ದೇಶಕ್ಕೆ ಲಾಭವಾಗಲು ಬಿಎಸ್ಸೆನ್ನೆಲ್ ಗೆ ದುಡ್ಡಾಗಬೇಕು, ಜಿಯೋಗೆ ಅಲ್ಲ!

Update: 2019-03-30 12:21 GMT

ಇಂಡಿಯಾ ಟುಡೆ ಯಂಗ್ ಇಂಡಿಯಾ ಡಿಬೇಟ್

ಇಂಡಿಯಾ ಟುಡೆ ಟಿವಿ ವಾಹಿನಿ ನಡೆಸಿದ ‘ಯಂಗ್ ಇಂಡಿಯಾ ಡಿಬೇಟ್’ ಕಾರ್ಯಕ್ರಮದಲ್ಲಿ  ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿಯ ಅತ್ಯಂತ ಕಿರಿಯ ಅಭ್ಯರ್ಥಿ ತೇಜಸ್ವಿ ಸೂರ್ಯ ಹಾಗೂ  ಬೇಗುಸರಾಯ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಿಪಿಐ ಅಭ್ಯರ್ಥಿ, ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್‍ನ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಭಾಗವಹಿಸಿದ್ದರು.

ಸೈದ್ಧಾಂತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಇಬ್ಬರೂ ಯುವ ನಾಯಕರು ಪರಸ್ಪರ ಶುಭ ಹಾರೈಸಿದರು. ಚರ್ಚಾ ಕಾರ್ಯಕ್ರಮದಲ್ಲಿ ಕನ್ಹಯ್ಯ ಕುಮಾರ್ ಮೋದಿ ಸರಕಾರ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿರುವುದು, ಬೇಟಿ ಬಚಾವೋ-ಬೇಟಿ ಪಡಾವೋ ಕಾರ್ಯಕ್ರಮದ 51 ಶೇ. ಹಣ ಮೋದಿಯವರ ಫೋಟೊಗಳಿಗೆ ವ್ಯಯಿಸಲಾಗಿರುವ ಬಗ್ಗೆ ಗಮನಸೆಳೆದರು. ಆದರೆ ಸೇನೆಯ ವಿಚಾರವನ್ನು ಸರಕಾರವು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಕನ್ಹಯ್ಯ ವಾದ ಮಂಡಿಸಿದಾಗ, “ನನಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಬೇಕಿದೆ. ಆದ್ದರಿಂದ ಕಾರ್ಯಕ್ರಮದಿಂದ ನಿರ್ಗಮಿಸುತ್ತಿದ್ದೇನೆ” ಎಂದು ಹೇಳಿ ತೇಜಸ್ವಿ ಸೂರ್ಯ ಕಾರ್ಯಕ್ರಮದಿಂದ ಹೊರನಡೆದರು.

ಇದೀಗ ಈ ಸಂವಾದದ ವಿಡಿಯೋ, “ಕನ್ಹಯ್ಯ ಪ್ರಶ್ನೆಗೆ ಉತ್ತರಿಸಲಾಗದೆ ಚರ್ಚಾ ಕಾರ್ಯಕ್ರಮದಿಂದ ಹೊರನಡೆದ ತೇಜಸ್ವಿ ಸೂರ್ಯ’ ಎಂದು ವೈರಲ್ ಆಗುತ್ತಿದೆ. ‘ಯಂಗ್ ಇಂಡಿಯಾ’ದಲ್ಲಿ ಈ ಇಬ್ಬರು ನಾಯಕರ ವಾದ-ಪ್ರತಿವಾದದ ಅನುವಾದ ಈ ಕೆಳಗಿದೆ.

.........................................................

ರಾಹುಲ್ ಕಂವಲ್ (ಆ್ಯಂಕರ್): 2019 ಲೋಕಸಭಾ ಸಮರವು  ಸ್ಥಿರ ಸರಕಾರ ಹಾಗೂ  ಮೈತ್ರಿ ಸರಕಾರಗಳ ನಡುವಿನ  ಹೋರಾಟ ಹೌದೇ ?, ಒಂದು ಕಡೆಯಲ್ಲಿ ನರೇಂದ್ರ ಮೋದಿ ಹಾಗೂ ಇನ್ನೊಂದು ಕಡೆಯಲ್ಲಿ ಮಹಾಮಿಲಾವಟ್ ಮೈತ್ರಿ, ಒಂದು ಕಡೆಯಲ್ಲಿ ಸ್ಥಿರತೆ ಇದ್ದರೆ, ಇನ್ನೊಂದು ಕಡೆಯಲ್ಲಿ ಗೊಂದಲವಿದೆ ಹಾಗೂ ಯಾವುದೇ ಮುಖವಿಲ್ಲ ಎಂದು ಸ್ವತಃ ಮೋದಿಯೇ ಹೇಳುತ್ತಿದ್ದಾರೆ. ಸ್ಥಿರ ಸರಕಾರ ಯಾ ಮಹಾಮಿಲಾವಟ್ ಸರಕಾರ ಬೇಕೇ ಎಂಬುದನ್ನು ಯಂಗ್ ಇಂಡಿಯಾ ಈ ಚುನಾವಣೆಯಲ್ಲಿ  ತೀರ್ಮಾನಿಸಬೇಕಿದೆಯೇ?

ಕನ್ಹಯ್ಯ: ಮೊತ್ತ ಮೊದಲನೆಯದಾಗಿ ಎಲ್ಲಾ ವೀಕ್ಷಕರಿಗೂ ನಾನು ಹಾರ್ದಿಕ ಸ್ವಾಗತ ಮಾಡಬಯಸುತ್ತೇನೆ. ನೀವು ಹೇಳಿದ ಹಾಗೆ ಇದು ಯಂಗ್ ಇಂಡಿಯಾ ಡಿಬೇಟ್, ಭಾರತ ವಿಶ್ವದ ಅತ್ಯಂತ ಯುವ ದೇಶ, ಜಗತ್ತಿನ ಪ್ರತಿ ಐದು ಯುವಕರಲ್ಲಿ ಒಬ್ಬರು ಭಾರತೀಯರಾಗಿದ್ದಾರೆ. ನಾವು ರೈಟ್-ರಾಂಗ್, ರೈಟ್-ಲೆಫ್ಟ್,  ಅಥವಾ ಮೋದಿ- ರಾಹುಲ್ ಚರ್ಚೆ ಮಾಡುತ್ತಾ ಕುಳಿತರೆ    ನಾವು ಮುಖ್ಯ ಆಶಯವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಇಂದು ಚರ್ಚೆ ನಡೆಯಬೇಕಿದ್ದರೆ- ಸರಕಾರದ ಸುಳ್ಳು ಆಶ್ವಾಸನೆ ಹಾಗೂ ಅಭಿವೃದ್ಧಿಯ ಜುಮ್ಲಾ  ಇವುಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಇನ್ನೊಂದು ಕಡೆ ಕಳೆದ 40 ವರ್ಷಗಳಲ್ಲಿಯೇ ಗರಿಷ್ಠ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ. ಗರಿಷ್ಠ ಜುಮ್ಲಾ  ವರ್ಸಸ್ ನಿರುದ್ಯೋಗ  ಚರ್ಚೆ ನಡೆಯಬೇಕಿದೆ. ಒಂದು ಕಡೆಯಲ್ಲಿ ಸ್ಥಿರ ಸರಕಾರ ಹಾಗೂ ಇನ್ನೊಂದು ಕಡೆಯಲ್ಲಿ ಮಹಾ ಮೈತ್ರಿಯಿದೆ. ಮೋದೀಜಿ ಪ್ರಧಾನಿಯಾಗಿದ್ದರೂ ಈ ಸರಕಾರ ಬಿಜೆಪಿಯ ಸರಕಾರವಲ್ಲ, ಬಿಜೆಪಿ ಭಾಗವಾಗಿರುವ ಎನ್‍ ಡಿಎ ಸರಕಾರವಾಗಿದೆ. ಜುಮ್ಲಾ ಮತ್ತು ವಾಸ್ತವ ಸಮಸ್ಯೆಗಳ ಚರ್ಚೆ ನಡೆಯಬೇಕಿದೆ. ನಿಜವಾದ ವಿಷಯವೆಂದರೆ ದೇಶದಲ್ಲಿ ಕೋಟ್ಯಂತರ ಜನರಿದ್ದಾರೆ. ಈ ಕೋಟ್ಯಂತರ ಜನರಿಗೆ ಒಂದು ಮುಖವಿಲ್ಲ. ಒಂದೆಡೆ ಮೋದೀಜಿಯ  ಪ್ರಕಾಶಿಸುವ ಮುಖವಿದೆ. ಅವರ ಫೇಶಿಯಲ್ ಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಇನ್ನೊಂದೆಡೆ ಈ ದೇಶದ ಕೋಟ್ಯಂತರ ಬಡ ಜನರಿದ್ದಾರೆ. ಆದುದರಿಂದ ಈ ಹೋರಾಟ ಮೋದಿ ಮತ್ತು  ‘ವಿ ದಿ ಪೀಪಲ್ ಆಫ್ ಇಂಡಿಯಾ’ದ ನಡುವಿನ  ಹೋರಾಟವಾಗಿದೆ.

ರಾಹುಲ್: ಶ್ರೀಮಂತರ ಮತ್ತು ಬಡವರ ನಡುವಿನ ಹೋರಾಟ, ಜುಮ್ಲಾ ಮತ್ತು ನಿರುದ್ಯೋಗದ ನಡುವಿನ ಹೋರಾಟ ಎಂದು ಕನ್ಹಯ್ಯ ಹೇಳುತ್ತಿದ್ದಾರೆ. ಬಿಜೆಪಿಯ ಯುವ ಅಭ್ಯರ್ಥಿ ಏನು ಹೇಳುತ್ತಾರೆ?

ತೇಜಸ್ವಿ ಸೂರ್ಯ: ಮೊದಲು ನಾನು ಚುನಾವಣೆ ಸ್ಪರ್ಧಿಸುತ್ತಿರುವ ಕನ್ಹಯ್ಯಾ ಅವರಿಗೆ  ಶುಭಾಶಯ ಸಲ್ಲಿಸಲು ಇಚ್ಛಿಸುತ್ತೇನೆ. ನಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನಿದ್ದರೂ ರಾಜಕೀಯದಲ್ಲಿ ಯುವಜನರು ಹೊಸ ಯೋಜನೆಗಳು ಹಾಗೂ ಹುರುಪಿಗೆ ಕಾರಣರಾಗುತ್ತಾರೆ. ಕಳೆದ ಐದು ವರ್ಷಗಳಲ್ಲಿ ದೇಶದ  ರಾಜಕೀಯದಲ್ಲಿ ಹಾಗೂ ಆಡಳಿತದ ವಿಚಾರದಲ್ಲಿ ಮಹತ್ತರ ಬದಲಾವಣೆಗಳಾಗಿವೆ.  ನರೇಂದ್ರ ಮೋದಿ ಸರಕಾರ  ಉತ್ತಮ, ಸ್ಥಿರ ಹಾಗೂ ಜನಸಂವೇದಿ ಸರಕಾರ ಒದಗಿಸುವ ತನ್ನ ಆಶ್ವಾಸನೆ ಪೂರೈಸಿದೆ.  ಸಮಾಜದ ಕಟ್ಟ ಕಡೆಯ ವ್ಯಕ್ತಿಯ ತನಕ ಅದು ತಲುಪಿದೆ.  ಈ ಸರಕಾರ ವಿದೇಶಾಂಗ ನೀತಿ,  ರಕ್ಷಣೆ, ರಾಷ್ಟ್ರೀಯ ಭದ್ರತೆ, ಮೂಲಭೂತ ಸೌಕರ್ಯ,  ದೇಶದ ಅರ್ಥ ವ್ಯವಸ್ಥೆ ಸುಧಾರಣೆ, ಇವೇ ಮುಂತಾದ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದೆ. ವಿಪಕ್ಷಗಳು  ನಿರುದ್ಯೋಗ ಸಮಸ್ಯೆ ಗರಿಷ್ಠವಾಗಿದೆ ಎಂದು ಹೇಳಬಹುದು. ಆದರೆ ವಾಸ್ತವವೇನೆಂದರೆ ಕಳೆದ ಐದು ವರ್ಷಗಳಲ್ಲಿ  ಅತ್ಯಧಿಕ ಉದ್ಯೋಗ, ಮೂಲಭೂತ ಸೌಕರ್ಯ, ರೂ 16 ಲಕ್ಷ ಕೋಟಿ ತನಕದ ಮುದ್ರಾ ಸಾಲ, ಸ್ವಚ್ಛ ಭಾರತ್, ರಸ್ತೆ, ರೈಲ್ವೆ ಯೋಜನೆಗಳು ಬಹಳಷ್ಟು ಉದ್ಯೋಗಗಳನ್ನು ಸೃಷ್ಟಿಸಿವೆ.  ಬಡವರಲ್ಲಿ ಬಡವರಿಗೆ ಸಹಾಯ,  ಡಿಜಿಟಲೀಕರಣದಿಂದ   ಸ್ವಉದ್ಯೋಗ ಅವಕಾಶಗಳ ಸೃಷ್ಟಿಯಾಗಿದೆ. ಭಾರತದ ಆರ್ಥಿಕತೆ ಅತ್ಯಧಿಕ ವೇಗದಲ್ಲಿ  ಸಾಗುತ್ತಿದೆ. ಬಡತನವನ್ನು ಮರು ಹಂಚಿಕೆ ಮಾಡದೆ  ಬಡತನ ನಿರ್ಮೂಲನೆಗೈದು ದೇಶವನ್ನು ಶ್ರೀಮಂತಗೊಳಿಸುವುದು ಈ ಸರಕಾರ ಮಾಡುತ್ತಿರುವ ಕೆಲಸವಾಗಿದೆ. ಆದರೆ ಕನ್ಹಯ್ಯ ಅವರ ಪಕ್ಷ ಅದಕ್ಕೆ ಒಪ್ಪಿಗೆ ನೀಡದು. ಅವರ ಪಕ್ಷ ಜನರನ್ನು ಬಡವರನ್ನಾಗಿಯೇ ಉಳಿಸಲು ಬಯಸುತ್ತದೆ. ಕಮ್ಯುನಿಸ್ಟ್ ಪಕ್ಷ ಒಂದು ವರ್ಗದ ಜನರನ್ನು ಇನ್ನೊಂದು ವರ್ಗದ ಜನರ ವಿರುದ್ಧ ಎತ್ತಿ ಕಟ್ಟುತ್ತಿದೆ. ಆದರೆ ನರೇಂದ್ರ ಮೋದಿ ಸರಕಾರ ಸೌಹಾರ್ದತೆಯ ಮೂಲಕ ಸಮಾಜವನ್ನು  ಒಂದುಗೂಡಿಸಿದೆ. ಒಂದು ಉದಾಹರಣೆಯೆಂದರೆ ಉಜ್ವಲ ಯೋಜನೆ. ಶ್ರೀಮಂತರು ತಮ್ಮ ಅನಿಲ ಸಬ್ಸಿಡಿ ತೊರೆಯುವಂತೆ ಮಾಡಿ ಅದರಿಂದ ಬಡವರಿಗೆ ಹೆಚ್ಚು ಪ್ರಯೋಜನ ದೊರೆಯುವಂತೆ ಮಾಡಲಾಗಿದೆ. ಕಳೆದ ಐದು ವರ್ಷಗಳ ಈ ಸರಕಾರದ ಅವಧಿಯಲ್ಲಿ ಸಾಧಿಸಲಾದಷ್ಟು ಅಭಿವೃದ್ಧಿ ಈ ದೇಶದ ಇತಿಹಾಸದಲ್ಲಿ ಯಾವತ್ತೂ ಆಗಿಲ್ಲ.

ರಾಹುಲ್: ಕಮ್ಯುನಿಸ್ಟರು ಬಡವರನ್ನು ಬಡವರಾಗಿಯೇ ಇರಿಸಲು ಬಯಸುತ್ತಾರೆ ಎಂದು ತೇಜಸ್ವಿ ಹೇಳುತ್ತಿದ್ದಾರೆ. ಮೂಲಭೂತ ಸೌಕರ್ಯ, ಡಿಜಿಟಲೀಕರಣ ಮುಂತಾದ ಯೋಜನೆಗಳಿಂದಾಗಿ ಭಾರತ ವಿಶ್ವದ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ದೇಶ ಎಂದೂ ಅವರು ಹೇಳುತ್ತಿದ್ದಾರೆ. ಕನ್ಹಯ್ಯ ನೀವೇನಂತೀರಿ ?

ಕನ್ಹಯ್ಯ: ಮೊದಲಾಗಿ ನಾನು ಕೂಡ ಚುನಾವಣೆಗೆ ಸ್ಪರ್ಧಿಸುತ್ತಿರುವ ತೇಜಸ್ವಿ ಅವರಿಗೆ ಶುಭಾಶಯ ತಿಳಿಸ ಬಯಸುತ್ತೇನೆ. ಚುನಾವಣೆ ಎದುರಿಸುವಾಗ ಅವರು ಅದೇ ಹಳೆಯ ರಾಜಕೀಯ ವಿಚಾರಗಳನ್ನು ಎತ್ತುವುದಿಲ್ಲ ಎಂದು ಆಶಿಸುತ್ತೇನೆ. ಇಂದಿನ ಯುವಜನತೆಯ ಸಮಸ್ಯೆಗಳಿಗೆ ಅವರು ಆದ್ಯತೆ ನೀಡುತ್ತಾರೆ ಎಂದು ಆಶಿಸುತ್ತೇನೆ. ಅಭಿವೃದ್ಧಿಯ ವಿಚಾರ ಹೇಳುವುದಾದರೆ, ಅವರು ಶೇ 7% ಅಭಿವೃದ್ಧಿ  ಸಾಧಿಸಲಾಗಿದೆ ಎಂದು ಹೇಳುತ್ತಿದ್ದರೂ ಇದು ಸುಳ್ಳು ಎಂದು ರಘುರಾಮ್ ರಾಜನ್ ಹೇಳಿದ್ದಾರೆ. ಏಕೆಂದರೆ  ಇಂದು ನಮ್ಮ ಆರ್ಥಿಕತೆಯಲ್ಲಿ ಬಿಕ್ಕಟ್ಟಿದೆ. ಮುಖ್ಯವಾಗಿ ಜಿಎಸ್‍ಟಿ ಹಾಗೂ ಅಮಾನ್ಯೀಕರಣದ ನಂತರ ಈ ದೇಶದಲ್ಲಿ ಸಣ್ಣ ಉದ್ಯಮಗಳು ಬಂದ್ ಆಗಿವೆ ಹಾಗೂ ನಿರುದ್ಯೋಗ ದತ್ತಾಂಶ ಕೂಡ 45 ವರ್ಷಗಳಲ್ಲಿಯೇ ನಿರುದ್ಯೋಗ ಪ್ರಮಾಣ ಗರಿಷ್ಠ ಎಂದು ಹೇಳುತ್ತಿದೆ. ಉಜ್ವಲಾ ಯೋಜನೆಯ ವಾಸ್ತವ ಏನೆಂದರೆ ಈ ಯೋಜನೆಯಡಿಯಲ್ಲಿ ಒಮ್ಮೆ ಅನಿಲ ಸಂಪರ್ಕ ಪಡೆದವರು ಮತ್ತೆ ಅನಿಲ ಸಿಲಿಂಡರ್ ರೀಫಿಲ್ ಮಾಡಲು ಹೋಗುತ್ತಿಲ್ಲ. ಅನಿಲ ಸಂಪರ್ಕ ಪಡೆದ ನಂತರ  ರೀಫಿಲ್ ವೆಚ್ಚ ರೂ. 1000ಕ್ಕೂ ಅಧಿಕವಾಗಿದೆ. ಎರಡನೆಯದಾಗಿ ಉಚಿತ ಅನಿಲ ಸಂಪರ್ಕ ನೀಡಲಾಗುವುದು ಎಂದು ಹೇಳಲಾಗಿದ್ದರೂ. ಅನಿಲ ಸಂಪರ್ಕ ಬೆಲೆಯನ್ನು ಪ್ರತಿ ಬಾರಿ ಸಿಲಿಂಡರ್ ರೀಫಿಲ್ ಮಾಡಿದಾಗ ಕಂತಿನ ಮೂಲಕ ಮರು ಪಾವತಿ ಮಾಡಬೇಕಾಗಿದೆ. ಮುದ್ರಾ ಸಾಲ ನೀಡಿದ ಬಗ್ಗೆ ಇವರು ಹೇಳುತ್ತಿದ್ದಾರೆ. ಆದರೆ ಹಣ ಕೂಡಿಕೆ ಮಾಡಲಾಗಿದ್ದರೆ ಉದ್ಯೋಗ ಏಕೆ ಸೃಷ್ಟಿಯಾಗಿಲ್ಲ ?, ಇದನ್ನೇ ರಘುರಾಮ್ ರಾಜನ್ ಕೇಳುತ್ತಿದ್ದಾರೆ, ಸರಕಾರಿ ಅಂಕಿ ಅಂಶಗಳ ಪ್ರಕಾರ ಕೇಂದ್ರ ಸರಕಾರದಲ್ಲಿ 27 ಲಕ್ಷ ಖಾಲಿ ಹುದ್ದೆಗಳು ಇವೆ. ಕೆಲ ತಿಂಗಳ ಹಿಂದೆ ದಿಲ್ಲಿಯ ರಸ್ತೆಗಳಲ್ಲಿ ಇಡೀ ದೇಶದ ಯುವಜನರು ಎಸ್ಸೆಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಬೀದಿಗಿಳಿದಿದ್ದರು. ಈ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ.  ಸುಳ್ಳು ಆಶ್ವಾಸನೆ ನೀಡಿ ತಮ್ಮ  ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವ ಸರಕಾರದ ಈ ಧೋರಣೆ ದೇಶದ ಜನರನ್ನು ಕತ್ತಲೆಯಲ್ಲಿ ಇಡುವ ಯತ್ನವಾಗಿದೆ. ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಬಗ್ಗೆ ನಮ್ಮಲ್ಲಿರುವ ಅಂಕಿ ಅಂಶಗಳಲ್ಲಿ  70,000 ಜನರು  ತರಬೇತಿ ಪಡೆದಿರುವ ಬಗ್ಗೆ ಹೇಳಲಾಗಿದೆಯಾದರೂ  ಅವರಲ್ಲಿ ಶೇ 1ರಷ್ಟು ಮಂದಿಗೂ ಉದ್ಯೋಗ ಲಭಿಸಿಲ್ಲ. ಸ್ವಚ್ಛ್ ಭಾರತ್ ಅಭಿಯಾನದಲ್ಲಿ ಕೆಲಸ ಮಾಡುವವರಿಗೆ ಕನಿಷ್ಠ ವೇತನ ನೀಡಲಾಗುತ್ತಿಲ್ಲ.  ಒಳಚರಂಡಿ  ಪ್ರವೇಶಿಸಿ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ದಿಲ್ಲಿಯಂತಹ ನಗರದಲ್ಲಿ  ಒಂಬತ್ತು ಕಾರ್ಮಿಕರು ಈ ರೀತಿಯಾಗಿ ಸಾವಿಗೀಡಾಗಿದ್ದಾರೆ. ಜನರಿಗೆ ತೋರಿಸುವ ಕನಸುಗಳು ಹಾಗೂ ವಾಸ್ತವ ಬೇರೆಯೇ ಆಗಿದೆ. ‘ಬೇಟಿ ಬಚಾವೋ’ ದತ್ತಾಂಶ  ನೋಡಿ. ಒಟ್ಟು ಮಂಜೂರಾದ ಹಣದ ಶೇ 51ರಷ್ಟು ಹಣವನ್ನು ಕೇವಲ ಮೋದೀಜಿ ಅವರ ಫೋಟೋ ಪ್ರಕಟಿಸಲು ಬಳಸಲಾಗಿದೆ. ಇದೇ ಹಣದಿಂದ ಮಹಿಳೆಯರ ಶಿಕ್ಷಣ ಸಂಸ್ಥೆ, ಸ್ವಉದ್ಯೋಗ ಸಾಲ ಮುಂತಾದ ಕ್ರಮ ಕೈಗೊಳ್ಳಲಾಗಿದ್ದರೆ ಈ ಯೋಜನೆ ಸಫಲ ಎಂದು ಹೇಳಬಹುದಾಗಿತ್ತು.

ಸರಕಾರ ಒಳ್ಳೆಯ ಆಶ್ವಾಸನೆ  ನೀಡುತ್ತಿದೆ. ಆದರೆ ಯಾವುದೇ ಯೋಜನೆಗೆ ಗಡುವು  2019ರಲ್ಲಿ ಅಂತ್ಯಗೊಳ್ಳುವುದಿಲ್ಲ. ಹೆಚ್ಚಿನ ಯೋಜನೆಗಳ ಗಡುವು 2022  ಹಾಗೂ 2024ರಲ್ಲಿ ಅಂತ್ಯಗೊಳ್ಳುತ್ತದೆ. ತಳಮಟ್ಟದಲ್ಲಿ  ಕಳೆದ ಐದು ವರ್ಷಗಳಲ್ಲಿ ಜನರ ಆದಾಯ ಕಡಿಮೆಯಾಗಿದೆ. ಕೆಲವು ಕಾರ್ಪೊರೇಟ್ ಸಂಸ್ಥೆಗಳ ಆದಾಯ ಮಾತ್ರ ಹೆಚ್ಚಾಗಿದೆ.  ಬಡವರು ಬಡವರಾಗುತ್ತಿದ್ದಾರೆ ಹಾಗೂ ಅತ್ಯಂತ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿದ್ದಾರೆ. ಇನ್ನೊಂದು ಅಂಕಿ ಅಂಶದ ಪ್ರಕಾರ 545 ಸಂಸದರಲ್ಲಿ 200 ಸಂಸದರ ಸಂಪತ್ತು  ದ್ವಿಗುಣಗೊಂಡಿದೆ ಆದರೆ ಜನರ ಸಂಪತ್ತು ಕಡಿಮೆಯಾಗಿದೆ. ಗ್ರಾಮೀಣ ಭಾರತದಲ್ಲಿ ಪ್ರತಿ ಅರ್ಧ ಗಂಟೆಯಲ್ಲಿ ಒಬ್ಬ ರೈತ ಆತ್ಮಹತ್ಯೆ ಮಾಡುತ್ತಿದ್ದಾರೆ. ರೈತರಿಗೆ ವಿಮೆ ನೀಡುವ ಕಂಪೆನಿಗೆ 10,000 ಕೋಟಿ ಲಾಭವಾಗಿದೆ. ‘ಪ್ರೈವೆಟೈಸೇಶನ್ ಆಫ್ ಪ್ರಾಫಿಟ್  ಹಾಗೂ ಸೊಶಿಯಲೇಶನ್ ಆಫ್ ಲಾಸ್’ ಎಂದೇ ಈಗಿನ ಪರಿಸ್ಥಿತಿಯ ಬಗ್ಗೆ ಹೇಳಬಹುದು.

ರಾಹುಲ್: ದೇಶದಲ್ಲಿನ ಅಭಿವೃದ್ಧಿ ದತ್ತಾಂಶಗಳು ಸರಿಯಾಗಿವೇ  ಎಂದು ಅರ್ಥಶಾಸ್ತ್ರಜ್ಞರು ಕೇಳುತ್ತಿದ್ದಾರೆ ಎಂದು ಕನ್ಹಯ್ಯ ಹೇಳುತ್ತಿದ್ದಾರೆ. ಅಂಕಿ ಅಂಶಗಳನ್ನು ಪ್ರಸ್ತುತ ಪಡಿಸಿ ತಮ್ಮ ಬೆನ್ನನ್ನು ತಾವೇ ತಟ್ಟುತ್ತಿದ್ದಾರೆ ಎಂದೂ ಅವರು ಹೇಳುತ್ತಿದ್ದಾರೆ. ತೇಜಸ್ವಿ ನಿಮ್ಮ ಪ್ರತಿಕ್ರಿಯೆ ?

ತೇಜಸ್ವಿ: ಎಡಪಂಥೀಯರಿಗೆ ಒಂದು ವಿಶಿಷ್ಟ ಸಮಸ್ಯೆಯಿದೆ. ಆ ಸಮಸ್ಯೆಯೇನೆಂದರೆ ಒಂದು ದತ್ತಾಂಶ ಅವರಿಗೆ ಸೂಕ್ತವಲ್ಲವೆಂದಾದರೆ ಅವರು ಸಂಸ್ಥೆಗಳನ್ನು ಹಾಗೂ ಅವುಗಳನ್ನು ನೀಡಿದ ಅರ್ಥಶಾಸ್ತ್ರಜ್ಞರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುತ್ತಾರೆ. ಆದರೆ ತಮ್ಮ ವಾದಕ್ಕೆ ಸೂಕ್ತವೆಂದಾದರೆ ಈ ಜನರು ಅದೇ ಸಂಸ್ಥೆಗಳನ್ನು ಬೇರೆಯೇ ರೀತಿಯಲ್ಲಿ ಬಿಂಬಿಸುತ್ತಾರೆ. ಇದು ಎಡ ಪಂಥೀಯರ ಇಂಟಲೆಕ್ಚುವಲ್ ಜಿಮ್ನಾಸ್ಟಿಕ್ಸ್.  ಇಂದು ರಘುರಾಮ್ ರಾಜನ್  ಅವರ ವಾದ ಅವರ ಪರವಾಗಿದ್ದರೆ ಅವರು ಈ ಜನರಿಗೆ ಹತ್ತಿರವಾಗುತ್ತಾರೆ. ನಾಳೆ ರಾಜನ್ ಅವರ ಹೇಳಿಕೆ ಮೋದಿ ಸರಕಾರದ ಪರವಾಗಿದ್ದರೆ ಅವರು ರಾಜನ್ ಅವರನ್ನು ಕೈ ಬಿಡುತ್ತಾರೆ. ಇದು ಎಡಪಂಥಿಯರ ಕಾರ್ಯಶೈಲಿ.

ಈಗ  ಐಎಂಎಫ್, ವಿಶ್ವ ಬ್ಯಾಂಕ್, ಎಡಿಬಿ ಹೀಗೆ ಹೆಚ್ಚಿನ ಅಂತಾರಾಷ್ಟ್ರೀಯ ಏಜನ್ಸಿಗಳು ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಸತತವಾಗಿ ಹೇಳಿವೆ. ಮೋದಿ ಆಡಳಿತದ ಕಳೆದ ಐದು ವರ್ಷಗಳಲ್ಲಿ  ಬಡತನ ರೇಖೆಯಿಂದ  ಅತ್ಯಧಿಕ ಸಂಖ್ಯೆಯ ಜನರು ಹೊರ ಬಂದಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಭಾರತದ ಜನರ  ತಲಾ ಆದಾಯ ಬರೋಬ್ಬರಿ ಶೇ 45ರಷ್ಟು ಹೆಚ್ಚಾಗಿದೆ.  ಕನ್ಹಯ್ಯಾ ಕುಮಾರ್ ತಮ್ಮ ಕಮ್ಯುನಿಸ್ಟ್ ಸಿದ್ಧಾಂತದಂತೆ ಋಣಾತ್ಮಕ ಚಿತ್ರಣ ಸೃಷ್ಟಿಸುತ್ತಾರೆ. ಆದರೆ ಬಿಜೆಪಿಗೆ ಸೇರಿದವನಾದ ನಾನು ಭಾರತದ ಇಮೇಜ್ ಉಜ್ವಲವಾಗಿ ಬಿಂಬಿಸುತ್ತೇನೆ. ಉತ್ತಮ ಜೀವನ ಮಟ್ಟ, ಭವಿಷ್ಯದಲ್ಲಿ ಇನ್ನಷ್ಟು ಸಮೃದ್ಧಿ, ಸಂಪನ್ಮೂಲಗಳ ಸದ್ಬಳಕೆ ಹಾಗೂ ಇದು ನರೇಂದ್ರ ಮೋದಿ ಸರಕಾರದ ಆಶಯವಾಗಿದೆ.  ಕನ್ಹಯ್ಯಾ ಹೇಳಿದ  ಹಾಗೆ ನಿರುದ್ಯೋಗವಿದ್ದರೆ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿತ್ತು. ಆದರೆ ಸಮಾಜದಲ್ಲಿ ಶಾಂತಿಯಿದೆ ಹಾಗೂ ಸಂತೋಷವಿದೆ. ಆದರೆ ಅಧಿಕಾರದಿಂದ ಹೊರಗಿರುವವರು ಮಾತ್ರ ನಿರುದ್ಯೋಗಿಗಳು ಹಾಗೂ ಅಸಂತುಷ್ಟಿಗಳೆಂದು ಅನಿಸುತ್ತದೆ.

ರಾಹುಲ್: ಯಂಗ್ ಇಂಡಿಯಾಗೆ ಯಾವುದು ಮುಖ್ಯ?, ರಾಷ್ಟ್ರೀಯತೆಯೇ ಅಥವಾ ಉದ್ಯೋಗವೇ?

ತೇಜಸ್ವಿ: ನೀವು ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಸಂಕುಚಿತ ಭಾವನೆಯಿಂದ ನೋಡುತ್ತಿರುವಂತಿದೆ. ರಾಷ್ಟ್ರೀಯತೆ ಎಂದರೆ ದೇಶದ ಬಗ್ಗೆ ಅಭಿಮಾನ. ರಾಷ್ಟ್ರೀಯತೆ ಎಂದರೆ ಬಲಿಷ್ಠ ಮತ್ತು ಸಮೃದ್ಧ ದೇಶವನ್ನು ಹೊಂದುವುದು. ವಿಶ್ವಾಸಾರ್ಹ ಸರಕಾರವನ್ನು ಹೊಂದುವುದು. ರಾಷ್ಟ್ರೀಯತೆ ಮೈನಸ್ ಉದ್ಯೋಗ ಒಂದು ಪರಿಕಲ್ಪನೆಯಲ್ಲ.  ದೇಶ ಬಡ ಆಗಿದ್ದರೆ, ರಾಷ್ಟ್ರೀಯತೆ ತುಂಬಿ ತುಳುಕುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಬಡ ದೇಶದಲ್ಲಿ ಸಂಘರ್ಷ, ಸಾಮಾಜಿಕ ಅಶಾಂತಿಯಿರುತ್ತದೆ. ಸಮೃದ್ಧ ಸಮಾಜ ಇರುವಂತೆ ನೋಡಿಕೊಳ್ಳುವುದು ರಾಷ್ಟ್ರೀಯತೆಯ ಚರ್ಚೆಯ ಭಾಗವಾಗಿದೆ. ಈಗಿನ ನರೇಂದ್ರ ಮೋದಿ ಸರಕಾರ ಕಳೆದ ಐದು ವರ್ಷಗಳಲ್ಲಿ ತನ್ನ ವಿದೇಶಾಂಗ ನೀತಿ, ಅರ್ಥವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಅದನ್ನು ಆಧುನೀಕರಣಗೊಳಿಸಿ ಭಾರತವನ್ನು 21ನೇ ಶತಮಾನದ ಆರ್ಥಿಕ ಶಕ್ತಿಯನ್ನಾಗಿಸಲು ಶ್ರಮಿಸುತ್ತಿದೆ. ಈ ಸರಕಾರವಲ್ಲದೇ ಹೋಗಿದ್ದರೆ ಹಾಗೂ ಯುಪಿಎ-1 ಸರಕಾರ ಹಾಗೂ ವಿಪಕ್ಷಗಳ ಮೈತ್ರಿಯಂತಹ ಕಿಚಿಡಿ ಸರಕಾರ  ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಇದ್ದಿದ್ದರೆ ಭಾರತದ ಪರಿಸ್ಥಿತಿಯೇ ಭಿನ್ನವಾಗಿ  ಭಾರತ ಉತ್ತರ ಕೊರಿಯಾ ಅಥವಾ ವೆನಝುವೆಲಾದಂತಾಗುತ್ತಿತ್ತು.

ರಾಹುಲ್: ಹೊಸ ಭಾರತದಲ್ಲಿ  ಯಾವುದೇ ದಾಳಿ ನಡೆದರೆ ಮೋದಿ ಸರಕಾರ ತನ್ನ ಸೇನೆ ಕಳುಹಿಸಿ ತಕ್ಕ ಪ್ರತ್ಯುತ್ತರ ನೀಡುತ್ತದೆ,. ಆದರೆ ಹಳೆಯ ಭಾರತದಲ್ಲಿ ಉಗ್ರ ದಾಳಿ ನಡೆದಾಗ ದೇಶ ಕೈಕಟ್ಟಿ ಕುಳಿತಿರುತ್ತಿತ್ತು ಎನ್ನಲಾಗುತ್ತಿದೆ. ಇದಕ್ಕೆ ನಿಮ್ಮ ಉತ್ತರ?

ಕನ್ಹಯ್ಯ: ತೇಜಸ್ವಿ ಅವರಿಂದ ಇಂತಹ ನಿರೀಕ್ಷೆಯಿರಲಿಲ್ಲ. ನಮ್ಮ ಪ್ರಶ್ನೆಗೆ ಉತ್ತರ ನೀಡುವ ಬದಲು ಅವರು ಬೇರೆ ವಿಚಾರ ಮಾತನಾಡುತ್ತಿದ್ದಾರೆ.  ಕೇಂದ್ರದಲ್ಲಿ ಅವರ ಸರಕಾರ ಇದೆ, 27 ಲಕ್ಷ  ಹುದ್ದೆಗಳು ಖಾಲಿಯಿವೆ,  ಅದರ ಬಗ್ಗೆ ಅವರು ಉತ್ತರ ನೀಡಿಲ್ಲ, ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆಯೂ ಅವರು ಉತ್ತರಿಸುತ್ತಿಲ್ಲ. ಸಾರ್ವಜನಿಕ ರಂಗದ  ಸಂಸ್ಥೆಗಳನ್ನು ನಾಶಗೈಯ್ಯಲಾಗುತ್ತಿದೆ. ಬಿಎಸ್ಸೆನ್ನೆಲ್ ಮುಚ್ಚುವ ಹಂತದಲ್ಲಿದೆ, ಉದ್ಯೋಗಿಗಳಿಗೆ  ವೇತನ ದೊರೆಯುತ್ತಿಲ್ಲ. ಏರ್ ಇಂಡಿಯಾ ಹಾಗೂ ಇತರ ಸಾರ್ವಜನಿಕ ರಂಗದ ಸಂಸ್ಥೆಗಳೂ ಮುಚ್ಚುವ ಹಂತದಲ್ಲಿವೆ. ಎಚ್‍ಎಎಲ್ ಗೆ ನೀಡದೆ ದಿವಾಳಿಯಾಗಿರುವಂತಹ  ಖಾಸಗಿ ಕಂಪೆನಿಗೆ ರಫೇಲ್ ಟೆಂಡರ್ ನೀಡಲಾಗಿದೆ. ನಾವು ರಾಷ್ಟ್ರೀಯತೆಯನ್ನು ರಕ್ಷಿಸಬೇಕಾಗಿದೆ. ವೆನೆಝುವಲಾ ಅಥವಾ ಉತ್ತರ ಕೊರಿಯಾದ ಹೆಸರೆತ್ತಿ ನಮ್ಮ ದೇಶದ ಸಮಸ್ಯೆಗಳಿಂದ ಬಚಾವಾಗಲು ಸಾಧ್ಯವಿಲ್ಲ. ನಮ್ಮ ಅರ್ಥ ವ್ಯವಸ್ಥೆ ಅಭಿವೃದ್ಧಿಯಾಗಬೇಕಿದೆ.  ಅಮಿತ್ ಶಾ ಅವರ ಪುತ್ರ ಜಯ್ ಶಾ ಕಂಪೆನಿಗೆ ಬಹಳ ಪಟ್ಟು ಲಾಭವಾಗಿದೆಯೆಂದರೆ ದೇಶಕ್ಕೆ ಲಾಭವಾಗಿದೆ ಎನ್ನಲು ಸಾಧ್ಯವಿಲ್ಲ. ಆದರೆ ಜನರ ತಲಾ ಆದಾಯ ಹೆಚ್ಚಾದರೆ ಮಾತ್ರ ದೇಶ ಉದ್ಧಾರವಾಗುತ್ತದೆ. ಆದರೆ ಇಲ್ಲಿ ಆದಾಯ ಸತತ ಕಡಿಮೆಯಾಗುತ್ತಿದೆ. ಕೆಲ ಕಂಪೆನಿಗಳು ಪ್ರಗತಿಯಾಗುತ್ತಿದ್ದರೆ ಔದ್ಯೋಗಿಕ ಅಭಿವೃದ್ಧಿ ಆಗುತ್ತಿದೆ ಎನ್ನಲಾಗದು. ಜಿಯೋಗೆ ಲಾಭ ಆದರೆ ದೇಶಕ್ಕೆ ಲಾಭ ಆಗಿದೆ ಎನ್ನಲಾಗದು. ಬಿಎಸ್ಸೆನ್ನೆಲ್ ಕಂಪೆನಿಗೆ ಲಾಭವಾದರೆ ಮಾತ್ರ ದೇಶಕ್ಕೆ ಲಾಭವಾಗುತ್ತದೆ. ಇಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಉಗ್ರ ದಾಳಿ ನಡೆದಾಗ ಪ್ರತ್ಯುತ್ತರ ನೀಡಲಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಪ್ರತಿ ಬಾರಿ- ಅದು 1965, 1971 ಹಾಗೂ ಎನ್ ಡಿಎ ಸರಕಾರವಿದ್ದಾಗ ಕಾರ್ಗಿಲ್ ಉದಾಹರಣೆ ನೋಡಿ, ದೇಶದ ಮೇಲೆ ಯಾವಾಗ ದಾಳಿ ನಡೆದಾಗಲೂ ದೇಶದ ಸೈನಿಕರು ಪ್ರತ್ಯುತ್ತರ ನೀಡಿದ್ದಾರೆ.

ರಾಹುಲ್: ದಾಳಿ ನಡೆದಾಗ ಪ್ರತಿ ಬಾರಿ ಸೇನೆ ಪ್ರತ್ಯುತ್ತರ ನೀಡಿದೆ. ಆದರೆ ಸೇನೆ ನಡೆಸಿದ ಕಾರ್ಯಾಚರಣೆಗೆ ಸರಕಾರ ಕ್ರೆಡಿಟ್ ಪಡೆದುಕೊಳ್ಳುತ್ತಿದೆ. ಸೇನೆ ಮಾಡಿದ್ದನ್ನು ಸರಕಾರ ಮಾಡಿದ್ದೆಂಬಂತೆ ಬಿಂಬಿಸಲಾಗುತ್ತಿದೆ. ತೇಜಸ್ವಿ ನಿಮ್ಮ ಅಭಿಪ್ರಾಯ ?

ತೇಜಸ್ವಿ: ನನಗೆ ಪ್ರಚಾರ ಕಾರ್ಯಕ್ರಮಕ್ಕೆ ಈಗ ಹೋಗಬೇಕಿದೆ. ಅಂತಿಮವಾಗಿ  ನನ್ನ ಅಭಿಪ್ರಾಯ ವ್ಯಕ್ತಪಡಿಸಲು 30 ಸೆಕೆಂಡ್ ತೆಗೆದುಕೊಳ್ಳುತ್ತೇನೆ.  ಭಾರತ ಒಂದು ನಾಗರಿಕ ಪ್ರಜಾಪ್ರಭುತ್ವವಾಗಿದೆ. ಮಿಲಿಟರಿ ಕಾರ್ಯಾಚರಣೆ ನಡೆಸಬೇಕೇ ಬೇಡವೇ ಎಂಬ ಬಗ್ಗೆ  ನಾಗರಿಕ ಸರಕಾರ ನಿರ್ಧಾರ ಕೈಗೊಳ್ಳಬೇಕಿದೆ. ಆದರೆ ಪಾಕಿಸ್ತಾನದಲ್ಲಿ ಇಂತಹ ಕಾರ್ಯಾಚರಣೆಯ ಬಗ್ಗೆ ಸೇನೆಯೇ ನಿರ್ಧಾರ ಕೈಗೊಳ್ಳುತ್ತದೆ. ಆದುದರಿಂದ ಯಾವುದೇ ಕಾರ್ಯಚರಣೆಯ ಯಶಸ್ಸು ಯಾ  ವೈಫಲ್ಯ ಭಾರತದ ನಾಗರಿಕ ಸರಕಾರದ ಮೇಲೆ ಬೀಳುತ್ತದೆ.  ಈ ಸರಕಾರ  ದೇಶದ ವೈರಿಗಳಿಗೆ  ತಕ್ಕ ಪ್ರತ್ಯುತ್ತರವನ್ನು ವೈರಿ ದೇಶಗಳಿಗೆ ಅರ್ಥವಾಗುವ ರೀತಿಯಲ್ಲಿ ನೀಡುವ ಧೈರ್ಯ ತೋರಿದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಸರಕಾರ ಅತ್ಯುತ್ತಮ ಕೆಲಸ ಮಾಡಿದೆ.  ರಾಹುಲ್, ನಿಮ್ಮ ಜತೆ ಹಾಗೂ ಕನ್ಹಯ್ಯ ಜತೆ ಮಾತನಾಡುವ ಅವಕಾಶ ಖುಷಿ ನೀಡಿದೆ.

ರಾಹುಲ್: ಭಾರತದ ಸರಕಾರ ಈ ಹಿಂದೆ ಈಗಿನ  ಹಾಗೆ ಪ್ರತ್ಯುತ್ತರ ನೀಡಿಲ್ಲ. ಉಪಗ್ರಹ ನಾಶಕ ಕ್ಷಿಪಣ ಪರೀಕ್ಷೆ ನಡೆಸಿ ಬಾಹ್ಯಾಕಾಶ ಶಕ್ತಿ ಎಂದು ಸಾಬೀತು ಪಡಿಸಿದೆ. ವಾಯು ದಾಳಿಯನ್ನು ಬಾಲಾಕೋಟ್ ನಲ್ಲಿ ನಡೆಸಲಾಯಿತು.  ಕಾರ್ಗಿಲ್ ಯುದ್ಧದ ಸಂದರ್ಭವೂ ವಾಜಪೇಯಿ ಸರಕಾರ ಗಡಿ ನಿಯಂತ್ರಣ ರೇಖೆ ದಾಟಿ ಹೋಗಲು ಅನುಮತಿಸಿರಲಿಲ್ಲ. ಆದರೆ ಈ ಸರಕಾರ ಗಡಿ ದಾಟಿ ದಾಳಿ ನಡೆಸಿದೆ. ಏನಂತೀರಿ ?

ಕನ್ಹಯ್ಯ: ತೇಜಸ್ವಿ ಅವರ ಅಂತಿಮ ಹೇಳಿಕೆಯೇ ವೈರುದ್ಧ್ಯದಿಂದ ಕೂಡಿದೆ. ಭಾರತದ ನಾಗರಿಕ ಸರಕಾರದ ನಿರ್ಧಾರದಂತೆ ಸೇನೆ ಕಾರ್ಯಾಚ�

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News