ಶಾಂತವೇರಿ ಗೋಪಾಲಗೌಡರ ನಾಲ್ಕು ಚುನಾವಣೆಗಳು: ಗೆಲುವು, ಸೋಲು, ಗೆಲುವು...

Update: 2019-04-04 18:34 GMT

ಸದ್ಯದಲ್ಲೇ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಮತದಾರರಲ್ಲಿ ಓಟಿನ ಜೊತೆಗೆ ನೋಟನ್ನೂ ಕೇಳಿದರು. 1952ರಲ್ಲಿ ಕರ್ನಾಟಕದಲ್ಲಿ ಸಮಾಜವಾದಿ ಪಕ್ಷದಿಂದ ಪ್ರಥಮ ಮಹಾಚುನಾವಣೆಗೆ ಸ್ಪರ್ಧಿಸಿದ್ದ ಶಾಂತವೇರಿ ಗೋಪಾಲಗೌಡರು ಈ ಪ್ರಯೋಗವನ್ನು ತಮ್ಮ ನಾಲ್ಕ್ಕು ಚುನಾವಣೆಗಳಲ್ಲೂ ಮಾಡಿದ್ದರು. ಶಾಂತವೇರಿಯವರು ಸ್ಪರ್ಧಿಸಿದ್ದ ನಾಲ್ಕು ಚುನಾವಣೆಗಳ ಅಪರೂಪದ ಕತೆ ಹೇಳುವ ಬರಹ...

ಐದು ವರ್ಷಗಳ ಕೆಳಗೆ ಶಾಂತವೇರಿ ಗೋಪಾಲಗೌಡರ ಜೀವನಚರಿತ್ರೆ ಬರೆಯಲು ತೀರ್ಥಹಳ್ಳಿಯ ಸುತ್ತಮುತ್ತ ಓಡಾಡತೊಡಗಿದಾಗ ಗೋಪಾಲಗೌಡರು ಭಾಗವಹಿಸಿದ್ದ ರಾಜ್ಯ ವಿಧಾನಸಭಾ ಚುನಾವಣೆಗಳ ಹುರುಪನ್ನು ಇನ್ನೂ ನೆನಸಿಕೊಳ್ಳುತ್ತಿದ್ದ ಹಿರಿಯರು ಸಿಕ್ಕರು. ಒಬ್ಬರಂತೂ ‘‘ಗೋಪಾಲಗೌಡ್ರು ಹೋದ ಮೇಲೆ ನಾನು ಯಾರಿಗೂ ವೋಟೇ ಹಾಕಿಲ್ಲ’’ ಅಂದರು. ಅಲ್ಲಿ ಸುತ್ತಿದಾಗ ಕಿವಿಗೆ ಬಿದ್ದ ಕತೆಗಳು, ಅನುಭವಗಳು ಹಾಗೂ ಗೋಪಾಲಗೌಡರ ಸಮಕಾಲೀನರ ಬರಹಗಳ ಮೂಲಕ ರೂಪುಗೊಂಡ ಅವರ ಒಟ್ಟು ಚುನಾವಣಾ ರಾಜಕಾರಣದ ಚಿತ್ರಗಳು ಇಲ್ಲಿವೆ:
ಚುನಾವಣೆ 1: ಕಾಗೋಡು ಗೇಣಿದಾರರ ಹೋರಾಟದಿಂದ ಚುನಾವಣಾ ರಾಜಕಾರಣಕ್ಕೆ
ಹೈಸ್ಕೂಲ್ ಹುಡುಗನಾಗಿದ್ದಾಗಲೇ ಸ್ವಾತಂತ್ರ್ಯ ಚಳವಳಿಗೆ ಧುಮುಕಿ ತರುಣ ನಾಯಕನಾಗಿ ರೂಪುಗೊಂಡ ಶಾಂತವೇರಿ ಗೋಪಾಲಗೌಡರು ಕಾಗೋಡು ಗೇಣಿ ಹೋರಾಟದ ನಂತರ ದೊಡ್ಡ ಸಮಾಜವಾದಿ ನಾಯಕನಾಗಿ ಬೆಳೆಯತೊಡಗಿದ್ದರು. ತಮ್ಮ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ, 1952ರಲ್ಲಿ, ಆಗಿನ ಮೈಸೂರು ರಾಜ್ಯದ ಪ್ರಥಮ ಮಹಾ ಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾದರು. ಶಿವಮೊಗ್ಗ ಜಿಲ್ಲೆಯ ಸಾಗರ-ಹೊಸನಗರ ಕ್ಷೇತ್ರದಲ್ಲಿ ಗೋಪಾಲಗೌಡರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಪಕ್ಷದಿಂದ ಆಗರ್ಭ ಶ್ರೀಮಂತರಾದ ಎ. ಆರ್. ಬದರಿ ನಾರಾಯಣ್ ಅಯ್ಯಂಗಾರ್ ನಿಂತಿದ್ದರು. ‘‘ಅವರಿಗೆ ಎಷ್ಟಾದರೂ ಹಣ ಚೆಲ್ಲುವ ಚೈತನ್ಯವಿತ್ತು. ಜಮೀನ್ದಾರರ, ಕಾಂಗ್ರೆಸ್‌ನ ಸಂಪೂರ್ಣ ಬೆಂಬಲ ಅವರಿಗಿತ್ತು. ಆದರೆ ಗೋಪಾಲಗೌಡರಿಗೆ ಹಣವೊಂದನ್ನು ಬಿಟ್ಟು ಉಳಿದೆಲ್ಲ ಬಂಡವಾಳವೂ ಇತ್ತು. 250 ರೂಪಾಯಿ ಠೇವಣಿ ಹಣವನ್ನು ಕೂಡ ಸ್ನೇಹಿತರಿಂದ ಸಂಗ್ರಹ ಮಾಡಿ ಕಟ್ಟಲಾಗಿತ್ತು. ಶ್ರೀಸಾಮಾನ್ಯರು, ಬಡಗೇಣಿ ದಾರರು, ಕೂಲಿಕಾರರು, ಮಧ್ಯಮವರ್ಗದ ಜನತೆ ಜಾತಿಮತ ಭೇದವಿಲ್ಲದೆ ಗೌಡರ ಚುನಾವಣಾ ಪ್ರಚಾರಕ್ಕೆ ಮುಂದಾದರು. ಕರಪತ್ರ ಮತ್ತು ವಾಲ್‌ಪೋಸ್ಟರ್ ಅಚ್ಚು ಹಾಕಿಸಿ, ಕಾರ್ಯಕರ್ತರುಗಳಿಗೆ ಮುಟ್ಟಿಸುವಷ್ಟು ಶಕ್ತಿಸಾಮರ್ಥ್ಯದ ಹಣಕಾಸಿನ ವ್ಯವಸ್ಥೆ ಸಹ ಸಮಾಜವಾದಿ ಪಕ್ಷಕ್ಕಿರಲಿಲ್ಲ. ಗೌಡರು ಮತ್ತು ಪಕ್ಷದ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಮನೆಮನೆಗೆ ಹೋಗಿ ಮತ ಕೇಳುತ್ತಾ, ಸ್ವಲ್ಪ ಅನುಕೂಲಸ್ಥರ ಹತ್ತಿರ ಸ್ವಲ್ಪಹಣವನ್ನು ಸಂಗ್ರಹ ಮಾಡುತ್ತಾ ಪ್ರಚಾರ ಸಾಗುತ್ತಿತ್ತು.’’
ಗೋಪಾಲಗೌಡರ ಪ್ರಚಾರ ಸರಳವಾಗಿತ್ತು: ಸಮಾಜವಾದಿ ಪಕ್ಷದ ಚುನಾವಣಾ ಪ್ರಣಾಳಿಕೆಯ ಅಂಶಗಳನ್ನು ಜನರಿಗೆ ಮನ ಮುಟ್ಟುವಂತೆ ಹೇಳುವುದು; ಜನರ ಸಮಸ್ಯೆಗಳನ್ನು ಬಿಡಿಸಿಟ್ಟು ಭಾಷಣ ಮಾಡುವುದು; ‘‘ನೀವು ಜಾತಿ ನೋಡಿ ಮತ ಕೊಟ್ಟರೆ ಅದು ನನಗೆ ಬೇಡ’’ ಎಂದು ನೇರವಾಗಿ ಮತದಾರರಿಗೆ ಹೇಳುವುದು; ಎದುರಾಳಿ ಬದರಿನಾರಾಯಣರ ವಿರುದ್ಧ ಕೂಡ ಲಘುವಾಗಿ ಮಾತಾಡದೆ, ಅವರ ವಿರುದ್ಧ ತಾತ್ವಿಕವಾದ ಟೀಕೆಗಳನ್ನಷ್ಟೇ ಮಾಡುವುದು; ಊರಿಂದ ಊರಿಗೆ ಬಹುತೇಕ ಕಾಲುನಡಿಗೆಯಲ್ಲೋ ಬಸ್ಸಿನಲ್ಲೋ ಪ್ರಯಾಣ ಮಾಡುವುದು; ಮತದಾರರ ಮನೆಯಲ್ಲಿ ಊಟ ತಿಂಡಿ ಮಾಡಿ ಮುಂದಕ್ಕೆ ಹೋಗುವುದು; ಚುನಾವಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಮಿತಿಯೇ ಹಣ ಸಂಗ್ರಹಣೆ, ಲೆಕ್ಕ, ಖರ್ಚು ಎಲ್ಲವನ್ನೂ ನೋಡಿಕೊಳ್ಳುವುದು... ಗೌಡರ ಈ ಚುನಾವಣೆಯ ವೆಚ್ಚ ಐದು ಸಾವಿರ ಮೀರಿರಲಿಲ್ಲ. ಗೌಡರು ಅಧಿವೇಶನದಲ್ಲಿ ಬರುತ್ತಿದ್ದ ದಿನಭತ್ತೆ ಹಾಗೂ ಪ್ರಯಾಣ ಭತ್ತೆಯಲ್ಲಿ ಉಳಿಸಿದ್ದ ಹಣದಿಂದ ಸುಮಾರು ಎರಡು ಸಾವಿರ ರೂಪಾಯಿ, ಕೋ ಆಪರೇಟಿವ್ ಸೊಸೈಟಿಯ ಸಾಲ, ಮಿತ್ರರ ನೆರವಿನಿಂದ ಈ ಸಾಲ ತೀರಿತು.
ಗೋಪಾಲಗೌಡರು ತಮ್ಮ ಮೊದಲ ಶಾಸಕತ್ವದ ಅವಧಿ ಮುಗಿಯುವ ಹೊತ್ತಿಗೆ ಕರ್ನಾಟಕದ ವಿಶಿಷ್ಟ ಸಮಾಜವಾದಿ ನಾಯಕನಾಗಿ, ಸಂಸದೀಯ ಪಟುವಾಗಿ ರೂಪುಗೊಂಡಿದ್ದರು...ಐದು ವರ್ಷಗಳಲ್ಲಿ ‘ಉಳುವವನೇ ಹೊಲದೊಡೆಯ’ನಾಗಲು ಭೂ ಸುಧಾರಣೆ, ರಾಜಧನ ರದ್ದತಿ, ಇನಾಂ ರದ್ದತಿ ಮುಂತಾದ ಕ್ರಾಂತಿಕಾರಕ ವಿಷಯಗಳ ಬಗ್ಗೆ ಅತ್ಯಂತ ಪರಿಣಾಮಕಾರಿಯಾಗಿ ಮಾತಾಡಿದ್ದರು. ಇವೆಲ್ಲ ಮುಂದೆ ಕ್ರಮೇಣ ಕರ್ನಾಟಕದಲ್ಲಿ ಶಾಸನಗಳಾಗಿ ಜಾರಿಗೆ ಬಂದದ್ದು ಈಗ ಇತಿಹಾಸದ ಭಾಗವಾಗಿ ಹೋಗಿದೆ.
ಚುನಾವಣೆ 2: ಸೋಲಿನ ಪಾಠಗಳು
ಐದು ವರ್ಷ ಕಳೆದು 1957ರಲ್ಲಿ ಮತ್ತೊಂದು ಚುನಾವಣೆ ಬಂತು. ‘‘ಈ ಸಲ ಗೌಡರನ್ನು ಮುಗಿಸಿಯೇ ತೀರಬೇಕೆಂದು ಹಠತೊಟ್ಟ ಕಾಂಗ್ರೆಸ್ಸಿಗರೂ ಭಾರಿ ಜಮೀನ್ದಾರರೂ ಜಾತಿವಾದಿಗಳೂ ಸನ್ನದ್ಧರಾದರು. ಗೌಡರಿಗೆ ಕೊಡಬಾರದ ಕಿರುಕುಳ ಕೊಟ್ಟರು. ಗೌಡರಿಗೆ ಪ್ರಚಾರಕರೇ ಇಲ್ಲದಂತಾಯಿತು. ದುಂಡಾವರ್ತಿಗೂ ಇಳಿದರು...ಗೌಡರನ್ನು ಸೋಲಿಸಿ, ಬದರಿನಾರಾಯಣರನ್ನು ಗೆಲ್ಲಿಸಿಯೇ ತೀರುವ ಹಠದಲ್ಲಿ ಹಣವನ್ನು ನೀರಿನಂತೆ ಚೆಲ್ಲಿದರು. ಸಮಾಜವಾದಿ ಪಕ್ಷದ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತರುಗಳ ಕೋಟೆಯನ್ನು ಬಿರುಕುಗೊಳಿಸಿದರು; ಆಸೆ ಆಮಿಷಗಳನ್ನು ತೋರಿಸಿ ಒಲಿಸಿಕೊಂಡರು. ಕೆಲವರಿಗೆ ಬೆದರಿಕೆಯ ಗುಂಡುಗಳನ್ನು ಹಾರಿಸಿ ಭಯಪಡಿಸಿದರು, ಜಾತೀಯ ಬೀಜ ಬಿತ್ತಿದರು.’’
ಗೌಡರು ಪ್ರತಿ ದಿನ ಎಂಟು, ಹತ್ತು ಸಭೆಗಳಲ್ಲಿ ಭಾಗವಹಿಸಿ, ಭಾಷಣ ಮಾಡುತ್ತಿದ್ದರು...ಒಂದು ಸಭೆಯಲ್ಲಿ ಗಂಟೆ-ಎರಡು ಗಂಟೆ ಕಾಲ ಭಾಷಣ ಮಾಡುತ್ತಿದ್ದರು. ಈ ಮಧ್ಯೆ ಗೌಡರ ಪರವಾಗಿ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಲೋಹಿಯಾ ಅವರು ಮಾಡಿದ ಭಾಷಣ ಮತದಾರರ ಮೇಲೆ ಕೊಂಚ ವಿರುದ್ಧ ಪರಿಣಾಮ ಬೀರಿತು: ‘‘ಚುನಾವಣೆಗೆ ಮುಂಚೆ ಈ ಕ್ಷೇತ್ರದಲ್ಲಿ ಡಾ. ಲೋಹಿಯಾ ಅವರು ಸಂಚಾರ ಮಾಡಿ, ಪಕ್ಷದ ಪ್ರಚಾರ ಮಾಡಿದರು. ಗೌಡರೂ ಉಪಸ್ಥಿತರಿದ್ದ ಸಾಗರದ ಒಂದು ಬಹಿರಂಗ ಸಭೆಯಲ್ಲಿ ಲೋಹಿಯಾ, ‘ನೀವು ಚುನಾಯಿಸಿ ಕಳುಹಿಸಿದ ಶಾಂತವೇರಿ ಗೋಪಾಲಗೌಡರು ರೈತರ ಬಗ್ಗೆ, ಕೂಲಿಕಾರರ ಬಗ್ಗೆ ಹಾಗೂ ಶ್ರೀಸಾಮಾನ್ಯರ ಬಗ್ಗೆ ಏನು ಕ್ರಾಂತಿ ಮಾಡಿದ್ದಾರೆ? ಪಕ್ಷದ ಸಂಘಟನೆಯ ಸಂವರ್ಧನೆ ಹೇಗೆ ನಡೆದಿದೆ? ರೈತರ ಬೇಡಿಕೆಗಳ ಬಗ್ಗೆ ಸತ್ಯಾಗ್ರಹ ಹೂಡಿ, ಎಷ್ಟು ಸಲ ಜೈಲಿಗೆ ಹೋಗಿದ್ದಾರೆ? ನೀವು ಈ ಬಗ್ಗೆ ನಿಮ್ಮ ಶಾಸಕರಾದ ಅವರನ್ನು ವಿಚಾರಿಸಿ ಕೊಂಡಿದ್ದೀರಾ...’ ಎಂಬ ರೀತಿಯಲ್ಲಿ ಭಾಷಣ ಮಾಡಿದರು. ಗೌಡರು ಈ ಬಗ್ಗೆ ಮೌನ ಧರಿಸಿದರು. ಲೋಹಿಯಾ ಯಾವ ಅರ್ಥದಲ್ಲಿ ಮಾತಾಡಿದರೋ ಅದಕ್ಕೆ ವಿರುದ್ಧವಾದ ರೀತಿಯಲ್ಲಿ ಈ ಭಾಷಣ ಪರಿಣಾಮ ಉಂಟುಮಾಡಿತು. ಹಳ್ಳಿಯ ಮುಗ್ಧ ಜನತೆ ಅವರ ವ್ಯಂಗ್ಯವಾದ ಮಾತುಗಳನ್ನು ಅರ್ಥಮಾಡಿಕೊಳ್ಳಲಾರದೆ, ರಸ ಬಿಟ್ಟರು-ಕಸ ಹಿಡಿದುಕೊಂಡರು ಎಂಬಂತಾಯಿತು. ಈ ಮಾತನ್ನು ಕಾಂಗ್ರೆಸ್ಸಿನವರು ತಮ್ಮ ಜಯಕ್ಕೆ ಬಂಡವಾಳ ಮಾಡಿಕೊಂಡರು. 1957ರ ಚುನಾವಣೆಯಲ್ಲಿ ಗೌಡರ ಸೋಲಿಗೆ ಇದೂ ಒಂದು ಕಾರಣವಾಯಿತು.’’ ಆ ಸಲ ಗೌಡರ ಚುನಾವಣೆಯ ಖರ್ಚು ಸುಮಾರು ಆರು ಸಾವಿರದಷ್ಟಾಗಿತ್ತು.
ತಮ್ಮ ಶಾಸಕತ್ವದ ಅವಧಿಯಲ್ಲಿ ಶಾಸಕರ ಭವನದಲ್ಲಿ ಇರುತ್ತಿದ್ದ ಗೋಪಾಲಗೌಡರಿಗೆ, ಆನಂತರ ಆರಗದ ಪುಟ್ಟ ಗುಡಿಸಲು ಬಿಟ್ಟರೆ ಬೇರೆಲ್ಲೂ ಉಳಿಯಲು ಮನೆಯಿರಲಿಲ್ಲ. ಅಷ್ಟೊತ್ತಿಗೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ನಾಯಕರಾಗಿದ್ದ ಅವರು ಯಾವ ಸಂಪರ್ಕವೂ ಇಲ್ಲದೆ ಆರಗದಲ್ಲಿ ಇರುವಂತೆಯೂ ಇರಲಿಲ್ಲ. ಬೆಂಗಳೂರಿನ ಸಮಾಜವಾದಿ ಪಕ್ಷದ ಕಚೇರಿಯೇ ಗೌಡರ ಮನೆಯಾಯಿತು. ಗೋಪಾಲಗೌಡರು ಲೋಹಿಯಾ ನೇತೃತ್ವದ ಸಮಾಜವಾದಿ ಪಕ್ಷ ಭಾರತ ಮಟ್ಟದಲ್ಲಿ ರೂಪಿಸುತ್ತಿದ್ದ ಪ್ರತಿಭಟನಾ ರಾಜಕಾರಣವನ್ನು ರಾಜ್ಯದಲ್ಲಿ ರೂಪಿಸಲು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡಲು ರಾಜ್ಯದಾದ್ಯಂತ ಓಡಾಡುತ್ತಿದ್ದರು. ಆದರೆ ಆ ಓಡಾಟಗಳಿಗೆ ಅವರ ಬಳಿ ಹಣವೇ ಇರುತ್ತಿರಲಿಲ್ಲ. ನಿಶ್ಚಿತ ಹಣಕಾಸಿನ ಪರಿಸ್ಥಿತಿ, ಇತರರ ಬಳಿ ಹಣ ಕೇಳುವಾಗ ವ್ಯಕ್ತಿತ್ವಕ್ಕೆ ಆಗುವ ಘಾಸಿ, ಬೇರೆಯವರಿಂದ ಹಣ ಪಡೆಯುವಾಗ ಉಂಟಾಗುವ ಸಂಕೋಚ, ಮುತ್ತುತ್ತಿದ್ದ ಕಾಯಿಲೆಗಳು...ಇವೆಲ್ಲ ಸೇರಿಕೊಂಡು ಮೂವತ್ತಮೂರನೆಯ ವಯಸ್ಸಿಗಾಗಲೇ ಗೋಪಾಲಗೌಡರ ದೇಹ ಶಿಥಿಲವಾಗತೊಡಗಿತ್ತು. ಗೌಡರ 1960ರ ವರ್ಷದ ಡೈರಿಯ ವಿವರಗಳನ್ನು ನೋಡುತ್ತಿದ್ದರೆ, ಕರ್ನಾಟಕದ ಒಬ್ಬ ಧೀಮಂತ ನಾಯಕನ ರಾಜಕೀಯ ಹಿನ್ನಡೆಯ ಕಾಲದ ರಾಜಕೀಯ ಚಟುವಟಿಕೆಗಳು, ಸಾರ್ವಜನಿಕ ಜವಾಬ್ದಾರಿಗಳು, ಬಡತನ, ಅಭದ್ರತೆ, ಒಂಟಿತನ, ಸಂಜೆಯ, ನಾಳೆಯ ಊಟದ ಖಾತ್ರಿಯೇ ಇರದ ಅಸಹಾಯಕ ಸ್ಥಿತಿ, ಆತ್ಮಾಭಿಮಾನಕ್ಕೆ ಮತ್ತೆ ಮತ್ತೆ ಬೀಳುವ ಪೆಟ್ಟು...ಹೀಗೆ ಒಬ್ಬ ಸೂಕ್ಷ್ಮ ನಾಯಕನನ್ನು ಎಲ್ಲ ದಿಕ್ಕುಗಳಿಂದಲೂ ಹತಾಶೆ ಮುತ್ತಿದಾಗ ಎದುರಾಗುವ ಮನಸ್ಥಿತಿ ಎಲ್ಲವೂ ನಮ್ಮನ್ನು ಅಲುಗಾಡಿಸುತ್ತಾ ಹೋಗುತ್ತವೆ.
ಆ ಘಟ್ಟದ ಗೋಪಾಲಗೌಡರ ಬಗ್ಗೆ ಲಂಕೇಶರು ಕೊಡುವ ಚಿತ್ರ: ‘‘...ಮಹಾ ಸ್ವಾಭಿಮಾನಿಯಾಗಿದ್ದು ಸದಾ ತಣ್ಣಗೆ ಮಾತಾಡುತ್ತಿದ್ದ ಗೋಪಾಲ್ ಆಗಾಗ ಸ್ಫೋಟಗೊಳ್ಳುತ್ತಿದ್ದರು. ಆತ ಸ್ವಾಭಿಮಾನದ ಮನುಷ್ಯ. ಹಾಗಾಗಿ ಅವರು ಬರೀ ನೀರು ಕುಡಿದು ಮಲಗಿಬಿಟ್ಟಾರೇ ಹೊರತು ನನ್ನಂಥ ಚಿಕ್ಕವನ ಹತ್ತಿರ ಕಾಸಿಗೆ ಕೈ ಚಾಚಲಾರರು. ಅವರು ತಮ್ಮ ಕಷ್ಟಗಳನ್ನು ಎಂದೂ ಹೇಳಿಕೊಳ್ಳುತ್ತಿರಲಿಲ್ಲ. ...ಅಂತೂ ಗೋಪಾಲ್ ಒಂದು ಹಂತದಲ್ಲಿ ಎಲ್ಲರ ಗೆಳೆಯರಾಗಿ ಖುಷಿಯಾಗಿದ್ದರು; ಇನ್ನೊಂದು ಹಂತದಲ್ಲಿ ಸಮಾಜವಾದಿ ಪಕ್ಷಕ್ಕೆ ಭವಿಷ್ಯವೇ ಇಲ್ಲವೆಂದು ದುಗುಡಗೊಳ್ಳುತ್ತಿದ್ದರು.’’
  ಹತಾಶೆ, ನಿರಾಶೆಗಳ ನಡುವೆಯೂ ಗೋಪಾಲಗೌಡ ಮತ್ತವರ ಸಂಗಾತಿಗಳು ಚಳವಳಿ ರಾಜಕಾರಣದ ಮೂಲಕ ಸಮಾಜವಾದಿ ಹೋರಾಟವನ್ನು ಜೀವಂತವಾಗಿ ಇರಿಸಿದ್ದರು. ಹರತಾಳ, ಅರಣ್ಯಭೂಮಿ ಆಕ್ರಮಿಸಿ ಉಪವಾಸ ಸತ್ಯಾಗ್ರಹ, ಇಂಗ್ಲಿಷ್ ತೊಲಗಿಸಿ ಆಂದೋಲನ, ಸಾಮಾನುಗಳನ್ನು ದಾಸ್ತಾನು ಮಾಡಿದ ಗೋಡೌನುಗಳ ಎದುರು ಸತ್ಯಾಗ್ರಹ, ಕಾನೂನುಭಂಗ ಚಳವಳಿ, ಕೋರ್ಟುಗಳ ಎದುರು ಪಿಕೆಟಿಂಗ್, ಬಂಧನ ಇತ್ಯಾದಿಗಳು ನಡೆಯುತ್ತಿದ್ದವು. ಆದರೆ ಈ ಎಲ್ಲದರಲ್ಲೂ ಎದುರಾಗುತ್ತಿದ್ದ ನಿರಾಶಾದಾಯಕ ಫಲಿತಾಂಶಗಳು ಕಾರ್ಯಕರ್ತರ ಸ್ಥೈರ್ಯವನ್ನು ಕುಗ್ಗಿಸುತ್ತಲೇ ಇದ್ದವು. ಈ ನಡುವೆಯೂ ಗೌಡರು ಪಿ. ಕಾಳಿಂಗರಾಯರ ಹಾಡು ಕೇಳಿ ಮೈಮರೆಯುವುದು, ರೇಡಿಯೋದಲ್ಲಿ ಅಲಿ ಅಕ್ಬರ್ ಸರೋದ್‌ವಾದನ ಕೇಳಿಸಿಕೊಳ್ಳುವುದು; ‘ಅಳಿದ ಮೇಲೆ’, ‘ದ ಹಿಡನ್ ಫ್ಲವರ್’ ಥರದ ಕಾದಂಬರಿಗಳನ್ನು ಓದುವುದು ಮುಂತಾದ ವಿವರಗಳೂ ಅವರ ಡೈರಿಯಲ್ಲಿವೆ.
ಗೌಡರ ಈ ರಾಜಕೀಯ ಘಟ್ಟದ ಕೆಲವು ಮಹತ್ವದ ಫಲಿತಗಳನ್ನೂ ವಿಷ್ಣುಮೂರ್ತಿ ಗುರುತಿಸುತ್ತಾರೆ: ‘‘ಗೌಡರು ರೈತ ಸಂಘಟನೆ, ಕಾರ್ಮಿಕ ಸಂಘಟನೆ, ಕರ್ನಾಟಕ ಏಕೀಕರಣ...ಹೀಗೆ ವಿಸ್ತಾರ ಕಾರ್ಯಕ್ರಮಗಳೊಡನೆ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ತಮ್ಮ ರಾಜಕೀಯ ಜೀವನಕ್ಕೆ ಭದ್ರ ಅಡಿಪಾಯ ಹಾಕಿಕೊಂಡರು. ಆ ಕಾಲದಲ್ಲಿ ತೀರ್ಥಹಳ್ಳಿ, ಸಾಗರ, ಹೊಸನಗರ, ಸೊರಬದ ರೈತರ ಸಮಸ್ಯೆಗಳಷ್ಟೇ ಮುಖ್ಯವಾಗಿ ಕಾರ್ಮಿಕ ಸಮಸ್ಯೆಯ ಆಳವಾದ ಅಧ್ಯಯನವೂ ನಡೆಯುತ್ತಿತ್ತು... ಭೂ ಆಕ್ರಮಣ ಚಳವಳಿ, ಗೇಣಿಪದ್ಧತಿ ರದ್ದತಿ ಇತ್ಯಾದಿ ಜನಸಾಮಾನ್ಯರ ಹೋರಾಟದ ಸಂಘಟನೆಯು ವಿಫಲತೆಯ ನಡುನಡುವೆಯೂ ಚಿಗುರೊಡೆಯುತ್ತಿತ್ತು... 1962ರ ಚುನಾವಣೆ ಬರುವ ಕಾಲಕ್ಕೆ ಗೌಡರು ಯಾವ ಅಧಿಕಾರವೂ ಇಲ್ಲದೆ ರಾಜ್ಯಮಟ್ಟದ ನಾಯಕರಾಗಿ ಬೆಳೆದಿದ್ದರು. ಅವರ ಐದು ವರ್ಷಗಳ ಶಾಸನಸಭೆಯ ಹೊರಗಿನ ಹೋರಾಟಕ್ಕೊಂದು ರೂಪ ಬಂದಿತ್ತು.’’ ರಾಜ್ಯದಲ್ಲಿ ಮತ್ತೊಂದು ಚುನಾವಣೆ ಎದುರಾಗಿತ್ತು.


ಚುನಾವಣೆ 3: ಗೌಡರು ಮರಳಿ ವಿಧಾನಸಭೆಗೆ ಬಂದರು...
1962ರಲ್ಲಿ ರಾಜ್ಯ ವಿಧಾನಸಭೆಯ ಚುನಾವಣೆ ಮತ್ತೆ ಬಂತು. ಈ ಸಲವೂ ಮತ್ತೆ ಕ್ಷೇತ್ರ ಮರುವಿಂಗಡಣೆ ಪಡೆಯಿತು. ‘‘ಈ ಸಲ ಪೂರ್ಣ ತೀರ್ಥಹಳ್ಳಿ ತಾಲೂಕು ಹಾಗೂ ಹೊಸನಗರ ತಾಲೂಕಿನ ನಗರ ಹೋಬಳಿ ಸೇರಿ ತೀರ್ಥಹಳ್ಳಿ ಕ್ಷೇತ್ರವಾಯಿತು. ಎಸ್.ಎಸ್.ಪಿ. ಗೋಪಾಲಗೌಡರನ್ನೇ ಪುನಃ ಇಲ್ಲಿ ನಿಲ್ಲಿಸಿತು. ಅವರ ಎದುರುಗಡೆ ಕಾಂಗ್ರೆಸ್‌ನಿಂದ ಕೆ.ಟಿ. ದಾನಮ್ಮ, ಜನಸಂಘದಿಂದ ಎಚ್. ರಾಮಕೃಷ್ಣ ಪ್ರಭು, ಸೊನಲೇ ಸ್ವಾಮಿರಾವ್, ಗುಡ್ಡೆಕೇರಿ ವೆಂಕಪ್ಪ ಹೆಗ್ಡೆ ಹಾಗೂ ಇನ್ನೂ ಒಬ್ಬರು ಸ್ಪರ್ಧಿಸಿದರು. ಗೋಪಾಲಗೌಡರು ಪ್ರಚಂಡ ಬಹುಮತದಿಂದ ಗೆದ್ದರು. ಕಾಂಗ್ರೆಸ್ ಪಕ್ಷ ಠೇವಣಿ ಉಳಿಯುವಷ್ಟು ಮಾತ್ರ ಮತ ಪಡೆಯಿತು. ಉಳಿದವರೆಲ್ಲ ಠೇವಣಿ ಕಳೆದುಕೊಂಡರು. ಈ ಚುನಾವಣೆಯಲ್ಲೂ ಕಾರ್ಯಕರ್ತರ ಜೊತೆಗೆ ಗೌಡರು ಬಿಡುವಿಲ್ಲದೆ ದುಡಿದರು. ಈ ಚುನಾವಣೆಯೂ ಸಹ ಹಿಂದಿನ ಚುನಾವಣೆಗಳಂತೆಯೇ ನಡೆಯಿತು. ಆದರೆ ಚುನಾವಣೆಯ ನಂತರ ಬಳಲಿದ ಗೌಡರು ಕಾಯಿಲೆ ಹಿಡಿದು ಮಲಗಿದರು. ಸುಧಾರಿಸಿಕೊಳ್ಳುವುದಕ್ಕೆ ಒಂದೆರಡು ತಿಂಗಳು ಬೇಕಾಯಿತು.’’
ಜಾತಿ, ಹಣ ಹಾಗೂ ಇನ್ನಿತರ ಪ್ರಭಾವಗಳು ಎದ್ದು ಕಾಣತೊಡಗಿದ್ದ ಈ ಮೂರನೆಯ ಚುನಾವಣೆಯಲ್ಲಿ ಗೋಪಾಲಗೌಡರ ಎದುರಾಳಿಗಳು ಹೊಸ ವರಸೆಗಳನ್ನು ಪ್ರಯೋಗಿಸತೊಡಗಿದ್ದರು. ಇಂಡಿಯಾದ ಚುನಾವಣೆಗಳು ಭ್ರಷ್ಟಗೊಳ್ಳತೊಡಗಿದ್ದವು. ಆದರೆ ಗೋಪಾಲಗೌಡರು ಮಾತ್ರ ಎಂದಿನಂತೆ ತಮ್ಮ ಆವರೆಗಿನ ಚುನಾವಣೆಗಳ ಸರಳ, ನೇರ ಮಾದರಿಯನ್ನೇ ಮುಂದುವರಿಸಿ ಈ ಚುನಾವಣೆಯಲ್ಲೂ ಗೆದ್ದಿದ್ದರು.
ಚುನಾವಣೆ 4: ‘‘ಇನ್ನು ಇಲ್ಲಿ ಗೌಡರ ಎದುರು ಯಾರೂ ಗೆಲ್ಲಲು ಸಾಧ್ಯವಿಲ್ಲ’’
1967ನೇ ಸಾಲಿನಲ್ಲಿ ಎಸ್.ಎಸ್.ಪಿ. ಈ ಕ್ಷೇತ್ರಕ್ಕೆ ಮತ್ತೆ ಗೌಡರನ್ನೇ ನಿಲ್ಲಿಸಿತು. ಕಾಂಗ್ರೆಸ್ ಪಕ್ಷ ಬಿ.ಎಸ್. ವಿಶ್ವನಾಥ್ ಅವರನ್ನು ಪ್ರತಿಸ್ಪರ್ಧಿಯಾಗಿ ನಿಲ್ಲಿಸಿತು. ‘‘ವಿಶ್ವನಾಥ್ ರಾಜಕೀಯದಲ್ಲಿ ಗೌಡರ ಶಿಷ್ಯರೇ. ಗುರು-ಶಿಷ್ಯರ ಸ್ಪರ್ಧೆ ಪ್ರಬಲವಾಗಿತ್ತು. ಕಾಂಗ್ರೆಸ್ ಪಕ್ಷ ಹಾಗೂ ಅನೇಕ ಜನ ಮಂತ್ರಿಗಳು ಗೌಡರ ರಾಜಕೀಯಕ್ಕೇ ಇತಿಶ್ರೀ ಹಾಡಿಸುವ ಹವಣಿಕೆಯಲ್ಲಿ ಚುನಾವಣಾ ರಣಕಣಕ್ಕಿಳಿದರು. ಯಥೇಚ್ಛವಾಗಿ ಹಣ ಸುರಿದರು. ನಾಡಿನ ಮುಖ್ಯಮಂತ್ರಿಗಳೇ ಖುದ್ದಾಗಿ ತೀರ್ಥಹಳ್ಳಿಗೆ ಬಂದಿದ್ದರು. ಯಾಕೆಂದರೆ ಗೌಡರು ಕಾಂಗ್ರೆಸ್ ಪಕ್ಷಕ್ಕೆ, ಮಂತ್ರಿಮಂಡಲಕ್ಕೆ ದುಃಸ್ವಪ್ನವಾಗುವಷ್ಟರ ಮಟ್ಟಿನ ಮಹಾನ್ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದರು. ಇಂತಹ ತತ್ವನಿಷ್ಠೆಯ, ನಿರ್ಭಯ ರಾಜಕಾರಣಿಯ ವಿರುದ್ಧ ಈ ಚುನಾವಣಾ ಸಂದರ್ಭದಲ್ಲಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ಅವರೆಲ್ಲ ಹವಣಿಸುತ್ತಿದ್ದರು.’’
‘‘ಗೌಡರು ತಮ್ಮ ಸಾರಥಿ ಡ್ರೈವರ್ ತಿಮ್ಮಣ್ಣನೊಂದಿಗೆ ಚುನಾವಣಾ ಕಣಕ್ಕಿಳಿದರು. ವಿಶ್ವನಾಥ್ ತಮ್ಮ ಗೆಲುವಿಗಾಗಿ ವಿಶ್ವ ಪ್ರಯತ್ನವನ್ನೇ ಕೈಗೊಂಡರು. ಗೌಡರ ವಿರುದ್ಧ ಪ್ರಚಾರ ಸಮರವನ್ನೇ ಹೂಡಿದರು. ಈ ಪ್ರಚಾರದಲ್ಲಿ ಅವರು ನಾಡಿನ ಮಂತ್ರಿಗಳು, ರಾಜಕಾರಣಿಗಳು, ಕವಿ-ಸಾಹಿತಿಗಳು, ಶ್ರೀಮಂತರ ಸಂತೆಯನ್ನೇ ಸೇರಿಸಿಕೊಂಡು ಬಂದರು. ಅದುವರೆಗೂ ಗೌಡರ ಒಡನಾಡಿಯಾಗಿ, ಪಕ್ಷದ ಒಳಹೊರಗಿನ ಎಲ್ಲ ಅಂಶಗಳನ್ನು ಬಲ್ಲ ಅವರು ನಾನಾ ರೀತಿಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರುಗಳನ್ನೆಲ್ಲ ಕೆಡಿಸಿ ತಮ್ಮ ಕಡೆ ಸೆಳೆದರು. ಹೀಗೆ ಈ ಚುನಾವಣೆ ಹಿಂದಿನ ಎಲ್ಲಾ ಚುನಾವಣೆಗಿಂತ ಬಿರುಸಿನಿಂದ ನಡೆಯಿತು...ಕಿರುಕುಳವಂತೂ ವಿಪರೀತವಾಗಿತ್ತು. ಒಂದು ಸಭೆಯಲ್ಲಿ ಕಾಂಗ್ರೆಸ್‌ನವರು ಧ್ವನಿವರ್ಧಕವನ್ನು ಗೌಡರು ಭಾಷಣ ಮಾಡುವ ಸ್ಥಳದ ಎದುರು ಹಾಕಿದರು. ಆದರೂ ಜನ ಗೌಡರ ಭಾಷಣ ಕೇಳಲು ಕಿಕ್ಕಿರಿದು ನೆರೆದರು. ನಮ್ಮವರು ಕಾಂಗ್ರೆಸ್‌ನವರ ಮೈಕ್ ತೆಗೆದು ಹಾಕಿದರು. ಕಾಂಗ್ರೆಸ್‌ನವರು ನಮ್ಮವರ ಸಭೆಗೆ ಕಲ್ಲು ತೂರಿದರು. ಪೊಲೀಸರು ನಿಷ್ಕ್ರಿಯರಾಗಿ ಕಾಂಗ್ರೆಸ್‌ನ ಪರವಾಗಿ ನಿಂತರು. ಜನ ರೊಚ್ಚಿಗೆದ್ದರು. ಪೊಲೀಸರು ಲಾಠಿ ಚಾರ್ಜು ಮಾಡಿದರು. ಸೋಷಲಿಸ್ಟ್ ಪಕ್ಷದ ಬಹಳ ಜನಕ್ಕೆ ಲಾಠಿ ಏಟು ಬಿದ್ದಿತ್ತು. ಅನೇಕರನ್ನು ಆಸ್ಪತ್ರೆಗೆ ಸೇರಿಸಲಾಯಿತು.’’
‘‘ಈ ಚುನಾವಣೆಯಲ್ಲಿ ಗೌಡರಿಗೆ ತಾಲೂಕಿನ ಸಿ.ಪಿ.ಎಂ. ಅಭೂತಪೂರ್ವ ಬೆಂಬಲ ನೀಡಿತು. ಗೋಪಾಲಗೌಡರು ಪ್ರಚಂಡ ಬಹುಮತದಿಂದ ಗೆದ್ದರು. ಎಣಿಕೆ ಮುಗಿದು ಫಲಿತಾಂಶ ಹೊರಬೀಳುವಾಗ ಸೋತ ಅಭ್ಯರ್ಥಿ ವಿಶ್ವನಾಥ್ ‘ಇನ್ನು ಈ ಕ್ಷೇತ್ರದಲ್ಲಿ ಗೋಪಾಲಗೌಡರ ಎದುರು ಯಾರು ಸ್ಪರ್ಧಿಸಿದರೂ ಗೆಲ್ಲಲು ಸಾಧ್ಯವಿಲ್ಲ’ ಎಂದರು. ಅದೇ ಗೌಡರ ಕಡೆಯ ಚುನಾವಣೆ. ಪುನಃ ಗೌಡರನ್ನು ಚುನಾವಣೆಗೆ ನಿಲ್ಲಿಸಿ, ಆರಿಸುವ ಭಾಗ್ಯವನ್ನು ದೇವರು ನಮಗೆ ಕರುಣಿಸಲಿಲ್ಲ’’ ಎಂದು ಶಾಮ ಐತಾಳ ಬರೆಯುತ್ತಾರೆ.
ಈ ಕಾಲದಲ್ಲಿ ನಿಂತು ಹಿಂದೊಮ್ಮೆ ಕರ್ನಾಟಕದಲ್ಲಿ 1952ರಿಂದ 1967ರವರೆಗೆ ನಡೆದ ವಿಧಾನಸಭಾ ಚುನಾವಣೆಗಳ ಈ ಅಪೂರ್ವ ವಿವರಗಳನ್ನು ಓದುತ್ತಿರುವವರಿಗೆ ಇದೊಂದು ಗತಕಾಲದ ಕತೆಯಂತೆ ಕಂಡರೆ ಅಚ್ಚರಿಯಲ್ಲ. ಆದರೆ ಈ ಕಾಲದ ನಾಯಕರಲ್ಲಿ ಹಾಗೂ ಮತದಾರರಲ್ಲಿ ಆ ಬಗೆಯ ನೈತಿಕ ಶಕ್ತಿ ಇನ್ನೂ ಇರಬಹುದೆಂಬ ಆಶಾವಾದವನ್ನು ನಾವು ಉಳಿಸಿಕೊಳ್ಳದಿದ್ದರೆ ಮುಂದೆ ಯಾವ ಹೊಸ ರಾಜಕಾರಣವೂ ಸಾಧ್ಯವಿಲ್ಲ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.


(ಈ ಬರಹದ ಹಲವು ವಿವರಗಳನ್ನು ಇದೇ ಲೇಖಕರ ಶಾಂತವೇರಿ ಗೋಪಾಲಗೌಡ: ಜೀವನ ಚರಿತ್ರೆ ಪುಸ್ತಕ (ಪ್ರ: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ, ವಿತರಣೆ: ಪಲ್ಲವ ಪ್ರಕಾಶನ, ಹೊಸಪೇಟೆ) ಹಾಗೂ ಇನ್ನಿತರ ಮೂಲಗಳಿಂದ ಆರಿಸಿಕೊಳ್ಳಲಾಗಿದೆ.)

ಗೋಪಾಲಗೌಡರು ತಮ್ಮ ಮೊದಲ ಶಾಸಕತ್ವದ ಅವಧಿ ಮುಗಿಯುವ ಹೊತ್ತಿಗೆ ಕರ್ನಾಟಕದ ವಿಶಿಷ್ಟ ಸಮಾಜವಾದಿ ನಾಯಕನಾಗಿ, ಸಂಸದೀಯ ಪಟುವಾಗಿ ರೂಪುಗೊಂಡಿದ್ದರು...ಐದು ವರ್ಷಗಳಲ್ಲಿ ‘ಉಳುವವನೇ ಹೊಲದೊಡೆಯ’ನಾಗಲು ಭೂ ಸುಧಾರಣೆ, ರಾಜಧನ ರದ್ದತಿ, ಇನಾಂ ರದ್ದತಿ ಮುಂತಾದ ಕ್ರಾಂತಿಕಾರಕ ವಿಷಯಗಳ ಬಗ್ಗೆ ಅತ್ಯಂತ ಪರಿಣಾಮಕಾರಿಯಾಗಿ ಮಾತಾಡಿದ್ದರು. ಇವೆಲ್ಲ ಮುಂದೆ ಕ್ರಮೇಣ ಕರ್ನಾಟಕದಲ್ಲಿ ಶಾಸನಗಳಾಗಿ ಜಾರಿಗೆ ಬಂದದ್ದು ಈಗ ಇತಿಹಾಸದ ಭಾಗವಾಗಿ ಹೋಗಿದೆ.

Writer - ನಟರಾಜ್ ಹುಳಿಯಾರ್

contributor

Editor - ನಟರಾಜ್ ಹುಳಿಯಾರ್

contributor

Similar News

ಜಗದಗಲ
ಜಗ ದಗಲ