ನೀರವ್ ಮೋದಿಗೆ ಮತ್ತೆ ಜಾಮೀನು ನಿರಾಕರಣೆ

Update: 2019-03-29 17:32 GMT

ಲಂಡನ್, ಮಾ. 29: ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್‌ಬಿ)ಗೆ 14,000 ಕೋಟಿ ರೂಪಾಯಿ ಪಂಗನಾಮ ಹಾಕಿ ಲಂಡನ್‌ಗೆ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶುಕ್ರವಾರ ಜಾಮೀನು ನಿರಾಕರಿಸಿದೆ.

ನ್ಯಾಯಾಲಯ ನೀರವ್ ಮೋದಿಗೆ ಜಾಮೀನು ನಿರಾಕರಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಮುಂದಿನ ವಿಚಾರಣೆಯು ಎಪ್ರಿಲ್ 26ರಂದು ನಡೆಯಲಿದೆ.

ಜಾಮೀನಿಗೆ ಪ್ರಾಸಿಕ್ಯೂಶನ್ ವಿರೋಧ

ಭಾರತೀಯ ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸುತ್ತಿಲ್ಲ ಎಂಬುದಾಗಿ ಪ್ರಾಸಿಕ್ಯೂಶನ್ ಶುಕ್ರವಾರ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಿದೆ.

ಭಾರತದ ಪರವಾಗಿ ಮೊಕದ್ದಮೆ ನಡೆಸುತ್ತಿರುವ ಕ್ರೌನ್ ಪ್ರಾಸಿಕ್ಯೂಶನ್‌ನ ಟಾಬಿ ಕ್ಯಾಡ್ಮನ್, ನೀರವ್ ಮೋದಿಗೆ ಜಾಮೀನು ನೀಡುವುದನ್ನು ವಿರೋಧಿಸಿದರು.

‘‘ಅವರಿಗೆ ಜಾಮೀನು ನೀಡಿದರೆ, ದೇಶದಿಂದ ಹೊರ ಹೋಗಬಹುದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಹಾಗೂ ಸಾಕ್ಷಿಗಳನ್ನು ನಾಶಪಡಿಸಬಹುದು’’ ಎಂದು ಪ್ರಾಸಿಕ್ಯೂಶನ್ ವಕೀಲರು ವಾದಿಸಿದರು ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಮತ್ತು ಅನುಷ್ಠಾನ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ತಂಡವೊಂದು ವಿಚಾರಣೆಗಾಗಿ ಶುಕ್ರವಾರ ಲಂಡನ್‌ನಲ್ಲಿ ಬಂದಿಳಿದಿದೆ.

ನೀರವ್ ಮೋದಿಯನ್ನು ಲಂಡನ್‌ನಲ್ಲಿ ಮಾರ್ಚ್ 20ರಂದು ಬಂಧಿಸಲಾಗಿತ್ತು ಹಾಗೂ ಮಾರ್ಚ್ 29ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಓರ್ವ ಸಾಕ್ಷಿಗೆ ಕೊಲೆ ಬೆದರಿಕೆ, ಇನ್ನೊಬ್ಬನಿಗೆ ಲಂಚದ ಆಮಿಷ

ನೀರವ್ ಮೋದಿ, ಪ್ರಕರಣದ ಓರ್ವ ಸಾಕ್ಷಿಯನ್ನು ಕೊಲ್ಲುವುದಾಗಿ ಬೆದರಿಸಿದ್ದಾರೆ ಹಾಗೂ ಇನ್ನೊಬ್ಬರಿಗೆ ಲಂಚದ ಆಮಿಷ ಒಡ್ಡಿದ್ದಾರೆ ಎಂದು ಪ್ರಾಸಿಕ್ಯೂಟರ್ ಟಾಬಿ ಕ್ಯಾಡ್ಮನ್ ನ್ಯಾಯಾಲಯದಲ್ಲಿ ಹೇಳಿದರು.

ಅದೇ ವೇಳೆ, ನೀರವ್ ಮೋದಿಯ ಸೂಚನೆಯಂತೆ ಪ್ರಕರಣಕ್ಕೆ ಸಂಬಂಧಿಸಿದ ಪುರಾವೆಗಳನ್ನು ನಾಶಪಡಿಸಲಾಗಿದೆ ಎಂಬುದಾಗಿಯೂ ಅವರು ಆರೋಪಿಸಿದರು.

‘‘ವಂಚನೆಯ ಪ್ರಮಾಣ ಮತ್ತು ಅವರು ಹೊಂದಿರುವ ಅಗಾಧ ಆಸ್ತಿಗಳ ಹಿನ್ನೆಲೆಯಲ್ಲಿ ಜಾಮೀನನ್ನು ವಿರೋಧಿಸುತ್ತೇವೆ. ಒಂದು ವೇಳೆ ಅವರಿಗೆ ಜಾಮೀನು ನೀಡಿದರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News