ಬೋಯಿಂಗ್ ಕಂಪೆನಿ ವಿರುದ್ಧ ಅಮೆರಿಕ ನ್ಯಾಯಾಲಯದಲ್ಲಿ ಮೊಕದ್ದಮೆ

Update: 2019-03-29 17:33 GMT

ಶಿಕಾಗೊ, ಮಾ. 29: ಇಥಿಯೋಪಿಯದಲ್ಲಿ ಮಾರ್ಚ್ 10ರಂದು ಸಂಭವಿಸಿದ ಇಥಿಯೋಪಿಯನ್ ಏರ್‌ಲೈನ್ಸ್ ಸಂಸ್ಥೆಗೆ ಸೇರಿದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಪತನಕ್ಕೆ ಸಂಬಂಸಿದಂತೆ ಅಮೆರಿಕದ ಫೆಡರಲ್ ನ್ಯಾಯಾಲಯವೊಂದರಲ್ಲಿ ಗುರುವಾರ ಬೋಯಿಂಗ್ ಕಂಪೆನಿಯ ವಿರುದ್ಧ ಮೊಕದ್ದಮೆಯೊಂದು ದಾಖಲಾಗಿದೆ.

ಇಥಿಯೋಪಿಯ ರಾಜಧಾನಿ ಅಡಿಸ್ ಅಬಾಬದ ಹೊರವಲಯದಲ್ಲಿ ವಿಮಾನ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲ 157 ಮಂದಿ ಮೃತಪಟ್ಟಿದ್ದಾರೆ.

ರುವಾಂಡ ನಾಗರಿಕ ಜಾಕ್ಸನ್ ಮುಸೋನಿ ಎಂಬವರ ಕುಟುಂಬ ಶಿಕಾಗೊ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದೆ. 737 ಮ್ಯಾಕ್ಸ್ ಮಾದರಿಯ ವಿಮಾನದ ಸ್ವಯಂ ಹಾರಾಟ ನಿಯಂತ್ರಣ ವ್ಯವಸ್ಥೆಯನ್ನು ತಯಾರಕ ಕಂಪೆನಿ ಬೋಯಿಂಗ್ ದೋಷಪೂರ್ಣವಾಗಿ ವಿನ್ಯಾಸಗೊಳಿಸಿದೆ ಎಂಬುದಾಗಿ ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇಂಡೋನೇಶ್ಯದ ಲಯನ್ ಏರ್ ವಾಯುಯಾನ ಸಂಸ್ಥೆಗೆ ಸೇರಿದ ಬೋಯಿಂಗ್ ಕಂಪೆನಿಯ ಇದೇ ಮಾದರಿಯ ವಿಮಾನವು ಜಾವಾ ಸಮುದ್ರದಲ್ಲಿ ಪತನಗೊಂಡು ಅದರಲ್ಲಿದ್ದ ಎಲ್ಲ 189 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆ ವಿಮಾನವೂ ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನ ಎದುರಿಸುತ್ತಿದ್ದ ಸಮಸ್ಯೆಯನ್ನೇ ಎದುರಿಸಿತ್ತು ಎನ್ನಲಾಗಿದೆ.

ಹಾಗಾಗಿ, ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನ ಪತನಗೊಂಡ ಬೆನ್ನಿಗೇ ಜಗತ್ತಿನಾದ್ಯಂತದ ಎಲ್ಲ ವಾಯುಯಾನ ಸಂಸ್ಥೆಗಳು ಬೋಯಿಂಗ್ 737 ಮ್ಯಾಕ್ಸ್ ಮಾದರಿಯ ವಿಮಾನಗಳನ್ನು ಸೇವೆಯಿಂದ ಹೊರಗಿಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News