ಇದು ಸರಕಾರವನ್ನು ಶ್ರೀಮಂತರ ಕಿಸೆಯಿಂದ ತೆಗೆದು ಜನರ ಕೈಗೆ ಕೊಡುವ ಚುನಾವಣೆ: ಕನ್ಹಯ್ಯ ಕುಮಾರ್

Update: 2019-03-30 08:03 GMT

ನಾನು ಹಠಾತ್ತಾಗಿ ಆಕಸ್ಮಿಕ ರಾಜಕಾರಣಿಯಾದಾಗ ನಾನು ಯೋಚಿಸಿಯೇ ಇರದ ರೀತಿಯಲ್ಲಿ ಘಟನೆಗಳು ನಡೆದು ಹೋದವು. ನಾನು ಯಾವತ್ತೂ ರಾಜಕೀಯ ಪ್ರಜ್ಞೆಯೊಂದಿಗೆ ಬೆಳೆದವನು. ಆದರೆ ಕೆಲವೇ ಕೆಲವು ವರ್ಷಗಳ ಹಿಂದೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ  ಬಗ್ಗೆ ನಾನು ಮತ್ತು ನನ್ನ ಮಿತ್ರರು ನಕ್ಕು ಬಿಡುವ ಸಾಧ್ಯತೆಯೇ ಹೆಚ್ಚಿತ್ತು. 

ನಾನು ತರಬೇತಿ ಪಡೆದಿದ್ದು ಶಿಕ್ಷಣ ಕ್ಷೇತ್ರದಲ್ಲಿ. ಆದರೆ ಇಂದು ನಾವಿರುವ ಸಮಾಜದಲ್ಲಿ ನಮ್ಮ ಸುತ್ತಮುತ್ತ ಹಿಂಸೆಯೇ ತುಂಬಿಕೊಂಡಿದೆ. ಅದು ದೈಹಿಕ,  ಮಾನಸಿಕ ಅಥವಾ ಇಡೀ ವ್ಯವಸ್ಥೆಯ ರೂಪದಲ್ಲಿರಬಹುದು. ಹಾಗಾಗಿ  ಎಲ್ಲಕ್ಕಿಂತ ಹೆಚ್ಚಾಗಿ ನಾನು ಒಬ್ಬ ಆಕ್ಟಿವಿಸ್ಟ್ ಆಗಿದ್ದೇನೆ. ಇವತ್ತು ಈ ಐದು ವರ್ಷಗಳ ಈ ಸರಕಾರದ ಆಡಳಿತದ ಬಳಿಕ ನಾನು ರಾಜಕೀಯದಲ್ಲಿದ್ದೇನೆ.  ಆದರೂ ನಾನು ಸಹಜ ರಾಜಕಾರಣಿ ಅಲ್ಲ. 

ಇವತ್ತು ಒಂದು ಪರ್ಯಾಯ ರಾಜಕಾರಣದ ಭಾಗವಾಗುವುದು ನನ್ನ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ನಾನು ಪರಿಗಣಿಸುತ್ತೇನೆ. ಈ ಪರ್ಯಾಯ ರಾಜಕಾರಣ ದ್ವೇಷ ಹಾಗೂ ದೌರ್ಜನ್ಯಗಳನ್ನು ಎದುರಿಸುತ್ತದೆ ಮತ್ತು ವಿರೋಧಿಸುತ್ತದೆ. ಈ ರಾಜಕಾರಣ ನಮ್ಮನ್ನು ವಿಭಜಿಸುವ ಶಕ್ತಿಗಳನ್ನು ಮೀರಿ ನಿಲ್ಲುತ್ತದೆ ಹಾಗೂ ನಮ್ಮೆಲ್ಲರನ್ನೂ ಒಂದುಗೂಡಿಸಲು ಶ್ರಮಿಸುತ್ತದೆ. ಈ ರಾಜಕಾರಣ ಜನರ ಹಕ್ಕುಗಳನ್ನು ಗೌರವಿಸುತ್ತದೆ, ಸರ್ವರ ಏಳಿಗೆಯನ್ನು ಬಯಸುತ್ತದೆ ಹಾಗೂ ಪ್ರಗತಿಪರ ಚಿಂತನೆಗಳನ್ನು ಪ್ರೋತ್ಸಾಹಿಸುತ್ತದೆ. ಈ ರಾಜಕಾರಣ ಕಳೆದ ಐದು ವರ್ಷಗಳಲ್ಲಿ ಆಗಿರುವ ಭಾರೀ ಹಾನಿಯನ್ನು ಸರಿಪಡಿಸುವುದು ಮಾತ್ರವಲ್ಲದೆ ಮುಂದಿನ ಇಪ್ಪತ್ತು ವರ್ಷಗಳಲ್ಲಿ ಬರಲಿರುವ ಅವಕಾಶಗಳನ್ನು ಬಾಚಿಕೊಳ್ಳುವಷ್ಟು ಬಲಿಷ್ಟ ಪ್ರಜಾಪ್ರಭುತ್ವವನ್ನು ಕಟ್ಟುವ ಸಂಕಲ್ಪ ಮಾಡಿದೆ. ಅದಕ್ಕಾಗಿಯೇ ನಾವಿಂದು ಹೋರಾಡುತ್ತಿದ್ದೇವೆ. ಅದೇ ಇಂದು ನನ್ನ ಬದುಕಿನ ಕಥೆ.    

ನಾನು ಯಾರು ಎಂಬುದು ಈಗ ವಿಶೇಷವಲ್ಲ. ನಾನು ನನ್ನ ಸುತ್ತಮುತ್ತ ಇರುವ ಜನರಂತೆಯೇ ಇದ್ದವನು. ಶಾಲೆಯಲ್ಲಿ ನಾನು ಪೋಲಿಯೊ ಡ್ರಾಪ್ ಕೊಡುತ್ತಿದ್ದೆ. ಕಾಲೇಜ್‌ ನಲ್ಲಿರುವಾಗ ಕೋಚಿಂಗ್ ಕ್ಲಾಸ್‌ನ ಕೆಲಸ ಮಾಡುತ್ತಿದ್ದೆ. ದೆಹಲಿಯಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆಯಲು ತಯಾರಿ ಮಾಡುತ್ತಿದ್ದಾಗ ಒಂದು ನೌಕರಿಗೆ ಸೇರಿದೆ. ನನ್ನ ಒಬ್ಬ ಸಹೋದರ ಅಸ್ಸಾಂನಲ್ಲಿ ಚೌಕೀದಾರನಾಗಿ ಕೆಲಸ ಮಾಡಿ ನನ್ನ ಯುಪಿಎಸ್ಸಿ ಕೋಚಿಂಗ್ ಕ್ಲಾಸ್‌ಗೆ ಕಟ್ಟಲು ಹಣ ಕಳುಹಿಸುತ್ತಿದ್ದ. ಆದರೆ ಯುಪಿಎಸ್ಸಿ ಪರೀಕ್ಷೆಗೆ ಸಿಸ್ಯಾಟ್ ಅನ್ನು ಸರಕಾರ ಸೇರಿಸಿದ ಮೇಲೆ ನಾನು ನಾಗರಿಕ ಸೇವೆಗೆ ಸೇರುವ ಅವಕಾಶವೇ ನಾಶವಾಗಿ ಹೋಯಿತು. ಸಿಸ್ಯಾಟ್‌ನಿಂದಾಗಿ ಹಿಂದಿ ಮಾಧ್ಯಮದ ಹಾಗೂ ವಿಶೇಷವಾಗಿ ಮಾನವಿಕ ವಿಷಯಗಳ ವಿದ್ಯಾರ್ಥಿಗಳು ಅಖಿಲ ಭಾರತ ನಾಗರಿಕ ಸೇವೆಗೆ ಸೇರುವ ಸಂಖ್ಯೆಯನ್ನು ತೀರಾ ಕಡಿಮೆ ಮಾಡಿ ಬಿಟ್ಟಿತು. ಇನ್ನು ಸಿಸ್ಯಾಟ್ ತರಗತಿಗಳಿಗೆ ಶುಲ್ಕ ಭರಿಸುವ ಸಾಮರ್ಥ್ಯವೂ ನನಗಿರಲಿಲ್ಲ. ಆದರೆ ನನಗೆ ಆ ಬಗ್ಗೆ ಯಾವುದೇ ವಿಷಾದವಿಲ್ಲ. ಯುಪಿಎಸ್ಸಿಗೆ ಕಲಿಯುತ್ತಿರುವಾಗಲೇ ನನ್ನೊಳಗೆ ಶೈಕ್ಷಣಿಕ ಹಾಗೂ ರಾಜಕೀಯ ಜಾಗೃತಿ ಮೂಡಿತ್ತು. ಹಾಗಾಗಿ ಅದರಿಂದ ಅಷ್ಟು ಒಳ್ಳೆಯದೇ ಆಯಿತು. 

ನಾನು ಜೆಎನ್‌ಯುಗೆ ಬಂದಾಗ ನನ್ನ ಸಂಶೋಧನೆಯ ಮೂಲಕ ಜನರಿಗೆ ಉಪಕಾರವಾಗುವಂತಹ ಕೊಡುಗೆಯನ್ನು ನೀಡಬಹುದು ಎಂಬ ಅರಿವು ನನ್ನಲ್ಲಿ ಮೂಡಿತು. ಆದರೆ ನನ್ನ ಪಾಲಿಗೆ ಜೆಎನ್‌ಯು ಕೇವಲ ಒಂದು ಶಿಕ್ಷಣ ಸಂಸ್ಥೆಯಾಗಿರಲಿಲ್ಲ. ಕೇವಲ ಪುಸ್ತಕಗಳಲ್ಲಿ ಮುಳುಗದೆ ಜೀವನದ ಅನುಭವಗಳು ಹಾಗೂ ಸಾಮಾಜಿಕ ಚಳವಳಿಗಳಿಂದ ಅತ್ಯಂತ ಸಾವಕಾಶವಾಗಿ ಕಲಿತುಕೊಳ್ಳುವ ಒಂದು ಚೇತೋಹಾರಿ ವಿಶಾಲ ಅವಕಾಶವಾಗಿತ್ತು. ಅಲ್ಲಿ ಆ್ಯಕ್ಟಿವಿಸಂ ನಮ್ಮ ಆದ್ಯತೆಯಾಗಿತ್ತು. ಅಲ್ಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದಾಗಲೂ ವಿದ್ಯಾರ್ಥಿಗಳು ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸುತ್ತಾರೆ ಎಂದು ನಾನು ಊಹಿಸಿಯೇ ಇರಲಿಲ್ಲ. ಅಲ್ಲೇ ನನ್ನ ಬದುಕಿನ ದಾರಿ ಸಂಪೂರ್ಣ ಬದಲಾಯಿತು.

ನನ್ನ ರಾಜಕೀಯ ಜೀವನದ ಉದ್ದಕ್ಕೂ ನಾನು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡವರನ್ನು ಪ್ರಶ್ನಿಸುತ್ತಾ ಹಾಗೂ ಟೀಕಿಸುತ್ತಲೇ ಬಂದಿದ್ದೇನೆ. ಆದರೆ ಈಗಿರುವ ಸರಕಾರದ ವಿಷಯ ಬೇರೆಯೇ ಆಗಿತ್ತು. ಈ ಹಿಂದೆಯೂ ಪೊಲೀಸರ ಮೂಲಕ ಹೆದರಿಸುವುದು, ಲಾಠಿ ಚಾರ್ಜ್ ಮಾಡುವುದು ನಡೆದಿದೆ. ಆದರೆ ಇಷ್ಟೊಂದು ವ್ಯವಸ್ಥಿತವಾಗಿ ಅಪಪ್ರಚಾರದ ಅಭಿಯಾನ ನಡೆಸುವುದು, ಸುಳ್ಳು ಸುದ್ದಿ ಹರಡುವುದು, ದ್ವೇಷ ತೋರಿಸುವುದು ಹಾಗೂ ದೇಶದ್ರೋಹಿ ಎಂಬಂತಹ ಹಣೆಪಟ್ಟಿಗಳನ್ನು ಹಚ್ಚುವುದು ಇವೆಲ್ಲ ಹೊಸ ಬೆಳವಣಿಗೆಗಳು. ಒಂದು ಹಳೆಯ ಗಾದೆಯಿದೆ. ‘ನಿಮಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದ ಮಾತ್ರಕ್ಕೇ ರಾಜಕೀಯಕ್ಕೆ ನಿಮ್ಮಲ್ಲಿ ಆಸಕ್ತಿ ಇಲ್ಲ ಎಂದು ಹೇಳಲಾಗದು.’ ಹಾಗೆ ನಾನೂ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡೆ ಮತ್ತು ರಾಜಕೀಯವೂ ನನ್ನಲ್ಲಿ ಆಸಕ್ತಿ ಬೆಳೆಸಿಕೊಂಡಿತು.

ಸರಕಾರ ನಮ್ಮ ಮೇಲೆ ದಾಳಿ ಮಾಡಿದಾಗ ನಮ್ಮ ಎದುರಿದ್ದದ್ದು ಎರಡು ಆಯ್ಕೆಗಳು. ಒಂದು ಹೋರಾಡುವುದು ಇನ್ನೊಂದು ಶರಣಾಗುವುದು. ಆದರೆ ನನ್ನ ಪ್ರಕಾರ ನಮಗಿದ್ದದ್ದು ಒಂದೇ ಆಯ್ಕೆ. ಹಾಗಾಗಿ ನಾವು ಹೋರಾಡಿದೆವು. ಆ ಹೋರಾಟ ನನ್ನನ್ನು ಇಂದು ಇಲ್ಲಿಗೆ ತಂದು ನಿಲ್ಲಿಸಿದೆ. ನಾನು ನಿಮಗೆ ಆ ಪಕ್ಷ ಅಥವಾ ಈ ಪಕ್ಷಕ್ಕೆ ಪರ್ಯಾಯ ಯಾವುದು ಎಂದು ತೋರಿಸಲು ಇಲ್ಲಿ ಬಂದಿಲ್ಲ. ನಾನು ಈ ದೇಶಕ್ಕೆ ಪರ್ಯಾಯ ರಾಜಕಾರಣ ಯಾವುದು ಆಗಬೇಕು ಎಂದು ತೋರಿಸಲು ಬಂದಿದ್ದೇನೆ. ಈ ಪರ್ಯಾಯ ರಾಜಕಾರಣ ಕೇವಲ ದೌರ್ಜನ್ಯದ ವಿರುದ್ಧದ ಹೋರಾಟವಲ್ಲ. ಇದು ಸ್ವಾತಂತ್ರ ಹಾಗೂ ಸಮಾನತೆಗಾಗಿನ ಹೋರಾಟ. ಇದು ಕೇವಲ ಬಿಜೆಪಿ ಹಾಗೂ ಆರೆಸ್ಸೆಸ್‌ಗಳ ಹಿಂದುತ್ವ ಸಾರ್ವಭೌಮತೆಯ ವಿರುದ್ಧದ ಹೋರಾಟವಲ್ಲ. ಇದು ಅಂಬೇಡ್ಕರರ ಸರ್ವಜನರ ಸಮೃದ್ಧಿಯ ಕನಸು ನನಸು ಮಾಡುವ ಹೋರಾಟ. ಇದು ಕೇವಲ ಗುಂಪು ಹಿಂಸೆ ನಡೆಸುವ ಮೊಬೊಕ್ರಸಿ ವಿರುದ್ಧದ ಹೋರಾಟವಲ್ಲ. ಇದು ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ಪ್ರಜಾಪ್ರಭುತ್ವಕ್ಕಾಗಿನ ಹೋರಾಟ. ಇದು ನನ್ನ ಹೋರಾಟ ಅಲ್ಲ. ಇದು ನಿಮ್ಮ ಹೋರಾಟ.

ನಮ್ಮ ಭವಿಷ್ಯ ಹೇಗಿರಬೇಕು ?  

ಯಾವುದೇ ಬದಲಾವಣೆ ತರಬೇಕಾದರೆ ಮೊದಲು ಮಾಡಬೇಕಾದ ಕೆಲಸ ಈ ದೇಶದ ಶ್ರೀಮಂತರ ಕಿಸೆಯೊಳಗಿರುವ ರಾಜಕೀಯವನ್ನು ಹೊರತಂದು ಅದನ್ನು ಸಾಮಾನ್ಯ ತೆರಿಗೆ ಪಾವತಿದಾರರ ಕೈಗೆ ಕೊಡುವುದು. ಆತ-ಆಕೆ ಕೊಡುವ ತೆರಿಗೆಯಿಂದ ಸರಕಾರ ನಡೆಯುತ್ತದೆ. ಆದರೆ ಇಂದು ಆ ಸಾಮಾನ್ಯ ತೆರಿಗೆದಾರನಿಗೆ ಸಂಬಂಧಿಸಿದ ವಿಷಯಗಳು ನಮ್ಮ ಚರ್ಚೆಗಳಿಂದ ಸಂಪೂರ್ಣ ಮಾಯವಾಗಿ ಬಿಟ್ಟಿವೆ. ಏಕೆ? ಏಕೆಂದರೆ ಈ ಸರಕಾರ ಸಾಮಾನ್ಯ ತೆರಿಗೆ ಪಾವತಿದಾರನಿಗಾಗಿ ನಡೆಯುತ್ತಿಲ್ಲ. ಇದು ಶ್ರೀಮಂತರ ಪಾಲಿನ ರಾಜಕೀಯ ಯಂತ್ರವಾಗಿ ಬಿಟ್ಟಿದೆ. ಇಂತಹ ವ್ಯವಸ್ಥೆಯನ್ನು ಮೊದಲು ತೊಲಗಿಸಬೇಕು, ಸರಕಾರವನ್ನು ಜನರ ಕೈಗೆ ಮತ್ತೆ ಕೊಡಬೇಕು.

 ವಿಷಯಾಧಾರಿತ ಪರ್ಯಾಯ ರಾಜಕಾರಣವನ್ನು ರೂಪಿಸುವುದು ನಮ್ಮ ಎರಡನೇ ಹೆಜ್ಜೆಯಾಗಬೇಕು. ಜನರ ಶಿಕ್ಷಣ , ಅರೋಗ್ಯ ಸೇವೆ  ಹಾಗು ಮೂಲಭೂತ ಸೌಲಭ್ಯಗಳ ಕುರಿತು ನಾವು ಮಾತಾಡಬೇಕು. ಸಮಾಜದಲ್ಲಿ ಬದಿಗೆ ಸರಿಸಲ್ಪಟ್ಟವರ ಪರವಾಗಿ ನಾವು ಮಾತಾಡಬೇಕು - ಅದು ಕೇವಲ ಅಲ್ಪಸಂಖ್ಯಾತರಲ್ಲ ,  ಲೈಂಗಿಕ ಅಲ್ಪಸಂಖ್ಯಾತರ ಪರವಾಗಿಯೂ ಮಾತಾಡಬೇಕು. ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಹಾಗು ಚರ್ಚಿಸುವ ಹಕ್ಕಿನ ಬಗ್ಗೆ ಮಾತಾಡಬೇಕು. ನಮ್ಮ ದೇಶ ಎದುರಿಸುತ್ತಿರುವ ಪರಿಸರ ನಾಶ , ಡಿಜಿಟಲ್ ಕ್ರಾಂತಿ ಹಾಗು ಖಾಸಗಿತನದ ಹಕ್ಕಿನ ವಿಷಯಗಳ ಕುರಿತ ಹೊಸ ಸವಾಲುಗಳ ಬಗ್ಗೆಯೂ ಮಾತಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಪರ್ಯಾಯ ರಾಜಕಾರಣ ಆಧರಿತವಾಗಿ ನಾವು ಸಂಘಟಿತರಾಗಬೇಕು, ಆಗ್ರಹಿಸಬೇಕು ಹಾಗು ಮತ ಹಾಕಬೇಕು. 

ಅಂತಿಮವಾಗಿ , ಈ ಪರ್ಯಾಯ ರಾಜಕೀಯದ ಮೂಲಕ ನಾವು ನಮ್ಮ ಪ್ರಜಾಪ್ರಭುತ್ವವನ್ನು ರೂಪಿಸಬೇಕಾಗಿದೆ - ಅದು ಕೇವಲ ನೀತಿ ನಿಯಮಗಳ ಕಾರ್ಯವಿಧಾನವಾಗದೆ ಎಲ್ಲರೂ ಭಾಗವಹಿಸುವ ವ್ಯವಸ್ಥೆಯಾಗಬೇಕು. ಸರ್ವರಿಗೂ ಸಮೃದ್ಧಿ ತರುವ ಜನಕಲ್ಯಾಣ ಯೋಜನೆಗಳ ಕೇಂದ್ರಿತ ಜವಾಬ್ದಾರಿಯುತ ಹಾಗು ಪಾರದರ್ಶಕ ವ್ಯವಸ್ಥೆ ಸ್ಥಾಪಿಸಲು ಈ ಪರ್ಯಾಯ ರಾಜಕಾರಣ ನಮಗೆ ನೆರವಾಗಲಿದೆ. ಆ ವ್ಯವಸ್ಥೆ ಸಮಾಜದ ದುರ್ಬಲರ ಜೊತೆ ಮಾತಾಡಬೇಕು ಮತ್ತು ಅಧಿಕಾರದಲ್ಲಿರುವವರಿಗೆ ಸತ್ಯ ಹೇಳಬೇಕು. ಅದು ಎಲ್ಲ ಪ್ರಜೆಗಳು ನಿಜವಾಗಿ ಆಡಳಿತದಲ್ಲಿ ಪಾಲ್ಗೊಳ್ಳುವಂತಹ , ದೇಶದ ಪ್ರತಿಯೊಬ್ಬರು ಮಾತಾಡುವ ಹಕ್ಕನ್ನು ಎತ್ತಿ ಹಿಡಿಯುವ , ಸಂಘಟಿತರಾಗುವ ಹಾಗು ಚುನಾವಣೆ ಎದುರಿಸುವ ವ್ಯವಸ್ಥೆಯಾಗಿರಬೇಕು. ಇಂತಹ ವ್ಯವಸ್ಥೆಯ ಮೂಲಕ ಮಾತ್ರ ನಾವು ಕಾಲದ ಪರೀಕ್ಷೆಯಲ್ಲಿ ಪಾಸಾಗುವ , ಈ ಹಿಂದೆ ಸಾಧಿಸಲು ಸಾಧ್ಯವಾಗದ ಕನಸುಗಳನ್ನು ನನಸು ಮಾಡುವ ಭವಿಷ್ಯದ ಭಾರತದ ಬಲಿಷ್ಠ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. 

ಅದಕ್ಕಾಗಿ ನಾವು ಹೋರಾಡುತ್ತೇವೆ. ಮತ್ತು ಜಯ ಗಳಿಸುತ್ತೇವೆ.

-ಕನ್ಹಯ್ಯ ಕುಮಾರ್,  ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿ. 

ಕೃಪೆ : thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News