆ ಪುರಾವೆ ಕೇಳಿದ ಕಾಂಗ್ರೆಸ್ ಅನ್ನು ಕಟುವಾಗಿ ಟೀಕಿಸಿದ ಅಮಿತ್ ಶಾ, ತನ್ನ ಯೋಧರ ರಕ್ತಕ್ಕೆ ಪ್ರತೀಕಾರ ತೀರಿಸಿದ ಅಮೆರಿಕ ಹಾಗೂ ಇಸ್ರೇಲ್ ಬಳಿಕದ ಮೂರನೇ ದೇಶ ಭಾರತ ಎಂದರು.

“ನಮ್ಮ ಯೋಧರ ರಕ್ತಕ್ಕೆ ನಾವು ಪ್ರತೀಕಾರ ತೆಗೆದುಕೊಳ್ಳಬಾರದೇ ?, ಕಾಂಗ್ರೆಸ್ ದೇಶದ ಗಡಿ ರಕ್ಷಿಸಲಾರದು. ನರೇಂದ್ರ ಮೋದಿ ಹಾಗೂ ಬಿಜೆಪಿ ಮಾತ್ರ ಇದನ್ನು ಮಾಡಬಲ್ಲುದು” ಎಂದು ಕಲಿಯಾಬೋರ್‌ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಹೇಳಿದರು.

 ಪಾಕಿಸ್ತಾನ ಮೂಲದ ಭಯೋತ್ಪಾದಕರಿಂದ ಉರಿ ಹಾಗೂ ಪುಲ್ವಾಮ ದಾಳಿ ನಡೆದ ಬಳಿಕ ಯೋಧರ ರಕ್ತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರತೀಕಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ‘‘ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರ 10 ವರ್ಷಗಳ ಅಧಿಕಾರವಧಿಯಲ್ಲಿ ನಮ್ಮ ಯೋಧರ ತಲೆ ಕತ್ತರಿಸಲಾಯಿತು. ಆದರೆ, ಭಾರತದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ’’ ಎಂದು ಅಮಿತ್ ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News