ಟ್ರೋಲ್ ಆಯಿತು ದ.ಕ. ಕಾಂಗ್ರೆಸ್ ಅಭ್ಯರ್ಥಿಯ ಭಾಷಣ ಶೈಲಿ

Update: 2019-04-01 05:43 GMT

ಲೋಕಸಭಾ ಚುನಾವಣೆಗೆ ಇನ್ನೇನು ಕೆಲದಿನಗಳಿರುವಂತೆಯೇ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರದ ಭರಾಟೆಯೂ ಜೋರಾಗಿದೆ. ತಾವು ಬೆಂಬಲಿಸುವ ಪಕ್ಷದ ಪರ ಜೈಕಾರ ಹಾಕುವ ಸಾಮಾಜಿಕ ಜಾಲತಾಣದ ಬಳಕೆದಾರರು, ವಿರೋಧಿಸುವ ಪಕ್ಷದ, ಅಭ್ಯರ್ಥಿಗಳ ಕಾಲೆಳೆಯುತ್ತಾರೆ.

ಚುನಾವಣಾ ಪ್ರಚಾರದ ವೇಳೆ ರಾಜಕಾರಣಿಗಳು ಎಡವಟ್ಟು ಮಾಡಿಕೊಂಡರಂತೂ ಹೇಳುವುದೇ ಬೇಡ. ಸಾಮಾಜಿಕ ಜಾಲತಾಣ ಫೇಸ್ ಬುಕ್, ವಾಟ್ಸ್ಯಾಪ್ ಗಳಲ್ಲಿ ಟ್ರೋಲ್ ಗಳು ಈ ‘ಎಡವಟ್ಟು’ಗಳಿಗೆ ವಿಧವಿಧ ವಿಡಿಯೋ ಹಾಗು ಮೀಮ್ ಗಳ ಮೂಲಕ  ವಿವಿಧ ರೂಪಗಳನ್ನು ನೀಡುತ್ತಾರೆ.

ದ.ಕ. ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ಪೈಪೋಟಿ ಈ ಬಾರಿ ಜೋರಾಗಿದೆ. ಎರಡೂ ಪಕ್ಷಗಳ ಐಟಿ ಸೆಲ್ ಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಕಳೆದೆರಡು ಮೂರು ತಿಂಗಳಿಂದಲೇ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ವಿಳಂಬದ ಕುರಿತು ಸಂಸದ ನಳಿನ್ ವೈಫಲ್ಯ ಹತ್ತು ಹಲವು ಮೀಮ್ ಗಳಿಗೆ ಕಾರಣವಾಗಿತ್ತು. ಪೋಸ್ಟರ್, ವಿಡಿಯೋ ಮೂಲಕ ಸಾಕಷ್ಟು ನೆಟ್ಟಿಗರು ನಳಿನ್ ಕಾಲೆಳೆದಿದ್ದರು.  ಇದೀಗ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯವರ ‘ತದನಂತರ’ ವಿಡಿಯೋವೊಂದು ವೈರಲ್ ಆಗಿ ಜನರಿಗೆ ಪುಕ್ಕಟೆ ಮನರಂಜನೆ ಒದಗಿಸುತ್ತಿದೆ. 

ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಿಥುನ್ ರೈ, “ಅಡ್ಡೂರಿನ ದರ್ಗಾಕ್ಕೆ ಹೋಗಿ ಅಲ್ಲಿ ಆಶೀರ್ವಾದವನ್ನು ಪಡೆದು, ತದನಂತರ ಇನೋಳಿ ಸೋಮನಾಥೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಆಶೀರ್ವಾದವನ್ನು ಪಡೆದು, ತದನಂತರ ನನ್ನ ತಾಯಿಯ ಮನೆಗೆ ತೆರಳಿ ಅಲ್ಲಿ ನೆಲೆದಂತಹ ದೈವಗಳಿಗೆ ನನ್ನ ಪ್ರಾರ್ಥನೆಯನ್ನು ಅರ್ಪಿಸಿ, ತದನಂತರ ಗೋಮಾತೆಗೆ ಪೂಜೆ ಮಾಡುವ ಮುಖಾಂತರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಆಶೀರ್ವಾದ ಪಡೆದು ಕೇಂದ್ರ ಜುಮಾ ಮಸೀದಿಗೆ ಭೇಟಿ ನೀಡಿ ಅಲ್ಲಿ ಗುರುಗಳಿಂದ ದುಆ ಪಡೆದು, ತದನಂತರ ರೊಸಾರಿಯೋ ಕೆಥೆಡ್ರಲ್ ನಲ್ಲಿ ಆಶೀರ್ವಾದ ಪಡೆದಿದ್ದೇನೆ” ಎಂದು ಹೇಳಿದ್ದರು.

ನಳಿನ್ ಗೆ ಹೋಲಿಸಿದರೆ  ಮಿಥುನ್ ಮಾತುಗಾರರಲ್ಲ.  ಚುನಾವಣಾ ರಾಜಕೀಯ ಕೂಡ ಅವರಿಗೆ ಹೊಸತು. ಮೊದಲ ಬಾರಿಯೇ ಲೋಕಸಭಾ ಚುನಾವಣೆ ಎದುರಿಸುವ ಅವಕಾಶ ಸಿಕ್ಕಿದೆ. ಭಾಷಣದಲ್ಲಿ ಅವರು ಇನ್ನಷ್ಟೇ ಹಿಡಿತ ಸಾಧಿಸಬೇಕಿದೆ.  ಅವರು ತನ್ನ ಮಾತುಗಳಲ್ಲಿ ‘ತದನಂತರ’ ಎನ್ನುವುದನ್ನು ಹಲವು ಬಾರಿ ಬಳಸಿದ್ದಕ್ಕಾಗಿ ಮಿಥುನ್ ರೈಯವರನ್ನು ಟ್ರೋಲ್ ಗಳು ಕಾಲೆಳೆಯಲು ಶುರು ಮಾಡಿದ್ದಾರೆ . ಅದರಲ್ಲಿ ಕೆಲವು ಟ್ರೋಲ್ ವಿಡಿಯೋ ಗಳು ಈ ಕೆಳಗಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News