ಅದು ನಾನೇ, ನನ್ನ ಭೂತವಲ್ಲ: ಟ್ವಿಟರಿಗನಿಗೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯೆ !
ಹೊಸದಿಲ್ಲಿ, ಮಾ.31: ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರ ಟ್ವಿಟರ್ ಖಾತೆಯನ್ನು ಈಗ ಖಂಡಿತವಾಗಿಯೂ ಸುಷ್ಮಾ ನಿರ್ವಹಿಸುತ್ತಿಲ್ಲ. ಬಹುಷಃ ಅವರ ಸಾರ್ವಜನಿಕ ಸಂಪರ್ಕ ವಿಭಾಗದ ಸಿಬ್ಬಂದಿ ನಿರ್ವಹಿಸುತ್ತಿರಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ಸಂದೇಹ ವ್ಯಕ್ತಪಡಿಸಿದ ವ್ಯಕ್ತಿಗೆ ತಿರುಗೇಟು ನೀಡಿರುವ ಸುಷ್ಮಾ ಸ್ವರಾಜ್, ಅದು ಖಂಡಿತಾ ನಾನೇ. ನನ್ನ ಭೂತವಲ್ಲ ಎಂದು ಹೇಳಿದ್ದಾರೆ.
ಸ್ವರಾಜ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ವ್ಯಕ್ತಿಯೊಬ್ಬ, “ಖಂಡಿತವಾಗಿಯೂ ಸಚಿವೆ ಸ್ವತಃ ಟ್ವೀಟ್ ಮಾಡುತ್ತಿಲ್ಲ. ಬಹುಷಃ ಅವರ ಸಾರ್ವಜನಿಕ ಸಂಪರ್ಕ ವಿಭಾಗದ ವ್ಯಕ್ತಿಯೊಬ್ಬ ಸಚಿವೆಯ ಪರ ಟ್ವೀಟ್ ಮಾಡುತ್ತಿರಬಹುದು” ಎಂದು ಹೇಳಿದ್ದ.
ಪ್ರಧಾನಿ ನರೇಂದ್ರ ಮೋದಿಯ ಸಚಿವ ಸಂಪುಟದಲ್ಲಿರುವ , ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಅರಿವುಳ್ಳ ಸಚಿವರಲ್ಲಿ ಒಬ್ಬರೆನಿಸಿರುವ ಸುಷ್ಮಾ ಸ್ವರಾಜ್ ಜರ್ಮನಿಯಲ್ಲಿ ಭಾರತೀಯ ದಂಪತಿಯ ಮೇಲೆ ಚೂರಿಯಿಂದ ಇರಿದ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದರು. ಮರುದಿನ ಇದಕ್ಕೆ ಪ್ರತಿಕ್ರಿಯಿಸಿದ್ದ ವ್ಯಕ್ತಿಯೊಬ್ಬ, ಟ್ವಿಟರ್‌ನಲ್ಲಿ ನಿಮ್ಮ ಹೆಸರಿನ ಎದುರು ಚೌಕಿದಾರ್ ಎಂಬ ಪೂರ್ವಪದ ಸೇರಿಸಿರುವುದು ಯಾಕೆಂದು ಪ್ರಶ್ನಿಸಿದ್ದ.
ಇದಕ್ಕೆ ಉತ್ತರಿಸಿದ್ದ ಸುಷ್ಮಾ, ‘ಯಾಕೆಂದರೆ ನಾನು ವಿದೇಶದಲ್ಲಿರುವ ಭಾರತೀಯರು ಹಾಗೂ ಭಾರತೀಯರ ಹಿತಾಸಕ್ತಿಯ ಚೌಕಿದಾರ(ಕಾವಲುಗಾರ)’ ಎಂದಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಆತ, ಬಹುಷಃ ಸಚಿವೆಯ ಬದಲು ಅವರ ಸಾರ್ವಜನಿಕ ಸಂಪರ್ಕ ವಿಭಾದ ಸಿಬ್ಬಂದಿ ಈಗ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದ.
ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸಕ್ರಿಯರಾಗಿರುವ ಸುಷ್ಮಾ ಸ್ವರಾಜ್, ವಿದೇಶದಲ್ಲಿರುವ ಭಾರತೀಯರು ಟ್ವಿಟರ್‌ನಲ್ಲಿ ವ್ಯಕ್ತಪಡಿಸುವ ಸಂಕಷ್ಟ, ಸಮಸ್ಯೆಗಳ ಬಗ್ಗೆ ಹಾಗೂ ವಿದೇಶ ವ್ಯವಹಾರ ಇಲಾಖೆಯ ವ್ಯಾಪ್ತಿಗೆ ಬರುವ ವಿಷಯಗಳ ಬಗ್ಗೆ ತಕ್ಷಣ ಗಮನಹರಿಸಿ ಪ್ರತಿಸ್ಪಂದಿಸುತ್ತಿದ್ದಾರೆ.