ಜೆಎನ್‌ಯುನಲ್ಲಿ ಪ್ರವೇಶ ಪಡೆಯಲಿಚ್ಛಿಸುವ ಆಕಾಂಕ್ಷಿಗಳೇ ಕ್ಷಮೆ ಇರಲಿ!

Update: 2019-03-30 18:57 GMT

ವಿಶ್ವವಿದ್ಯಾನಿಲಯಗಳ ಬಹುದೊಡ್ಡ ಜವಾಬ್ದಾರಿ ಎಂದರೆ ಬೌದ್ಧಿಕ ಸಂವಾದಗಳನ್ನು ಪ್ರೋತ್ಸಾಹಿಸುವುದು. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ವಿಶ್ವವಿದ್ಯಾನಿಲಯಗಳು ಕೆಲಸ ಮಾಡಬೇಕು. ಆದರೆ ವರ್ತಮಾನ ಕಾಲದಲ್ಲಿ ಅಂತಹ ಕೆಲಸಗಳು ನಡೆಯುತ್ತಿಲ್ಲ ಎಂಬುದನ್ನು ಜೆಎನ್‌ಯುವಿನಲ್ಲಿ ಪ್ರಾಧ್ಯಾಪಕರಾಗಿರುವ
ಪ್ರೊ. ಅವಿಜಿತ್ ಪಾಠಕ್ ಅವರು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ. ಅವರ ಯೋಚನೆಗಳನ್ನು
ಡಾ. ನವೀನ್ ಮಂಡಗದ್ದೆ ಅವರು ಕನ್ನಡಕ್ಕೆ ತಂದಿದ್ದಾರೆ.

ಆಳುವ ವ್ಯವಸ್ಥೆಯು ಜೆಎನ್‌ಯುವಿನ ಗೌರವವನ್ನು ಹಾಳು ಮಾಡುವಲ್ಲಿ ಈಗಲೂ ಕೂಡ ಸೋತಿದೆ ಎಂದು ನನಗೆ ಗೊತ್ತು. ಜೆಎನ್‌ಯುವನ್ನು ಅದು ರಾಷ್ಟ್ರೀಯತೆಯ ವಿರೋಧಿ ವಿದ್ಯಾರ್ಥಿಗಳಿರುವ ಮತ್ತು ಸೈದ್ಧಾಂತಿಕ ಜವಾಬ್ದಾರಿ ಇಲ್ಲದ ಎಡಪಂಥೀಯ ಅಧ್ಯಾಪಕರಿರುವ ತೊಂದರೆಗೊಳಪಟ್ಟ ಕ್ಯಾಂಪಸ್ ಎಂದು ಹೇಳುತ್ತಲೇ ಬರುತ್ತಿದೆ. ವಾಸ್ತವವೆಂದರೆ ಇಲ್ಲಿ ಇವತ್ತು ಕೂಡಾ ವಿಚಾರಗಳು ಹೊಸ ರೂಪವನ್ನು ಪಡೆದುಕೊಳ್ಳುತ್ತಿವೆ. ಪುಸ್ತಕ ಪ್ರೀತಿ ಇರುವವರು ಅದನ್ನು ಓದಿ ಚರ್ಚಿಸುತ್ತಿದ್ದಾರೆ. ಅಂತಹ ಚರ್ಚೆಗಳಲ್ಲಿ ಮಾರ್ಕ್ಸ್‌ನ ಸಮಸ್ಯೆ ಏನು? ಅಂಬೇಡ್ಕರ್ ವಿಚಾರಗಳು ದೋಷಪೂರಿತವಾಗಿಲ್ಲವೇ ಎಂಬಿತ್ಯಾದಿ ಸಂಗತಿಗಳು ಪ್ರಮುಖ ಸ್ಥಾನ ಪಡೆಯುತ್ತಿವೆ. ತರಗತಿಗಳು ನಿರಂತರವಾಗಿ ನಡೆಯುತ್ತಿವೆ. ಬೋಧನೆ ಮತ್ತು ಸಂಶೋಧನೆಗಳು ಪರಸ್ಪರ ಒಂದನ್ನು ಇನ್ನೊಂದು ಪ್ರಭಾವಿಸುತ್ತಾ ಚರ್ಚೆಯ ಮೂಲಕ ಅನೇಕ ವಿಷಯಗಳನ್ನು ಬಲಪಡಿಸುತ್ತಿವೆ.
  ದೇಶಭಕ್ತಿ ಇರುವ ಕೆಲವು ಟಿ.ವಿ.ಚಾನಲ್‌ಗಳ ನಿರಂತರ ಅಪಪ್ರಚಾರದ ನಡುವೆಯೂ, ದೇಶಾದ್ಯಂತ ಇರುವ ವಿದ್ಯಾರ್ಥಿಗಳು ಜೆಎನ್‌ಯುಗೆ ಬಂದು ಸಂಶೋಧಕರಾಗಲು, ವಿದ್ವಾಂಸರಾಗಲು, ಉತ್ತಮ ನಾಗರಿಕರಾಗಲು ಈಗಲೂ ಬಯಸುತ್ತಿದ್ದಾರೆ. ಹೌದು, ಜೆಎನ್‌ಯುಗೆ ಸೇರಲು ಇದು ಸರಿಯಾದ ಸಮಯ, ಚೆನ್ನಾಗಿ ಓದಿಕೊಂಡು ಪ್ರವೇಶ ಪರೀಕ್ಷೆಗೆ ಬನ್ನಿ. ಮೇ ತಿಂಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಇಲ್ಲಿಗೆ ಬರಲಿಚ್ಛಿಸುವ ವಿದ್ಯಾರ್ಥಿಗಳಿಗೆ ನಾನು ಶುಭ ಹಾರೈಸುತ್ತೇನೆ ಮತ್ತು ನಾನವರ ಕ್ಷಮೆಯನ್ನು ಯಾಚಿಸುತ್ತೇನೆ. ಇದು ಸ್ವಲ್ಪವಿಚಿತ್ರ ಅನ್ನಿಸಬಹುದು. ಅದು ಏಕೆಂದು ಮುಂದೆ ವಿವರಿಸುತ್ತೇನೆ.
ಯೋಚನಾ ಶಕ್ತಿಯ ಕೊಲೆ: ಬಹು ಆಯ್ಕೆಯ ಪ್ರಶ್ನೆಯ ಅಸಂಗತತೆ.
 ಅಧ್ಯಾಪಕನಾಗಿ ನನಗೆ ಗೊತ್ತು, ಜಗತ್ತಿನ ಪರಿಕಲ್ಪನೆಗೆ ಸರಿಯಾಗಿ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಆಲೋಚನೆ ಬರುವಂತೆ ಮಾಡಬೇಕು, ಭಾಷೆಯ ಮೇಲೆ ಹಿಡಿತ ಬರುವಂತೆ ವಿದ್ಯಾರ್ಥಿ ಗಳನ್ನು ರೂಪಿಸಬೇಕು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಜೆಎನ್‌ಯು ತನ್ನ ಸಾಂಪ್ರದಾಯಿಕ ರೀತಿಯಲ್ಲಿ ಸಾಹಿತ್ಯದ ಪಠ್ಯ ಗಳನ್ನು, ವಿಮರ್ಶಾತ್ಮಕ ಮತ್ತು ಕ್ರಿಯಾತ್ಮಕ ರೀತಿಯಲ್ಲಿ ರೂಪಿಸುವ ಜವಾಬ್ದಾರಿಯನ್ನು ಹೊಂದಿತ್ತು. ಆದ್ದರಿಂದ, ಒಬ್ಬ ವಿದ್ಯಾರ್ಥಿಯಾಗಿ ಕಾರ್ಲ್ ಮಾರ್ಕ್ಸ್‌ನ್ನು ಓದುವುದೆಂದರೆ, ಅದಕ್ಕೆ ಪೂರ್ವಭಾವಿಯಾಗಿ ಮೂಲ ಪಠ್ಯಗಳನ್ನು ಓದುವುದು, ಅವುಗಳ ಬಗ್ಗೆ ಚರ್ಚಿಸುವುದು, ವಿಚಾರ ವಿಮರ್ಶೆ ಮಾಡುವುದು ಮತ್ತು ಕೊನೆಯಲ್ಲಿ ಅದರ ಬಗ್ಗೆ ವಿಸ್ತಾರವಾಗಿ ಒಂದು ಪ್ರಬಂಧವನ್ನು ಬರೆಯುವುದು. ಹಾಗಾಗಿ ಜೆಎನ್‌ಯುವಿನ ಪ್ರವೇಶ ಪರೀಕ್ಷೆಯು ಗುಣಾತ್ಮಕತೆಯ ವಿಷಯದಲ್ಲಿ ಇತರ ವಿಶ್ವವಿದ್ಯಾನಿಲಯಗಳಿಗಿಂತ ಸಂಪೂರ್ಣವಾಗಿ ಭಿನ್ನವಾದುದು. ಸಮಾಜವಿಜ್ಞಾನದಲ್ಲಿ, ಅದು ವಿಶೇಷವಾಗಿ ವಿದ್ಯಾರ್ಥಿಯೊಬ್ಬನ/ಳ ಪ್ರಶ್ನಿಸುವ ಸಾಮರ್ಥ್ಯವನ್ನು ಹೆಚ್ಚಿಸಿ, ಅಲೋಚನೆಗೆ ಅವಕಾಶ ಮಾಡಿಕೊಡುತ್ತದೆ. ಪ್ರತಿಕ್ರಿಯೆ ಮತ್ತು ಸಮರ್ಥನೆಯ ಆನಂತರ ತರ್ಕಬದ್ಧವಾದ ಪ್ರಬಂಧವೊಂದನ್ನು ರಚಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ.
 ನನಗೆ ನೆನಪಿರುವ ಹಾಗೆ, 2016ರಲ್ಲಿ ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿಯ ಪ್ರವೇಶ ಪರೀಕ್ಷೆಯು ಆರಂಭವಾಗಿತ್ತು. ಅದರಲ್ಲಿ ರಾಷ್ಟ್ರೀಯತೆಯ ಕುರಿತ ರವೀಂದ್ರನಾಥ ಠಾಗೋರರ ಪ್ರಬಂಧದ ಆಯ್ದ ಭಾಗಗಳನ್ನು ಆಧರಿಸಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಠಾಗೋರರ ಪುನರ್ ಓದು ಮತ್ತು ರಾಷ್ಟ್ರೀಯತೆಯಲ್ಲಿ ರಾಜಕೀಯದ ಅಸ್ತಿತ್ವದ ಕುರಿತು ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿತ್ತು. ಇದು ಮೂಲತಃ ಪಠ್ಯಪುಸ್ತಕ ಮಾದರಿಯ ಪ್ರಶ್ನೆಯಲ್ಲ. ಬದಲಾಗಿ ಈ ರೀತಿಯ ಪ್ರಶ್ನೆಗಳು ಕಲಿಯುವವನ ಸಾಮರ್ಥ್ಯವನ್ನು ಗಟ್ಟಿಗೊಳಿಸುತ್ತವೆ. ಈ ಅರ್ಥದಲ್ಲಿ ಜೆಎನ್‌ಯುನ ಪ್ರವೇಶ ಪರೀಕ್ಷೆಯ ತಯಾರಿಯೇ ವಿಭಿನ್ನವಾದುದು. ಇದು ಆಲೋಚನೆಗೆ ಅವಕಾಶವಿಲ್ಲದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಂತಲ್ಲ (NET) ಅಥವಾ ಯಾಂತ್ರಿಕವಾದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಂತಲ್ಲ (ದಿನ ಪತ್ರಿಕೆ ಓದುವ ಖುಷಿಯನ್ನೇ ಕಸಿದುಕೊಳ್ಳವ ಪರೀಕ್ಷೆ ಇದು. ಸುದ್ದಿಯನ್ನು ಕೇವಲ ಪರೀಕ್ಷಾ ಪ್ರಶ್ನೆಯ ಹಿನ್ನೆಲೆಯಲ್ಲಿ ಕ್ರೀಡೆ, ವಿದೇಶಾಂಗ ನೀತಿ, ಬಜೆಟ್, ರಾಜಕೀಯ ಎಂದಷ್ಟೆ ವಿಭಾಗಿಸಲು ಇದು ಕಲಿಸುತ್ತದೆ). ಜೆಎನ್‌ಯುನ ಪ್ರವೇಶ ಪರೀಕ್ಷೆ ಎಂದರೆ ಆಲೋಚಿಸುವ, ಖುಷಿಕೊಡುವ ಓದಿನ ಸಂಭ್ರಮ.
   ಅದರೆ ಈಗ ಕಾಲ ಬದಲಾಗಿದೆ, ಯಾಕಾಗಬಾರದು? ಇವತ್ತು ತಾಂತ್ರಿಕತೆಯೇ ದೇವರು. ಹಾಗಾಗಿ ತಾಂತ್ರಿಕತೆಯನ್ನು ಆಧರಿಸಿ ಆನ್‌ಲೈನ್ ಪರೀಕ್ಷೆ ನಡೆಯುತ್ತದೆ. ಅದಕ್ಕೂ ಹೆಚ್ಚಾಗಿ ಇದು ‘ವಸ್ತು ನಿಷ್ಠತೆಯ ಕಾಲ’ ಮತ್ತು ಗಣಿತದ ನಿಖರತೆಯನ್ನು ಬಯಸುವ ಕಾಲ. ವಿಷಯನಿಷ್ಠವಾದ ಉದ್ದನೆಯ ಪ್ರಬಂಧವನ್ನು ಯಾರು ಪರೀಕ್ಷಿಸುತ್ತಾರೆ? ಹಾಗಾಗಿ ಸರಿ ಎಂದಷ್ಟೇ ಗುರುತಿಸುವ ಪ್ರಶ್ನೆಗಳು ಮತ್ತು ಬಹು ಆಯ್ಕೆ ಮಾದರಿಯ ಪ್ರಶ್ನೆಗಳಿಂದ ವಿದ್ಯಾರ್ಥಿಯ ಸಾಮರ್ಥ್ಯವನ್ನು ಅಳೆಯುವ ವಿಧಾನಕ್ಕೆ ಮಾನ್ಯತೆ ದೊರೆಯುತ್ತಿದೆ. ಇದರ ಮಾಂತ್ರಿಕತೆಯಲ್ಲಿ ವಿದ್ಯಾರ್ಥಿಯು ಮಾಡುವ ತಪ್ಪುಕೂಡ ಸಾಕಾರ ರೂಪವನ್ನು ಪಡೆಯುತ್ತದೆ. ಇದಕ್ಕೆ ಒಳ್ಳೆಯ ಪುಸ್ತಕ ಓದುವ ಅಗತ್ಯವಿಲ್ಲ, ಬರವಣಿಗೆಯನ್ನು ರೂಢಿಸಿಕೊಳ್ಳುವ ಅಗತ್ಯವೂ ಇಲ್ಲ. ಮೈಕೆಲ್ ಫೂಕೊ ತನ್ನ ‘ಶಿಸ್ತು ಮತ್ತು ಶಿಕ್ಷೆ’ ಪ್ರಬಂಧವನ್ನು ಏಕೆ ಪಾಸ್ಕಲ್‌ನ ಹೇಳಿಕೆಯಿಂದ ಪ್ರಾರಂಭಿಸಿದ ಎಂದು ವಿಚಾರ ಮಾಡುವ ಅಗತ್ಯವೇ ಇಲ್ಲ. ಅದರಲ್ಲಿ ಆತ ಹೇಳುತ್ತಾನೆ - ‘‘ವ್ಯಕ್ತಿಗಳು ಅಗತ್ಯವಿರುವಷ್ಟು ಹುಚ್ಚರೇ, ಆದರೆ ಅಂದುಕೊಳ್ಳುವುದು ಮಾತ್ರ ಇತರರಿಗಿಂತ ತನ್ನ ಹುಚ್ಚು ಕಡಿಮೆ ಇದೆ’’ ಎಂದು. ಹೀಗೆ ಯೋಚಿಸುವುದರ ಬದಲು ಲೋಕಸೇವಾ ಆಯೋಗದ ಪರೀಕ್ಷೆಗೆ ತಯಾರಾಗುತ್ತಿರುವವರನ್ನು ಕೇಳುವುದು, ಉತ್ತಮವಾದ ಗೈಡ್ ಗಳನ್ನು ಓದುವುದು ಸುಲಭ. ಇಂಥದ್ದರ ಮೂಲಕ ಪರೀಕ್ಷೆಗೆ ತಯಾರಾಗುವುದಾದರೆ, ನೀವು ತತ್ವಶಾಸ್ತ್ರದ ಒಗಟುಗಳನ್ನು ಹಿಡಿದು ಸಮಯ ವ್ಯರ್ಥ ಮಾಡಬೇಕಿಲ್ಲ. ಉದಾಹರಣೆಗೆ ಲೂಯಿ ಡ್ಯೂಮೋ ಅವರ ಹೋಮೋ ಹೈರಾರ್ಕಿಕಸ್ ಯಾವ ವರ್ಷ ಪ್ರಕಟವಾಯಿತು?, ಎಂ. ಎನ್. ಶ್ರೀನಿವಾಸ್ ಅವರ ‘ರಾಂಪುರ’ ಎಲ್ಲಿದೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕೊಡಲು ನೀವು ತಯಾರಾದರೆ ಸಾಕು. ಇದರ ಬದಲು ಮಾರ್ಕ್ಸ್‌ನ ಅರ್ಥಿಕ ನಿರ್ಣಯಗಳಾಚೆ ಇನ್ನೊಬ್ಬ ಮಾರ್ಕ್ಸ್ ಹುಟ್ಟಿಕೊಳ್ಳುತ್ತಿದ್ದಾನೆಯೇ?, ಅಂಬೇಡ್ಕರ್ ಎತ್ತಿದ ಜಾತಿಯ ಪ್ರಶ್ನೆಗಳನ್ನು ಗಾಂಧಿ ಸರಳಗೊಳಿಸಿದರೇ? ಗ್ರಾಹಕತ್ವವು ಮಾರುಕಟ್ಟೆಯ ವಾರಸುದಾರಿಕೆಯನ್ನು ಅಂದಗೊಳಿಸಿದೆಯೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಯೋಚಿಸಲೇ ಬೇಕಿಲ್ಲ. ಏಕೆಂದರೆ, ಇದರ ಕುರಿತು ಅಲೋಚಿಸಿದರೆ ವ್ಯವಸ್ಥೆಯು ನಿಮ್ಮ ಕಿವಿಯಲ್ಲಿ ಪಿಸುಗುಡುತ್ತದೆ-ಇಲ್ಲಿ ಪರ್ಯಾಯವಿಲ್ಲ
ಗೆಳೆಯರೆ ಕ್ಷಮೆ ಇರಲಿ. ಇದು ತತ್ವಶಾಸ್ತ್ರದ ಸಾವು, ಭಾಷೆಯ ಸಾವು, ಪ್ರತಿಕ್ರಿಯೆಗಳ ಸಾವು.
 ಆದರೂ ಈ ಬಹು ಆಯ್ಕೆಯ ಹೊಸ ಪರೀಕ್ಷಾ ಪದ್ಧತಿಯು ವಸ್ತುನಿಷ್ಠವಾಗಿದೆ, ನಿಮ್ಮ ತಾರ್ಕಿಕ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ, ವೇಗವಾಗಿ ಸ್ಪಷ್ಟವಾಗಿ ಆಲೋಚಿಸುವ ನಿಮ್ಮ ನಿಖರತೆಯನ್ನು ಪರೀಕ್ಷಿಸುತ್ತದೆ ಎಂದೆಲ್ಲಾ ನೀವು ನಂಬುತ್ತೀರಿ. ಜೀವವನ್ನೇ ಇಲ್ಲವಾಗಿಸುವ ಇದರ ಕುರಿತು ನಿಮ್ಮ ಜೊತೆ ಮಾತನಾಡುತ್ತಿರುವುದಕ್ಕೆ ಕ್ಷಮೆ ಇರಲಿ.
ಆದಾಗ್ಯೂ ಎಲ್ಲವೂ ಮುಗಿದಿಲ್ಲ..
ಇಷ್ಟೆಲ್ಲ ಇದ್ದಾಗ್ಯೂ ಯುವ ಅಕಾಂಕ್ಷಿಗಳಿಗೆ ನಾನು ನಿರಾಸೆ ಉಂಟು ಮಾಡುವುದಿಲ್ಲ, ಅಕಾಂಕ್ಷಿಗಳಲ್ಲಿ ಕೆಲವರು ಜೆಎನ್‌ಯುಗೆ ಬರುತ್ತಾರೆ. ಏಕೆಂದರೆ ಅಲ್ಲಿರುವ ಅಧ್ಯಾಪಕರು ಇನ್ನೂ ಬದುಕಿದ್ದಾರೆ. ಇಲ್ಲಿ ಬೋಧಿಸುವ ರೀತಿ ಹೀಗೆಯೇ ಇರಬೇಕೆಂದೋ, ಅಥವಾ ಅಸೈನ್‌ಮೆಂಟ್‌ಗಳು ಹೀಗೆಯೇ ಇರಲಿ ಎಂದೋ ಯಾರೂ ಎಲ್ಲೂ ಇದುವರೆಗೆ ಹೇಳಿಲ್ಲ. ನಮ್ಮ ಪುಣ್ಯವೆಂದರೆ ಸೆಮಿಸ್ಟರ್ ಪರೀಕ್ಷೆಗೆ ಇನ್ನು ವಸ್ತುನಿಷ್ಠ ಮಾದರಿ ಬಂದಿಲ್ಲ.
   ಅಸೈನ್‌ಮೆಂಟ್‌ಗಳನ್ನು ವಸ್ತುನಿಷ್ಠ ರೂಪದಲ್ಲಿ ಮಾಡಲು ಹೇಳಿಲ್ಲ. ಹಾಗಾಗಿ ಜೆಎನ್‌ಯುಗೆ ಬಂದರೆ ವಸ್ತುನಿಷ್ಠ ಮಾದರಿಯ ಪುರಾಣಗಳಿಂದ ನಿಮ್ಮನ್ನು ದೂರವಿರಿಸಲು ನಾವು ಪ್ರಯತ್ನಿಸುತ್ತೇವೆ. ತಾವು ತಾತ್ವಿಕ ಅರಾಜಕತೆಯನ್ನು ಇಷ್ಟ ಪಡುತ್ತೇವೆ. ಚರ್ಚೆ ಮಾಡುವುದನ್ನು ಬಯಸುತ್ತೇವೆ. ಬಹುತ್ವವನ್ನು ಬಯಸುತ್ತೇವೆ. ವಸ್ತುನಿಷ್ಠ ಪದ್ದತಿಯಲ್ಲಿ ಅಮಿತಾಭ್ ಬಚ್ಚನ್ ‘ಕೌನ್ ಬನೇಗ ಕರೋಡ್ ಪತಿ’ಯಲ್ಲಿ ಕೇಳಿದ ಹಾಗೆ ಒಂದು ಪ್ರಶ್ನೆಗೆ ಒಂದೇ ಉತ್ತರ ಎಂಬಂತೆ ಇರುತ್ತದೆ. ಜೆಎನ್‌ಯುವಿನಲ್ಲಿ ಹಾಗಿರುವುದಿಲ್ಲ. ಹಾಗಾಗಿ ನಾವಿಲ್ಲಿ ನಿಮ್ಮನ್ನು ನಿಯಂತ್ರಿಸುವುದಿಲ್ಲ. ನಾವು ಮಾರ್ಕ್ಸ್ ನ ‘ಭಾವಪ್ರಧಾನತೆಯನ್ನು’ ನಿಮ್ಮಲ್ಲಿ ಕಾಣಬಯಸುತ್ತೇವೆ. ಆತನ ‘ಭೌತವಾದವನ್ನಲ್ಲ’ ಬುದ್ಧ ಮತ್ತು ಮಾರ್ಕ್ಸ್‌ನ ಕುರಿತ ಅಂಬೇಡ್ಕರ್ ಅವರ ವಿಚಾರಗಳನ್ನು ಓದಲು ನಿಮ್ಮನ್ನು ಪ್ರೇರೇಪಿಸುತ್ತೇವೆ. ಅಂಬೇಡ್ಕರ್ ಅವರ ಬುದ್ಧ ತತ್ವ ಮತ್ತು ಭಗವದ್ಗೀತೆ ಕುರಿತ ಗಾಂಧೀಜಿಯ ನಿಲುವುಗಳನ್ನು ತೌಲನಿಕವಾಗಿ ನೀವು ಓದಬೇಕೆಂದು ನಾವು ಬಯಸುತ್ತೇವೆ. ನಿಮಗೆ ಸಕಾರಾತ್ಮಕತೆಯನ್ನು ಕಲಿಸಬೇಕೆಂಬಾಸೆ ನಮ್ಮದು. ಪ್ರಾಯೋಗಿಕತೆ ಮತ್ತು ವಿಜ್ಞಾನತತ್ವವನ್ನು ನಿಮಗೆ ಹೇಳಬೇಕು. ಲಿಯೊನಾರ್ಡೊ ವಿನ್ಸಿಯ ಮೊನಾಲಿಸ ಯಾಕೆ ಬಹುಮುಖೀ ಸ್ವರೂಪವನ್ನು ಹೊಂದಿದೆ ಎಂದು ವಿಚಾರ ಮಾಡಲು ನಿಮಗೆ ಹೇಳುತ್ತೇವೆ. ಆಶಿಶ್ ನಂದಿ ಅವರು ‘ವಿಜ್ಞಾನದ ಅಧೀನತೆ’ಯ ತೀಕ್ಷ್ಣ ವಿರ್ಮಶಕರೇ? ಎಂದು ಚರ್ಚಿಸಲು ಪ್ರೇರೇಪಿಸುತ್ತೇವೆ. ನಾವು ನಿಮ್ಮನ್ನು ತತ್ವಶಾಸ್ತ್ರದ ಆಶ್ಚರ್ಯಕರ ಜಗತ್ತಿಗೆ ಕರೆದೊಯ್ಯುತ್ತೇವೆ. ಅಲ್ಲಿ ಸರಿ ತಪ್ಪಿನ ಪ್ರಶ್ನೆಯೇ ಇಲ್ಲ.
ಗೆಳೆಯರೇ, ಈ ಸಂಕೀರ್ಣವಾದ ಮತ್ತು ದುಃಖಕರವಾದ ಸಮಯದಲ್ಲೂ ನಿಮ್ಮನ್ನು ಜೆಎನ್‌ಯುಗೆ ಆಮಂತ್ರಿಸುತ್ತೇನೆ. ಗೈಡ್ ಪುಸ್ತಕ, ಕೋಚಿಂಗ್ ಸೆಂಟರ್‌ಗಳಿಂದ ಕಲಿಯುವುದನ್ನು ಮತ್ತು ಆಲೋಚಿಸುವುದನ್ನು ನಿಲ್ಲಿಸಿರಿ. ಈ ರೀತಿಯ ವ್ಯವಸ್ಥೆಯು ನಿಮ್ಮನ್ನು ಇಲ್ಲವಾಗಿಸುವ ಮೊದಲು ರಾಜ್ಯಶಾಸ್ತ್ರ, ತತ್ವಶಾಸ್ತ್ರ, ಶಿಕ್ಷಣ ಶಾಸ್ತ್ರದ ರಣರಂಗದಲ್ಲಿ ಸೇನಾನಿಗಳಾಗಿರಿ.

-ಅವಿಜಿತ್ ಪಾಠಕ್ ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ ಜೆಎನ್‌ಯು
ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ