ಕೇಂದ್ರ ವಿವಿಗಳಲ್ಲಿ ನೇಮಕಾತಿ ಪ್ರಕ್ರಿಯೆ: ಚುನಾವಣಾ ಆಯೋಗದ ಅನುಮತಿ ಕೇಳಿದ ಇಲಾಖೆ

Update: 2019-04-03 17:12 GMT

ಹೊಸದಿಲ್ಲಿ, ಎ.3: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಕೇಂದ್ರ ವಿಶ್ವವಿದ್ಯಾನಿಲಯಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಚುನಾವಣಾ ಆಯೋಗದ ಅನುಮತಿ ಕೇಳಿದೆ.

2019ರ ಜೂನ್‌ನಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ನೇಮಿಸಬೇಕೆಂದು ಯುಜಿಸಿ ಆದೇಶಿಸಿರುವುದರಿಂದ, ಕೇಂದ್ರ ವಿವಿಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಲು ಚುನಾವಣಾ ಆಯೋಗ ಅನುಮತಿ ನೀಡಬೇಕು ಎಂದು ಸಚಿವಾಲಯ ಆಯೋಗಕ್ಕೆ ಎಪ್ರಿಲ್ 1ರಂದು ಪತ್ರ ಬರೆದಿದೆ.

ಅಲಹಾಬಾದ್ ಹೈಕೋರ್ಟ್ 2017ರಲ್ಲಿ ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ವಿವಿಗಳಲ್ಲಿ ಬೋಧಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿತ್ತು. ವಿಭಾಗಗಳ ಬದಲು ವಿವಿ/ಕಾಲೇಜುಗಳನ್ನು ಮೀಸಲು ರೋಸ್ಟರ್ ಅಂಕ ನಿರ್ಧರಿಸುವ ಕೇಡರ್ ಅಥವಾ ಘಟಕ ಎಂದು ನಿರ್ಧರಿಸಬೇಕು ಎಂಬ ಯುಜಿಸಿ ಮಾರ್ಗದರ್ಶಿ ಸೂತ್ರವನ್ನು ನ್ಯಾಯಾಲಯ ತಳ್ಳಿಹಾಕಿತ್ತು. ಈ ಆದೇಶವನ್ನು ಪ್ರಶ್ನಿಸಿ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು. 2018ರ ನವೆಂಬರ್ 1ಕ್ಕೆ ಅನ್ವಯಿಸುವಂತೆ 40 ಕೇಂದ್ರ ವಿವಿಗಳಲ್ಲಿ ಮಂಜೂರಾಗಿರುವ 17,425 ಹುದ್ದೆಗಳಲ್ಲಿ 6,141 ಹುದ್ದೆ ಖಾಲಿಯಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಬೋಧನಾ ಮಟ್ಟ ಸುಧಾರಿಸುವ ಹಾಗೂ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗಬಾರದೆಂಬ ಕಾರಣದಿಂದ ನೇಮಕಾತಿ ಪ್ರಕ್ರಿಯೆ ಆರಂಭಿಸುವುದು ಅಗತ್ಯವಾಗಿದೆ ಎಂದು ಸಚಿವಾಲಯದ ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News