ಪ್ರತಿಭಟನೆಗೆ ಮಣಿದು ಫ್ಯಾಶನ್ ಶೋ ರದ್ದುಪಡಿಸಿದ ಜಾಮಿಯಾ ವಿವಿ
ಹೊಸದಿಲ್ಲಿ,ಮಾ.31: ವಿದ್ಯಾರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಎಂಜಿನಿಯರಿಂಗ್ ಶಿಕ್ಷಣ ವಿಭಾಗವು , ತಾನು ಆಯೋಜಿಸಿದ್ದ ಫ್ಯಾಶನ್ ಶೋ ಹಾಗೂ ಡೈಸ್ ಗೇಮ್‌ನ್ನು ರದ್ದುಪಡಿಸಿದೆ. ಈ ಚಟುವಟಿಕೆಗಳು ಇಸ್ಲಾಮ್‌ನ ಮೌಲ್ಯಗಳಿಗೆ ಹಾಗೂ ಜಾಮಿಯಾದ ಸಾಂಸ್ಕೃತಿಕ ವೌಲ್ಯಗಳಿಗೆ ವಿರುದ್ಧವಾಗಿದೆಯೆಂದು ಪ್ರತಿಭಟನಾ ನಿರತರು ಆರೋಪಿಸಿದ್ದರು.
ಜಾಮಿಯಾ ಮಿಲಿಯಾ ವಿವಿಯ ಎಂಜಿನಿಯರಿಂಗ್ ಬೋಧನಾ ವಿಭಾಗದ ಮೂರು ದಿನಗಳ ವಾರ್ಷಿಕ ಉತ್ಸವದ ಅಂಗವಾಗಿ ಫ್ಯಾಶನ್ ಹಾಗೂ ಡೈಸ್ ಗೇಮ್ ಅನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಫೇಸ್‌ಬುಕ್‌ನಲ್ಲಿ ‘ಸ್ಟೂಡೆಂಟ್ಸ್ ಆಫ್ ಜಾಮಿಯಾ’ ಎಂದು ತಮ್ಮನ್ನು ಕರೆದುಕೊಂಡಿದ್ದ ಗುಂಪೊಂದು ಈ ಕಾರ್ಯಕ್ರಮಗಳ ವಿರುದ್ಧ ಆಭಿಯಾನವನ್ನು ನಡೆಸುತ್ತಿತ್ತು.
ಆದಾಗ್ಯೂ, ಕಾರ್ಯಕ್ರಮದ ಆಯೋಜಕರಲ್ಲೊಬ್ಬರು ಈ ಪ್ರತಿಭಟನೆಯ ಹಿಂದೆ ಇರುವವರು ಯಾರೆಂಬುದು ತಮಗೆ ಇನ್ನೂ ಖಾತರಿಯಾಗಿಲ್ಲವೆಂದು ಹೇಳಿದ್ದಾರೆ. ಆದಾಗ್ಯೂ ‘‘ ಇತರ ಬೋಧನಾ ವಿಭಾಗಗಳ ವಿದ್ಯಾರ್ಥಿಗಳು, ಕೆಲವು ಹಳೆಯ ವಿದ್ಯಾರ್ಥಿಗಳು ಹಾಗೂ ಕೆಲವರು ಹೊರಗಿನವರು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಸಾಧ್ಯತೆಯಿದೆ’’ ಎಂದವರು ಸಂದೇಹ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮಗಳನ್ನು ಆಯೋಜಿಸಲು ತಮಗೆ ಎಂಜಿನಿಯರಿಂಗ್ ಶಿಕ್ಷಣದ ಬೋಧಕ ವರ್ಗದ ಹಾಗೂ ವಿವಿ ಆಡಳಿತದ ಬೆಂಬಲ ಹಾಗೂ ಅನುಮತಿಯಿತ್ತು ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ. ಆದರೆ ಪ್ರತಿಭಟನಕಾರರು ಹಿಂಸೆಗಿಳಿಯಬಹುದೆಂಬ ಭೀತಿಯಿಂದ ಪ್ರದರ್ಶನವನ್ನು ರದ್ದುಪಡಿಸಲಾಗಿದೆ’’ ಎಂದವರು ಹೇಳಿದ್ದಾರೆ. ಇತರ ಕಾಲೇಜುಗಳಿಂದ ಆಗಮಿಸಿದ ತಂಡಗಳ ಗಲಭೆಯ ನಡುವೆ ಸಿಲುಕಿಕೊಳ್ಳುವ ಅಪಾಯವನ್ನು ಎದುರುಹಾಕಿಕೊಳ್ಳಲು ನಾವು ಬಯಸುವುದಿಲ್ಲವೆಂದು ಅವರು ಹೇಳಿದ್ದಾರೆ.
ಶುಕ್ರವಾರ ರಾತ್ರಿ ಫ್ಯಾಶನ್ ಶೋನ ಸಮನ್ವಯಕಾರರೊಬ್ಬರು ಪ್ರತಿಭಟನಕಾರರೊಬ್ಬರಿಂದ ಬೆದರಿಕೆ ಕರೆಯನ್ನು ಸ್ವೀಕರಿಸಿದರೆನ್ನಲಾಗಿದೆ. ಶನಿವಾರ ಮಧ್ಯಾಹ್ನದ ಹೊತ್ತಿಗೆ ಸುಮಾರು 12 ಮಂದಿ ಕಾರ್ಯಕ್ರಮದ ಸ್ಥಳಕ್ಕೆ ಬಂದು ವಿರೋಧ ವ್ಯಕ್ತಪಡಿಸಿದರು. ಅವರೊಡನೆ ಮಾತುಕತೆ ನಡೆಸಲು ಯತ್ನಿಸದರೂ, ಅವರು ಕಿವಿಗೊಡಲು ಸಿದ್ಧರಿರಲಿಲ್ಲವೆಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರದಲ್ಲಿ ಆಯೋಜಿಸಲಾಗಿದ್ದ ಹಸಿನೋ ಕಾ ಕ್ಯಾಸಿನೊ ಕಾರ್ಡ್ ಗೇಮ್ಸ್ , ಜೂಜು ಆಟವಾಗಿರುವುದರಿಂದ ಅದನ್ನು ಕೂಡಾ ರದ್ದುಪಡಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರೆಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
ಆ ಬಳಿಕ ಭದ್ರತಾ ಭೀತಿಯ ಹಿನ್ನೆಲೆಯಲ್ಲಿ ಆಯೋಜಕರು ಫ್ಯಾಶನ್‌ಶೋ ಹಾಗೂ ಕಾರ್ಡ್‌ಗೇಮ್ಸ್‌ಗಳನ್ನು ರದ್ದುಪಡಿಸಿದರೆಂದು ವಿದ್ಯಾರ್ಥಿಯೋರ್ವ ಮಾಧ್ಯಮಗಳಿಗೆ ತಿಳಿಸಿದ್ದಾರೆ.