ದೇಶದ ಅತ್ಯಂತ ಬಡ ಹಾಗೂ ಶ್ರೀಮಂತ ಸಂಸದರು ಯಾರು ಗೊತ್ತೇ?

Update: 2019-04-04 04:30 GMT

ಹೊಸದಿಲ್ಲಿ, ಎ.4: ರಾಜಸ್ಥಾನದ ಸಿಕರ್ ಕ್ಷೇತ್ರದ ಸಂಸದ ಸುಮೇಧಾನಂದ ಸರಸ್ವತಿ, ದೇಶದ ಅತ್ಯಂತ ಬಡ ಸಂಸದ ಎನಿಸಿಕೊಂಡಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ ಕೇವಲ 34,311 ರೂಪಾಯಿ. ಇನ್ನೊಂದೆಡೆ, ಒಂದೇ ವರ್ಷದಲ್ಲಿ 16.85 ಕೋಟಿ ರೂ. ಆದಾಯ ಹೊಂದಿರುವ ಆಂಧ್ರಪ್ರದೇಶದ ಗುಂಟೂರು ಕ್ಷೇತ್ರದ ಸಂಸದ ಜಯದೇವ್ ಗಲ್ಲಾ ಅತ್ಯಂತ ಶ್ರೀಮಂತ ಸಂಸದ.

521 ಸಂಸದರ ಪೈಕಿ 479 ಮಂದಿ ಕಳೆದ ಬಾರಿಯ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿತ್‌ಗಳನ್ನು ಎಡಿಆರ್ ವಿಶ್ಲೇಷಣೆಗೆ ಒಳಪಡಿಸಿದಾಗ ಇಂಥ ಕೆಲ ಕುತೂಹಲಕರ ಮಾಹಿತಿ ತಿಳಿದುಬಂದಿದೆ. ಒಬ್ಬ ಸಂಸದ ಅನಕ್ಷರಸ್ಥನಾಗಿದ್ದರೆ, ಆರು ಮಂದಿ ಐದನೇ ತರಗತಿವರೆಗೆ ಮಾತ್ರ ಓದಿದ್ದಾರೆ. ಎಂಟು ಮಂದಿ 8ನೇ ಕ್ಲಾಸ್ ಬಳಿಕ ಶಿಕ್ಷಣಕ್ಕೆ ಗುಡ್‌ಬೈ ಹೇಳಿದ್ದಾರೆ.

ಐದನೇ ತರಗತಿ ಬಳಿಕ ಶಾಲೆ ಬಿಟ್ಟ ಸಂಸದರೆಂದರೆ ಉತ್ತರ ಪ್ರದೇಶದ ಅಮ್ರೋಹಾ ಸಂಸದ ಕನ್ವರ್ ಸಿಂಗ್ ತನ್ವರ್ (ಬಿಜೆಪಿ), ದಾದ್ರಾ ಮತ್ತು ನಗರ ಹವೇಲಿ ಸಂಸದ ನಾತೂಭಾಯ್ ಜಿ. ಪಟೇಲ್ (ಬಿಜೆಪಿ), ಉತ್ತರ ಮುಂಬೈ ಸಂಸದ ಗೋಪಾಲ ಚಿನ್ನಯ್ಯ ಶೆಟ್ಟಿ (ಬಿಜೆಪಿ), ರಾಜಮಹಲ್ ಸಂಸದ ವಿಜಯಕುಮಾರ್ ಹಂಸದಾಕ್ (ಜೆಎಂಎಂ) ಮತ್ತು ರಾಬರ್ಟ್ಸ್‌ಗಂಜ್ ಸಂಸದ ಚೋಟೆಲಾಲ್ (ಬಿಜೆಪಿ). ಝಾನ್ಸಿ ಸಂಸದೆ ಮತ್ತು ಕೇಂದ್ರ ಸಚಿವೆ ಉಮಾಭಾರತಿ ಕೂಡ ಈ ಪಟ್ಟಿಯಲ್ಲಿದ್ದಾರೆ.

ಆಂಧ್ರ ಪ್ರದೇಶದ ಅನಕಪಲ್ಲೆ ಕ್ಷೇತ್ರದ ಮುತ್ತಂಸೆಟ್ಟಿ ಶ್ರೀನಿವಾಸ ರಾವ್ (47) ಅನಕ್ಷರಸ್ಥ ಎಂದು ಘೋಷಿಸಿಕೊಂಡಿದ್ದಾರೆ. ಇವರ ವಾರ್ಷಿಕ ಆದಾಯ 75 ಲಕ್ಷ ರೂಪಾಯಿ. ಐದನೇ ತರಗತಿವರೆಗೆ ಓದಿರುವ ಸಂಸದರ ಪೈಕಿ ತನ್ವರ್ ಅವರ ವಾರ್ಷಿಕ ಆದಾಯ 8.15 ಕೋಟಿ ರೂಪಾಯಿ.

ಒಟ್ಟು 42 ಸಂಸದರು ಹೈಸ್ಕೂಲ್ ಶಿಕ್ಷಣ ಪೂರ್ಣಗೊಳಿಸಿದ್ದರೆ, 48 ಸಂಸದರು 8ನೇ ತರಗತಿಯವರೆಗೆ ಓದಿದ್ದಾರೆ. 92 ಮಂದಿ ಪದವೀಧರರು, 134 ಮಂದಿ ಸ್ನಾತಕೋತ್ತರ ಪದವೀಧರರು ಮತ್ತು 30 ಮಂದಿ ಡಾಕ್ಟರೇಟ್ ಪದವಿ ಪಡೆದವರು ಸಂಸದರಾಗಿದ್ದಾರೆ. ಕುತೂಹಲದ ಅಂಶವೆಂದರೆ ಪದವೀಧರ ಸಂಸದರ ವಾರ್ಷಿಕ ಆದಾಯ ಸರಾಸರಿ 41 ಲಕ್ಷ ಆಗಿದ್ದರೆ, 5ನೇ ತರಗತಿವರೆಗೆ ಓದಿರುವ ಸಂಸದರ ವಾರ್ಷಿಕ ಆದಾಯ ಸರಾಸರಿ 1.41 ಕೋಟಿ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News