ಮೋದಿ ಹಾಗು ಶಾ ಜನರಿಗೆ ಏಪ್ರಿಲ್ ಫೂಲ್ ಮಾಡಿದ್ದು ಹೇಗೆ ?

Update: 2019-04-01 11:02 GMT

ಏಪ್ರಿಲ್ ಫೂಲ್ ದಿನ ಜನರನ್ನು ಮೂರ್ಖರಾಗಿಸಿ ನಕ್ಕು ಬಿಡಲು ಎಲ್ಲರೂ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಇದು ಚುನಾವಣೆಯ ಕಾಲವಾದ್ದರಿಂದ ರಾಜಕಾರಣಿಗಳು ಜನರನ್ನು ಹೇಗೆ ಮೂರ್ಖರಾಗಿಸುತ್ತಾರೆ ಎಂಬುದೇ ಈಗ ಹೆಚ್ಚು ಚರ್ಚೆ.

ಕಾಂಗ್ರೆಸ್, ಬಿಜೆಪಿ ಸಹಿತ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು, ನಾಯಕರು, ಅಭ್ಯರ್ಥಿಗಳು ಹಾಗು ಕಾರ್ಯಕರ್ತರು ತಮ್ಮ ಪ್ರತಿಸ್ಪರ್ಧಿ ಪಕ್ಷಗಳು ಜನರ ಕಣ್ಣಿಗೆ ಮಣ್ಣೆರಚುತ್ತಿವೆ ಎಂದು ಸಾಬೀತುಪಡಿಸಲು ಶ್ರಮಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ಹೀಗೆ ಎತ್ತಿ ತೋರಿಸಲು ಎಲ್ಲರಿಗೂ ಅತಿಹೆಚ್ಚು ಉದಾಹರಣೆಗಳು ಸಿಗುತ್ತಿರುವುದು ಬಿಜೆಪಿ ವಿರುದ್ಧ ಎಂಬುದು ವಾಸ್ತವ. ಇದಕ್ಕೆ ಕಾರಣ ಆ ಪಕ್ಷ 2014ರಲ್ಲಿ ಜನರಿಗೆ ನೀಡಿದ ಉದ್ದ ಆಶ್ವಾಸನೆಗಳ ಪಟ್ಟಿ. ಈಗ ಎಲ್ಲ ಪಕ್ಷಗಳೂ ಬಿಜೆಪಿ ಆಗ ಹೇಳಿದ್ದೇನು ಮತ್ತು ಕಳೆದ ಐದು ವರ್ಷಗಳಲ್ಲಿ ಮಾಡಿದ್ದೇನು ಎಂದು ಜನರಿಗೆ ತೋರಿಸಲು ಸ್ಪರ್ಧೆಗೆ ಬಿದ್ದಿದ್ದಾರೆ.

ಆದರೆ ಈ ಪೈಕಿ ಮುಂಚೂಣಿಯಲ್ಲಿರುವುದು ಸಾಮಾಜಿಕ ಕಾರ್ಯಕರ್ತ, ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ. ಅಂಕಿ ಅಂಶ, ವಾಸ್ತವಗಳನ್ನು ಎದುರಿಟ್ಟು ಬಿಜೆಪಿ ಹಾಗು ಪ್ರಧಾನಿ ಮೋದಿಯವರನ್ನು ಕುಟುಕುವ ಧ್ರುವ್ ಏಪ್ರಿಲ್ ಒಂದರಂದು ಟ್ವೀಟ್ ಮಾಡಿರುವ ಎರಡು ವಿಡಿಯೋ ಗಳು ಜನರಿಗೆ ಬಿಜೆಪಿಯ ' ಸಾಧನೆ ' ಯ ಪರಿಚಯ ನೀಡಿದರೆ ಬಿಜೆಪಿ ಮುಖ ಮುಚ್ಚಿಕೊಳ್ಳುವಂತೆ ಮಾಡಿವೆ.

ಧ್ರುವ್ ಟ್ವೀಟ್ ಮಾಡಿರುವ ಒಂದು ವಿಡಿಯೋ 2014 ರಲ್ಲಿ ಮೋದಿ ಅವರು ಮಾಡಿರುವ ಒಂದು ಪ್ರಚಾರ ಭಾಷಣ. ಆ ಭಾಷಣದಲ್ಲಿ ಮೋದಿ, "ನಾವು ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಶಾಸಕರು ಹಾಗು ಸಂಸದರ ವಿರುದ್ಧ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ವಿಚಾರಣೆ ನಡೆಸಿ ಒಂದು ವರ್ಷದೊಳಗೆ ತಪ್ಪಿತಸ್ಥ ಜನಪ್ರತಿನಿಧಿಗಳನ್ನು ಜೈಲಿಗೆ ಹಾಕಿ ಇಡೀ ವ್ಯವಸ್ಥೆಯನ್ನು ಶುದ್ಧಗೊಳಿಸುವ ಕೆಲಸ ಮಾಡುತ್ತೇವೆ " ಎಂದು ಹೇಳುತ್ತಾರೆ.

ಆದರೆ ನಿಜವಾಗಿ ಮೋದಿ ಸರಕಾರ ಪ್ರಚಂಡ ಬಹುಮತ ಪಡೆದು ಅಧಿಕಾರಕ್ಕೆ ಬಂದು ಐದು ವರ್ಷವಾದರೂ ಈ ಕೆಲಸ ಆಗಿಯೇ ಇಲ್ಲ ಎಂಬುದು ಕಟು ವಾಸ್ತವ.

ಧ್ರುವ್ ಟ್ವೀಟ್ ಮಾಡಿರುವ ಇನ್ನೊಂದು ವಿಡಿಯೋ ಇತ್ತೀಚಿಗೆ ಟಿವಿ 9 ನೂತನ ಹಿಂದಿ ಚಾನಲ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿಜೆಪಿ ಅಮಿತ್ ಶಾ ಅವರು ಮಾತನಾಡಿರುವುದು. ಅಲ್ಲಿ ಅವರಲ್ಲಿ, “ಅಧಿಕಾರಕ್ಕೆ ಬಂದ ಕೂಡಲೇ ರಾಬರ್ಟ್ ವಾದ್ರಾನನ್ನು ಜೈಲಿಗೆ ಹಾಕುತ್ತೇವೆ ಎಂದು ಹೇಳಿದ ನೀವು ಏನೂ ಮಾಡದೆ ಈಗ ಐದು ವರ್ಷವಾಗುವಾಗ ಮತ್ತೆ ಆತನ ವಿರುದ್ಧ ಸಣ್ಣಪುಟ್ಟ ಕ್ರಮ ಕೈಗೊಳ್ಳಲು ಹೊರಟಿದ್ದೀರಿ” ಎಂದು ಕೇಳಲಾಗುತ್ತದೆ. ಅದಕ್ಕೆ ಕಕ್ಕಾಬಿಕ್ಕಿಯಾಗುವ ಅಮಿತ್ ಶಾ ದ್ವಂದ್ವ ಉತ್ತರ ನೀಡುತ್ತಾರೆ.

"ನಾವು ರಾಬರ್ಟ್ ವಾದ್ರಾನನ್ನು ಬಂಧಿಸುತ್ತೇವೆ ಎಂದು ಹೇಳಿಯೇ ಇಲ್ಲ. ಭ್ರಷ್ಟಾಚಾರಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದೇವೆ. ರಾಬರ್ಟ್ ವಾದ್ರಾ ಭಾರೀ ಭ್ರಷ್ಟಾಚಾರ ಮಾಡಿದ್ದಾರೆ. ಇವೆರಡೂ ಎರಡು ಬೇರೆ ಬೇರೆ ವಿಷಯಗಳು. ಇದನ್ನು ತಿಳಿದುಕೊಳ್ಳಬೇಕು. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಹಾಗು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆ" ಎಂದು ತೀರಾ ಅಸಂಬದ್ಧ ಉತ್ತರ ನೀಡುತ್ತಾರೆ.

ನಿಜವಾಗಿ 2014 ರಲ್ಲಿ ಬಿಜೆಪಿ ರಾಬರ್ಟ್ ವಾದ್ರಾ ಬಗ್ಗೆ ಅದೆಷ್ಟೋ ಬಾರಿ ಮಾತಾಡಿದೆ. ಅವರ ಭ್ರಷ್ಟಾಚಾರದ ಬಗ್ಗೆ ಹೇಳಿದೆ ಮತ್ತು ಅಧಿಕಾರಕ್ಕೆ ಬಂದರೆ ವಾದ್ರಾರನ್ನು ಜೈಲಿಗೆ ಹಾಕುತ್ತೇವೆ ಎಂದು ಹೇಳಿದೆ. ಆದರೆ ಈಗ ಅದನ್ನು ಮರೆತು ಬಿಟ್ಟಿದೆ.

ಆದರೆ ಜನರು ಮರೆಯುತ್ತಿಲ್ಲ ಅಷ್ಟೇ .

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News