ನ್ಯೂಝಿಲ್ಯಾಂಡ್‌ನಿಂದ ಕಲಿಯಬೇಕಾಗಿದೆ ಪ್ರೀತಿ!

Update: 2019-04-02 18:31 GMT

ಭಯೋತ್ಪಾದಕ ದಾಳಿಯ ಒಂದು ವಾರದ ಬಳಿಕ ಶುಕ್ರವಾರದ ಪ್ರಾರ್ಥನಾ ಸಭೆಯಲ್ಲಿ ಇಮಾಮ್ ಗಮಾಲ್ ಫೌದಾ ಘೋಷಿಸಿದರು: ‘‘ನಮ್ಮ ಹೃದಯ ಭಗ್ನಗೊಂಡಿದೆ, ಆದರೆ ನಾವು ಭಗ್ನರಾಗಿಲ್ಲ. ನಾವು ಜೀವಂತವಾಗಿದ್ದೇವೆ, ನಾವು ಜೊತೆಯಾಗಿ ಒಗ್ಗಟ್ಟಿನಿಂದ ಇದ್ದೇವೆ, ಯಾರಿಂದಲೂ ನಮ್ಮನ್ನು ವಿಭಜಿಸಲು ನಾವು ಬಿಡಲಾರೆವು’’
ಅತ್ಯಂತ ದುಃಖದ ಒಂದು ಸಮಯದಲ್ಲಿ, ದ್ವೇಷ ಹಾಗೂ ಮತಾಂಧತೆಯಿಂದ ಜರ್ಜರಿತವಾಗಿರುವ ಪ್ರಪಂಚಕ್ಕೆ ಪ್ರೀತಿ ಮತ್ತು ಒಗ್ಗಟ್ಟು, ಏಕತೆ ಏನನ್ನೂ ಸಾಧಿಸಬಲ್ಲದೆಂಬುದನ್ನು ನ್ಯೂಝಿಲ್ಯಾಂಡ್ ಜಗತ್ತಿಗೆ ತೋರಿಸಿಕೊಟ್ಟಿದೆ.
ಒಗ್ಗಟ್ಟಿನ ಪ್ರದರ್ಶನ
ಶ್ರದ್ಧಾಂಜಲಿ ಸಭೆಯ ಮೊದಲು ನಡೆದ ಆಝಾನನ್ನು ನ್ಯೂಝಿಲ್ಯಾಂಡ್‌ನಾದ್ಯಂತ ಪ್ರಸಾರ ಮಾಡಲಾಯಿತು ಭಯೋತ್ಪಾದಕ ಪ್ರಾರ್ಥಿಸುತ್ತಿದ್ದವರನ್ನು ಹತ್ಯೆಗೈದಿದ್ದ. ಮಸೀದಿ ಹೊರಗಡೆ ಮತ್ತು ದೇಶಾದ್ಯಂತವಿರುವ ಮಸೀದಿಗಳ ಸುತ್ತಮುತ್ತ ಸಹಸ್ರಾರು ಮಂದಿ ಪುರುಷರು ಮಹಿಳೆಯರು ಮತ್ತು ಮಕ್ಕಳು ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಲು ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದರು. ನ್ಯೂಝಿಲ್ಯಾಂಡ್ ಪ್ರಧಾನಿ ಜಸಿಂದ ಆರ್ಡರ್ನ್ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು. ಪ್ರಾರ್ಥನೆ ಮುಗಿದ ಬಳಿಕ ಅವರು ಪ್ರವಾದಿ ಮುಹಮ್ಮದರ ಈ ಮಾತುಗಳನ್ನು ಉದ್ಧರಿಸಿದರು: ‘‘ಪ್ರವಾದಿ ಮುಹಮ್ಮದರ ಪ್ರಕಾರ.. ತಮ್ಮ ಕರುಣೆ ದಯೆ ಮತ್ತು ಅನುಕಂಪದಲ್ಲಿ ಆಸ್ತಿಕರು ಒಂದೇ ದೇಹದ ಹಾಗೆ. ದೇಹದ ಯಾವುದೇ ಒಂದು ಭಾಗಕ್ಕೆ ನೋವಾದಾಗ ಇಡೀ ದೇಹಕ್ಕೆ ನೋವಿನ ಅನುಭವವಾಗುತ್ತದೆ’’ ಆರ್ಡರ್ನ್ ಆ ಮೊದಲು ದುಃಖತಪ್ತ ಕುಟುಂಬಗಳ ಸದಸ್ಯರನ್ನು ಭೇಟಿಯಾದಾಗ ಅವರು ತನ್ನ ತಲೆಯನ್ನು ಒಂದು ಕಪ್ಪುದುಪ್ಪಟದಿಂದ ಮುಚ್ಚಿಕೊಂಡಿದ್ದರು. ಆ ಸದಸ್ಯರನ್ನು ಆಲಂಗಿಸುವಾಗ ಅವರ ಮುಖದಲ್ಲಿ ನೋವು ಪ್ರತಿಫಲಿತವಾಗುತ್ತಿತ್ತು. ಅವರ ಭಾವನೆಗಳಲ್ಲಿ, ದುಃಖದಲ್ಲಿ ತಾನೂ ಭಾಗಿ ಎಂಬುದನ್ನು ಅವರ ಮುಖಭಾವವೇ ಹೇಳುತ್ತಿತ್ತು.
ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಮುಸ್ಲಿಮರ ಮೇಲೆ ನಡೆದ ಬರ್ಬರ ಗುಂಪು ದಾಳಿಗಳಿಗೆ ಇಲ್ಲಿಯ ನಾಯಕರ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಇದಕ್ಕೆ ವಿರುದ್ಧವಾದ ಚಿತ್ರಣ ಕಾಣಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ದುಃಖತಪ್ತ ಕುಟುಂಬಗಳ ಸದಸ್ಯರನ್ನು ಯಾವತ್ತೂ ಒಮ್ಮೆ ಕೂಡ ಭೇಟಿಯಾಗಿಲ್ಲ ಮತ್ತು ಸಾರ್ವಜನಿಕ ಭಾಷಣವೊಂದರಲ್ಲಿ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕವಾಗಲಿ ತನ್ನ ಸಂತಾಪವನ್ನು ಅಭಿವ್ಯಕ್ತಿಸಲಿಲ್ಲ. ಪುಲ್ವಾಮ ದಾಳಿಯ ಬಳಿಕ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿದ್ದಾಗ ಜನರ ಹೃದಯದಲ್ಲಿ ಭುಗಿಲೆದ್ದ ಸಿಟ್ಟು ತನ್ನ ಹೃದಯದಲ್ಲೂ ಸುಡುತ್ತದೆ ಎಂದು ಅವರು ಹೇಳಿದರು. ಇದು ಪ್ರತೀಕಾರವನ್ನು ಪ್ರೋತ್ಸಾಹಿಸುವ ಒಂದು ಸ್ಪಷ್ಟ ಸಂದೇಶವಾಗಿತ್ತು.
 ಭಾರತದ ಜನಸಂಖ್ಯೆಯ ಶೇ.14ರಷ್ಟು ಮುಸ್ಲಿಮರಿದ್ದಾರೆ; ನ್ಯೂಝಿಲ್ಯಾಂಡ್‌ನಲ್ಲಿ ಅವರ ಸಂಖ್ಯೆ ಕೇವಲ ಶೇ. ಒಂದಕ್ಕಿಂತ ಸ್ವಲ್ಪಹೆಚ್ಚು. ಅವರಲ್ಲಿ ಬಹಳ ಜನ ವಲಸಿಗರಿರಬಹುದು ಅಥವಾ ನಿರಾಶ್ರಿತರಿರಬಹುದು ಎಂಬುದನ್ನು ಅರಿತ ಆರ್ಡರ್ನ್ ಹೇಳಿದರು: ‘‘ಅವರು ನಾವು, ಅವರೂ ನಮ್ಮವರೇ... ಆದರೆ ದುಷ್ಕರ್ಮಿ ನಮ್ಮವನಲ್ಲ’’. ತನ್ನ ಭಾರೀ ಮೌನಗಳ ಮೂಲಕ ಮೋದಿಯವರು ರವಾನಿಸುವ ಸಂದೇಶ ಇದಕ್ಕೆ ಸಂಪೂರ್ಣವಾಗಿ ವಿರೋಧವಾದ ಸಂದೇಶ. ಶತಮಾನಗಳಿಂದ ಈ ದೇಶದ ಒಂದು ಭಾಗವಾಗಿರುವ ಮುಸ್ಲಿಂ ‘‘ನಮ್ಮವರಲ್ಲಿ ಒಬ್ಬನಲ್ಲ. ಆದರೆ ಅವನ ವಿರುದ್ಧ ಹಿಂಸಾಕೃತ್ಯ ನಡೆಸುವ ನಮ್ಮವನೆಂದು ನಂಬುವ ಆರೆಸ್ಸೆಸ್‌ನ ಸಿದ್ಧಾಂತದಲ್ಲಿ ನಂಬಿಕೆ ಇರುವವರು ಮೋದಿ.’’
ಕಳೆದ ಹಲವು ತಿಂಗಳುಗಳಲ್ಲಿ ಭಾರತದ ಹದಿನೈದು ರಾಜ್ಯಗಳಲ್ಲಿ ನಾವು ಕ್ಯಾರವಾನ್-ಎ- ಮೊಹಬತ್‌ನ ಇಪ್ಪತ್ತೇಳು ಪ್ರಯಾಸಕರವಾದ ಪ್ರಯಾಣಗಳನ್ನು ಮಾಡಿದ್ದೇವೆ. ಪ್ರತಿಯೊಂದರಲ್ಲೂ ನಾವು ದ್ವೇಷ ಮತ್ತು ಹಿಂಸೆಯಿಂದ ಹತ್ಯೆಗೊಳಗಾದವರ ಕುಟುಂಬದ ಸದಸ್ಯರ ಮನೆಗಳಿಗೆ ಹೋಗಿದ್ದೇವೆ. ಅವರನ್ನು ಭೇಟಿ ಮಾಡುವುದರಿಂದ ಅವರಿಗೆ ಎಷ್ಟು ಸಾಂತ್ವನ ಸಿಗುತ್ತದೆ ಎಂಬುದನ್ನು ಕಂಡುಕೊಂಡಿದ್ದೇವೆ. ಪರಸ್ಪರ ಆಲಂಗಿಸಿ ಕೈ ಹಿಡಿದುಕೊಳ್ಳುವಾಗ ಅವರು ಅತ್ತಿದ್ದಾರೆ. ನಮ್ಮ ಕಣ್ಣುಗಳು ತೇವಗೊಂಡಿವೆ. ಹೀಗೆ ಅವರ ಬಳಿ ಬಂದು ಸಾಂತ್ವನ ಹೇಳಿದವರು ನಾವೇ ಮೊದಲಿಗರು ಎಂದು ಅವರು ಹೇಳುತ್ತಾರೆ. ಕ್ರೈಸ್ಟ್‌ಚರ್ಚ್‌ಲ್ಲಿ ಆರ್ಡರ್ನ್ ಮಾಡಿದ್ದು ಇದನ್ನೇ. ಅಲ್ಲದೆ ದುಃಖತಪ್ತ ರಿಗೆ ಗೌರವ ಸೂಚಕವಾಗಿ ಅವರು ದುಪ್ಪಟ್ಟ ಧರಿಸಿದ್ದನ್ನು ಗಮನಿಸಿ ಅವರನ್ನು ಕಂಡು ಸ್ಫೂರ್ತಿ ಪಡೆದ ಸಾವಿರಾರು ಮಂದಿ ಸುದ್ದಿ ವಾಚಕರು, ಮಹಿಳಾ ಪೊಲೀಸರು, ಜನಸಾಮಾನ್ಯರು ತಮ್ಮ ತಲೆಯನ್ನು ಹಿಜಾಬ್‌ನಿಂದ ಮುಚ್ಚಿಕೊಂಡರು. ಆರ್ಡರ್ನ್ ಕೊಲೆಗಾರನ ದ್ವೇಷ ಪ್ರಚಾರವಾಗಲಿ ಆತನ ಕೃತ್ಯದ ನೇರ ಪ್ರಸಾರವಾಗಲಿ ಪ್ರಸಾರವಾಗದಂತೆ ಕ್ರಮ ತೆಗೆದುಕೊಂಡರು. ಆತನ ಹೆಸರನ್ನು ಸಾರ್ವಜನಿಕವಾಗಿ ನಾನೆಂದೂ ಹೇಳಲಾರೆ ಎಂದು ಪ್ರತಿಜ್ಞೆ ಮಾಡಿದರು. ತನ್ನ ದೇಶದ ಮುಸ್ಲಿಂ ಸಮುದಾಯದವರ ಬಗ್ಗೆ ಪ್ರಧಾನಿ ಆರ್ಡರ್ನ್ ವ್ಯಕ್ತಪಡಿಸಿದ ಒಗ್ಗಟ್ಟಿನ ಭಾವನೆಗೆ ಮೆಚ್ಚುಗೆ ಸೂಚಕವಾಗಿ ದುಬೈ ಸರಕಾರವು ಅಲ್ಲಿಯ ಪ್ರಸಿದ್ಧ ಬುರ್ಜ್ ಖಲೀಫಾ ಕಟ್ಟಡದಲ್ಲಿ ಅವರ ಚಿತ್ರದ ಮೇಲೆ ಬೆಳಕು ಹಾಯಿಸಿತು.
 ನ್ಯೂಝಿಲ್ಯಾಂಡ್ ಆಸ್ಟ್ರೇಲಿಯಾ ಮತ್ತು ಪಾಶ್ಚಾತ್ಯ ಜಗತ್ತಿನ ಹಲವು ದೇಶಗಳ ಕ್ರಿಶ್ಚಿಯನ್ ಮತ್ತು ಯಹೂದಿಗಳು ಮುಸ್ಲಿಂ ಸಮುದಾಯದವರೊಂದಿಗೆ ತಾವು ಇದ್ದೇವೆ ಎಂದು ಘೋಷಿಸಿದರು. ಮಸೀದಿಗಳಲ್ಲಿ ನಡೆದ ಜಂಟಿ ಪ್ರಾರ್ಥನೆಗಳಲ್ಲಿ ಭಾಗವಹಿಸಿದರು. ಗೋಲ್ಡ್ ಕೋಸ್ಟ್‌ನ ನ್ಯೂಲೈಫ್ ಚರ್ಚ್ ಪಾದ್ರಿ ಷ್ಟೂ ಕ್ಯಾಮೆರಾನ್ ಹೇಳಿದರು: ಇತರರು (ನೆರೆಕರೆಯವರು) ಅಳುತ್ತಿರುವಾಗ ಒಳ್ಳೆಯ ನೆರೆಕರೆಯವರು ಕೂಡ ಯಾವಾಗಲೂ ಅಳುತ್ತಾರೆ. ಇತರರಿಗೆ ಅಭದ್ರತೆ ಕಾಡಿದಾಗ ಅವರ ಜೊತೆ ಒಂದಾಗಿ ನಿಲ್ಲುತ್ತಾರೆ. ನ್ಯೂಝಿಲ್ಯಾಂಡ್‌ನ ಗುರುದ್ವಾರಗಳು ಸಂತ್ರಸ್ತರ ಕುಟುಂಬಗಳಿಗೆ ಆಶ್ರಯ ನೀಡಿದವು. ಆದರೆ ಭಾರತದಲ್ಲಿ ಮೃಗೀಯ ದ್ವೇಷ ದಾಳಿಗಳು ನಡೆದಾಗ ಧಾರ್ಮಿಕ ನಾಯಕರು ಇಂತಹ ಪ್ರೀತಿ ಮಮತೆಯನ್ನು ತೋರಿದ ಉದಾಹರಣೆಗಳಿಲ್ಲ. ದೇಶಾದ್ಯಂತ ನಮ್ಮ ಸಹೋದರ ಸಹೋದರಿಯರನ್ನು ದ್ವೇಷ ಹಿಂಸೆ ಬಲಿ ತೆಗೆದುಕೊಂಡಾಗ ನಾವು ಭಗ್ನ ಹೃದಯಗಳಾಗುವುದಿಲ್ಲ. ಇದೇ ನಮ್ಮ ನಾಗರಿಕತೆಯ ಬಿಕ್ಕಟ್ಟು. ನಾವು ಕೇರ್ ಮಾಡುವುದೇ ಇಲ್ಲ. ನಿಜ ಹೇಳಬೇಕೆಂದರೆ ನಮ್ಮಲ್ಲಿ ಕೆಲವರು ದ್ವೇಷ ದಾಳಿಯನ್ನು ಸಮರ್ಥಿಸುತ್ತೇವೆ. ಜನತೆಯಾಗಿ ನಾವು ಹೀಗೆ ಭಗ್ನಗೊಂಡಿದ್ದೇವೆ.
ಕೃಪೆ: thehindu.com

Writer - ಹರ್ಷ ಮಂದರ್

contributor

Editor - ಹರ್ಷ ಮಂದರ್

contributor

Similar News

ಜಗದಗಲ
ಜಗ ದಗಲ