ಆದಾಯ ಸಂಗ್ರಹ ಕುಸಿತ: ಶೇ.134ಕ್ಕೆ ಹೆಚ್ಚಿದ ದೇಶದ ವಿತ್ತೀಯ ಕೊರತೆ
ಹೊಸದಿಲ್ಲಿ,ಮಾ.30: ನೀರಸ ಆದಾಯ ಸಂಗ್ರಹದಿಂದಾಗಿ ದೇಶದ ವಿತ್ತೀಯ ಕೊರತೆಯು 2019,ಫೆಬ್ರವರಿ ಅಂತ್ಯಕ್ಕೆ ಪೂರ್ಣ ಆರ್ಥಿಕ ವರ್ಷಕ್ಕಾಗಿ ಪರಿಷ್ಕೃತ ಬಜೆಟ್ ಅಂದಾಜಿನ ಶೇ.134.2ಕ್ಕೆ ಹೆಚ್ಚಿದೆ ಎನ್ನುವುದನ್ನು ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್(ಸಿಜಿಎ)ನ ಅಂಕಿಅಂಶಗಳು ಬೆಟ್ಟು ಮಾಡಿವೆ.
2018-19ನೇ ಆರ್ಥಿಕ ವರ್ಷಕ್ಕಾಗಿ ವಿತ್ತೀಯ ಕೊರತೆಯ ಪರಿಷ್ಕೃತ ಅಂದಾಜು 6.34 ಲ.ಕೋ.ರೂ. ಆಗಿದ್ದರೂ,ಎಪ್ರಿಲ್‌ನಿಂದ ಫೆಬ್ರವರಿವರೆಗಿನ 11 ತಿಂಗಳ ಅವಧಿಯಲ್ಲಿಯೇ ವಿತ್ತೀಯ ಕೊರತೆಯು 8.51 ಲ.ಕೋ.ರೂ.ಗೆ ಅಂದರೆ ಪರಿಷ್ಕೃತ ಅಂದಾಜಿನ ಶೇ.134.2ರಷ್ಟು ಹೆಚ್ಚಿದೆ.
ಆದರೆ,ಮುಂಗಡಪತ್ರದಲ್ಲಿ ಅಂದಾಜಿಸಿರುವಂತೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.3.4ಕ್ಕೆ ನಿಯಂತ್ರಿಸಲು ಸರಕಾರವು ಬದ್ಧವಾಗಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಎಸ್.ಸಿ.ಗರ್ಗ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಫೆಬ್ರವರಿ ಅಂತ್ಯಕ್ಕೆ ಇದ್ದಂತೆ ಕೇಂದ್ರ ಸರಕಾರದ ಆದಾಯ ಸಂಗ್ರಹವು 12.65 ಲ.ಕೋ.ರೂ. ಅಥವಾ ಪರಿಷ್ಕೃತ ಮುಂಗಡಪತ್ರ ಅಂದಾಜಿನ ಶೇ.73.2ರಷ್ಟಾಗಿದೆ. ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಆದಾಯ ಸಂಗ್ರಹವು ಮುಂಗಡಪತ್ರ ಅಂದಾಜಿನ ಶೇ.78.2ರಷ್ಟಾಗಿತ್ತು.
ಸರಕಾರದ ತೆರಿಗೆ ಆದಾಯವು 10.94 ಲ.ಕೋ.ರೂ.ಆಗಿದ್ದರೆ,ತೆರಿಗೆಯೇತರ ಆದಾಯವು 1.7 ಲ.ಕೋ.ರೂ.ಆಗಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ 11 ತಿಂಗಳುಗಳಲ್ಲಿ ಸರಕಾರದ ಒಟ್ಟು ವೆಚ್ಚವು 21.88 ಲ.ಕೋ.ರೂ.ಅಥವಾ ಪರಿಷ್ಕೃತ ಅಂದಾಜಿನ 89.08ರಷ್ಟಾಗಿದೆ ಎಂದು ಸಿಜಿಎ ಅಂಕಿಅಂಶಗಳು ತೋರಿಸಿವೆ.