ವಿಚಾರಣೆಯ ಕಕ್ಷೆಗೆ ಸಾವರ್ಕರ್!

Update: 2019-03-30 09:48 GMT

ಭಾಗ-17

ಸರ್ದಾರ್ ಪಟೇಲರು ಬ್ಯಾರಿಸ್ಟರ್ ಪದವೀಧರರು. ರಾಜಕೀಯದಲ್ಲಿ ಪ್ರವೇಶಿಸುವುದಕ್ಕೆ ಮುಂಚೆ ನ್ಯಾಯವಾದಿ ವೃತ್ತಿಯಲ್ಲಿ ನಿರತರಾಗಿದ್ದವರು. ಕ್ರಿಮಿನಲ್ ಮೊಕದ್ದಮೆ ನಡೆಸುವುದರಲ್ಲಿ ಹೆಸರು ಮಾಡಿದ್ದ ವಕೀಲರು. ಅವರು ದಾಖಲೆಗಳನ್ನೆಲ್ಲ ಪರಿಶೀಲಿಸಿ ಸಾವರ್ಕರ್‌ರನ್ನು ವಿಚಾರಣೆಗೆ ಅನುಮತಿ ನೀಡಿದರು.

ಗೋಡ್ಸೆ ಬಳಗಕ್ಕೂ ಈ ಡಾ.ಪರಚುರೆಗೂ ಹೇಗೆ ಸಂಬಂಧ? ಅವನೂ ಹಿಂದೂ ಮಹಾಸಭೆಯ ಪ್ರಮುಖ ಮುಖಂಡ. ಗ್ವಾಲಿಯರ್‌ನಲ್ಲಿ ಹಿಂದೂ ರಾಜರಾಗಿದ್ದ ಗ್ವಾಲಿಯರ್ ರಾಜ್ಯವನ್ನು ಸ್ವತಂತ್ರ ದೇಶವನ್ನಾಗಿ ಮಾಡಬೇಕೆಂಬ ಉತ್ಕಟೇಚ್ಛೇಯ ಹಿಂದೂ ಅಭಿಮಾನಿ ಹೈದರಾಬಾದ್ ರಾಜ್ಯದ ರಜ್ವಿಯಂತೆ ಗ್ವಾಲಿಯರ್ ‘ರಜ್ಜಿ’ ಎನ್ನಬಹುದು. ಜೊತೆಗೆ ಮುಸ್ಲಿಮರ ಕಡು ದ್ವೇಷಿ. ಮುಸ್ಲಿಮರ ಹಿತರಕ್ಷಣೆ ಮಾಡುತ್ತಿದ್ದ ಗಾಂಧೀಜಿಯನ್ನು ದ್ವೇಷಿಸುತ್ತಿದ್ದ. ಗಾಂಧೀಜಿಯಿಂದಲೇ ಈ ದೇಶ ಇಬ್ಭಾಗವಾದದ್ದು ಎಂದು ನಂಬಿದ್ದ ಆರೆಸ್ಸೆಸ್ ಪೋಷಕ. ಡಿಸೆಂಬರ್ 1947ರಲ್ಲಿ ಆಳ್ವಾರ್‌ನಲ್ಲಿ ನೆರೆದಿದ್ದ ಆರೆಸ್ಸೆಸ್ ಅಧಿವೇಶನದಲ್ಲಿ ನಾಥೂರಾಮ್ ಗೋಡ್ಸೆಯ ಪರಿಚಯ ಮಾಡಿಕೊಂಡಿದ್ದ. ಮೂಲತಃ ಮುಂಬೈ ಮೂಲದವನು. ಚಿತ್ಪಾವನ ಬ್ರಾಹ್ಮಣ. ಗೋಡ್ಸೆ ಬಳಗಕ್ಕೆ ಹತ್ತಿರವಾಗಲು ಇದಕ್ಕಿಂತ ಹೆಚ್ಚಿನ ನಂಟು ಏನು ಬೇಕು? ಗೋಡ್ಸೆಯಂತೆ ಗಾಂಧೀ ಹತ್ಯೆಯನ್ನು ಮನಸಾರೆ ಬಯಸಿದನು. ಗಾಂಧೀ ಹತ್ಯೆಯ ಅವನ ಉತ್ಕಟೇಚ್ಛೆ ಯಾವ ಮಟ್ಟಕ್ಕೆ ಮುಟ್ಟಿತ್ತೆಂದರೆ ಆ ಸುದ್ದಿ ಬಂದ ನಿಮಿಷವೇ ಗ್ವಾಲಿಯರ್‌ನಲ್ಲಿ ಬಹಿರಂಗವಾಗಿ ಯಾವ ಮುಚ್ಚುಮರೆಯೂ ಇಲ್ಲದೆ ತಾನು ಗಾಂಧೀ ಹತ್ಯೆಯ ಪಿತೂರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆಂದು ಸಾರಿ ಜಂಭಕೊಚ್ಚಿದ ವೀರ! ಅವನ ಈ ಪರಾಕ್ರಮ ಘೋಷಣೆ ಸರಕಾರದ ಕಿವಿಗೆ ಬಿದ್ದು ಅವನನ್ನು ಅರೆಸ್ಟ್ ಮಾಡಿ ಗ್ವಾಲಿಯರ್ ಮಿಲಿಟರಿ ಕಾರಾಗೃಹದಲ್ಲಿ ಕೂಡಿದ್ದರು.
ನಗರವಾಲಾ ಗ್ವಾಲಿಯರ್‌ಗೆ ಹೋದ ಮೇಲೆ ಅವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿದರು. ಗಾಂಧೀ ಹತ್ಯೆ ಭಾರತ ಮಾತೆಗೆ ತಾನು ಮಾಡಿದ ಮಹಾ ಸೇವೆ, ದೇಶ ಸೇವೆ ಎಂದು ಬಗೆದಿದ್ದ ಆ ಆತ್ಮಪ್ರಶಂಸಾಪ್ರಿಯ ತನಗೆ ಗೊತ್ತಿರುವುದನ್ನೆಲ್ಲ ಮ್ಯಾಜಿಸ್ಟ್ರೇಟರ ಸಮ್ಮುಖದಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 164ರ ಪ್ರಕಾರ ಹೇಳಿಕೆ ಕೊಡಲೊಪ್ಪಿದ. ಫೆಬ್ರವರಿ 17ರಂದು ಗ್ವಾಲಿಯರ್ ಪ್ರಥಮ ದರ್ಜಿ ಮ್ಯಾಜಿಸ್ಟ್ರೇಟ್ ಶ್ರೀ ಆರ್. ಬಿ. ಅತಲ್ ಅವರ ಸಮ್ಮುಖದಲ್ಲಿ ಡಾ.ದತ್ತಾತ್ರೇಯ ಪರಚುರೆ ಕೊಟ್ಟ ಹೇಳಿಕೆಯನ್ನು ಯಥಾವತ್ ತಮ್ಮ ಸ್ವಹಸ್ತಾಕ್ಷರಗಳಲ್ಲಿ ದಾಖಲು ಮಾಡಿದರು:
‘‘ನಾನು ಈ ತಪ್ಪೊಪ್ಪಿಗೆ ಹೇಳಿಕೆಯನ್ನು ಕೊಡಲು ಪೊಲೀಸರು ನನ್ನನ್ನು ಹೆದರಿಸಿಲ್ಲ. ಯಾವುದೇ ಆಸೆ ಆಮಿಷವನ್ನು ಒಡ್ಡಿಲ್ಲ. ಈ ತಪ್ಪೊಪ್ಪಿಗೆ ಹೇಳಿಕೆಯನ್ನು ನಾನು ನನ್ನ ಸಂಪೂರ್ಣ ಸ್ವಇಚ್ಛೆಯಿಂದ, ಮುಕ್ತ ಮನಸ್ಸಿನಿಂದ ಕೊಡುತ್ತಿದ್ದೇನೆ.’’
‘‘1941ರಿಂದ ನನಗೆ ನಾಥೂರಾಮ್ ಗೋಡ್ಸೆ ವೈಯಕ್ತಿಕವಾಗಿ ಗೊತ್ತು. ಆದರೆ 1939ರಲ್ಲಿಯೇ ಗೋಡ್ಸೆಯ ವಿಚಾರವನ್ನು ಕೇಳಿದ್ದೆ. ಜನವರಿ 27ನೇ ತಾರೀಕು ಸುಮಾರು 11 ಗಂಟೆಗೆ ಗೋಡ್ಸೆ, ಆಪ್ಟೆ ಒಡಗೂಡಿ ನಮ್ಮ ಮನೆಗೆ ಬಂದ. ತಾನೊಂದು ಬಹು ಮಹತ್ವದ ಕಾರ್ಯನಿಮಿತ್ತ (ನನ್ನಲ್ಲಿಗೆ) ಬಂದಿರುವುದಾಗಿ ಹೇಳಿದ. ‘ಫೆಬ್ರವರಿ 2ರ ಒಳಗಾಗಿ ನಾನೊಂದು ಭೀಕರ ಕೃತ್ಯ ನೆರವೇರಿಸಲಿದ್ದೇನೆ. ನಾನು ಮಹಾತ್ಮಾ ಗಾಂಧಿಯನ್ನು ಕೊಲೆ ಮಾಡಲಿದ್ದೇನೆ.’
ಗೋಡ್ಸೆ ಬಳಿ ಒಂದು ರಿವಾಲ್ವರ್ ಇತ್ತು. ಆದರೆ ಅದಕ್ಕಿಂತ ಅತ್ಯಾಧುನಿಕ ಹೆಚ್ಚು ಸಮರ್ಪಕವಾಗಿ ಕೆಲಸ ಮಾಡಬಲ್ಲ ಕೈಬಂದೂಕು (Hand Gun) ಬೇಕೆಂದು ಬಯಸಿದ. ಯಾವುದೇ ಸಂದರ್ಭದಲ್ಲಿ ಲೈಸನ್ಸ್ ಹೊಂದಿದ್ದ ನನ್ನ ಪಿಸ್ಟಲ್ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಬೇರೊಂದು ಬಂದೂಕನ್ನು ಮರುದಿನ ಬೆಳಗ್ಗೆ ಕೊಡಿಸುವುದಾಗಿ ಹೇಳಿದೆ. ಮರುದಿನ ಬೆಳಗ್ಗೆ ನನ್ನ ಮಗ ನೀಲಕಂಠ ಮತ್ತು ಸೇವಕ ರೂಪರನ್ನು ದಂಡವತೆಯನ್ನು ಕರೆತರಲು ಕಳಿಸಿದೆ. ಜನವರಿ 28ರ ಅಪರಾಹ್ನ ನಾನು ಮನೆಗೆ ಬಂದಾಗ ಗೋಡ್ಸೆ, ಆಪ್ಟೆ ಮತ್ತು ದಂಡವತೆ ಒಂದು ನಾಡ ಪಿಸ್ತೂಲನ್ನು ಪ್ರಯೋಗಿಸಲು ಪ್ರಯತ್ನಿಸುತ್ತಿದ್ದರು, ಅವರು ಅದನ್ನು ಪರೀಕ್ಷಿಸಲು ಅಂಗಳಕ್ಕೆ ಹೋದರು. ನಾನಲ್ಲಿಗೆ ಹೋಗಲಿಲ್ಲ.’’
‘‘ಆ ಸಂಜೆ ಬಹಳ ಹೊತ್ತಿನ ಮೇಲೆ ದಂಡವತೆ ನಮ್ಮ ಮನೆಗೆ ಬಂದ. ಅವನ ಬಳಿ ಒಂದು ಸ್ವಯಂಚಾಲಿತ ಪಿಸ್ಟಲ್ ಮತ್ತು ಹನ್ನೊಂದು ಹನ್ನೆರಡು ಗುಂಡುಗಳಿದ್ದವು. ಅವನು ಆ ಪಿಸ್ಟಲ್ ಅನ್ನು ಎಲ್ಲಿಂದ ತಂದಿದ್ದನೋ ಗೊತ್ತಿಲ್ಲ. ಅದರ ಬೆಲೆ 500 ರೂ. ಎಂದು ಹೇಳಿದ. ಆಪ್ಟೆ ದಂಡವತೆಗೆ 300 ರೂ. ಕೊಟ್ಟು ಉಳಿದ ಮೊತ್ತವನ್ನು ಆಮೇಲೆ ಕೊಡುವುದಾಗಿ ಹೇಳಿದ. ಆ ರಾತ್ರಿ ಮೂವರೂ ಒಂದು ಟಾಂಗಾ ಗಾಡಿಯಲ್ಲಿ ಎಲ್ಲಿಗೋ ಹೋದರು.’’
‘‘ಜನವರಿ 29ನೇ ತಾರೀಕು ನನ್ನ ಮುಂದೆ ಗೋಡ್ಸೆಗೆ ಒಂದು ಪಿಸ್ಟಲ್ ಕೊಡಿಸಿರುವುದಾಗಿ ಹೇಳಿದ. ಜನವರಿ 30ರ ಸಂಜೆ ಗಾಂಧೀ ಹತ್ಯೆ ಸುದ್ದಿಯನ್ನು ಕೇಳಿ ಒಂದು ರೂಪಾಯಿ ಸಿಹಿತಿಂಡಿ ತರಿಸಿ ನಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ಹಂಚಿದೆ. ಹಿಂದೂ ರಾಷ್ಟ್ರ ಸೇನರೂ ಸಿಹಿಯನ್ನು ಹಂಚಿ ಗಾಂಧೀ ಹತ್ಯೆಯ ಸಂತಸ ಸಂಭ್ರಮ ಆಚರಿಸಿದೆ’’.


ಈ ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸಿಕೊಂಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟರು ಕ್ರಿ.ಪ್ರೊ.ಕೋ. ಸೆಕ್ಷನ್ 164ರಲ್ಲಿ ವಿಧಿಸಿರುವ ಎಲ್ಲ ನಿಯಮಗಳನ್ನು ಚಾಚೂತಪ್ಪದೆ ಅನುಸರಿಸಿದರು. ಆರೋಪಿ ತಾನು ಕೊಡಲಿರುವ ಹೇಳಿಕೆಯನ್ನು ತನ್ನ ವಿರುದ್ಧವಾಗಿ ಸಾಕ್ಷವನ್ನಾಗಿ ಉಪಯೋಗಿಸಲಾಗುವುದೆಂದೂ ಅದರಿಂದ ತಾನು ಶಿಕ್ಷೆಗೆ ಒಳಗಾಗಬಹುದೆಂದೂ, ಹೇಳಿಕೆ ಕೊಡಲು ಇಷ್ಟವಿಲ್ಲದಿದ್ದರೆ ಯಾರೂ ಏನೂ ಮಾಡಲಾರರೆಂದೂ ಎಚ್ಚರಿಕೆ ನೀಡಿದರು. ಆದರೂ ಪರಚುರೆ ತಪ್ಪೊಪ್ಪಿಗೆ ಕೊಡಲೊಪ್ಪಿದ. ಅವನ ಈ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಮೊದಲು ಮ್ಯಾಜಿಸ್ಟ್ರೇಟ್ ಮತ್ತೆ ಎಚ್ಚರಿಸಿದರು: ‘‘ಇನ್ನೊಮ್ಮೆ ಯೋಚನೆ ಮಾಡು. ಯೋಚನೆ ಮಾಡಲು ಕಾಲಾವಕಾಶ ಕೊಡುತ್ತೇನೆ’’ ಎಂದು ಆರೋಪಿಯನ್ನು ಪ್ರತ್ಯೇಕ ಏಕಾಂತ ಸ್ಥಳಕ್ಕೆ ಕಳಿಸಿದರು. ಪೊಲೀಸರಾಗಲಿ ಮತ್ತೆ ಯಾವ ಪ್ರಭಾವ ಬೀರಬಲ್ಲ ವ್ಯಕ್ತಿಯಾಗಲಿ ಅವನ ಬಳಿ ಸುಳಿಯದಂತೆ ತಾಕೀತು ಮಾಡಿದರು. ಅವನೊಬ್ಬನೆ ನಿರ್ಭಯವಾಗಿ ಯಾರ ಹಂಗು ಹೆದರಿಕೆಯೂ ಇಲ್ಲದೆ ಯೋಚನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟರು. ಕೊಟ್ಟ ಕಾಲಾವಧಿ ಮುಗಿದ ಮೇಲೆ ಅವನಿಗೆ ಎಚ್ಚರಿಕೆ ಕೊಟ್ಟು: ‘‘ಯೋಚನೆ ಮಾಡಿದೆಯಾ?’’ ಎಂದು ಪ್ರಶ್ನಿಸಿದರು. ‘‘ಮಾಡಿದ್ದೇನೆ’’ ಎಂದ. ‘‘ತಪ್ಪೊಪ್ಪಿಗೆ ಹೇಳಿಕೆ ಕೊಡುತ್ತೀಯಾ?’’ ‘‘ಕೊಡುತ್ತೇನೆ’’. ಈ ಎಲ್ಲ ವಿಧಿವಿಧಾನಗಳನ್ನು ಚಾಚೂತಪ್ಪದೆ ಅನುಸರಿಸಿದ ಮೇಲೆ ಬಿ.ಆರ್.ಅತಲ್ ಅವನ ಹೇಳಿಕೆಯನ್ನು ದಾಖಲು ಮಾಡಿದರು. ಅದನ್ನು ಲಕೋಟೆಯಲ್ಲಿಟ್ಟು ಅರಗಿನ ಮುದ್ರೆ ಹಾಕಿ ತಮ್ಮ ಬಳಿಯಲ್ಲಿಟ್ಟುಕೊಂಡರು. ಅದನ್ನು ಸೆಷನ್ಸ್ ನ್ಯಾಯಾಲಯಕ್ಕೆ ನೇರವಾಗಿ ಕಳುಹಿಸಿಕೊಟ್ಟರು. ಡಾ.ಪರಚುರೆ ತಪ್ಪೊಪ್ಪಿಗೆ ಹೇಳಿಕೆ ದಾಖಲಾದ ಮೇಲೆ ಗಾಂಧಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಗಳನ್ನೆಲ್ಲ ಅರೆಸ್ಟ್ ಮಾಡಿದಂತಾಗಿತ್ತು. ಇನ್ನು ಉಳಿದಿದ್ದವರು ಒಬ್ಬರೇ ವೀರ ಸಾವರ್ಕರ್. ಅವರ ಕಡೆ ತಪಾಸಣಾಧಿಕಾರಿ ನಗರವಾಲಾ ಗಮನಹರಿಸಿದರು.
ಇದುವರೆಗೆ ಸಂಗ್ರಹಿಸಿದ್ದ ದಾಖಲೆಗಳು, ಮಾಹಿತಿ ಸಾವರ್ಕರ್‌ರು ಗಾಂಧೀ ಹತ್ಯೆ ಪಿತೂರಿಯಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನೆರವಾಗಿದ್ದರೆಂಬ ವಿಚಾರದಲ್ಲಿ ನಗರವಾಲಾರಿಗೆ ಸಂದೇಹವಿರಲಿಲ್ಲ. ಕೃತ್ಯವೆಸಗುವ ಆರೋಪಿಗಳಿಗೆ ಅವರ ಸಂಪೂರ್ಣ ಸಂಪರ್ಕವಿತ್ತು, ನಿಕಟ ಪರಿಚಯವಿತ್ತು, ಆಶೀರ್ವಾದವೂ ಇತ್ತೆಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಅವರನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸಿ ಅರೆಸ್ಟ್ ಮಾಡುವುದೇ ಬೇಡವೇ ಎಂಬ ಬಗ್ಗೆ ಮುಂಬೈ ಗೃಹಮಂತ್ರಿ ಮೊರಾರ್ಜಿ ದೇಸಾಯಿಯವರೊಡನೆ ಸಮಾಲೋಚನೆ ನಡೆಸಿದರು. ಸಾವರ್ಕರ್‌ರು ದೇಶದ ಬಿಡುಗಡೆಗಾಗಿ ಕಳೆದ ಶತಮಾನದ ಆದಿಯಲ್ಲಿ ಅಪ್ರತಿಮ ಸಾಹಸ ಮಾಡಿದ್ದರೆಂಬುದರಲ್ಲಿ ಸಂಶಯವಿರಲಿಲ್ಲ. ಆ ಪ್ರಯತ್ನದಲ್ಲಿ ಅಂಡಮಾನ್ ದ್ವೀಪದಲ್ಲಿ ಏಕಾಂತ ಸೆರೆವಾಸ ದೀರ್ಘಕಾಲ ಅನುಭವಿಸಿದ್ದರು. ಅವರು ಬರೆದ ‘ಭಾರತೀಯ ಪ್ರಥಮ ಸ್ವಾತಂತ್ರ ಸಮರ’ ಆಗ ಪ್ರಸಿದ್ಧವಾಗಿತ್ತು. ಸಾವಿರಾರು ದೇಶಪ್ರೇಮಿಗಳಿಗೆ ಸ್ಫೂರ್ತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಆರೋಪಿಗಳನ್ನಾಗಿಸಿ ವಿಚಾರಣೆಗೆ ಗುರಿಪಡಿಸುವುದರಿಂದ ಆಗಬಹುದಾದ ರಾಜಕೀಯ ಪರಿಣಾಮಗಳನ್ನು ನಗರವಾಲಾ ಗಾಢವಾಗಿ ಯೋಚಿಸಿ ಮೊರಾರ್ಜಿ ಅವರ ಮುಂದೆ: ‘‘ಸಾವರ್ಕರ್ ಹಿಂದೆ ದೇಶಕ್ಕಾಗಿ ಬಹಳ ತ್ಯಾಗ ಮಾಡಿದ್ದಾರೆ. ಅವರನ್ನು ವಿಚಾರಣೆಗೆ ಗುರಿಪಡಿಸುವುದೇ?’’ ಎಂದು ಕೇಳಿದರು. ಅದಕ್ಕೆ ಗೃಹಮಂತ್ರಿ: ‘‘ಹೌದು. ಅವರು ಹಿಂದೆ ಮಾಡಿದ ತ್ಯಾಗ ಇಂದು ಮಾಡಿರುವ ಹೀನ ಕೃತ್ಯದಿಂದ ಅಳಿಸಿ ಹೋಗಿದೆ. ಕಾನೂನು ಕ್ರಮ ಜರುಗಲೇಬೇಕು’’ ಎಂದು ದೃಢವಾಗಿ ಆಜ್ಞೆ ಮಾಡಿದರು. ಇಷ್ಟು ಸಾಲದೆಂಬಂತೆ ಕೇಂದ್ರ ಸರಕಾರದ ಗೃಹಮಂತ್ರಿಯಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರ ಮುಂದೆ ಎಲ್ಲ ದಾಖಲೆಗಳನ್ನೂ ಸಾದರಪಡಿಸಿ ಸಾವರ್ಕರ್‌ರನ್ನು ವಿಚಾರಣೆಗೆ ಗುರಿಪಡಿಸಬೇಕೇ ಬೇಡವೇ ಎಂಬ ಸಲಹೆ ಕೇಳಿದರು. ಪಟೇಲರು ಬ್ಯಾರಿಸ್ಟರ್ ಪದವೀಧರರು. ರಾಜಕೀಯದಲ್ಲಿ ಪ್ರವೇಶಿಸುವುದಕ್ಕೆ ಮುಂಚೆ ನ್ಯಾಯವಾದಿ ವೃತ್ತಿಯಲ್ಲಿ ನಿರತರಾಗಿದ್ದವರು. ಕ್ರಿಮಿನಲ್ ಮೊಕದ್ದಮೆ ನಡೆಸುವುದರಲ್ಲಿ ಹೆಸರು ಮಾಡಿದ್ದ ವಕೀಲರು. ಅವರು ದಾಖಲೆಗಳನ್ನೆಲ್ಲ ಪರಿಶೀಲಿಸಿ ಸಾವರ್ಕರ್‌ರನ್ನು ವಿಚಾರಿಸಲು ಅನುಮತಿ ನೀಡಿದರು.
ಈ ಪ್ರಮುಖ ಪಾತ್ರಧಾರಿ ಆರೋಪಿಗಳ ಜೊತೆಗೆ, ಪಿತೂರಿಯ ಕಾಲಕ್ಕೆ ಸಹಾಯ ಮಾಡಿದ್ದ ನಾಥೂರಾಮ್ ಗೋಡ್ಸೆಯ ತಮ್ಮ ಗೋಪಾಲ ಗೋಡ್ಸೆಯನ್ನು ಆರೋಪಿಯನ್ನಾಗಿ ಸೇರಿಸಿದರು. ಇವರೆಲ್ಲರ ಜೊತೆಗೆ ಮುಂಬೈ ‘ಶಸ್ತ್ರ ಭಂಡಾರ’ದ ಮಾಲಕ ದಿಗಂಬರ ರಾಮಚಂದ್ರ ಬಡ್ಗೆಯ ಸೇವಕ ಶಂಕರ ಕ್ರಿಸ್ಟಯ್ಯನನ್ನೂ ಅರೆಸ್ಟ್ ಮಾಡಿ ಅವನ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲಾಯಿತು.
ಬಡ್ಗೆ ಸರಕಾರದ ಪರವಾಗಿ ಸಾಕ್ಷಿ ಹೇಳಲು ಒಪ್ಪಿ ‘ಮಾಫಿ ಸಾಕ್ಷಿ’ಯಾದ. ಅವನಿಗೆ ಕ್ಷಮಾದಾನ ಮಾಡಿ ದೋಷಾರೋಪ ಪಟ್ಟಿಯಿಂದ ಕೈ ಬಿಟ್ಟರು. ಆದರೂ ಅವನನ್ನು ಪೊಲೀಸರು ತಮ್ಮ ವಶದಲ್ಲಿಯೇ ಇಟ್ಟುಕೊಂಡು ಪ್ರತ್ಯೇಕವಾದ ಸುರಕ್ಷಿತ ಸ್ಥಳದಲ್ಲಿಟ್ಟರು.
ದಿನಾಂಕ 27-5-1948ರಂದು ಒಟ್ಟು 12 ಆರೋಪಿಗಳ ಮೇಲೆ ದೋಷಾರೋಪ ಪಟ್ಟಿಯನ್ನು ದಾಖಲಿಸಿದರು. 10ನೇ ಆರೋಪಿ ಗಂಗಾಧರ ದಂಡವತೆ (ಗ್ವಾಲಿಯರ್‌ನಲ್ಲಿ ಸ್ವಯಂಚಾಲಿತ ಕೈ ಬಂದೂಕು ಮಾರಿದವನು). 11ನೆಯ ಆರೋಪಿ ಗಂಗಾಧರ ಜಾಧವ್ ಮತ್ತು 12ನೆಯ ಆರೋಪಿ ಸೂರ್ಯದೇವ ಶರ್ಮಾ ಎಂಬ ಮೂವರು ತಲೆತಪ್ಪಿಸಿಕೊಂಡಿದ್ದಾರೆಂದು ತೋರಿಸಿದರು. ಅವರು ವಿಚಾರಣೆ ಮುಗಿಯುವವರೆಗೂ ಪತ್ತೆಯಾಗಲೇ ಇಲ್ಲ. ಉಳಿದ ಒಂಬತ್ತು ಜನ ಆರೋಪಿಗಳ ನವಗ್ರಹ ಕೂಟವನ್ನು ವಿಚಾರಣೆಗೆ ಗುರಿಪಡಿಸಲಾಯಿತು.

Writer - ಕೋ. ಚೆನ್ನಬಸಪ್ಪ

contributor

Editor - ಕೋ. ಚೆನ್ನಬಸಪ್ಪ

contributor

Similar News

ಜಗದಗಲ
ಜಗ ದಗಲ