ದಯಾಮರಣದ ಹಾದಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು

Update: 2019-04-01 18:42 GMT

ಈಗ ಶೋಕಾಚರಣೆ ಮಾತ್ರವೇ ನಮ್ಮ ಪಾಲಿಗೆ ಉಳಿದಿದೆ. ಬ್ಯಾಂಕಿಂಗ್ ಉದ್ಯಮ ಕಾರ್ಪೊರೇಟ್ ವಶವಾಗಲು ಇನ್ನಷ್ಟು ಕಾಲ ಹಿಡಿಯಬಹುದು ಆದರೆ ಇದು ಸಂಭವಿಸಿಯೇ ತೀರುವ ವಿದ್ಯಮಾನ. ಉರಿ, ಬಾಲಕೋಟ್, ಪುಲ್ವಾಮ, ಮಿಷನ್ ಶಕ್ತಿ ಈ ಸುರಕ್ಷತಾ ಸಾಧನಗಳನ್ನು ಧರಿಸಿ ಬಲಿಷ್ಠರಾಗಿದ್ದೇವೆ ಎಂದು ಬೀಗುವ ಮುನ್ನ ಆಂತರಿಕವಾಗಿ ನಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಯೋಚಿಸಿದಾಗ ವಿಜಯ ಬ್ಯಾಂಕ್ ನೆನಪಾಗುತ್ತದೆ. ಇದು ಒಂದು ಬ್ಯಾಂಕಿನ ಅಂತ್ಯವಲ್ಲ ಒಂದು ಪರ್ವದ ಅಂತ್ಯದ ಆರಂಭ.

 ನಿನ್ನೆ ಎರಡು ರಾಷ್ಟ್ರೀಕೃತ ಬ್ಯಾಂಕುಗಳು ತಮ್ಮ ಅಸ್ತಿತ್ವ ಕಳೆದುಕೊಂಡಿವೆ. ಮಹಾರಾಷ್ಟ್ರ ಮೂಲದ ದೇನಾ ಬ್ಯಾಂಕ್ ಮತ್ತು ಕರ್ನಾಟಕ ಕರಾವಳಿಯ ವಿಜಯ ಬ್ಯಾಂಕ್ ತಮ್ಮ ದಶಕಗಳ ಸೇವೆಯ ನಂತರ ಮತ್ತೊಂದು ಬ್ಯಾಂಕ್‌ನಲ್ಲಿ ವಿಲೀನವಾಗಿವೆ. ಎರಡು ವರ್ಷಗಳ ಹಿಂದೆ ಕರ್ನಾಟಕದ ಹೆಮ್ಮೆಯ ಮೈಸೂರು ಬ್ಯಾಂಕ್ ಹೀಗೆಯೇ ಸದ್ದಿಲ್ಲದೆ ಸತ್ತು ಹೋಗಿತ್ತು. ಮೈಸೂರು ಒಡೆಯರ ಕಾಲದಲ್ಲಿ ನಾಡಿನ ಅಸ್ಮಿತೆಯಾಗಿ ಸ್ಥಾಪನೆಯಾಗಿದ್ದ ಬ್ಯಾಂಕು ತನ್ನ ಕೊನೆಯುಸಿರೆಳೆದಾಗ ಅದೇಕೋ ಕನ್ನಡದ ದನಿಗಳೂ ಸತ್ತುಹೋಗಿದ್ದವು. ನಿಜ, ಪ್ರತಿಭಟನೆ, ಹೋರಾಟದಿಂದ ತಪ್ಪಿಸುವಂತಹ ಕ್ರಮ ಇದಾಗಿರಲಿಲ್ಲ. ಆದರೆ ನಾಡಿನ ಜನತೆಯ ನಿತ್ಯ ಜೀವನದ ಒಂದು ಭಾಗವಾಗಿದ್ದ ಬೃಹತ್ ಸಂಸ್ಥೆಯೊಂದು ತನ್ನ ನೆಲೆಯನ್ನೇ ಕಳೆದುಕೊಂಡಾಗ ಜನರು ಸ್ಪಂದಿಸಬಹುದಿತ್ತು. ಮರಣ ಹೊಂದುವ ಮುನ್ನ ತಡೆಯಲು ಯಾರೂ ಮುಂದಾಗಲಿಲ್ಲ. ಶವಸಂಸ್ಕಾರವನ್ನು ತಡೆಯಲಾಗುವುದಿಲ್ಲ. ಆದರೆ ಮೃತ ಸಂಸ್ಥೆಗೆ ಕಂಬನಿಯನ್ನಾದರೂ ಮಿಡಿಯಬಹುದಿತ್ತಲ್ಲವೇ ? ಅದೇಕೋ ಹೋರಾಟಗಾರರು ತೆಪ್ಪಗಾಗಿಬಿಟ್ಟರು. ಇದು ಕನ್ನಡದ ಪ್ರಶ್ನೆಯಾಗಿರಲಿಲ್ಲ ಕರ್ನಾಟಕದ ಪ್ರಶ್ನೆಯಾಗಿತ್ತು. ಈಗ ಕರ್ನಾಟಕದ ಮತ್ತೊಂದು ಬ್ಯಾಂಕ್ ವಿಜಯ ಬ್ಯಾಂಕ್ ಇಲ್ಲವಾಗುತ್ತಿದೆ.
ಒಂದು ರೀತಿಯಲ್ಲಿ ವಿಜಯ ಬ್ಯಾಂಕ್ ಪರವಾಗಿಲ್ಲ. ಈ ಪುಟ್ಟ ಬ್ಯಾಂಕಿನ ಸಾವಿಗೆ ಶೋಕಿಸುವವರಿದ್ದಾರೆ. ಹಾರ ಹಾಕುವವರಿದ್ದಾರೆ. ಪ್ರತಿಭಟನೆಯೂ ನಡೆದಿದೆ. ಕಾರಣ ಮೈಸೂರು ಬ್ಯಾಂಕಿನ ಪಾಲಿಗೆ ಇಲ್ಲದಿದ್ದ ಒಂದು ಅಂಶ ವಿಜಯ ಬ್ಯಾಂಕಿಗೆ ಇದೆ. ಅದು ಜಾತಿ ಸಮುದಾಯದ ನಂಟು. ಕರಾವಳಿಯ ಬಂಟ ಸಮುದಾಯಕ್ಕೆ ವಿಜಯ ಬ್ಯಾಂಕ್ ನಮ್ಮದು ಎನ್ನುವ ಭಾವನೆ ಇದೆ. ಮೈಸೂರು ಬ್ಯಾಂಕ್ ಪಾಪ ಅನಾಥಶಿಶು. ಇತ್ತ ಭಾಷಿಕರೂ ಇಲ್ಲ ಅತ್ತ ಜಾತಿ ಬಾಂಧವರೂ ಇಲ್ಲ. ಬಂಟ ಸಮುದಾಯದ ಶೋಕಾಚರಣೆ ಅರ್ಥಹೀನ ಎನ್ನಲಾಗದು. ಏಕೆಂದರೆ ಕೊಂಕಣಿ ಸಮುದಾಯದ ಕರ್ತವ್ಯ ಪ್ರಜ್ಞೆ ಮತ್ತು ಕಾರ್ಯದಕ್ಷತೆಯನ್ನು ನನ್ನ 35 ವರ್ಷಗಳಲ್ಲಿ ಕಂಡಿದ್ದೇನೆ. ಕೆಲವು ಅಪವಾದಗಳು ಇದ್ದರೂ ಈ ಸಮುದಾಯದ ಸಿಬ್ಬಂದಿ ತಮ್ಮ ಬ್ಯಾಂಕ್ ಎಂದರೆ ತಮ್ಮದೇ ಒಂದು ಮನೆ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದರು. ಕೆಲವೊಮ್ಮೆ ಅತಿಯಾಯಿತು ಎನಿಸಿದರೂ ಹಿಂದಿರುಗಿ ನೋಡಿದಾಗ ಅದು ಬೇಕಿತ್ತೇನೋ ಎನಿಸುತ್ತದೆ. ಈ ಅವಿನಾಭಾವ ಆತ್ಮೀಯ ಸಂಬಂಧವೇ ಇಂದು ಬಂಟ ಸಮುದಾಯವನ್ನು ನೋಯಿಸಿದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಅಂದು ಮೈಸೂರು ಇಂದು ವಿಜಯ ನಾಳೆ ಕಾರ್ಪೋರೇಷನ್ ಅಥವಾ ಕೆನರಾ. ಭಾರತದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ದಯಾಮರಣದ ಅನುಮತಿ ನೀಡಿ ಎರಡು ದಶಕಗಳೇ ಸಂದಿದೆ. ಅಯೋಧ್ಯೆ ರಾಮಮಂದಿರಕ್ಕೆ ಇಟ್ಟಿಗೆಗಳನ್ನು ಸಂಗ್ರಹಿಸಿದ ಕೆಲವೇ ವರ್ಷಗಳ ನಂತರ ಭಾರತದ ಆಳುವ ವರ್ಗಗಳು ರಾಷ್ಟ್ರೀಕೃತ ಬ್ಯಾಂಕುಗಳ ಸಮಾಧಿಗೂ ಇಟ್ಟಿಗೆಗಳನ್ನು ಜೋಡಿಸಲಾರಂಭಿಸಿದ್ದನ್ನು ಗಮನಿಸಬೇಕು. ಬ್ಯಾಂಕ್ ರಾಷ್ಟ್ರೀಕರಣ ಸ್ವತಂತ್ರ ಭಾರತದ ಮಹತ್ತರ ಮೈಲಿಗಲ್ಲು. ಇದು ಅಂದಿನ ಪ್ರಭುತ್ವದ ಔದಾರ್ಯದ ಫಲವೇನೂ ಅಲ್ಲ. ಅನಿವಾರ್ಯ ಕ್ರಮವಾಗಿತ್ತು. ಬ್ಯಾಂಕ್ ನೌಕರರ ಮತ್ತು ಎಡಪಕ್ಷಗಳ ವರ್ಷಗಳ ಹೋರಾಟದ ಫಲವಾಗಿತ್ತು. ಆದರೆ ಇದೇ ಪ್ರಭುತ್ವ 1991ರಲ್ಲಿ ಆಲಂಗಿಸಿದ ನವ ಉದಾರವಾದ ಮತ್ತು ಜಾಗತೀಕರಣ ನೀತಿಗಳಿಗೆ ಈ ದೇಶದ ಜನಸಾಮಾನ್ಯರ ನಾಡಿಮಿಡಿತವನ್ನು ಗ್ರಹಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದ ರಾಷ್ಟ್ರೀಕೃತ ಬ್ಯಾಂಕುಗಳೆಂಬ ಮುದ್ದಿನ ಕೂಸು ಬೇಕಿರಲಿಲ್ಲ. ಆದರೆ ಒಮ್ಮೆಲೆ ಈ ಕೂಸುಗಳ ಕತ್ತು ಹಿಸುಕುವುದೂ ಸಾಧ್ಯವಿರಲಿಲ್ಲ. ಹಾಗಾಗಿ ಸಮಾಧಿಯ ನಿರ್ಮಾಣಕ್ಕೆ ಇಟ್ಟಿಗೆಗಳನ್ನು ಜೋಡಿಸುತ್ತಲೇ ಬರಲಾಗಿದೆ. ನರಸಿಂಹರಾವ್, ದೇವೇಗೌಡ, ವಾಜಪೇಯಿ, ಮನಮೋಹನ್ ಸಿಂಗ್ ಮತ್ತು ಈಗ ನರೇಂದ್ರ ಮೋದಿ. ಬಹುಶಃ ಶವಪೆಟ್ಟಿಗೆಯ ಕೊನೆಯ ಮೊಳೆ ಹೊಡೆಯಲು ರಾಹುಲ್ ಗಾಂಧಿ ಅಥವಾ ಮತ್ತಾರೋ ಸಿದ್ಧತೆ ನಡೆಸಿರಬೇಕು.
 ಶವ ಸಂಸ್ಕಾರಕ್ಕೂ ಜೀವಂತ ಸಮಾಧಿಗೂ ಇರುವ ವ್ಯತ್ಯಾಸವನ್ನು ನವ ಉದಾರವಾದ ಸ್ಪಷ್ಟಪಡಿಸುತ್ತಿದೆ. ದೇಶದ ಆರು ವಿಮಾನ ನಿಲ್ದಾಣಗಳ ಜೀವಂತ ಸಮಾಧಿ ಮಾಡಲು ಕೇಂದ್ರ ಸರಕಾರಕ್ಕೆ ಕ್ಷಣ ಮಾತ್ರವೂ ಬೇಕಾಗಲಿಲ್ಲ. ಆದರೆ ಎಚ್‌ಎಎಲ್ ಹಾಗಲ್ಲ. ಅದನ್ನು ಹನಿಹನಿಯಾಗಿಯೇ ಕೊಂದು ನಂತರ ಹೂಳಲಾಗುತ್ತದೆ. ಬಿಎಸ್ಸೆನ್ನೆಲ್ ಸಹ ಇದೇ ಹಾದಿ ಹಿಡಿಯುತ್ತದೆ. ರೋಗಗ್ರಸ್ತವಲ್ಲವೇ ಸಾಯಲಿ ಬಿಡು ಎನ್ನುವ ಸಾಮಾನ್ಯ ಅಭಿಪ್ರಾಯ ಇಲ್ಲಿ ಸಾರ್ವತ್ರಿಕವಾಗಿಬಿಡುತ್ತದೆ. ಆದರೆ ಸುಸ್ಥಿರ, ಸ್ವಾಸ್ಥ್ಯ ಜೀವ ರೋಗಗ್ರಸ್ತವಾಗಿದ್ದಾದರೂ ಹೇಗೆ? ಈ ಪ್ರಶ್ನೆ ಕೇಳಿದರೆ ಬಹುಶಃ ಅರ್ಬನ್ ನಕ್ಸಲ್ ಹಣೆಪಟ್ಟಿ ಅಂಟಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಸಾರ್ವಜನಿಕ ಉದ್ದಿಮೆಗಳಂತೆಯೇ ರಾಷ್ಟ್ರೀಕೃತ ಬ್ಯಾಂಕುಗಳೂ ಇದೇ ಸ್ಥಿತಿಯಲ್ಲಿವೆ. ವಾಜಪೇಯಿ ಸಂಪುಟದಲ್ಲಿ ಬಂಡವಾಳ ಹಿಂದೆೆಗೆತ ಸಚಿವರಿದ್ದರು. ಆದರೆ ಕ್ಯಾಬಿನೆಟ್ ದರ್ಜೆಯ ಪ್ರತ್ಯೇಕ ಕೃಷಿ ಸಚಿವರು ಇರಲಿಲ್ಲ. ಆದರೂ ಕೃಷಿ ಆದಾಯ ದುಪ್ಪಟ್ಟು ಮಾಡುವ ಸಾಹಸ ಕೇಳಿಬಂದಿತ್ತು.
 ಈ ನಾಟಕಕ್ಕೆ ಅಂಕದ ಪರದೆ ಇನ್ನೂ ಜಾರಿಲ್ಲ. ನೇಪಥ್ಯದಲ್ಲಿಯೂ ರಂಗಸಜ್ಜಿಕೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಬ್ಯಾಂಕ್ ರಾಷ್ಟ್ರೀಕರಣ ಮಹಾದ್ರೋಹ ಎಂದು ಬಣ್ಣಿಸಿದ ಆಳುವ ವರ್ಗಗಳು ಈ ದ್ರೋಹಕ್ಕೆ ಪ್ರಾಯಶ್ಚಿತ್ತವಾಗಿ ಒಂದೊಂದೇ ಕೂಸುಗಳನ್ನು ಬಲಿ ಕೊಡುತ್ತಿವೆ. ಕೋಳಿ ಮಾಂಸದ ಅಂಗಡಿಯಲ್ಲಿ ಹೊರಗಡೆ ಗೂಡಿನಲ್ಲಿರುವ ಕೋಳಿಗಳನ್ನು ಒಮ್ಮೆ ನೋಡಿ. ಬದುಕಿರುತ್ತವೆ ಸಾಯಲು ಸಿದ್ಧವಾಗಿರುತ್ತವೆ ಆದರೆ ಅಂಗಡಿಯ ಮಾಲಕನನ್ನು ಕೋಳಿ ಕತ್ತರಿಸಿದ ಆರೋಪಕ್ಕೆ ಸಿಲುಕಿಸಲಾಗುವುದಿಲ್ಲ. ಅದನ್ನು ಕೊಳ್ಳಲು ಗ್ರಾಹಕನೊಬ್ಬ ಬರಬೇಕು. ಬಲಿಷ್ಟ ಕೋಳಿಗೆ ಬೇಡಿಕೆ ಹೆಚ್ಚು ಅಲ್ಲವೇ? ಹಾಗೆಯೇ ವಿಜಯ ಬ್ಯಾಂಕ್. ಲಾಭದಲ್ಲಿದ್ದ ಈ ಸಂಸ್ಥೆ ನಷ್ಟದಲ್ಲಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನವಾಗುತ್ತಿದೆ. ವಿಜಯ ಬ್ಯಾಂಕ್ ಕೋಡಗ ಅಲ್ಲ; ಬ್ಯಾಂಕ್ ಆಫ್ ಬರೋಡಾ ಕೋಳಿಯೂ ಅಲ್ಲ. ಏಕೆಂದರೆ ಮುಂದೊಂದು ದಿನ ಹೊಸ ಬ್ಯಾಂಕ್ ಆಫ್ ಬರೋಡಾ ಮತ್ತೊಂದು ಕೋಡಗನ ಬಾಯಿಗೆ ಆಹಾರವಾಗುತ್ತದೆ. ಅಲ್ಲಿಯವರೆಗೂ ಹೊರಗಡೆ ಗೂಡಿನಲ್ಲಿ ಕೊಕ್ಕೊಕ್ಕೊಕ್ಕೊ ಎನ್ನುತ್ತಾ ಜೀವ ಸವೆಸುತ್ತದೆ.
ಇದು ಐದು ದಶಕಗಳ ನೀಲ ನಕ್ಷೆಯ ಪರಿಣಾಮ. ಈ ನೀಲ ನಕ್ಷೆಯನ್ನು ರಚಿಸಿದವರು ಭಾರತವನ್ನು ಆಳುವವರಲ್ಲ. ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ವಾರಸುದಾರರು, ಅಮೆರಿಕದ ದೊಡ್ಡಣ್ಣಗಳು, ಐಎಂಎಫ್ ಮುಂತಾದ ಸಂಸ್ಥೆಗಳ ಒಡೆಯರು. ಬ್ಯಾಂಕುಗಳ ಕಾರ್ಮಿಕ ಸಂಘಟನೆಗಳು ಈ ಆರ್ಥಿಕ ಪ್ರಕ್ರಿಯೆಯ ವಿರುದ್ಧ ದಶಕಗಳ ಹಿಂದೆಯೇ ಹೋರಾಟ ಆರಂಭಿಸಬೇಕಿತ್ತು. ‘‘ಈ ಬ್ಯಾಂಕುಗಳು ನಿಮಗೆ ಸೇರಿದ್ದು ನಿಮಗಾಗಿಯೇ ಇವೆ ನಿಮ್ಮ ಏಳಿಗೆಗೆ ಇದು ಅವಶ್ಯ’’ ಎಂದು ಗ್ರಾಮೀಣ ಜನತೆಗೆ ಮನದಟ್ಟು ಮಾಡಬೇಕಿತ್ತು. ಆಗ ಬ್ಯಾಂಕ್ ರಾಷ್ಟ್ರೀಕರಣ ಮಹಾದ್ರೋಹ ಎಂದು ಹೇಳುವ ದಾರ್ಷ್ಟ್ಯ ನಮ್ಮ ಪ್ರಧಾನಮಂತ್ರಿಗಳಿಗೆ ಇರುತ್ತಿರಲಿಲ್ಲ. ಆದರೆ ಮಧ್ಯಮ ವರ್ಗ ಮನೋಭಾವದ ಸಂಘಟನೆಗಳು ಇದನ್ನು ಮನಗಾಣಲೇ ಇಲ್ಲ. ಜನತೆಯ ಬಳಿ ಹೋಗಲೇ ಇಲ್ಲ. ಘೋಷಣೆ, ಕರಪತ್ರ ಮತ್ತು ಮುಷ್ಕರಗಳಲ್ಲೇ ಎಲ್ಲವೂ ಮುಗಿದುಹೋಯಿತು.
ಈಗ ಶೋಕಾಚರಣೆ ಮಾತ್ರವೇ ನಮ್ಮ ಪಾಲಿಗೆ ಉಳಿದಿದೆ. ಬ್ಯಾಂಕಿಂಗ್ ಉದ್ಯಮ ಕಾರ್ಪೊರೇಟ್ ವಶವಾಗಲು ಇನ್ನಷ್ಟು ಕಾಲ ಹಿಡಿಯಬಹುದು ಆದರೆ ಇದು ಸಂಭವಿಸಿಯೇ ತೀರುವ ವಿದ್ಯಮಾನ. ಉರಿ, ಬಾಲಕೋಟ್, ಪುಲ್ವಾಮ, ಮಿಷನ್ ಶಕ್ತಿ ಈ ಸುರಕ್ಷತಾ ಸಾಧನಗಳನ್ನು ಧರಿಸಿ ಬಲಿಷ್ಠರಾಗಿದ್ದೇವೆ ಎಂದು ಬೀಗುವ ಮುನ್ನ ಆಂತರಿಕವಾಗಿ ನಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಯೋಚಿಸಿದಾಗ ವಿಜಯ ಬ್ಯಾಂಕ್ ನೆನಪಾಗುತ್ತದೆ. ಇದು ಒಂದು ಬ್ಯಾಂಕಿನ ಅಂತ್ಯವಲ್ಲ ಒಂದು ಪರ್ವದ ಅಂತ್ಯದ ಆರಂಭ.
ಕೊನೆಯ ಮಾತು: ಉನ್ಮತ್ತ ವಾತಾವರಣದಲ್ಲಿ ಕಳೆದುಕೊಳ್ಳುವುದು ಗಮನಕ್ಕೆ ಬರುವುದಿಲ್ಲ ಪಡೆದದ್ದು ಉಳಿಯುವುದೂ ಇಲ್ಲ.

Writer - ನಾ.ದಿವಾಕರ

contributor

Editor - ನಾ.ದಿವಾಕರ

contributor

Similar News

ಜಗದಗಲ
ಜಗ ದಗಲ