ಮೋದಿ ಬಾಹ್ಯಾಕಾಶಕ್ಕೆ ಹಾರಿಸಿದ ಟುಸ್ ಪಟಾಕಿ!

Update: 2019-03-29 04:28 GMT

ದೇಶದ ಮೊತ್ತ ಮೊದಲ ಪ್ರಧಾನಿ ನೆಹರೂ ಈ ದೇಶದಲ್ಲಿ ವಿಜ್ಞಾನ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸುವಲ್ಲಿ ತಮ್ಮ ಕೊಡುಗೆಗಳನ್ನು ನೀಡದೇ ಇದ್ದಿದ್ದರೆ, ಇಂದು ನರೇಂದ್ರ ಮೋದಿಯವರಿಗೆ ಚುನಾವಣೆ ಎದುರಿಸಲು ವಿಷಯವೇ ಇಲ್ಲದಿರುತ್ತಿತ್ತು. ಮಾತು ಮಾತಿಗೂ ‘ನೆಹರೂ ಏನು ಮಾಡಿದರು?’ ಎಂದು ಕೇಳುವ, ಆ ಮೂಲಕ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಹವಣಿಸುವ ನರೇಂದ್ರ ಮೋದಿಯವರು, ನೆಹರೂ ತಮ್ಮ ಕಾಲದಲ್ಲಿ ಸ್ಥಾಪಿಸಿದ ‘ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ಡಿಆರ್‌ಡಿಒ)’ ಕಳೆದ 2 ದಶಕಗಳಲ್ಲಿ ಸಾಧಿಸಿದ ಸಾಧನೆಯನ್ನು ತನ್ನ ಸಾಧನೆಯೆಂದು ದೇಶದ ಮುಂದೆ ಸಾರಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ. 1983ರಲ್ಲಿ ಇಂದಿರಾಗಾಂಧಿಯ ಕಾಲದಲ್ಲಿ ಡಿಆರ್‌ಡಿಒ ಕ್ಷಿಪಣಿ ತಯಾರಿಗೆ ಆದ್ಯತೆಯನ್ನು ನೀಡಲಾಯಿತು. 2012ರ ಹೊತ್ತಿಗೆ ಭಾರತವು ಬಾಹ್ಯಾಕಾಶ ಕಕ್ಷೆಯಲ್ಲೇ ಉಪಗ್ರಹವನ್ನು ಹೊಡೆದುರುಳಿಸಬಲ್ಲ ಕ್ಷಿಪಣಿಯನ್ನು ದೇಶೀಯವಾಗಿ ನಿರ್ಮಿಸಿ ಸಾಧನೆ ಮಾಡಿತ್ತು. ಆದರೆ ಅಧಿಕೃತವಾಗಿ ಬಾಹ್ಯಾಕಾಶದಲ್ಲಿರುವ ಉಪಗ್ರಹಗಳನ್ನು ಉರುಳಿಸುವುದು ಅಂತರ್‌ರಾಷ್ಟ್ರೀಯ ನೀತಿಯ ಉಲ್ಲಂಘನೆಯಾಗುತ್ತದೆ. ಒಂದು ವೇಳೆ ಉರುಳಿಸಿದರೂ ಅದನ್ನು ಡಿಆರ್‌ಡಿಒ ಗುಟ್ಟಾಗಿಡುತ್ತದೆ.

ಬಾಹ್ಯಾಕಾಶ ಭೂಮಿಗೆ ಹೊರತಾದ ಪ್ರದೇಶವಲ್ಲ. ಈಗಾಗಲೇ ಭೂಮಿಯಷ್ಟೇ ಅಲ್ಲ, ಬಾಹ್ಯಾಕಾಶವೂ ತ್ಯಾಜ್ಯಗಳ ಸಮಸ್ಯೆಯನ್ನು ಎದುರಿಸತೊಡಗಿದೆ. ಈ ನಿಟ್ಟಿನಲ್ಲಿ ಇಂತಹ ಪರೀಕ್ಷೆ ಬಾಹ್ಯಾಕಾಶವನ್ನು ತ್ಯಾಜ್ಯಗಳ ಮೂಲಕ ಹಾಳುಗೆಡಹಬಹುದು ಎನ್ನುವುದು ಅಂತರ್‌ರಾಷ್ಟ್ರೀಯ ಮಟ್ಟದ ವಿಜ್ಞಾನಿಗಳ ಆತಂಕವಾಗಿದೆ. ಜೊತೆಗೆ ಈ ತ್ಯಾಜ್ಯಗಳು ಕಾರ್ಯನಿರ್ವಹಿಸುವ ಉಪಗ್ರಹಗಳಿಗೆ ಹಾನಿಯನ್ನೂ ಉಂಟು ಮಾಡಬಲ್ಲವು. ಈ ಹಿಂದೆ 2007ರಲ್ಲಿ ಚೀನಾ ಇಂತಹದ್ದೇ ಪರೀಕ್ಷೆ ಮಾಡಿದ್ದಾಗ ಇಸ್ರೋ ಅಧ್ಯಕ್ಷರಾಗಿದ್ದ ಜಿ. ಮಾಧವನ್ ನಾಯರ್ ತೀವ್ರವಾಗಿ ಖಂಡಿಸಿದ್ದರು. ‘‘ಇದು ಅಂತರ್‌ರಾಷ್ಟ್ರೀಯ ನಿಯಮದ ಉಲ್ಲಂಘನೆ’’ ಎಂದು ತಮ್ಮ ಆಕ್ಷೇಪಣೆಯಲ್ಲಿ ತಿಳಿಸಿದ್ದರು. ವಿಪರ್ಯಾಸವೆಂದರೆ, ಒಂದು ಕಾಲದಲ್ಲಿ ಚೀನಾ ಮಾಡಿದ ಪ್ರಯೋಗವನ್ನು ಖಂಡಿಸಿದ್ದ ಅದೇ ನಾಯರ್, ಇಂದು ಡಿಆರ್‌ಡಿಒ ಪರೀಕ್ಷೆ ನಡೆಸಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ ಮತ್ತು ಸಾಧನೆಯ ಸರ್ವ ಹೆಗ್ಗಳಿಕೆಯನ್ನು ಅವರು ಮೋದಿಯವರಿಗೆ ಅರ್ಪಿಸಿದ್ದಾರೆ. ಕಳೆದ ವರ್ಷ ಬಿಜೆಪಿ ಸೇರಿರುವ ಈ ವಿವಾದಿತ ವಿಜ್ಞಾನಿ ನಾಯರ್, ಹೇಗೆ ವಿಜ್ಞಾನವನ್ನು ರಾಜಕೀಯ ಗುಲಾಮಗಿರಿಗೆ ಒತ್ತೆಯಿಡಬಹುದು ಎನ್ನುವುದಕ್ಕೆ ಉದಾಹರಣೆಯಾಗಿದೆ.

ಮೋದಿ ಅಧಿಕಾರಕ್ಕೆ ಬರುವ ಮೊದಲೇ ಡಿಆರ್‌ಡಿಒ ಈ ಸಾಧನೆಯನ್ನು ಮಾಡಿತ್ತು. ಆದರೆ ಅಧಿಕೃತವಾಗಿ ಪ್ರಯೋಗವನ್ನು ನಡೆಸಿಲ್ಲ. ಕೆಲವೊಮ್ಮೆ ಇಂತಹ ಸಂಸ್ಥೆಗಳು ಪ್ರಯೋಗಗಳನ್ನು ನಡೆಸುತ್ತವೆಯಾದರೂ ಅವುಗಳನ್ನು ಅಂತರ್‌ರಾಷ್ಟ್ರೀಯ ಆಕ್ಷೇಪಗಳಿಗೆ ಬೆದರಿ ಗುಟ್ಟಾಗಿಡುತ್ತವೆೆ. ಇಸ್ರೇಲ್‌ನಂತಹ ದೇಶಗಳು ಇಂತಹ ಶಕ್ತಿಯನ್ನು ಹೊಂದಿವೆಯಾದರೂ ಅವು ಯಾವತ್ತೂ ಅದನ್ನು ಬಹಿರಂಗವಾಗಿ ಪ್ರಯೋಗಕ್ಕೆ ಒಳಪಡಿಸಿ ಜಾಹೀರುಗೊಳಿಸಿಲ್ಲ. ಅದು ಆ ದೇಶಗಳ ನಾಯಕರ ಮುತ್ಸದ್ದಿತನವನ್ನು ತೋರಿಸುತ್ತದೆ. ಚುನಾವಣೆಗಾಗಿ ದೇಶದ ಹಿತಾಸಕ್ತಿಯನ್ನು ಯಾವತ್ತೂ ಅಲ್ಲಿನ ಸರಕಾರಗಳೂ ಬಲಿಕೊಟ್ಟಿಲ್ಲ. ವಿಪರ್ಯಾಸವೆಂದರೆ ಡಿಆರ್‌ಡಿಒದಂತಹ ವಿಜ್ಞಾನ ಸಂಸ್ಥೆಯ ಸಾಧನೆಯನ್ನೂ ಇನ್ನೊಂದು ‘ಸರ್ಜಿಕಲ್ ಸ್ಟ್ರೈಕ್’ ಆಗಿ ಮೋದಿ ಪರಿವರ್ತಿಸಿದರು. ಸೇನೆಯ ವಿರುದ್ಧ ಪದೇ ಪದೇ ದಾಳಿಗಳಾಗುತ್ತಿರುವುದರಿಂದ ತೀವ್ರ ಮುಜುಗರಕ್ಕೊಳಗಾದ ಮೋದಿ ನೇತೃತ್ವದ ಸರಕಾರ, ಜನರನ್ನು ಸಮಾಧಾನಿಸುವುದಕ್ಕಾಗಿ ‘ಸರ್ಜಿಕಲ್ ಸ್ಟ್ರೈಕ್’ನ್ನು ರಾಜಕೀಯವಾಗಿ ಬಳಸಲು ಮುಂದಾಯಿತು. ಈ ದೇಶದ ಸಮರ್ಥ ಸೇನಾಪಡೆಗಳ ನಿರ್ಮಾಣದಲ್ಲಿ ನೆಹರೂ,ಇಂದಿರಾ ಸೇರಿದಂತೆ ಹಲವು ನಾಯಕರ ಕೊಡುಗೆಗಳಿವೆ.

ಅವರೆಂದೂ ಸೇನೆಯನ್ನು ಮುಂದಿಟ್ಟು ರಾಜಕೀಯ ನಡೆಸುವ ಹವಣಿಕೆ ಮಾಡಲಿಲ್ಲ. ಪಾಕಿಸ್ತಾನ-ಬಾಂಗ್ಲಾವನ್ನು ವಿಭಜಿಸಿದ ಹೆಗ್ಗಳಿಕೆ ಇಂದಿರಾಗಾಂಧಿಯವರದು. ಆದರೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಎಂದಿಗೂ ಅದನ್ನು ಬಳಸಿಕೊಳ್ಳಲಿಲ್ಲ. ಒಂದು ವೇಳೆ ಅದನ್ನು ಬಳಸಿಕೊಂಡದ್ದೇ ಆದರೆ, ಸೇನೆಯ ತ್ಯಾಗ, ಬಲಿದಾನಕ್ಕೆ ಮಾಡುವ ಅವಮಾನವಾಗಿ ಬಿಡುತ್ತಿತ್ತು. ಸರ್ಜಿಕಲ್ ಸ್ಟ್ರೈಕ್ ಎನ್ನುವುದು ಗಡಿಭಾಗದಲ್ಲಿ ಆಗಾಗ ನಡೆಯುವ ವಿಶೇಷ ಕಾರ್ಯಾಚರಣೆ. ಇಲ್ಲಿ ಅಕ್ರಮವಾಗಿ ಗಡಿ ಉಲ್ಲಂಘಿಸಲಾಗುತ್ತದೆಯಾದುದರಿಂದ, ಕಾರ್ಯಾಚರಣೆಯನ್ನು ಗುಟ್ಟಾಗಿಡುವುದು ಸೇನೆಗೆ ಅತ್ಯಗತ್ಯವಾಗಿತ್ತು. ಆದರೆ ತನ್ನ ಮಾನವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಮೋದಿ ಸರಕಾರ ಸೇನೆಯಿಂದಲೇ ಪತ್ರಿಕಾಗೋಷ್ಠಿ ನಡೆಸುವಂತಹ ನೀಚತನಕ್ಕಿಳಿಯಿತು. ಇಂದು ಮೋದಿಯನ್ನು ರಕ್ಷಿಸಲು ಸೇನೆ ಮತ್ತು ವಿಜ್ಞಾನಸಂಸ್ಥೆಯೊಳಗಿರುವ ಬ್ರಾಹ್ಮಣ್ಯ ಶಕ್ತಿಗಳು ಗುಟ್ಟಾಗಿ ಸಹಕರಿಸುತ್ತಿರುವುದು ಬೆಳಕಿಗೆ ಬರುತ್ತಿವೆ. ತನಿಖಾ ಸಂಸ್ಥೆಗಳೂ ಕೂಡ ತಮ್ಮ ವೃತ್ತಿ ಧರ್ಮವನ್ನು ಮರೆತು ಮೋದಿಯ ಜೀತಕ್ಕೆ ಮುಂದಾಗಿವೆ.

ಇಂತಹ ಕಳವಳಕಾರಿ ಸ್ಥಿತಿಯನ್ನು ದೇಶ ಎಂದೂ ಎದುರಿಸಿಲ್ಲ. ನೋಟು ನಿಷೇಧ, ಜಿಎಸ್‌ಟಿ ಇತ್ಯಾದಿಗಳಿಂದ ಜನಸಾಮಾನ್ಯರಿಗೆ ಆಗಿರುವ ಅನ್ಯಾಯ, ದೇಶಕ್ಕಾದ ನಾಶ, ನಷ್ಟಗಳನ್ನು ಗಡಿಯಲ್ಲಿ ನಡೆದಿರುವ ಸರ್ಜಿಕಲ್ ಸ್ಟ್ರೈಕ್, ಬಾಹ್ಯಾಕಾಶದಲ್ಲಿ ನಡೆದಿರುವ ಉಪಗ್ರಹ ಧ್ವಂಸದ ಮೂಲಕ ಭರ್ತಿ ಮಾಡುವ ಪ್ರಧಾನಿಯ ಯತ್ನ ಅತ್ಯಂತ ಹತಾಶೆಯಿಂದ ಕೂಡಿದೆ. ಡಿಆರ್‌ಡಿಒ ಉಪಗ್ರಹ ಹೊಡೆದುರುಳಿಸುವ ಶಕ್ತಿಯನ್ನು ಹೊಂದಿದೆ ಎನ್ನುವುದು 2012ರಲ್ಲೇ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದೀಗ ಹೊಡೆದುರುಳಿಸಿರುವುದನ್ನು ಸ್ವತಃ ಪ್ರಧಾನಿಯೇ ಅದ್ಯಾವುದೋ ಭಾರೀ ಯೋಜನೆಯೊಂದನ್ನು ಘೋಷಿಸುವ ರೀತಿಯಲ್ಲಿ, ಟಿವಿಯಲ್ಲಿ ಪ್ರತ್ಯಕ್ಷವಾಗಿ ಹೇಳಿಕೆ ನೀಡಿ ಸ್ವತಃ ಹಾಸ್ಯಾಸ್ಪದರಾಗಿದ್ದಾರೆ. ಒಬ್ಬ ಪ್ರಧಾನಿಯ ಘನತೆಯೇನು, ಆತ ಹೇಳಿಕೆ ನೀಡುವ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಯೇನು ಎನ್ನುವುದರ ಪ್ರಾಥಮಿಕ ಜ್ಞಾನವೂ ಇಲ್ಲದ ಮೋದಿ, ಯಾರದೋ ತಾಳಕ್ಕೆ ಕುಣಿಯುತ್ತಿರುವ ಸೂತ್ರದ ಗೊಂಬೆಯಂತೆ ಭಾಸವಾಗುತ್ತಿದ್ದಾರೆ. ಡಿಆರ್‌ಡಿಒ ಸಾಧನೆಯನ್ನು ಮೋದಿ ಮುಂದಿನ ಚುನಾವಣೆಗೆ ಬಳಸಲು ಯತ್ನಿಸಿರುವುದು ದೇಶಕ್ಕೆ ಸ್ಪಷ್ಟವಾಗಿದೆ. ಆದರೆ ಚುನಾವಣಾ ಆಯೋಗ ಮಾತ್ರ ಈ ಕುರಿತಂತೆ ಇನ್ನೂ ತುಟಿ ಬಿಚ್ಚಿಲ್ಲ. ಒಂದಂತೂ ಸತ್ಯ. ಮೋದಿ ಹತಾಶರಾಗಿದ್ದಾರೆ ಎಂದು ಹೇಳುವುದಕ್ಕಿಂತ ಅವರ ಬೆನ್ನಿಗೆ ನಿಂತು ಕುಣಿಸುತ್ತಿರುವ ಶಕ್ತಿಗಳು ಮುಂದಿನ ಫಲಿತಾಂಶಗಳ ಕುರಿತಂತೆ ಆತಂಕಗೊಂಡಿವೆ. ಅವರ ಆತಂಕ, ಹತಾಶೆ, ಪ್ರಧಾನಿಯ ಕೈಯಲ್ಲಿ ನಗೆಪಾಟಲಿಗೀಡಾಗುವ ಕೆಲಸಗಳನ್ನು ಮಾಡಿಸುತ್ತಿವೆ. ಸ್ವಂತಿಕೆಯಿಲ್ಲದ, ವಿದ್ವತ್ತಿಲ್ಲದ, ಪ್ರಧಾನಿ ಸ್ಥಾನದ ಘನತೆಯ ಅರಿವಿಲ್ಲದ ನಾಯಕನೊಬ್ಬ ಏನು ಮಾಡಬಹುದೋ ಅದನ್ನೇ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಮೋದಿಯನ್ನು ಬಳಸಿಕೊಂಡು ಕೆಲವು ಶಕ್ತಿಗಳು ಈ ದೇಶವನ್ನು ಅತ್ಯಂತ ಅಪಾಯಕ್ಕೆ ತಳ್ಳುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News