ಜಗತ್ತಿನ ಕಾಲು ಭಾಗ ಆರೋಗ್ಯ ಕೇಂದ್ರಗಳಲ್ಲಿ ನೀರಿಲ್ಲ: ವಿಶ್ವಸಂಸ್ಥೆ

Update: 2019-04-04 17:46 GMT

ಸ್ವಚ್ಛತೆಯಿಲ್ಲದ ಹೆರಿಗೆಗಳಿಂದ ಪ್ರತಿ ವರ್ಷ 10 ಲಕ್ಷಕ್ಕೂ ಅಧಿಕ ಸಾವು

ಲಂಡನ್, ಎ. 4: ಜಗತ್ತಿನ ಕಾಲು ಭಾಗ ಆರೋಗ್ಯ ಸಂಸ್ಥೆಗಳಲ್ಲಿ ಮೂಲಭೂತ ನೀರಿನ ಸೌಕರ್ಯಗಳ ಕೊರತೆಯಿದ್ದು, ಸುಮಾರು 200 ಕೋಟಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದೆ. ಸ್ವಚ್ಛತೆರಹಿತ ಪರಿಸರದಿಂದಾಗಿ ಜಾಗತಿಕ ಮಟ್ಟದಲ್ಲಿ ಮಾರಕ ವೈರಸ್‌ಗಳು ಕಾಣಿಸಿಕೊಳ್ಳಬಹುದು ಎಂಬ ಆತಂಕವನ್ನು ಅದು ವ್ಯಕ್ತಪಡಿಸಿದೆ.

 ಬಡ ದೇಶಗಳಲ್ಲಿ, ಸುಮಾರು ಅರ್ಧದಷ್ಟು ಆರೋಗ್ಯ ಸಂಸ್ಥೆಗಳಲ್ಲಿ ಮೂಲಭೂತ ನೀರಿನ ಸೌಕರ್ಯಗಳಿಲ್ಲ. ಹಾಗಾಗಿ, ಆಗಷ್ಟೇ ಮಕ್ಕಳನ್ನು ಹೆತ್ತ ತಾಯಂದಿರು ಮತ್ತು ನವಜಾತ ಶಿಶುಗಳು ಅಪಾಯಕ್ಕೆ ಗುರಿಯಾಗುತ್ತಿದ್ದಾರೆ ಎಂಬುದಾಗಿ ನೂತನ ಅಂಕಿಸಂಖ್ಯೆಗಳು ಹೇಳಿವೆ.

ಸ್ವಚ್ಛತೆಯಿಲ್ಲದ ಹೆರಿಗೆಗಳಿಂದಾಗಿ ಪ್ರತಿ ವರ್ಷ 10 ಲಕ್ಷಕ್ಕೂ ಅಧಿಕ ಮಂದಿ ಸಾಯುತ್ತಿದ್ದಾರೆ ಹಾಗೂ ಆರೋಗ್ಯ ಸಂಸ್ಥೆಯೊಂದಕ್ಕೆ ಭೇಟಿ ನೀಡುವ ರೋಗಿಗಳ ಪೈಕಿ 15 ಶೇಕಡ ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಮತ್ತು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಹೇಳಿವೆ.

‘‘ಎಲ್ಲ ಆಸ್ಪತ್ರೆಗಳು ಕಾಯಿಲೆಗಳನ್ನು ಗುಣಪಡಿಸುವ ಚಿಕಿತ್ಸಾ ಕೇಂದ್ರಗಳಾಗಿರಬೇಕೆಂದೇನೂ ಇಲ್ಲ, ಆದರೆ, ಅವುಗಳು ಬಹುತೇಕ ಸೋಂಕುಗಳನ್ನು ಹರಡುವ ಕೇಂದ್ರಗಳಾಗಿವೆ. ನಾವು ಇದರಿಂದ ಚಿಂತಿತರಾಗಿದ್ದೇವೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಾರ್ವಜನಿಕ ಆರೋಗ್ಯ ಸಂಯೋಜಕ ಬ್ರೂಸ್ ಗಾರ್ಡನ್ ಹೇಳುತ್ತಾರೆ.

5ರಲ್ಲಿ ಒಂದು ಆರೋಗ್ಯ ಕೇಂದ್ರದಲ್ಲಿ ನೀರಿಲ್ಲ

ಜಾಗತಿಕವಾಗಿ, ಸುಮಾರು 90 ಕೋಟಿ ಜನರ ವ್ಯಾಪ್ತಿ ಹೊಂದಿರುವ ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ನೀರೇ ಇಲ್ಲ ಅಥವಾ ಅಸುರಕ್ಷಿತ ಬಾವಿಗಳು ಅಥವಾ ತೊರೆಗಳನ್ನು ಆಶ್ರಯಿಸಬೇಕಾಗಿದೆ. ಐದು ಆರೋಗ್ಯ ಕೇಂದ್ರಗಳ ಪೈಕಿ ಒಂದರಲ್ಲಿ ಶೌಚಾಲಯಗಳಿಲ್ಲ. ಇದರಿಂದಾಗಿ 150 ಕೋಟಿ ಜನರು ತೊಂದರೆಗೀಡಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಮಕ್ಕಳ ನಿಧಿ ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News