ನಮ್ಮ ಪೈಲಟ್‌ಗಳ ಪ್ರಯತ್ನಗಳ ಬಗ್ಗೆ ಅಭಿಮಾನ ಹೊಂದಿದ್ದೇವೆ: ಇಥಿಯೋಪಿಯನ್ ಏರ್‌ಲೈನ್ಸ್ ಮುಖ್ಯಸ್ಥ

Update: 2019-04-04 18:06 GMT

ಅಡಿಸ್ ಅಬಾಬ (ಇಥಿಯೋಪಿಯ), ಎ. 4: ಇಥಿಯೋಪಿಯನ್ ಏರ್‌ಲೈನ್ಸ್ ಸಂಸ್ಥೆಗೆ ಸೇರಿದ ವಿಮಾನವು ಪತನಗೊಳ್ಳದಂತೆ ತಡೆಯಲು ಪೈಲಟ್‌ಗಳು ನಡೆಸಿರುವ ಪ್ರಯತ್ನಗಳ ಬಗ್ಗೆ ನಾವು ಅಭಿಮಾನ ಪಡುತ್ತೇವೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟೆವೋಲ್ಡೆ ಗೆಬ್ರೆಮರಿಯಮ್ ಹೇಳಿದ್ದಾರೆ.

ಮಾರ್ಚ್ 10ರಂದು ಬೋಯಿಂಗ್ ಸಂಸ್ಥೆಯ 737 ಮ್ಯಾಕ್ಸ್ 8 ವಿಮಾನ ಇಥಿಯೋಪಿಯ ರಾಜಧಾನಿ ಅಡಿಸ್ ಅಬಾಬದ ಹೊರವಲಯದಲ್ಲಿ ಪತನಗೊಂಡು ಅದರಲ್ಲಿದ್ದ ಎಲ್ಲ 157 ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.

‘‘ಅಪಘಾತದ ಸಂದರ್ಭದಲ್ಲಿ ಅನುಸರಿಸಬೇಕಾದ ತುರ್ತು ವಿಧಾನಗಳನ್ನು ನಮ್ಮ ಪೈಲಟ್‌ಗಳು ಅನುಸರಿಸಿದ್ದಾರೆ. ಅಂಥ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಅತ್ಯುನ್ನತ ಮಟ್ಟದ ವೃತ್ತಿಪರ ನಿರ್ವಹಣೆಯನ್ನು ತೋರಿಸಿದ್ದಾರೆ. ನಮ್ಮ ಪೈಲಟ್‌ಗಳ ಬಗ್ಗೆ ನಾವು ಅಭಿಮಾನ ಹೊಂದಿದ್ದೇವೆ’’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ನಮ್ಮ ಪ್ರೀತಿಪಾತ್ರರ ಸಾವಿಗೆ ನಾವೀಗಲೂ ಶೋಕಾಚರಣೆ ಮಾಡುತ್ತಿದ್ದೇವೆ ಹಾಗೂ ಸಂತ್ರಸ್ತರ ಕುಟುಂಬ ಸದಸ್ಯರು, ಸಂಬಂಧಿಗಳು ಮತ್ತು ಸ್ನೇಹಿತರಿಗೆ ಸಹಾನುಭೂತಿ ಮತ್ತು ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ’’ ಎಂದು ಅವರು ಹೇಳಿದ್ದಾರೆ.

ಪೈಲಟ್‌ಗಳು ಎಲ್ಲ ವಿಧಾನಗಳನ್ನು ಅನುಸರಿಸಿದ್ದಾರೆ: ಇಥಿಯೋಪಿಯ ಸಾರಿಗೆ ಸಚಿವೆ

 ಕಳೆದ ತಿಂಗಳು ಪತನಗೊಂಡ ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನದ ಸಿಬ್ಬಂದಿ ವಿಮಾನವನ್ನು ಸರಿದಾರಿಗೆ ತರಲು, ತಯಾರಕ ಸಂಸ್ಥೆ ಬೋಯಿಂಗ್ ಶಿಫಾರಸು ಮಾಡಿರುವ ಎಲ್ಲ ವಿಧಾನಗಳನ್ನು ಪದೇ ಪದೇ ಅನುಸರಿಸಿದ್ದಾರೆ, ಆದರೆ ವಿಮಾನದ ಮೇಲಿನ ನಿಯಂತ್ರಣವನ್ನು ಮರಳಿ ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಇಥಿಯೋಪಿಯದ ಸಾರಿಗೆ ಸಚಿವೆ ಡಾಗ್ಮವಿಟ್ ಮೋಜಸ್ ಗುರುವಾರ ಹೇಳಿದರು.

ಅಪಘಾತದ ಕುರಿತ ಪ್ರಾಥಮಿಕ ತನಿಖಾ ವರದಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ವಿಮಾನದ ಹಾರಾಟ ನಿಯಂತ್ರಣ ವ್ಯವಸ್ಥೆಯನ್ನು ತಯಾರಕ ಸಂಸ್ಥೆಯು ಮರುಪರಿಶೀಲಿಸಬೇಕು ಎಂಬುದಾಗಿ ವರದಿಯು ಶಿಫಾರಸು ಮಾಡಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News