ಹತಾಶೆಯ ಐಟಿ ದಾಳಿ

Update: 2019-03-30 05:58 GMT

ಕೊನೆಗೂ ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ. ಕೇಂದ್ರ ಐಟಿ ಅಧಿಕಾರಿಗಳು ರಾಜ್ಯಾದ್ಯಂತ ನಿರ್ದಿಷ್ಟ ಪಕ್ಷವೊಂದರ ಆಪ್ತರ ಮನೆಗಳಿಗೆ ದಾಳಿ ನಡೆಸುವ ಮೂಲಕ ಈ ಪ್ರಚಾರಕ್ಕೆ ಪರೋಕ್ಷ ಚಾಲನೆ ನೀಡಿದ್ದಾರೆ. ಈ ಹಿಂದೆ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ಡಿಕೆಶಿ ನಿವಾಸಕ್ಕೆ ಇಂತಹದೇ ದಾಳಿಯನ್ನು ನಡೆಸಿದ್ದರು. ಗುಜರಾತ್‌ನ ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ಆಶ್ರಯ ನೀಡಿದಾಗ, ಅವರಿಗೆ ಬೆದರಿಕೆ ತಂತ್ರವಾಗಿ ಕೇಂದ್ರ ಐಟಿ ಅಧಿಕಾರಿಗಳನ್ನು ರವಾನಿಸಿತ್ತು. ಈ ಹಿಂದೆಲ್ಲ ಕೇಂದ್ರ ಸರಕಾರ ಗುಟ್ಟಾಗಿ ಐಟಿ ಅಧಿಕಾರಿಗಳನ್ನು ದುರ್ಬಳಕೆ ಮಾಡುತ್ತಿದ್ದರೆ, ಈಗ ಬಹಿರಂಗವಾಗಿಯೇ ಅವರನ್ನು ಬಳಸಿಕೊಳ್ಳುವ ಮಟ್ಟಕ್ಕೆ ಇಳಿದಿದೆ.

ಇತ್ತೀಚೆಗೆ ಯಡಿಯೂರಪ್ಪ ಅವರ ಡೈರಿ ಬಹಿರಂಗವಾದಾಗ, ಬಿಜೆಪಿಯ ಪರವಾಗಿ ಐಟಿ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದರು. ರಾಜಕಾರಣಿಯೊಬ್ಬನಿಗೆ ಕ್ಲೀನ್ ಚಿಟ್ ಕೊಡುವುದಕ್ಕೆ ಐಟಿ ಅಧಿಕಾರಿಗಳಿಗೆ ಯಾರು ಅಧಿಕಾರ ನೀಡಿದ್ದಾರೆ? ಎನ್ನುವ ಪ್ರಶ್ನೆಗಳನ್ನು ಸದ್ಯದ ದಿನಗಳಲ್ಲಿ ಕೇಳುವಂತಿಲ್ಲ. ಇದೀಗ ರಾಜ್ಯದಲ್ಲಿ ಮೈತ್ರಿ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿ ಚುನಾವಣಾ ಕಣಕ್ಕಿಳಿಸುತ್ತಿರುವ ಹೊತ್ತಿನಲ್ಲೇ ಒಂದು ನಿರ್ದಿಷ್ಟ ಪಕ್ಷದ ಬೆಂಬಲಿಗರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದು ಮತ್ತೆ ವಿವಾದವನ್ನು ಸೃಷ್ಟಿಸಿದೆ. ಚುನಾವಣೆಯ ಹಿನ್ನೆಲೆಯಲ್ಲೇ ಈ ದಾಳಿ ನಡೆದಿದೆ ಎಂದು ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಆರೋಪ ಮಾಡಿವೆ. ಆದರೆ ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ.

ತೆರಿಗೆ ವಂಚಕರನ್ನು ವಿಚಾರಣೆ ನಡೆಸುವುದು ಐಟಿ ಅಧಿಕಾರಿಗಳ ಹೊಣೆಗಾರಿಕೆಯಾಗಿದೆ. ಇದರಲ್ಲಿ ಎರಡು ಮಾತಿಲ್ಲ. ಯಾವುದೇ ಪ್ರತಿಷ್ಠಿತ ವ್ಯಕ್ತಿಗಳಿರಲಿ, ರಾಜಕೀಯ ನಾಯಕರಿರಲಿ, ವಿಚಾರಣೆಗೆ ಅರ್ಹರಾದರೆ ಅವರನ್ನು ತನಿಖೆ ನಡೆಸಲೇಬೇಕಾಗುತ್ತದೆ. ಚುನಾವಣೆ ಘೋಷಣೆಯಾಯಿತೆನ್ನುವ ಕಾರಣಕ್ಕಾಗಿ ವಂಚಕರನ್ನು ಮುಕ್ತವಾಗಿ ಬಿಡುವುದು ಅಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಯಾರೇ ಅಡ್ಡಿ ಪಡಿಸಿದರೂ ಅದು ಕಾನೂನಿಗೆ ವಿರುದ್ಧವಾಗುತ್ತದೆ. ಆದರೆ ಇದೇ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ಕೂಡ ದಾಳಿ ನಡೆಸುವಾಗ ತಮ್ಮ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕು.

ಸದ್ಯಕ್ಕೆ ಚರ್ಚೆಯಲ್ಲಿರುವುದು ಐಟಿ ಅಧಿಕಾರಿಗಳು ಒಂದು ನಿರ್ದಿಷ್ಟ ಪಕ್ಷದ ಬೆಂಬಲಿಗರ ಮೇಲೆ ಮಾತ್ರ ಯಾಕೆ ದಾಳಿ ನಡೆಸಿದರು? ಎನ್ನುವುದು. ಕರ್ನಾಟಕದಲ್ಲಿ ಎಂತೆಂತಹ ತೆರಿಗೆ ವಂಚಕ ಕುಳಗಳಿದ್ದಾವೆ ಎನ್ನುವುದನ್ನು ಇತ್ತೀಚೆಗೆ ಬಹಿರಂಗಗೊಡ ‘ಯಡಿಯೂರಪ್ಪ ಡೈರಿ’ಯೇ ಹೇಳುತ್ತದೆ. ಗಣಿ ರೆಡ್ಡಿ ಸಹೋದರರು ಇಂದಿಗೂ ಚುನಾವಣೆಯಲ್ಲಿ ಕೋಟಿ ಕೋಟಿ ಸುರಿಸುವಷ್ಟು ಶಕ್ತರಿದ್ದಾರೆ. ಹೀಗಿದ್ದೂ ಬಿಜೆಪಿಯ ಯಾವುದೇ ನಾಯಕರ ಆಪ್ತರ ಮನೆಗಳಿಗೆ ದಾಳಿ ನಡೆಸದೇ ಕೇವಲ ಮೈತ್ರಿ ಸರಕಾರದ ಬೆಂಬಲಿಗರ ನಿವಾಸಗಳಿಗಷ್ಟೇ ಯಾಕೆ ದಾಳಿ ನಡೆಸಿತು? ಇಷ್ಟೇ ಅಲ್ಲ, ಇಲ್ಲಿಯವರೆಗೂ ಸುಮ್ಮನಿದ್ದ ಐಟಿ ಅಧಿಕಾರಿಗಳಿಗೆ ಏಕಾಏಕಿ ಚುನಾವಣೆಯ ಹೊತ್ತಿನಲ್ಲೇ ಕರ್ನಾಟಕ ಯಾಕೆ ನೆನಪಾಯಿತು? ಮೈತ್ರಿ ಸರಕಾರದ ನೈತಿಕ ಶಕ್ತಿಯನ್ನು ಐಟಿಅಧಿಕಾರಿಗಳ ದಾಳಿಯ ಮೂಲಕ ದುರ್ಬಲಗೊಳಿಸಲು ಕೇಂದ್ರ ಸರಕಾರ ಯತ್ನಿಸಿದೆಯೇ? ಎಂಬ ಪ್ರಶ್ನೆ ಕೇಳಿ ಬಂದಿದ್ದರೆ ಅದಕ್ಕೆ ಐಟಿ ಅಧಿಕಾರಿಗಳೇ ಹೊಣೆಯಾಗುತ್ತಾರೆ.

ಡಿಕೆಶಿ ನಿವಾಸಕ್ಕೆ ಐಟಿ ಅಧಿಕಾರಿಗಳು ನಡೆಸಿದ ದಾಳಿ ಮತ್ತು ಇದೀಗ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ನಾಯಕರ ಆಪ್ತರ ಮೇಲೆ ನಡೆದ ದಾಳಿಯ ಸಂದರ್ಭ ಒಂದೇ. ಇದರಿಂದ ಬಿಜೆಪಿ ರಾಜಕೀಯ ಲಾಭವನ್ನು ತನ್ನದಾಗಿಸುತ್ತದೆ. ಆದುದರಿಂದ, ಈ ಐಟಿ ದಾಳಿಯನ್ನು ಅಧಿಕಾರಿಗಳು ಅದೆಷ್ಟು ಸಮರ್ಥಿಸಿಕೊಂಡರೂ ರಾಜಕೀಯ ವಾಸನೆ ಎದ್ದು ಬರುತ್ತದೆ. ಇದೇ ಸಂದರ್ಭದಲ್ಲಿ ಇನ್ನೊಂದು ಮಹತ್ವದ ಪ್ರಶ್ನೆಯೂ ಎದುರಾಗುತ್ತದೆ. ದಾಳಿ ನಡೆಯುವ ಹಿಂದಿನ ರಾತ್ರಿಯೇ ‘‘ನಮ್ಮ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿವೆ’’ ಎಂದು ಕುಮಾರಸ್ವಾಮಿ ಹೇಳಿಕೆಯನ್ನು ನೀಡಿದ್ದರು. ಐಟಿ ದಾಳಿಯ ಮುನ್ಸೂಚನೆ ಅವರಿಗೆ ಹೇಗೆ ಸಿಕ್ಕಿತು? ಈ ಸೋರಿಕೆಯ ಹಿಂದಿರುವವರು ಯಾರು? ಮೊದಲೇ ಅವರಿಗೆ ಮಾಹಿತಿ ದೊರಕಿದೆ ಎಂದ ಮೇಲೆ, ಈ ದಾಳಿ ತನ್ನ ಪರಿಣಾಮವನ್ನು ಬೀರುತ್ತದೆಯೇ? ಅಧಿಕಾರಿಗಳು ಬರುವ ಮುನ್ನವೇ ಸಂಬಂಧಪಟ್ಟ ದಾಖಲೆಗಳನ್ನು ಅವರು ಬಚ್ಚಿಟ್ಟುಕೊಂಡಿರುತ್ತಾರೆ.

ತಮ್ಮನ್ನು ರಕ್ಷಿಸಿಕೊಳ್ಳುವ ಎಲ್ಲ ವ್ಯವಸ್ಥೆಗಳನ್ನು ಮೊದಲೇ ಮಾಡಿದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರೇನು, ಬಿಟ್ಟರೇನು? ಇಷ್ಟಾದರೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದರೆ, ಅವರ ಉದ್ದೇಶ, ಮಾಧ್ಯಮಗಳ ಮೂಲಕ ಜನರಿಗೆ ರಾಜಕೀಯ ಸಂದೇಶಗಳನ್ನು ರವಾನಿಸುವುದು. ದಾಳಿ ನಡೆದ ಪಕ್ಷಗಳ ಕುರಿತಂತೆ ಜನರಲ್ಲಿ ಋಣಾತ್ಮಕ ಭಾವನೆಗಳನ್ನು ಬಿತ್ತುವುದು. ಮಾಧ್ಯಮಗಳ ಮುಖಪುಟಗಳಲ್ಲಿ ಸುದ್ದಿಪ್ರಕಟವಾಗುವುದರೊಂದಿಗೆ ಈ ದಾಳಿಯ ಉದ್ದೇಶ ಮುಗಿದು ಹೋಗುತ್ತದೆ. ಇದೇ ಸಂದರ್ಭದಲ್ಲಿ ದಾಳಿಯನ್ನು ಬಿಜೆಪಿ ನಾಯಕರು ಸಮರ್ಥಿಸುತ್ತಿರುವುದು ತೀರಾ ತಮಾಷೆಯ ವಿಷಯವಾಗಿದೆ. ಐಟಿ ಅಧಿಕಾರಿಗಳೇನಾದರೂ ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸುವುದಕ್ಕೆ ಹೊರಟಿದ್ದರೆ, ಈ ಬಿಜೆಪಿ ನಾಯಕರೂ ಜೆಡಿಎಸ್ ನಾಯಕರ ಜೊತೆಗೆ ಕೈ ಜೋಡಿಸಿ ಪ್ರತಿಭಟನೆ ನಡೆಸುವ ಸಾಧ್ಯತೆಗಳಿದ್ದವು. ಐಟಿ ಅಧಿಕಾರಿಗಳು ಎಲ್ಲ ರಾಜಕೀಯ ಪಕ್ಷಗಳ ಬೆಂಬಲಿಗರ ಮೇಲೆ ಏಕಕಾಲದಲ್ಲಿ ಮುಗಿಬಿದ್ದಿದ್ದರೆ ಅದು ಅರ್ಥಪೂರ್ಣ, ವಿಶ್ವಾಸಾರ್ಹ ದಾಳಿಯಾಗಿ ಬಿಡುತ್ತಿತ್ತು. ಜನರು ಕೂಡ ಐಟಿ ಅಧಿಕಾರಿಗಳ ಕ್ರಮವನ್ನು ಮುಕ್ತ ಕಂಠದಲ್ಲಿ ಹೊಗಳುತ್ತಿದ್ದರು.

ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಸುವ ಹೊತ್ತಿನಲ್ಲಿ ನಡೆದ ಈ ದಾಳಿಯಿಂದ ಸ್ವತಃ ಕೇಂದ್ರ ಸರಕಾರಕ್ಕೇ ಮುಖಭಂಗವಾಗಿದೆ. ಈ ಎಲ್ಲ ಪ್ರಹಸನಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಮತದಾರರು ಬೆಳೆದಿದ್ದಾರೆ. ರಾಜ್ಯದ ಮೈತ್ರಿ ಪಕ್ಷಗಳಿಗೆ ಹೆದರಿ ಬಿಜೆಪಿ ಈ ಹತಾಶ ಪ್ರಯತ್ನಕ್ಕಿಳಿದಿದೆ ಎನ್ನುವುದನ್ನು ಊಹಿಸುವಷ್ಟು ಪ್ರಬುದ್ಧರಾಗಿದ್ದಾರೆ. ಚುನಾವಣೆಯನ್ನು ನೇರವಾಗಿ ಎದುರಿಸಲು ವಿಫಲವಾಗಿ, ವಿವಿಧ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಎದುರಾಳಿಗಳನ್ನು ಬಗ್ಗು ಬಡಿಯುವುದಕ್ಕೆ ಕೇಂದ್ರ ಹವಣಿಸುತ್ತಿದೆ. ಮೋದಿ ಈ ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತಂತೆ ಅದೆಷ್ಟು ಆತಂಕಿತರಾಗಿದ್ದಾರೆ ಎನ್ನುವುದನ್ನು ಇದು ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News