ವಯನಾಡ್‌ನಲ್ಲಿ ರಾಹುಲ್ ಸೋಲಿಸುವ ಗುರಿ: ಪ್ರಕಾಶ್ ಕಾರಟ್
ಹೊಸದಿಲ್ಲಿ, ಮಾ.31: ಕೇರಳದ ವಯನಾಡ್‌ನಲ್ಲಿ ರಾಹುಲ್ ಸ್ಪರ್ಧಿಸುವ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಆಡಳಿತ ಪಕ್ಷ ಸಿಪಿಎಂನ ಹಿರಿಯ ಮುಖಂಡ ಪ್ರಕಾಶ್ ಕಾರಟ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ವಯನಾಡ್‌ನಲ್ಲಿ ರಾಹುಲ್ ಗಾಂಧಿಯ ಸೋಲನ್ನು ಖಾತರಿಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇವೆ ಎಂದಿದ್ದಾರೆ.
ಆದರೆ ಸಿಪಿಎಂ ಪಕ್ಷದಿಂದ ಅಧಿಕೃತವಾಗಿ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಸಿಪಿಎಂ ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರೋಧಿ ಒಕ್ಕೂಟದ ಪ್ರಮುಖ ಪಕ್ಷವಾಗಿದ್ದು ವಯನಾಡ್‌ನಲ್ಲಿ ಈಗಾಗಲೇ ಸಿಪಿಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗದ ಅಭ್ಯರ್ಥಿಯಾಗಿ ಸಿಪಿಐನ ಪಿಪಿ ಸುನೀರ್ ಕಣಕ್ಕಿಳಿದಿದ್ದಾರೆ.
ನರೇಂದ್ರ ಮೋದಿ ಸರಕಾರ ಉತ್ತರ ಮತ್ತು ದಕ್ಷಿಣ ಭಾರತದ ಮಧ್ಯೆ ತೀವ್ರ ಒಡಕು ಹುಟ್ಟಿಸಲು ಪ್ರಯತ್ನಿಸಿರುವುದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಕೇರಳದ ವಯನಾಡ್‌ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ರಾಹುಲ್ ಸ್ಪರ್ಧೆಯನ್ನು ಕಾಂಗ್ರೆಸ್ ವ್ಯಾಖ್ಯಾನಿಸಿದೆ. ಭಾರತವನ್ನು ವರ್ಣ, ಭಾಷೆ, ಜೀವನಕ್ರಮ, ಆಹಾರದ ಅಭ್ಯಾಸ, ಧರಿಸುವ ಬಟ್ಟೆಬರೆಯ ಆಧಾರದಲ್ಲಿ ಒಡೆಯಲು ಬಯಸುವ ಶಕ್ತಿಗಳ ವಿರುದ್ಧದ ಹೋರಾಟ ಇದಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ಆದರೆ ಸಿಪಿಎಂನ ನಿಲುವು ಸ್ಪಷ್ಟವಾಗಿದೆ. ವಯನಾಡ್‌ನಲ್ಲಿ ರಾಹುಲ್‌ರನ್ನು ಕಣಕ್ಕಿಳಿಸುವ ಕಾಂಗ್ರೆಸ್‌ನ ನಿರ್ಧಾರದಿಂದ ಅವರ ಪ್ರಮುಖ ಆದ್ಯತೆ ಕೇರಳದಲ್ಲಿ ಎಡಪಕ್ಷಗಳ ವಿರುದ್ಧ ಹೋರಾಡುವುದು ಎಂಬುದು ನಿಚ್ಚಳವಾಗಿದೆ. ಇದು ಬಿಜೆಪಿಯ ವಿರುದ್ಧ ಹೋರಾಡುವ ಕಾಂಗ್ರೆಸ್‌ನ ರಾಷ್ಟ್ರೀಯ ಬದ್ಧತೆಗೆ ವಿರುದ್ಧವಾಗಿದೆ. ಯಾಕೆಂದರೆ ಕೇರಳದಲ್ಲಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಎಲ್‌ಡಿಎಫ್ ಮುಂಚೂಣಿಯಲ್ಲಿದೆ ಎಂದು ಕಾರಟ್ ಹೇಳಿದ್ದಾರೆ.
ಕಾಂಗ್ರೆಸ್ ಕೇರಳದಲ್ಲಿ ಎಡಪಕ್ಷಗಳನ್ನು ಗುರಿಯಾಗಿಸಿಕೊಂಡಿದ್ದು ಇದಕ್ಕೆ ಎಡಪಕ್ಷಗಳ ಅಭ್ಯರ್ಥಿಗಳ ವಿರುದ್ಧ ರಾಹುಲ್‌ರನ್ನು ಕಣಕ್ಕಿಳಿಸಿರುವುದೇ ಉದಾಹರಣೆಯಾಗಿದೆ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಮತ್ತು ವಯನಾಡ್‌ನಲ್ಲಿ ರಾಹುಲ್ ಸೋಲನ್ನು ಖಾತರಿಪಡಿಸಲು ಶ್ರಮಿಸುತ್ತೇವೆ ಎಂದು ಕಾರಟ್ ಹೇಳಿದ್ದಾರೆ.
ರಾಹುಲ್‌ರನ್ನು ವಯನಾಡ್‌ನಲ್ಲಿ ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ ಪರಿಶೀಲಿಸುತ್ತಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಕಳೆದ ವಾರ ಪ್ರತಿಕ್ರಿಯಿಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಒಂದು ವೇಳೆ ರಾಹುಲ್ ಗಾಂಧಿ ಕೇರಳದಲ್ಲಿ ಸ್ಪರ್ಧಿಸಿದರೆ ಅದು ಎಡಪಕ್ಷಗಳ ವಿರುದ್ಧದ ಹೋರಾಟವಾಗುತ್ತದೆಯೇ ವಿನಃ ಬಿಜೆಪಿ ವಿರುದ್ಧದ ಹೋರಾಟವಾಗದು ಎಂದಿದ್ದರು.
ವಯನಾಡ್ ದಶಕಗಳಿಂದ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದೆ.