ಪೈಲಟ್‌ಗಳಿಗೆ ಡಿಸೆಂಬರ್ ತಿಂಗಳ ವೇತನ ಪಾವತಿ: ಜೆಟ್ ಏರ್‌ವೇಸ್ ಘೋಷಣೆ
ಹೊಸದಿಲ್ಲಿ,ಮಾ.31: ಸಾಲದ ಹೊರೆಯಿಂದ ತತ್ತರಿಸುತ್ತಿರುವ ಜೆಟ್ ಏರ್‌ವೇರ್ ವಾಯುಯಾನ ಸಂಸ್ಥೆಯು, ತನ್ನ ಉದ್ಯೋಗಿಗಳಿಗೆ ಬಾಕಿಯಿರುವ 2018ರ ಡಿಸೆಂಬರ್ ತಿಂಗಳ ವೇತನವನ್ನು ಪಾವತಿಸುವುದಾಗಿ ಹೇಳಿದೆ. ಕಳೆದ ಮೂರು ತಿಂಗಳುಗಳಿಂದ ತಮಗೆ ಬಾಕಿಯಿರುವ ವೇತನವನ್ನು ಪಾವತಿಸದೇ ಇದ್ದಲ್ಲಿ ಎಪ್ರಿಲ್ 1ರಿಂದ ಮುಷ್ಕರಕ್ಕಿಳಿಯುವುದಾಗಿ ಜೆಟ್‌ಏರ್‌ವೇಸ್‌ನ ಪೈಲಟ್‌ಗಳು ಬೆದರಿಕೆ ಹಾಕಿದ ಕೆಲವು ದಿನಗಳ ಬಳಿಕ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್ ದುಬೆ, ಈ ಘೋಷಣೆ ಮಾಡಿದ್ದಾರೆ.
ಆದರೆ, ಪೈಲಟ್‌ಗಳ ಒಕ್ಕೂಟವಾದ ನ್ಯಾಶನಲ್ ಅವಿಯೇಟರ್ಸ್ ಗಿಲ್ಡ್, ಜೆಟ್‌ಏರ್‌ವೇಸ್‌ನ ಈ ಘೋಷಣೆಯು ಅಸಮರ್ಪಕವಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದೆ.
ಕಂಪೆನಿಯು ಗಣನೀಯ ಪ್ರಮಾಣದಲ್ಲಿ ಬಾಕಿ ವೇತನವನ್ನು ಪಾವತಿಸುವವರೆಗೂ ಪೈಲಟ್‌ಗಳು ಕರ್ತವ್ಯಕ್ಕೆ ಹಾಜರಾಗುವುದಿಲ್ಲವೆಂದು, ರಾಷ್ಟ್ರೀಯ ಪೈಲಟ್‌ಗಳ ಒಕ್ಕೂಟವಾದ ನ್ಯಾಶನಲ್ ಅವಿಯೇಟರ್ಸ್ ಗಿಲ್ಡ್ ತಿಳಿಸಿದೆ. ಆದಾಗ್ಯೂ ಒಕ್ಕೂಟವು ರವಿವಾರ ಮುಂಬೈನಲ್ಲಿ ಸಭೆ ನಡೆಸಿ, ಮುಷ್ಕರ ಕೈಗೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸೂಕ್ತ ನಿರ್ಧಾರವೊಂದನ್ನು ಕೈಗೊಳ್ಳಲಿದೆಯೆಂದು ಅದು ಹೇಳಿದೆ.
ಮಾರ್ಚ್ 22ರಂದು ಪೈಲಟ್‌ಗಳ ಒಕ್ಕೂಟವು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಜೆಟ್‌ಏರ್‌ವೇಸ್‌ನ ಪೈಲಟ್‌ಗಳ ವೇತನ ಪಾವತಿಯಾಗದಿರುವ ಬಗ್ಗೆ ದೂರಿತ್ತು. ಜೆಟ್‌ಏರ್‌ವೇಸ್ ವಾಯುಯಾನ ಸಂಸ್ಥೆಯು ಪತನದ ಅಂಚಿನಲ್ಲಿದ್ದು, ಸಾವಿರಾರು ಉದ್ಯೋಗಿಗಳು ನಿರುದ್ಯೋಗಿಗಳಾಗುವ ಭೀತಿಯಿದೆಯೆಂದು ಅದು ಪತ್ರದಲ್ಲಿ ತಿಳಿಸಿತ್ತು.
ಮಾರ್ಚ್ 25ರಂದು ಜೆಟ್‌ಏರ್‌ವೇಸ್‌ನ ಸ್ಥಾಪಕ ನರೇಶ್ ಗೋಯಲ್ ಹಾಗೂ ಅವರ ಪತ್ನಿ ಅನಿತಾ ಗೋಯಲ್, ಆಡಳಿತ ನಿರ್ದೇಶಕರ ಹುದ್ದೆಯಿಂದ ಕೆಳಗಿಳಿದಿದ್ದರರು. ಸಾಲಬಾಧಿತವಾದ ಈ ವಾಯುಯಾನ ಸಂಸ್ಥೆಯ ಕಾರ್ಯನಿರ್ವಹಣೆಗಾಗಿ ಮಧ್ಯಾಂತರ ಸಮಿತಿಯೊಂದನ್ನು ನೇಮಿಸಲಾಗಿತ್ತು.