ಕಾಶ್ಮೀರಿ ವಿದ್ಯಾರ್ಥಿಗಳ ಮೇಲಿನ ದಾಳಿ ಸಮರ್ಥಿಸಿದ ಬಿಜೆಪಿ ಅಭ್ಯರ್ಥಿ !
ಅನಂತನಾಗ್,ಮಾ.30: ಫೆಬ್ರವರಿ 14ರಂದು ಪುಲ್ವಾಮದಲ್ಲಿ 40 ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾದ ಆತ್ಮಾಹುತಿ ದಾಳಿಯ ನಂತರ ದೇಶಾದ್ಯಂತ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲ್ಲೆಯನ್ನು ಇಲ್ಲಿನ ಅನಂತನಾಗ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೂಫಿ ಯೂಸುಫ್ ಸಮರ್ಥಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಪುಲ್ವಾಮ ದಾಳಿ ನಡೆದ ಸಂದರ್ಭದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಸಂಭ್ರಮಾಚರಿಸಿದ್ದರು ಮತ್ತು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದರು. ಹಾಗಾಗಿ ಅವರ ಮೇಲೆ ನಡೆದ ದಾಳಿಯ ಜನರ ಭಾವನೆಯ ಫಲವಾಗಿದೆ ಎಂದು ಯೂಸುಫ್ ತಿಳಿಸಿದ್ದಾರೆ.
ಮಾಜಿ ಶಾಸಕರಾಗಿರುವ ಯೂಸುಫ್ 90ರ ದಶಕದಿಂದಲೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಭದ್ರತಾ ಸಿಬ್ಬಂದಿ ಕೈಯಿಂದ ಅನಂತನಾಗ್‌ನಲ್ಲಿ ಸುಮಾರು 80 ನಾಗರಿಕರು ಹತರಾಗಿದ್ದಾರೆ ಎಂದು ಸರಕಾರಿ ದಾಖಲೆಗಳಿಂದ ತಿಳಿದುಬರುತ್ತದೆ.
ಕಣಿವೆ ರಾಜ್ಯದಲ್ಲಿ ತಲೆದೋರಿರುವ ಸದ್ಯದ ಪರಿಸ್ಥಿತಿಗೆ ನ್ಯಾಶನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷವೇ ಹೊಣೆ ಎಂದು ಯೂಸುಫ್ ಆರೋಪಿಸಿದ್ದಾರೆ. ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ ಮತ್ತು ಪ್ರತ್ಯೇಕತಾವಾದಿಗಳ ಕುಮ್ಮಕ್ಕಿನಿಂದ ಜನರು ವಿಧಿ 35 ಮತ್ತು 370ನ್ನು ತೆಗೆದು ಹಾಕುವುದರ ವಿರುದ್ಧ ಪ್ರತಿಭಟನೆ ನಡೆಸುತ್ತಾರೆ ಎಂದೂ ಅವರು ಆರೋಪಿಸಿದ್ದಾರೆ.