ದೇಹತೂಕ 20 ಕೆ.ಜಿ.ಗೆ ತಲುಪಿ ಮೃತಪಟ್ಟ ಮಹಿಳೆ

Update: 2019-03-30 18:08 GMT

ಕೊಲ್ಲಂ, ಮಾ.30: ಪತಿ ಮತ್ತು ಆತನ ಹೆತ್ತವರು ಸುದೀರ್ಘ ಕಾಲದವರೆಗೆ ಆಹಾರ ನೀಡದ ಕಾರಣ ಮಹಿಳೆಯೊಬ್ಬರು ಹಸಿವೆಯಿಂದ ಸಾವನ್ನಪ್ಪಿದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಒಯೂರು ಎಂಬಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

27ರ ಹರೆಯದ ತುಷಾರ ಎಂಬವರೇ ಸದ್ಯ ಪತಿ ಮತ್ತಾತನ ಹೆತ್ತವರ ಕ್ರೂರತನಕ್ಕೆ ಬಲಿಯಾದ ಮಹಿಳೆಯಾಗಿದ್ದಾರೆ. ಈಕೆಯನ್ನು ಮಾರ್ಚ್ 21ರಂದು ಕೊಲ್ಲಂ ಜಿಲ್ಲಾಸ್ಪತ್ರೆಗೆ ಸಾಗಿಸಲಾದರೂ ಅದಾಗಲೇ ಆಕೆ ಸಾವನ್ನಪ್ಪಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ.

ಆದರೆ ಮಹಿಳೆಯ ಕೃಶಕಾಯವನ್ನು ಕಂಡು ಅನುಮಾನಗೊಂಡ ವೈದ್ಯರು ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಸಾಗಿಸಿದ್ದರು. ಇದಾಗಿ ವಾರಗಳ ನಂತರ ಮಹಿಳೆಯ ಜೊತೆ ನಡೆದ ಅನಾಚಾರಗಳು ಬೆಳಕಿಗೆ ಬಂದಿದ್ದು ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ತುಷಾರಾಗೆ ಆಕೆಯ ಪತಿ ಹಲವು ಸಮಯದಿಂದ ಆಹಾರ ನೀಡದೆ ಹಿಂಸಿಸುತ್ತಿದ್ದರು. ಹಾಗಾಗಿ ಆಕೆಯ ದೇಹತೂಕ 20 ಕೆಜಿಗೆ ಇಳಿದಿತ್ತು. ಆಕೆಯ ಮೃತದೇಹದ ಮೇಲಿರುವ ಗುರುತುಗಳು ಆಕೆಗೆ ಚಿತ್ರಹಿಂಸೆ ನೀಡಿರುವುದಕ್ಕೆ ಸಾಕ್ಷಿಯಾಗಿವೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಮೃತರ ಪತಿ ಚಂದು ಲಾಲ್ (30) ಮತ್ತಾತನ ತಾಯಿ ಗೀತಾ (55)ರನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಮಹಿಳೆಯ ಇಬ್ಬರು ಮಕ್ಕಳನ್ನು ಕೊಲ್ಲಂನ ಚೈಲ್ಡ್‌ಲೈನ್‌ಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News